More

    ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ; ಎಲ್ಲ ಶಾಲೆಗಳಲ್ಲಿ ಸಂವಿಧಾನ ವಾಚನ ಸೆ. 5ರಂದು

    ಧಾರವಾಡ: ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಸೆ. ೫ರಂದು ಕಡ್ಡಾಯವಾಗಿ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
    ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
    ಜೀವನ ಪದ್ಧತಿ ಅರಿಯಲು ಎಲ್ಲರಿಗೂ ಸಂವಿಧಾನ ಬೇಕು. ಈ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದ ಸಂವಿಧಾನದ ಮಹತ್ವ ತಿಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಂವಿಧಾನ ಪೀಠಿಕೆಯ ದೊಡ್ಡ ಪ್ರತಿಯನ್ನು ಎಲ್ಲ ಶಾಲೆಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಅಳವಡಿಸಲಾಗುವುದು ಎಂದರು.
    ಧಾರವಾಡ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದು, ಶೈಕ್ಷಣಿಕ ಹಬ್ ಎಂದೆನಿಸಿದೆ. ಇರುವ ಸಂಪನ್ಮೂಲಗಳನ್ನು ಬಳಸಿ ಪ್ರಾಥಮಿಕ, ಪ್ರೌಢ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅಧಇಕಾರಿಗಳು ಶ್ರಮಿಸಬೇಕು. ಡಿಡಿಪಿಐ ಹಾಗೂ ಬಿಇಒಗಳು ಕಡ್ಡಾಯವಾಗಿ ಕ್ಷೇತ್ರ ಭೇಟಿ ಮಾಡಿ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.
    ೨೦೨೩ನೇ ಸಾಲಿನಲ್ಲಿ ೧.೩೬ ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಸುಮಾರು ೧೦ ಸಾವಿರ ಮಕ್ಕಳ ದಾಖಲಾತಿ ಕಡಿಮೆಯಾಗಿದೆ. ಬಿಇಒಗಳು, ಶಿಕ್ಷಕರು ದಾಖಲಾತಿ ಸಂಖ್ಯೆ ಹೆಚ್ಚಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
    ಅತಿ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳು ಹಾಗೂ ಶಿಕ್ಷಕರಿಲ್ಲದ ಶಾಲೆಗಳನ್ನು ಹತ್ತಿರದ ಉತ್ತಮ ಶಾಲೆಗಳಿಗೆ ಸೇರ್ಪಡೆಗೊಳಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಂಚಾರಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಾಸಕರ ಅಭಿಪ್ರಾಯ ಪಡೆದು ಯೋಜನೆ ಹಮ್ಮಿಕೊಳ್ಳಲಾಗುವುದು ಎಂದರು.
    ಶಾಸಕ ಎನ್.ಎಚ್. ಕೋನರೆಡ್ಡಿ, ಅಪರ ಆಯುಕ್ತೆ ಜಯಶ್ರೀ ಶಿಂತ್ರಿ, ಅಪರ ನಿರ್ದೇಶಕಿ ಮಮತಾ ನಾಯಕ, ಜಂಟಿ ಆಯುಕ್ತ ಡಾ. ಬಿ.ಕೆ.ಎಸ್. ವರ್ಧನ, ನಿರ್ದೇಶಕ ಗಜಾನನ ಮನ್ನಿಕೇರಿ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಇತರರಿದ್ದರು.
    ಬೆಳಗಾವಿ ವಿಭಾಗದ ಶಿಕ್ಷಕರು ಬಿಡಿಸಿದ ಶೈಕ್ಷಣಿಕ ಮೌಲ್ಯ ಹಾಗೂ ನಕಲು ಮುಕ್ತ ಪರೀಕ್ಷೆ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಸಚಿವರು ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts