More

    ಸಂರಕ್ಷಣೆ ಕೊರತೆಗೆ ಕುಸಿದು ಬಿದ್ದ ಪಾಳೇಗಾರರು ನಿರ್ಮಿಸಿದ ಮುಖ್ಯದ್ವಾರ

    ಕನಕಗಿರಿ: ತಾಲೂಕಿನ ನಾಗಲಾಪುರದಲ್ಲಿ ಕ್ರಿ.ಶ.16ನೇ ಶತಮಾನದಲ್ಲಿ ಕನಕಗಿರಿ ಪಾಳೇಗಾರರಿಂದ ನಿರ್ಮಿಸಲಾಗಿದ್ದೆನ್ನಲಾದ ಗ್ರಾಮದ ಮುಖ್ಯದ್ವಾರ ಸಂರಕ್ಷಣೆ ಕೊರತೆಯಿಂದ ಬುಧವಾರ ಕುಸಿದು ಬಿದ್ದಿದೆ.

    ತಮ್ಮ ಆಡಳಿತಕ್ಕೆ ಒಳಪಟ್ಟ ಗ್ರಾಮಗಳಲ್ಲಿ ಶಿಲ್ಪ ಕಲೆಗೆ ಅಪಾರ ಪ್ರೋತ್ಸಾಹ ನೀಡಿದ್ದ ವಿಜಯನಗರ ಅರಸರ ಸಾಮಂತರಾಗಿದ್ದ ಕನಕಗಿರಿಯ ನಾಯಕರು ಅವರಂತೆಯೇ ಹಲವು ಕಲಾತ್ಮಕ ಸ್ಮಾರಕಗಳನ್ನು ತಮ್ಮ ಆಡಳಿತಾವಧಿಯಲ್ಲಿ ಈ ಭಾಗದಲ್ಲಿ ನಿರ್ಮಿಸಿದ್ದಾರೆ. ಅವರ ಕಾಲದಲ್ಲಿ ನಾಗಲಾಪುರದಲ್ಲಿನ ಕಮಾನು ರೂಪದ ಈ ಪ್ರವೇಶ ದ್ವಾರ ಆಧುನಿಕ ತಂತ್ರಜ್ಞಾನವನ್ನು ನಾಚಿಸುವಂತೆ ಕಲ್ಲು ಮಣ್ಣುಗಳಿಂದ ನಿರ್ಮಿಸಿರುವುದು ವಿಶೇಷವಾಗಿತ್ತು. ಆದರೆ, ಮುಂದಿನ ಪೀಳಿಗೆಗೆ ನೆನಪಾಗಿ ಉಳಿಯಬೇಕಿದ್ದ ಹಾಗೂ ಗ್ರಾಮಕ್ಕೆ ಕಳಸದಂತೆ ಆಕರ್ಷಕವಾಗಿದ್ದ ಐತಿಹಾಸಿಕ ಪ್ರವೇಶ ದ್ವಾರವು ಸಂರಕ್ಷಣೆಯ ಕೊರತೆಯಿಂದ ನೆಲಕಚ್ಚಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.

    ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಿ
    ಮುಖ್ಯದ್ವಾರದ ಈ ಕಾಮಗಾರಿ ಪೂರ್ಣವಾಗುವವರೆಗೆ ಗ್ರಾಮದಲ್ಲಿ ಯಾವ ಧಾರ್ಮಿಕ ಕಾರ್ಯಕ್ರಮಗಳು ನಡೆಸಲು ಬರುವುದಿಲ್ಲ. ಆದ್ದರಿಂದ ಈ ಕಾಮಗಾರಿಯನ್ನು ಶಾಸಕರು ಮೂರು ತಿಂಗಳೊಳಗಾಗಿ ಮುಗಿಸಬೇಕೆಂದು ಗ್ರಾಮದ ಮುಖಂಡ ಹನುಮಂತಪ್ಪ ಪೂಜಾರಿ ಮನವಿ ಮಾಡಿದ್ದಾರೆ.

    ನಾಗಲಾಪುರದ ಮುಖ್ಯದ್ವಾರವು ವಿಜಯನಗರ ಸಾಮ್ರಾಜ್ಯದ ರಕ್ಷಣಾ ಪಟ್ಟಿಗೆ ಸೇರಿಲ್ಲ. ವಿಜಯನಗರ ಸಾಮ್ರಾಜ್ಯದ ಹಾಗೂ ಕನಕಗಿರಿ ನಾಯಕರ ಇತಿಹಾಸ ಸಾರುವ ಈ ಕೋಟೆಯ ಮುಖ್ಯದ್ವಾರ ಕಾಮಗಾರಿಗೆ ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕು.
    | ಡಾ. ಶರಣಬಸಪ್ಪ ಕೋಲ್ಕಾರ್ ಸಂಶೋಧಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts