More

    ಬ್ಯಾಲೆಟ್ ಪೇಪರ್ ಬಳಸಿದ್ರೆ ಕಾಂಗ್ರೆಸ್ ಗೆಲುವು ಪಕ್ಕಾ

    ತೀರ್ಥಹಳ್ಳಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಕೊನೆಯ ಚುನಾವಣೆಯಾಗಲಿದೆ. ಮತದಾನಕ್ಕೆ ಇವಿಎಂ ಬದಲಿಗೆ ಬ್ಯಾಲೆಟ್ ವ್ಯವಸ್ಥೆ ಜಾರಿಯಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

    ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ಫೆ.24ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ನ್ಯಾಯಾಂಗ ಚುನಾವಣಾ ಆಯೋಗ ಸೇರಿ ಎಲ್ಲ ವ್ಯವಸ್ಥೆಗಳಲ್ಲೂ ತನ್ನ ಹಿಡಿತ ಸಾಧಿಸಿ ಹಿಟ್ಲರ್ ಮಾದರಿಯಲ್ಲಿ ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಿದ್ದಾರೆ. ವಿಶ್ವದ ಮುಂದುವರಿದ ದೇಶಗಳೇ ಬಳಸದ ಇವಿಎಂ ಯಂತ್ರದ ಪ್ರಭಾವದಿಂದ ಚುನಾವಣೆಯಲ್ಲಿ 544 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಚಂದ್ರಲೋಕದಲ್ಲಿರುವ ಉಪಗ್ರಹವನ್ನು ಭೂಮಿಯಿಂದ ನಿಯತ್ರಿಸಬಹುದಾದರೆ ಇವಿಎಂ ನಿಯಂತ್ರಣ ಅಸಾಧ್ಯವೇ ಎಂದು ಪ್ರಶ್ನಿಸಿದರು.
    ಕಾಂಗ್ರೆಸ್ ಸರ್ಕಾರದ ಐದೂ ಗ್ಯಾರಂಟಿಗಳು ಕೊಳ್ಳುವ ಶಕ್ತಿ ಇಲ್ಲದವರ ಪರವಾದ ಯೋಜನೆಯಾಗಿದ್ದು, ವಿಶ್ವಾದ್ಯಂತ ಯೋಜನೆಯ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸರ್ಕಾರದಿಂದ ಅರ್ಹ ಬಡ ಕುಟುಂಬಗಳಿಗೆ ವಿನಿಯೋಗವಾಗುವ ಈ ಹಣ ಐಷಾರಾಮಿ ವ್ಯವಸ್ಥೆಗೆ ಬಳಕೆಯಾಗದೇ ವಿವಿಧ ರೂಪಗಳಲ್ಲಿ ಸಮಾಜದಲ್ಲಿ ಹಂಚಿಕೆಯಾಗುತ್ತಿದೆ. ಈವರೆಗೆ ಶೇ.98 ಅರ್ಹರಿಗೆ ಸೌಲಭ್ಯ ದೊರೆತಿದೆ. ತಾಂತ್ರಿಕ ಕಾರಣಗಳಿಂದ ವಂಚಿತರಾಗಿದ್ದಲ್ಲಿ ಸಮಾವೇಶದ ದಿನ ಸ್ಥಳದಲ್ಲೇ ಸರಿಪಡಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದರು.
    ಈ ಯೋಜನೆಯ ಫಲಾನುಭವಿ ಕುಟುಂಬಗಳಿಗೆ ತಿಂಗಳಿಗೆ ಕನಿಷ್ಠ ಆರು ಸಾವಿರ ರೂ. ದೊರೆಯುತ್ತಿದೆ. ನಿರುದ್ಯೋಗಿ ಯುವಕರಿದ್ದಲ್ಲಿ ಹತ್ತು ಸಾವಿರ ರೂ. ಆರ್ಥಿಕ ನೆರವು ದೊರೆಯುತ್ತದೆ. ಇಂತಹ ಯೋಜನೆಯ ಬಗ್ಗೆ ಅಪಹಾಸ್ಯ ಮಾಡುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಬೌದ್ಧಿಕ ದಿವಾಳಿತನವನ್ನು ತೋರಿದೆ ಎಂದು ಟೀಕಿಸಿದರು.
    ಕ್ಷೇತ್ರದ ಜನರ ಪ್ರತಿನಿಧಿಯಾಗಿ ಸದನದಲ್ಲಿ ಇರಬೇಕಾದ ಶಾಸಕ ಆರಗ ಜ್ಞಾನೇಂದ್ರ, ಸದನ ನಡೆಯುವಾಗ ಕ್ಷೇತ್ರದಲ್ಲೇ ಸುತ್ತುತ್ತಾರೆ. ಹುಟ್ಟಿನಿಂದ ದೇವರಲ್ಲಿ ನಂಬಿಕೆಯಿದ್ದು ಕ್ಷೇತ್ರದಲ್ಲಿ ಹತ್ತಾರು ದೇವಸ್ಥಾನಗಳಿಗೆ ವೈಯಕ್ತಿವಾಗಿ ಲಕ್ಷಾಂತರ ರೂ. ದೇಣಿಗೆ ನೀಡಿರುವ ನನಗೆ ದೇವರ ಮೇಲೆ ನಂಬಿಕೆ ಇಲ್ಲ ಎಂದು ಹೇಳುವ ಆರಗ ಜ್ಞಾನೇಂದ್ರ, ಐದು ಬಾರಿ ಶಾಸಕರಾಗಿ ರಾಮೇಶ್ವರ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲು ವಿಫಲರಾಗಿದ್ದಾರೆ. ಅಕ್ರಮವಾಗಿ ಆಸ್ತಿ ಮಾಡಲು ಹೊರಟಿದ್ದಾರೆ ಎಂದು ದೂರಿದರು.
    ಘಟಕದ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ಮುಡುಬ ರಾಘವೇಂದ್ರ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಪ್ರಮುಖರಾದ ಡಿ.ಎಸ್.ವಿಶ್ವನಾಥ ಶೆಟ್ಟಿ, ಅಮರನಾಥ ಶೆಟ್ಟಿ, ವಿಲಿಯಂ ಮಾರ್ಟಿಸ್, ಜಯಪ್ರಕಾಶ್ ಶೆಟ್ಟಿ, ಆದರ್ಶ ಹುಂಚದಕಟ್ಟೆ ಇತರರಿದ್ದರು.

    ಕೇಂದ್ರ ಸರ್ಕಾರದಿಂದಲೇ ಭ್ರಷ್ಟಾಚಾರಕ್ಕೆ ಪುಷ್ಠಿ
    ಚುನಾವಣಾ ಬಾಂಡ್ ಮೂಲಕ ಭ್ರಷ್ಟಾಚಾರವನ್ನು ಅಧಿಕೃತಗೊಳಿಸಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಈ ವಿಚಾರಕ್ಕೆ ಸಂಬಂಧಿಸಿ ನೈತಿಕತೆ ಇದ್ದಲ್ಲಿ ಸುಪ್ರೀಂಕೋರ್ಟ್ ತೀರ್ಪು ಬಂದ ದಿನವೇ ರಾಜೀನಾಮೆ ಕೊಡಬೇಕಿತ್ತು. ಜಾತಿ, ಧರ್ಮ ಮತ್ತು ಹಣದ ಪ್ರಭಾವದಿಂದ ರಾಜಕೀಯ ಮಾಡುತ್ತಿರುವ ನರೇಂದ್ರ ಮೋದಿ ಚುನಾವಣಾ ಆಯೋಗ ಸೇರಿ ನ್ಯಾಯಾಂಗ ವ್ಯವಸ್ಥೆಗೂ ಕೈ ಹಾಕಿದ್ದಾರೆ. ಇದಕ್ಕೆ ಚಂಡೀಗಢದಲ್ಲಿ ಈಚೆಗೆ ನಡೆದ ಮೇಯರ್ ಚುನಾವಣೆ ಉದಾಹರಣೆ. ಸಿಬಿಐ, ಇಡಿ ಮುಂತಾದ ಸರ್ಕಾರಿ ಯಂತ್ರವನ್ನು ಎದುರಾಳಿಗಳನ್ನು ಸೋಲಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಕಿಮ್ಮನೆ ರತ್ನಾಕರ್ ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts