More

    ಎಲ್ಲ ಸೆಮಿಸ್ಟರ್​ಗೂ ಕಂಪ್ಯೂಟರ್ ಅಪ್ಲಿಕೇಶನ್ ಮುಂದುವರಿಸಿ

    ವಿಜಯವಾಣಿ ಸುದ್ದಿಜಾಲ ಹಾನಗಲ್ಲ

    ಬಿಕಾಂ ಪದವಿಯ ಎಲ್ಲ ಸೆಮಿಸ್ಟರ್​ಗೆ ಈ ಹಿಂದಿನಂತೆ ಕಂಪ್ಯೂಟರ್ ಅಪ್ಲಿಕೇಶನ್ ಮುಂದುವರಿಸಬೇಕು ಎಂದು ಒತ್ತಾಯಿಸಿ ಕವಿವಿ ಕುಲಪತಿ ಪ್ರೊ. ಎಂ. ವಿಶ್ವನಾಥ ಅವರಿಗೆ ಕಂಪ್ಯೂಟರ್ ಶಿಕ್ಷಣ ಬೋಧಕ ಉಪನ್ಯಾಸಕರು ಮನವಿ ಸಲ್ಲಿಸಿದ್ದಾರೆ.

    ವಿದ್ಯಾರ್ಥಿಗಳಲ್ಲಿ ಕೌಶಲ, ಉದ್ಯೋಗಾವಕಾಶಗಳ ಸಂದರ್ಭದಲ್ಲಿ ಕಂಪ್ಯೂಟರ್ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಬಿಕಾಂ ಪದವಿ ಕಲಿಯುವತ್ತ ಯುವಕರ ಆಸಕ್ತಿ ಹೆಚ್ಚುತ್ತಿದೆ. ಇದಕ್ಕೆ ಪೂರಕವಾದ ಕಂಪ್ಯೂಟರ್ ಶಿಕ್ಷಣದಿಂದ ಎಲ್ಲ ಇಲಾಖೆಗಳಲ್ಲೂ ಉದ್ಯೋಗ ಹೊಂದುವ ಸಾಧ್ಯತೆಗಳಿವೆ. ಸರ್ಕಾರಿ ಉದ್ಯೋಗವಿಲ್ಲದಿದ್ದರೂ ಸ್ವಯಂ ಉದ್ಯೋಗ ಆರಂಭಿಸಿ ಜೀವನ ಸಾಗಿಸಬಹುದಾಗಿದೆ. ಈ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯ ಬಿಕಾಂನ ಎಲ್ಲ ಸೆಮಿಸ್ಟರ್​ಗೂ ಕಂಪ್ಯೂಟರ್ ಅಪ್ಲಿಕೇಶನ್ ಅಳವಡಿಸಿತ್ತು. ಇತ್ತೀಚೆಗೆ ಹೊಸ ಪಠ್ಯಕ್ರಮದಲ್ಲಿ ಅದನ್ನು ತೆಗೆದು ಹಾಕಿ, ಕೊನೆಯ ಸೆಮಿಸ್ಟರ್​ಗೆ ಮಾತ್ರ ಉಳಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಕಂಪ್ಯೂಟರ್ ಜ್ಞಾನ ಲಭ್ಯವಾಗುವುದಿಲ್ಲ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

    ಸರ್ಕಾರ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್​ಟಾಪ್​ಗಳನ್ನು ವಿತರಿಸುತ್ತದೆ. ಇನ್ನೊಂದೆಡೆ ಕವಿವಿ ಮೂಲಕ ಕಂಪ್ಯೂಟರ್ ಶಿಕ್ಷಣ ಕಡಿತಗೊಳಿಸುವ ಇಬ್ಬಗೆ ನೀತಿ ಗೊಂದಲ ಸೃಷ್ಟಿಸುತ್ತಿದೆ. ಇದರಿಂದಾಗಿ ಬಿಕಾಂ ಪದವಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಂದ ದೂರವುಳಿಯುವಂತಾಗುತ್ತದೆ. ಅವರ ಭವಿಷ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸರ್ಕಾರ ಸ್ಕಿಲ್ ಡೆವಲಪ್​ವೆುಂಟ್, ಡಿಜಿಟಲ್ ಇಂಡಿಯಾ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತಿರುವ ಸಮಯದಲ್ಲಿ ಕವಿವಿಯ ಈ ನಿರ್ಧಾರ ಆಶ್ಚರ್ಯವನ್ನುಂಟು ಮಾಡುತ್ತಿದೆ. ಕವಿವಿ ವ್ಯಾಪ್ತಿಯ ಪದವಿ ಕಾಲೇಜ್​ಗಳಲ್ಲಿ ಕಂಪ್ಯೂಟರ್ ಶಿಕ್ಷಣ ಬೋಧಿಸುತ್ತಿರುವ ನೂರಕ್ಕೂ ಅಧಿಕ ಅತಿಥಿ ಉಪನ್ಯಾಸಕರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಉನ್ನತ ಶಿಕ್ಷಣ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ, ವಿಶ್ವವಿದ್ಯಾಲಯದ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

    ವಿಧಾನ ಪರಿಷತ್ ಸದಸ್ಯ ಬಿ.ಎಸ್. ಹೊರಟ್ಟಿ, ಮಾಜಿ ಸದಸ್ಯ ಎಸ್.ವಿ. ಸಂಕನೂರ, ಸಚಿವ ಜಗದೀಶ ಶೆಟ್ಟರ್, ಸಂಸದ ಶಿವಕುಮಾರ ಉದಾಸಿ, ಶಾಸಕ ಸಿ.ಎಂ. ಉದಾಸಿ, ಕವಿವಿ ಸಿಂಡಿಕೇಟ್ ಸದಸ್ಯರಿಗೂ ಈ ಕುರಿತು ಗಮನಕ್ಕೆ ತರಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ದೀಪಕ್ ದೇಶಪಾಂಡೆ, ಡಾ. ಅರುಣಕುಮಾರ ಚಂದನ, ಕುಮಾರ ವಜ್ಜಲದ, ಸಂತೋಷ ಗುಡಿಗಾರ, ಜಯಶ್ರೀ ದೇಶಪಾಂಡೆ, ವಿಪುಲಾ ಮಹೇಂದ್ರಕರ, ಹರ್ಷ ಪ್ರಭು, ಸುಧೀರ ಶಾನಭಾಗ, ಎಸ್.ಬಿ. ಜಾಧವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts