More

    ಮಲೆನಾಡಲ್ಲಿ ಮುಂದುವರಿದ ಮಳೆ ಅಬ್ಬರ

    ಶಿರಸಿ: ಶಿರಸಿ ತಾಲೂಕಿನ ಜಾಜಿಗುಡ್ಡೆಯಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು, ಇಲ್ಲಿನ 7 ಮನೆಗಳಿಗೆ ಆತಂಕ ಎದುರಾಗಿದೆ.
    ಕೋಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಜಿಗುಡ್ಡೆಯಲ್ಲಿ ಕಳೆದ ವರ್ಷ ಗುಡ್ಡ ಬಿರುಕು ಬಿಟ್ಟು, ಅಲ್ಪ ಪ್ರಮಾಣದಲ್ಲಿ ಭೂಕುಸಿತ ಆಗಿತ್ತು. ಆದರೆ ಈ ಬಾರಿ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇದೀಗ ಮತ್ತೆ ಗುಡ್ಡ ಕುಸಿಯಲು ಆರಂಭವಾಗಿದೆ.
    ಗ್ರಾಮಕ್ಕೆ ತೆರಳುವ ರಸ್ತೆಯ ಮೇಲ್ಬಾಗದಲ್ಲಿ ಗುಡ್ಡ ಕುಸಿದಿದ್ದು, ಸಂಪರ್ಕ ಕಡಿತವಾಗಿತ್ತು. ಕುಸಿಯುತ್ತಿರುವ ಗುಡ್ಡದ ತಪ್ಪಲಿನಲ್ಲಿ 7 ಕುಟುಂಬಗಳು ವಾಸಿಸುತ್ತಿದ್ದು, ಇದೀಗ ಆತಂಕದಲ್ಲಿ ಬದುಕುತ್ತಿದ್ದಾರೆ. ಭೂಕುಸಿತವಾದರೆ ಮನೆಗಳ ಸಹಿತ ಅಡಕೆ ತೋಟಕ್ಕೂ ನೇರವಾಗಿ ಸಮಸ್ಯೆಯಾಗಲಿದೆ.
    ತಕ್ಷಣವೇ ಮಣ್ಣು ತೆರವು: ವಿಷಯ ತಿಳಿದ ತಕ್ಷಣ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಉಪತಹಸೀಲ್ದಾರ್ ಡಿ.ಆರ್. ಬೆಳ್ಳಿಮನೆ ಸೇರಿದಂತೆ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗುಡ್ಡ ಕುಸಿತದಿಂದ ಕೆಳಭಾಗಕ್ಕೆ ಬಂದ ಮಣ್ಣನ್ನು ಸಂಚಾರಕ್ಕೆ ಅನುಕೂಲ ಆಗುವಂತೆ ತೆರವು ಮಾಡಿಸಿದ್ದಾರೆ.
    ಫಲಿಸದ ಸಭೆ: ಕಳೆದ ವರ್ಷ ಘಟನೆ ಸಂಭವಿಸಿದಾಗ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ, ವಿಧಾನಸಭಾಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಶಾಶ್ವತ ಸ್ಥಳಾಂತರಕ್ಕೆ ರ್ಚಚಿಸಲಾಗಿತ್ತು. ಆದರೆ ಅಲ್ಲಿನ ನಿವಾಸಿಗಳ ಬೇಡಿಕೆ ಸೂಕ್ತ ರೀತಿಯಲ್ಲಿಲ್ಲದ ಕಾರಣ ಈವರೆಗೂ ಸ್ಥಳಾಂತರ ಪ್ರಕ್ರಿಯೆ ಆಗಿಲ್ಲ. ಆದರೀಗ ಗುಡ್ಡ ಕುಸಿಯುತ್ತಿದ್ದು, ತಕ್ಷಣವೇ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಅನಿವಾರ್ಯವಾಗಿದೆ.
    ಕಳೆದ ಎರಡು ದಿನ ಕರಾವಳಿಯಲ್ಲಿ ಅಬ್ಬರಿಸಿದ್ದ ಮಳೆ ಗುರುವಾರ ಕೊಂಚ ಕಡಿಮೆಯಾಗಿದೆ. ಆಗೊಮ್ಮೆ, ಈಗೊಮ್ಮೆ ಬಿಸಿಲು ಕಾಣಿಸಿಕೊಂಡಿದೆ. ಮಲೆನಾಡಿನ ಭಾಗದಲ್ಲಿ ಮಳೆ ಮುಂದುವರಿದಿದೆ. ಗುರುವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 41.8, ಭಟ್ಕಳ-27, ಹಳಿಯಾಳ-31.4, ಹೊನ್ನಾವರ-40.6, ಕಾರವಾರ-30.8, ಕುಮಟಾ-28.2, ಮುಂಡಗೋಡ-81.8, ಸಿದ್ದಾಪುರ-125. 2, ಶಿರಸಿ-95. 5, ಜೊಯಿಡಾ-78. 6, ಯಲ್ಲಾಪುರ-58. 6 ಮಿಮೀ ಮಳೆಯಾಗಿದೆ. ಸೂಪಾ ಜಲಾಶಯದ ಒಳ ಹರಿವು 18233 ಕ್ಯೂಸೆಕ್​ಗೆ ಏರಿಕೆಯಾಗಿದೆ. ಕದ್ರಾ ಅಣೆಕಟ್ಟೆಗೆ 18,505 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೊಡಸಳ್ಳಿಗೆ 13,730 ಕ್ಯೂಸೆಕ್ ನೀರು ಬರುತ್ತಿದೆ. ಕದ್ರಾ ಜಲಾಶಯದಿಂದ 15,149 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts