More

    300ಕ್ಕೂ ಅಧಿಕ ಕಾಮಗಾರಿ ಸ್ಥಗಿತ

    ಹರೀಶ್ ಮೋಟುಕಾನ ಮಂಗಳೂರು
    ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ಸಹಿತ ಇತರ ಹಲವು ಯೋಜನೆಗಳ ಮೂಲಕ ನಡೆಯುತ್ತಿರುವ 300ಕ್ಕಿಂತಲೂ ಅಧಿಕ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಹೈಕೋರ್ಟ್ ಸಹಿತ ವಿವಿಧ ನ್ಯಾಯಾಲಯಗಳಲ್ಲಿರುವ ವ್ಯಾಜ್ಯಗಳು ಇದಕ್ಕೆ ಕಾರಣ.
    ಪಾಲಿಕೆ ವತಿಯಿಂದ ರಸ್ತೆ ಅಗಲೀಕರಣ, ಫುಟ್‌ಪಾತ್, ಚರಂಡಿ ನಿರ್ಮಾಣ ಮೊದಲಾದ ಕಾಮಗಾರಿ ಹಮ್ಮಿಕೊಂಡ ಸಂದರ್ಭ ಖಾಸಗಿಯವರು ಜಾಗ ಹೋಗುತ್ತದೆ ಎಂದು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಆಗ ಕಾಮಗಾರಿಗಳಿಗೆ ತೊಡಕಾಗುವ ಸಾಧ್ಯತೆ ಇರುತ್ತದೆ.

    ಈಗಾಗಲೇ ಇಂತಹ ಹಲವು ವ್ಯಾಜ್ಯಗಳು ನಡೆಯುತ್ತಿದ್ದು ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಅನುದಾನ ಹೊಂದಿಸಿಕೊಂಡರೂ ಜಾಗದ ತಕರಾರಿನಿಂದಾಗಿ ಕಾಮಗಾರಿ ಆರಂಭಿಸಲು ಅಥವಾ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಹಲವು ವರ್ಷಗಳಿಂದ ಪಾಲಿಕೆಯನ್ನು ಕಾಡುತ್ತಿದೆ. ಮುಂದೆ ಇಂತಹ ಸಮಸ್ಯೆ ಎದುರಾಗಬಾರದು, ಅಭಿವೃದ್ಧಿಗೆ ತೊಡಕಾಗಬಾರದು ಎಂಬ ಉದ್ದೇಶದಿಂದ ಪಾಲಿಕೆ ಇದೀಗ ಜಾಗದ ಮಾಲೀಕರೊಂದಿಗೆ ಮಾತುಕತೆ ನಡೆಸಿ ಅವರ ಮನವೊಲಿಸುವ ತಂತ್ರ ಅನುಸರಿಸಲು ಮುಂದಾಗಿದೆ.

    ಸ್ಮಾರ್ಟ್ ಸಿಟಿಯಡಿ ಹಲವು ಕಾಮಗಾರಿಗಳು ನಡೆಯುತ್ತಿದ್ದು, ಕಟ್ಟಡ ಹಾಗೂ ರಸ್ತೆಯ ತ್ಯಾಜ್ಯ ವಿಲೇವಾರಿ ನಿಯಮಾನುಸಾರ ಮಾಡದೇ ಇರುವುದರಿಂದ ಹೈಕೋರ್ಟ್ ಆದೇಶದಂತೆ ಒಂದು ತಿಂಗಳಿನಿಂದ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ಹಂಪನಕಟ್ಟೆ, ಲಾಲ್‌ಭಾಗ್, ಕದ್ರಿ ಮೊದಲಾದ ನಗರದ ಹೃದಯ ಭಾಗದಲ್ಲಿ ತುರ್ತು ಆಗಬೇಕಾದ ಕಾಮಗಾರಿಗಳು ತಟಸ್ಥವಾಗಿವೆ. ಇದರ ಪರಿಣಾಮವನ್ನು ಸಾರ್ವಜನಿಕರು ಅನುಭವಿಸುವಂತಾಗಿದೆ.

    ಟಿಡಿಆರ್‌ಗೆ ಕಡ್ಡಾಯ ಮಾಡಲಿ: ಜಾಗವನ್ನು ಮಾಲೀಕರು ಪಾಲಿಕೆಗೆ ನೀಡಿದರೆ ಅದಕ್ಕೆ ಪ್ರತಿಯಾಗಿ ಪಾಲಿಕೆ ಟಿಡಿಆರ್ ಪ್ರಮಾಣಪತ್ರ ನೀಡುತ್ತದೆ. ಇದರಿಂದಾಗಿ ಆ ಜಾಗದ ಅಥವಾ ಕಟ್ಟಡದ ಮಾಲೀಕರಿಗೆ ಪಾಲಿಕೆಯಿಂದ ಪ್ರೀಮಿಯಂ ಎಫ್‌ಎಆರ್ ಮತ್ತಿತರ ಪ್ರಯೋಜನಗಳು ದೊರೆಯುತ್ತವೆ. ಈ ಹಿಂದೆ ಇಂತಹ ಪ್ರಯೋಜನ ಪಡೆಯಲು ಟಿಡಿಆರ್ ಪ್ರಮಾಣಪತ್ರ ಕಡ್ಡಾಯ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಅದು ಕಡ್ಡಾಯವಾಗಿಲ್ಲ. ಟಿಡಿಆರ್ ಕಡ್ಡಾಯ ಮಾಡಿದರೆ ಟಿಡಿಆರ್‌ಗೆ ಬೆಲೆ ಬರುತ್ತದೆ. ಪಾಲಿಕೆಗೆ ಜಾಗ ಬಿಟ್ಟು ಕೊಡುವವರ ಸಂಖ್ಯೆಯೂ ಹೆಚ್ಚಾಗಬಹುದು. ಕಾಮಗಾರಿಗಳಿಗೆ ಭೂಸ್ವಾಧೀನ, ಕಟ್ಟಡ ತೆರವು ಮಾಡುವ ಮೊದಲೇ ಅದರ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು. ಆಗ ಜನರು ಪೂರಕವಾಗಿ ಸ್ಪಂದಿಸುತ್ತಾರೆ ಎಂದು ಹನುಮಂತ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹೈಕೋರ್ಟ್‌ನಲ್ಲಿ 145 ಪ್ರಕರಣ: ಪಾಲಿಕೆ ವ್ಯಾಪ್ತಿಯ ವ್ಯಾಜ್ಯಕ್ಕೆ ಸಂಬಂಧಿಸಿ 145 ಪ್ರಕರಣಗಳು ಹೈಕೋರ್ಟ್‌ನಲ್ಲಿದೆ. 2 ಪ್ರಕರಣಗಳು ಸುಪ್ರೀಂಕೋರ್ಟ್‌ನಲ್ಲಿವೆ. ಸುಮಾರು 100ಕ್ಕಿಂತಲೂ ಅಧಿಕ ಪ್ರಕರಣಗಳು ಜಿಲ್ಲಾ ನ್ಯಾಯಾಲಯಗಳಲ್ಲಿವೆ. 2019-20 ಮತ್ತು 2020-21ರಲ್ಲಿ ಈವರೆಗೆ 93 ಪ್ರಕರಣಗಳು ಇತ್ಯರ್ಥವಾಗಿವೆ. ಪಾಲಿಕೆ ಪರವಾಗಿ ವಾದಿಸಲು ಜಿಲ್ಲಾ ನ್ಯಾಯಾಲಯದಲ್ಲಿ 8 ಮಂದಿ ಹಾಗೂ ಹೈಕೋರ್ಟ್‌ನಲ್ಲಿ 3 ಮಂದಿ ವಕೀಲರು ನೇಮಕಗೊಂಡಿದ್ದಾರೆ.

    ಅನಧಿಕೃತ ನಿರ್ಮಾಣಗಳ ತೆರವು, ರಸ್ತೆ ಅಗಲೀಕರಣ ಮೊದಲಾದ ಸಂದರ್ಭದಲ್ಲಿ ಕೆಲವರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಆಗ ತಡೆಯಾಜ್ಞೆಯೂ ಬರಬಹುದು, ಪಾಲಿಕೆಯ ಪರವಾಗಿಯೂ ಆದೇಶ ಬರಬಹುದು. ತೀರ್ಪು ಏನೇ ಬಂದರೂ ಅದರಿಂದ ಕಾಮಗಾರಿ ವಿಳಂಬವಾಗುವ, ಸ್ಥಗಿತಗೊಳ್ಳುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ನ್ಯಾಯಾಲಯದ ಮೆಟ್ಟಿಲೇರುವ ಮೊದಲೇ ಮನವೊಲಿಕೆ ಮಾಡಿ ಸಹಕಾರ ಕೇಳುತ್ತೇವೆ.
    ಅಕ್ಷಿ ಶ್ರೀಧರ್, ಆಯುಕ್ತರು, ಮನಪಾ

    ಪಾಲಿಕೆ ವ್ಯಾಪ್ತಿಯಲ್ಲಿ ಹಲವೆಡೆ ಮೇಯರ್ ದಿವಾಕರ್ ಪಾಂಡೇಶ್ವರ ಅವರ ಜತೆಗೂಡಿ ಜಾಗ, ಕಟ್ಟಡದ ಮಾಲೀಕರೊಂದಿಗೆ ಸೌಹಾರ್ದವಾಗಿ ಮಾತುಕತೆ ನಡೆಸಿದ ಪರಿಣಾಮ ಹಲವಾರು ಕಾಮಗಾರಿಗಳನ್ನು ಮುಂದುವರಿಸಲು ಸಾಧ್ಯವಾಗಿದೆ. ನ್ಯಾಯಾಲಯಕ್ಕೆ ಹೋಗುವ ಮೊದಲು ಮತ್ತು ಈಗಾಗಲೇ ನ್ಯಾಯಾಲಯಕ್ಕೆ ಹೋದವರ ಜತೆಗೂ ಮಾತುಕತೆ ನಡೆಸುತ್ತಿದ್ದೇವೆ. ಜನರ ವಿಶ್ವಾಸ ಗಳಿಸಿ ಅವರ ಮನವೊಲಿಸಿ, ಅವರಿಗೆ ಸಮರ್ಪಕ ಪರ್ಯಾಯ ವ್ಯವಸ್ಥೆ ಮಾಡಿ ಕಾಮಗಾರಿ ನಡೆಸಲು ಆದ್ಯತೆ ನೀಡುತ್ತಿದ್ದೇವೆ. ಹಲವು ಮಂದಿ ಸಹಕರಿಸಿದ್ದಾರೆ. ಮತ್ತಷ್ಟು ಜನರ ಸಹಕಾರ ಬೇಕಿದೆ.
    ವೇದವ್ಯಾಸ ಕಾಮತ್, ಶಾಸಕ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts