More

    ಹಠಬಿಡದ ಕಾಂಗ್ರೆಸ್, ನಿರೀಕ್ಷೆಯಲ್ಲಿ ಜೆಡಿಎಸ್: ಬಿಜೆಪಿ ಮತ ಕಡಿಮೆ, ಅಡ್ಡ ಮತದಾನದ ಅನುಮಾನ; ಶಾಸಕಾಂಗ ಸಭೆಯಲ್ಲಿ ಕೈ ನಾಯಕರ ವಿಶ್ವಾಸ

    ಬೆಂಗಳೂರು: ಇಷ್ಟು ದಿನ ಜೆಡಿಎಸ್ ಒತ್ತಡಕ್ಕೆ ಮಣಿದಿದ್ದು ಸಾಕು, ಇನ್ನಾದರೂ ಆ ಪಕ್ಷದ ನಾಯಕರಿಂದ ಸ್ವತಂತ್ರರಾಗಲೇಬೇಕೆಂಬ ಹಠಕ್ಕೆ ಬಿದ್ದ ಕಾಂಗ್ರೆಸ್​ನ ರಾಜ್ಯ ನಾಯಕರು, ರಾಜ್ಯ ಸಭೆ ಚುನಾವಣೆಯಲ್ಲಿ ಒತ್ತಡಕ್ಕೆ ಮಣಿಯದಿರಲು ನಿರ್ಧರಿಸಿದ್ದಾರೆ. ಎರಡನೇ ಅಭ್ಯರ್ಥಿ ಗೆಲ್ಲಿಸಲು ಕೊನೆ ಹಂತದವರೆಗೆ ಪ್ರಯತ್ನಿಸುವುದು, ಗೆಲ್ಲಲು ಸಾಧ್ಯವಾಗದೇ ಹೋದರೂ ಪರವಾಗಿಲ್ಲ ಜೆಡಿಎಸ್​ಗೆ ಮಾತ್ರ ಅನುಕೂಲ ಮಾಡಿಕೊಡಬಾರದೆಂಬ ತೀರ್ವನಕ್ಕೆ ಬಂದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚುನಾವಣೆ ತಂತ್ರಗಾರಿಕೆ ಬಗ್ಗೆ ಶಾಸಕರಿಗೆ ತಿಳಿಸಿಕೊಡಲಾಯಿತು.

    ಮೊದಲ ಅಭ್ಯರ್ಥಿಯಾಗಿ ಜೈರಾಂ ರಮೇಶ್ ಮತ್ತು ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ಎಂದು ನಿಗದಿ ಮಾಡಿದ್ದು, ಆ ಪ್ರಕಾರ ಮತದಾನಕ್ಕೆ ಮೊದಲು ಬಂದವರು ಮೊದಲ ಪ್ರಾಶಸ್ತ್ಯ ಮತವನ್ನು ಜೈರಾಮ್ ರಮೇಶ್ ಅವರಿಗೂ, ಎರಡನೇ ಪ್ರಾಶಸ್ತ್ಯ ಮತವನ್ನು ಮನ್ಸೂರ್ ಖಾನ್​ಗೆ ಹಾಕಿಸುವ ಯೋಜನೆ ಸಿದ್ಧಪಡಿಸಲಾಗಿದೆ. ಬೆಳಗ್ಗೆ 8.30ರಿಂದ ಮತದಾನ ನಿರ್ದೇಶನಗಳನ್ನು ಶಾಸಕರಿಗೆ ನೀಡಲಾಗುತ್ತದೆ. ಈಗಾಗಲೆ ಪಕ್ಷದಿಂದ ವಿಪ್ ಜಾರಿ ಮಾಡಿದ್ದು, ಎಲ್ಲ ಶಾಸಕರೂ ಹಾಜರಿರಬೇಕೆಂದು ಸೂಚನೆ ಕೊಡಲಾಗಿದೆ.

    ಅಡ್ಡ ಮತದಾನ ಆಗುವುದನ್ನು ತಪ್ಪಿಸಲು ಬೆಳಗಿನ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಮತಕೇಂದ್ರದಲ್ಲಿ ಇರುವರು. ಇನ್ನು ಅಭ್ಯರ್ಥಿಗಳ ಏಜೆಂಟ್ ಆಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಈಶ್ವರ ಖಂಡ್ರೆ ಹಾಜರಿರುವರು. ಜೆಡಿಎಸ್​ನಿಂದ ಕೆಲವು ಮತಗಳು ಬರಬಹುದೆಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ನಿರೀಕ್ಷೆ ಮಾತ್ರವಲ್ಲದೇ, ಒತ್ತಡ ತಂತ್ರ, ಮನವೊಲಿಕೆ ಪ್ರಯತ್ನ ನಡೆಸಲಾಗಿದೆ. ಜೆಡಿಎಸ್ ಮಾತ್ರವಲ್ಲದೇ ಬಿಜೆಪಿಯಲ್ಲೂ ಸಹ ಕೆಲವು ಶಾಸಕರನ್ನಾದರೂ ಮತದಾನದಿಂದ ದೂರು ಉಳಿಸುವ ಪ್ರಯತ್ನವೂ ನಡೆದಿದೆ. ಈ ಪ್ರಯತ್ನವನ್ನು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೇ ನಡೆಸಿದ್ದಾರೆ. ಈಗಿನ ಲೆಕ್ಕಾಚಾರದ ಪ್ರಕಾರ ನಾಲ್ಕನೇ ಅಭ್ಯರ್ಥಿಯ ಪ್ರಥಮ ಪ್ರಾಶಸ್ತ್ಯ ಮತಗಳನ್ನು ಹೆಚ್ಚಿಸಲು ಪ್ರಯತ್ನ ಮಾಡಿದ್ದು, ಬಿಜೆಪಿ ಅಭ್ಯರ್ಥಿಯ ಗರಿಷ್ಠ ಮತಗಳ ಪ್ರಮಾಣ ತಗ್ಗಿಸುವ ಬಗ್ಗೆ ತಂತ್ರಗಾರಿಕೆ ನಡೆಸಲಾಗಿದೆ. ಈ ಪ್ರಯತ್ನ ಫಲಿಸಿ, ಜೆಡಿಎಸ್​ನ ಐದಕ್ಕಿಂತ ಹೆಚ್ಚು ಮತ ಕಾಂಗ್ರೆಸ್​ಗೆ ಬಂದರೆ ತಮ್ಮ ಅಭ್ಯರ್ಥಿ ಗೆಲ್ಲುವ ಅವಕಾಶವಿರಲಿದೆ ಎಂದು ಕೈ ನಾಯಕರು ಚರ್ಚೆ ನಡೆಸಿದ್ದಾರೆ.

    ಹೈಕಮಾಂಡ್ ಮೇಲೆ ವಿಶ್ವಾಸ: ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಜೆಡಿಎಸ್ ದೂರ ಇಡುವುದು ಅನಿವಾರ್ಯ ಎಂದು ಕಾಂಗ್ರೆಸ್​ನ ರಾಜ್ಯ ನಾಯಕರು ಹೈಕಮಾಂಡ್​ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಜೆಡಿಎಸ್ ಒತ್ತಡಕ್ಕೆ ಮಣಿಯದಂತೆ ಮನವಿ ಕೂಡ ಮಾಡಿದೆ ಮತ್ತು ಗುರುವಾರ ತಡ ರಾತ್ರಿ ವರೆಗೂ ದಳಪತಿಗಳ ಪ್ರಯತ್ನ ಫಲಿಸದು ಎಂಬ ವಿಶ್ವಾಸದಲ್ಲಿಯೇ ಕೈ ನಾಯಕರಿದ್ದರು.

    ಇಂದು ಸಾರ್ವಜನಿಕರಿಗೆ ಪ್ರವೇಶವಿಲ್ಲ

    ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಶಾಸಕರು, ಸಚಿವರ ಜತೆ ಬರುವ ಗನ್​ವ್ಯಾನ್ ಮತ್ತು ಆಪ್ತ ಸಹಾಯಕರಿಗೂ ಒಂದು ದಿನದ ಮಟ್ಟಿಗೆ ವಿಧಾನಸೌಧಕ್ಕೆ ಪ್ರವೇಶ ಇರುವುದಿಲ್ಲವೆಂದು ಆದೇಶದಲ್ಲಿ ತಿಳಿಸಲಾಗಿದೆ. ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿ ಬರಬೇಕು ಹಾಗೂ ಪೊಲೀಸರು ಗುರುತಿನ ಚೀಟಿ ಪರಿಶೀಲನೆ ಮಾಡಿ ಒಳ ಬಿಡಬೇಕೆಂದು ತಿಳಿಸಲಾಗಿದೆ. ಸರ್ಕಾರ ಏಕಾಏಕಿ ಸಾರ್ವಜನಿಕರ ಪ್ರವೇಶ ನಿರ್ಬಂಧ ಮಾಡಿರುವುದು ಟೀಕೆಗೆ ಗುರಿಯಾಗಿದೆ. ಚುನಾವಣೆಯ ಹಿಂದಿನ ದಿನ ಈ ಆದೇಶ ಮಾಡಲಾಗಿದೆ. ಆದರೆ ದೂರದ ಊರಿನಿಂದ ಬರುವ ಸಾರ್ವಜನಿಕರು ಅನಗತ್ಯವಾಗಿ ಒಂದು ದಿನ ಬೆಂಗಳೂರಿನಲ್ಲಿ ಉಳಿಯಬೇಕಾಗುತ್ತದೆ.

    ಯೆಚೂರಿ ರಂಗಪ್ರವೇಶ

    ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯ ನಾಲ್ಕನೇ ಅಭ್ಯರ್ಥಿ ಗೆಲುವಿನ ಕುರಿತು ಗೊಂದಲಗಳು ಮುಂದುವರಿದಿರುವ ನಡುವೆಯೇ, ಜೆಡಿಎಸ್ ಕೊನೆ ಹಂತದಲ್ಲಿ ಕಾಂಗ್ರೆಸ್ ಮನಸ್ಸು ಬದಲಿಸಿ ತನ್ನ ಅಭ್ಯರ್ಥಿ ಬೆಂಬಲಿಸಬಹುದೆಂಬ ನಿರೀಕ್ಷೆಯಲ್ಲಿದೆ. ಕೋಮುವಾದಿ ಬಿಜೆಪಿಯನ್ನು ದೂರವಿಡಬೇಕೆಂಬ ದಾಳವನ್ನು ಕಾಂಗ್ರೆಸ್ ಅಂಗಳಕ್ಕೆ ಉರುಳಿಸಿದೆ. ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ ಅವರನ್ನು ಸೋನಿಯಾ ಗಾಂಧಿ ಬಳಿ ಕಳುಹಿಸಿ ಮನವೊಲಿಸುವ ಕೆಲಸ ಮಾಡಿರುವುದಾಗಿ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯ ನಾಯಕರುಗಳಿಗೆ ತಡ ರಾತ್ರಿ ವೇಳೆಗೆ ಜೆಡಿಎಸ್ ಬೆಂಬಲಿಸಬೇಕೆಂಬ ತುರ್ತು ಸಂದೇಶ ಬರಬಹುದೆಂಬ ನಿರೀಕ್ಷೆಯಲ್ಲಿ ಜೆಡಿಎಸ್ ನಾಯಕರಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಂಪರ್ಕಕ್ಕೆ ಸಿಗದ ಶ್ರೀನಿವಾಸಗೌಡ: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಸಭೆ ಖಾಸಗಿ ಹೋಟೆಲ್​ನಲ್ಲಿ ನಡೆಯಿತು. ಈ ಸಭೆಯಲ್ಲಿ 29 ಶಾಸಕರು ಭಾಗವಹಿಸಿದ್ದರು. ವಿದೇಶಕ್ಕೆ ತೆರಳಿದ್ದ ಗೌರಿಶಂಕರ್ ವಾಪಸ್ಸಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಸಕರಾದ ಶಿವಲಿಂಗೇಗೌಡ, ಜಿ.ಟಿ.ದೇವೇಗೌಡ, ಗುಬ್ಬಿ ವಾಸು ಹಾಗೂ ಎ.ಟಿ.ರಾಮಸ್ವಾಮಿ ಅವರ ಜತೆ ಕುಮಾರಸ್ವಾಮಿ ದೂರವಾಣಿಯಲ್ಲಿ ಮಾತನಾಡಿದ್ದು, ಪಕ್ಷದ ಪರವಾಗಿ ವೋಟು ಹಾಕಲು ಒಪ್ಪಿದ್ದಾರೆ ಎನ್ನಲಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಗೌಡ ಮಾತ್ರ ಕುಮಾರಸ್ವಾಮಿ ಸಂಪರ್ಕಕ್ಕೆ ಸಿಕ್ಕಿಲ್ಲ.

    ಇನ್ನೂ ಕಾಲ ಮಿಂಚಿಲ್ಲ, ಕಾದುನೋಡೋಣ

    ರಾಜ್ಯಸಭೆ ಚುನಾವಣೆಗೆ ಇನ್ನು ಕಾಲ ಮಿಂಚಿಲ್ಲ. ಬೆಳಗಿನವರೆಗೂ ಸಮಯವಿದೆ. ಕಾದು ನೋಡೋಣ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಚ್ಚರಿ ಮೂಡಿಸಿದ್ದಾರೆ. ನಮ್ಮಲ್ಲಿ ಅಡ್ಡ ಮತದಾನ ಸಾಧ್ಯವೇ ಇಲ್ಲ. ನಮ್ಮ ಎಲ್ಲ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

    ನಾನು ಸಿಎಂ ಆಗಿದ್ದಾಗ ಕೋಮು ಶಕ್ತಿ ತಲೆ ಎತ್ತಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಅಹಿತಕರ ಘಟನೆಗೆ ಅವಕಾಶ ಕೊಟ್ಟಿಲ್ಲ. ಈಗ ಸೆಕ್ಯೂಲರ್ ಫೋರ್ಸ್ ಉಳಿಸಬೇಕು ಎನ್ನುತ್ತೀರಿ. ದೇವೇಗೌಡರನ್ನು ನೀವೇನಾದ್ರೂ ಸಿಎಂ ಮಾಡಿದ್ರಾ? ನಾವು ನಿಮ್ಮ ಪಕ್ಷದ ಧರಂಸಿಂಗ್ ಸಿಎಂ ಮಾಡಲಿಲ್ವಾ? ಸಿಎಂ ಮಾಡಲಿಲ್ಲ ಎಂದು ಅಹಿಂದ ಸಮಾವೇಶ ಮಾಡಿಕೊಂಡು ಹೋಗಲಿಲ್ಲವೇ ನೀವು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಎಚ್​ಡಿಕೆ ವಾಗ್ದಾಳಿ ನಡೆಸಿದರು. ವ್ಯಾಪಾರ ಮಾಡಲು ನಮ್ಮ ಶಾಸಕರನ್ನು ಸಂಪರ್ಕ ಮಾಡುತ್ತಾರಾ? ಪತ್ರ ಬರೆದು ಏನು ಮಾಡುತ್ತಾರೆ? ಪತ್ರ ಬರೆಯಲು ನಾಚಿಕೆ ಆಗುವುದಿಲ್ಲವೇ? ಕಾಂಗ್ರೆಸ್​ನಲ್ಲಿ ಸ್ಥಾನ ಸಿಗಲ್ಲ ಎಂದು ಬಿಜೆಪಿಗೂ ಒಂದು ಕಾಲದಲ್ಲಿ ಟವಲ್ ಹಾಕಿದ್ದವರು ನೀವು ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ಮೊದಲೇ ನಮ್ಮ ಜತೆ ಚರ್ಚೆ ಮಾಡಿದ್ದರೆ ಇಷ್ಟೆಲ್ಲ ಗೊಂದಲ ಏಕಾಗುತ್ತಿತ್ತು? ಎಂದು ಕೇಳಿದರು.

    ಆತೃಪ್ತರ ಮನವೊಲಿಕೆ: ನಮ್ಮ ಶಾಸಕರು ಅವರ ಶಾಸಕರ ಜತೆಯೂ ಮಾತನಾಡಿದ್ದಾರೆ. ಶಿವಲಿಂಗೇಗೌಡ ಜತೆ ನಾನೇ ಮಾತನಾಡಿದ್ದೇನೆ. ಶ್ರೀನಿವಾಸಗೌಡರ ಮನವೊಲಿಸುವ ಕೆಲಸವೂ ಆಗಿದೆ. ಗುಬ್ಬಿ ಶ್ರೀನಿವಾಸ್ ಕೂಡ ನಮ್ಮ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ. ಜಿಟಿಡಿ ಅವರೂ ಕುಪೇಂದ್ರ ರೆಡ್ಡಿಗೆ ವೋಟ್ ಹಾಕುವುದಾಗಿ ಹೇಳಿದ್ದಾರೆ ಎಂದರು. ಮುಂದೆ ನಮ್ಮಅತೃಪ್ತ ಶಾಸಕರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅವರಿಗೆ ಬಿಟ್ಟದ್ದು. ನಾನು ಕೂಡ ಕಾಂಗ್ರೆಸ್​ನ ಕೆಲವು ಆತ್ಮೀಯ ಶಾಸಕರಿಗೆ ದ್ವಿತೀಯ ಪ್ರಾಶಸ್ತ್ಯ ಮತ ಕೊಡುವಂತೆ ಕೇಳಿದ್ದೇನೆ. ಅದರಲ್ಲಿ ಕದ್ದುಮುಚ್ಚಿ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಹಿತ ಯಾರೂ ನನ್ನ ಜತೆ ಮಾತನಾಡಿಲ್ಲ, ನನ್ನ ಅವಶ್ಯಕತೆ ಜೆಡಿಎಸ್​ಗೆ ಇಲ್ಲ ಎಂದೇ ಭಾವಿಸಿದ್ದೇನೆ. ಅಭ್ಯರ್ಥಿ ಕುಪ್ಪೇಂದ್ರರೆಡ್ಡಿ ಮನೆಗೆ ಬಂದು ಮತ ಕೇಳಿದ್ದು ನನ್ನ ಆತ್ಮಸಾಕ್ಷಿಯಂತೆ ಮತ ಚಲಾಯಿಸುತ್ತೇನೆ.

    | ಎಸ್.ಆರ್.ಶ್ರೀನಿವಾಸ್ ಶಾಸಕ

    ಪೂರ್ವನಿಗದಿಯಂತೆ ವಿದೇಶ ಪ್ರವಾಸಕ್ಕೆ ತೆರಳಿದ್ದೆ, ಗುರುವಾರವೇ ರಾಜ್ಯಕ್ಕೆ ಆಗಮಿಸಿದ್ದು ಶುಕ್ರವಾರ ಮತದಾನದಲ್ಲಿ ಭಾಗವಹಿಸುವೆ.

    | ಗೌರಿಶಂಕರ್ ಶಾಸಕ

    ಜೆಡಿಎಸ್ ಶಾಸಕರಿಗೆ ಸಿದ್ದು ಪತ್ರ

    ರಾಜ್ಯಸಭಾ ಚುಣಾವಣೆಯಲ್ಲಿ ಕಾಂಗ್ರೆಸ್ ಎರಡನೇ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್​ಗೆ ಮನವಿ ಮಾಡಿ ಆ ಪಕ್ಷದ ಶಾಸಕರಿಗೆ ಪತ್ರ ಬರೆದಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮನ್ಸೂರು ಅಲಿ ಖಾನ್ ಗೆಲುವು ಯಾವುದೇ ಒಂದು ಪಕ್ಷದ ಗೆಲುವಾಗದೆ ಜಾತ್ಯತೀತ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಪಕ್ಷಗಳೆರಡರ ಸೈದ್ಧಾಂತಿಕ ಗೆಲುವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಾತ್ಯತೀತತೆಯ ಸಾವು- ಬದುಕಿನ ಪ್ರಶ್ನೆಯಾಗಿ ರಾಜ್ಯಸಭಾ ಚುನಾವಣೆ ನಮ್ಮ ಮುಂದಿದೆ. ಸೈದ್ಧಾಂತಿಕವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದು ಕಡೆ ಇದ್ದರೆ, ಕೋಮುವಾದವನ್ನೇ ಉಸಿರಾಡುವ ಬಿಜೆಪಿ ಇನ್ನೊಂದು ಕಡೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಎರಡನೇ ಅಭ್ಯರ್ಥಿಯಾಗಿರುವ ಮನ್ಸೂರ್ ಅಲಿ ಖಾನ್ ಸೋಲು-ಗೆಲುವನ್ನು ರಾಜ್ಯದ ಅಲ್ಪಸಂಖ್ಯಾತ ಸಮುದಾಯ ಮಾತ್ರವಲ್ಲ ಜಾತ್ಯತೀತತೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕುತೂಹಲದಿಂದ ಗಮನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ. ಎಚ್.ಡಿ.ದೇವೇಗೌಡರಿಗೆ ಪ್ರಧಾನಿಯಾಗುವ ಅವಕಾಶ ಎದುರಾದಾಗ ಕಾಂಗ್ರೆಸ್ ಮುಕ್ತ ಹೃದಯದಿಂದ ಬೆಂಬಲಿಸಿತ್ತು. ಎರಡು ವರ್ಷಗಳ ಹಿಂದೆ ದೇವೇಗೌಡರು ರಾಜ್ಯಸಭಾ ಚುನಾವಣೆ ಎದುರಿಸಿದಾಗ ಕಾಂಗ್ರೆಸ್ ತನ್ನ ಅಭ್ಯರ್ಥಿ ಕಣಕ್ಕಿಳಿಸದೆ ಗೌಡರನ್ನು ಬೆಂಬಲಿಸಿ ಗೆಲ್ಲಿಸಿತ್ತು. ನಾಲ್ಕು ವರ್ಷಗಳ ಹಿಂದೆ ಕೇವಲ 37 ಶಾಸಕರನ್ನು ಹೊಂದಿದ್ದ ಜಾತ್ಯತೀತ ಜನತಾದಳಕ್ಕೆ ಕಾಂಗ್ರೆಸ್ ಬೆಂಬಲಿಸಿ ಎಚ್.ಡಿ.ಕುಮರಾಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿತ್ತು ಎಂದು ಪತ್ರದಲ್ಲಿ ನೆನಪಿಸಿದ್ದಾರೆ.

    ಕೋಮುವಾದಿ ಮತ್ತು ಜಾತಿವಾದಿ ಬಿಜೆಪಿಗೆ ತಕ್ಕ ಉತ್ತರ ನೀಡಬೇಕೆಂದು ಜಾತ್ಯತೀತತೆ, ಸೌಹಾರ್ದತೆ ಮತ್ತು ಸಹಬಾಳ್ವೆಯ ಮೇಲೆ ನಂಬಿಕೆ ಇಟ್ಟಿರುವ ನಾಡಬಾಂಧವರೆಲ್ಲರ ಮನದಾಳದ ಹಾರೈಕೆಯಾಗಿದೆ.

    | ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ

    ಕುಪೇಂದ್ರ ರೆಡ್ಡಿಗೆ ಮತ ಹಾಕುವೆ ಎಂದ ಜಿಟಿಡಿ

    ಮೈಸೂರು: ಆತ್ಮಸಾಕ್ಷಿಗೆ ಅನುಗುಣವಾಗಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವೆ ಎಂದು ಶಾಸಕ ಜಿ.ಟಿ.ದೇವೇಗೌಡ ತಮ್ಮ ನಿಲುವು ಘೊಷಿಸಿದ್ದಾರೆ. ನಾನು ಜೆಡಿಎಸ್​ನಿಂದ ಅಧಿಕೃತವಾಗಿ ಆಯ್ಕೆಯಾಗಿದ್ದೇನೆ. ಹಾಗಾಗಿ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸá-ವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿ ನನ್ನ ಬಳಿ ಮತಯಾಚಿಸಿದ್ದಾರೆ. ಎಚ್​ಡಿಕೆ ಸಹ ಕೇಳಿದ್ದಾರೆ. ಬೆಂಬಲಿಗರು ಕ್ಷೇತದ ಮುಖಂಡರ ಅಭಿಪ್ರಾಯವೂ ಅದೇ ಆಗಿದೆ ಎಂದಿದ್ದಾರೆ.

    ಮಗಳ ಕಣ್ಮುಂದೆಯೇ ಸಾವಿಗೀಡಾದ ತಂದೆ, ಭೀಕರ ಅಪಘಾತದಲ್ಲಿ ಪುತ್ರಿಗೆ ಗಾಯ..

    ಯುವತಿಯನ್ನು ಬೆಂಗಳೂರಿಗೆ ಕರೆದೊಯ್ಯಲು 3 ಆ್ಯಂಬುಲೆನ್ಸ್, ಶಿವಮೊಗ್ಗದಿಂದಲೇ ಜೀರೋ ಟ್ರಾಫಿಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts