More

    ಅನ್ನಭಾಗ್ಯಕ್ಕೆ ಅಕ್ಕಿ ಕೊಡದೆ ಹರಾಜಿಗಿಟ್ಟ ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ಕಾಂಗ್ರೆಸ್ ವಕ್ತಾರ ವಾಗ್ದಾಳಿ

    ವಿಜಯಪುರ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ನಿರಾಕರಿಸಿದ ಕೇಂದ್ರ ಸರ್ಕಾರ ಇದೀಗ ಆ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಹರಾಜಿಗಿಟ್ಟರೂ ಕೊಳ್ಳುವವರಿಲ್ಲದಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಆಕ್ರೋಶ ಹೊರಹಾಕಿದರು.

    ರಾಜ್ಯಕ್ಕೆ ಬೇಕಾದ ಅಕ್ಕಿಗೆ ಹಣ ಕೊಡುವುದಾಗಿ ಹೇಳಿದರೂ ಕೇಂದ್ರ ಸರ್ಕಾರ ಅಭಾವದ ನೆಪ ಹೇಳಿತು. ಇದೀಗ 3.5 ಲಕ್ಷ ಟನ್ ಅಕ್ಕಿಯನ್ನು ಹರಾಜಿಗಿಟ್ಟಿದೆ. ಆದರೂ ತೆಗೆದುಕೊಳ್ಳುವವರಿಲ್ಲ. ಕರ್ನಾಟಕ ಸರ್ಕಾರಕ್ಕೆ ಮಾರಿಕೊಂಡಿದ್ದರೆ ಲಾಭವೂ ಬರುತ್ತಿತ್ತು ಜೊತೆಗೆ ಇತ್ತ ಬಡವರಿಗೂ ನೆರವಾದಂತಾಗುತ್ತಿತ್ತು. ಅದನ್ನು ಬಿಟ್ಟು ಇದೀಗ ಹರಾಜಿಗೆ ಮೊರೆ ಹೋಗುವ ಮೂಲಕ ಬಡವರ ವಿರೋಧಿ ನೀತಿ ಅನುಸರಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಅಸಮಾಧಾನ ಹೊರಹಾಕಿದರು.

    ಬಡವರ ಅನ್ನದ ಜೊತೆಗೆ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ. ಅಗತ್ಯ ದಾಸ್ತಾನಿದ್ದರೂ ಅಕ್ಕಿ ಪೂರೈಸದೆ ಜನವಿರೋಧಿ ನೀತಿ ಅನುಸರಿಸುತ್ತಿದೆ. ಮಾತೆತ್ತಿದ್ದರೆ ರಾಜ್ಯದ ಅನ್ನ ಭಾಗ್ಯ ಯೋಜನೆಗೆ ಐದು ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿರುವುದಾಗಿ ಹೇಳುವ ಬಿಜೆಪಿಗರು ಪುಕ್ಸಟ್ಟೆ ಅಕ್ಕಿ ಇವರಪ್ಪನ ಮನೆಯಿಂದ ಕೊಡುತ್ತಾರಾ? ಸಿದ್ದರಾಮಯ್ಯ ಆಗಲಿ, ಕೇಂದ್ರ ಬಿಜೆಪಿಯಾಗಲಿ ಯಾರೂ ತಮ್ಮ ಮನೆಯಿಂದ ಅಕ್ಕಿ ಕೊಡಲ್ಲ. ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆಹಾರ ಸುರಕ್ಷತೆ ಕಾಯ್ದೆ ತರಲಾಯಿತು. ಪರಿಣಾಮ ಇಂದು ಯೋಜನೆ ರೂಪಿಸಲು ಸಹಕಾರಿಯಾಗಿದೆ. ಹೀಗಾಗಿ ಈ ಯೋಜನೆಗೆ ನೆರವಾಗಬೇಕಾಗಿರುವುದು ಎಲ್ಲ ಕರ್ತವ್ಯ ಎಂದರು.

    ವರ್ಗಾವಣೆ ವಿಚಾರ

    ರಾಜ್ಯದಲ್ಲಿ ಬಿಜೆಪಿ ಸ್ಥಿತಿ ನೀರಿನಿಂದ ಹೊರೆತೆಗೆದ ಮೀನಿನಂತಾಗಿದೆ. 56 ಇಂಚಿನ ಎದೆಯುಳ್ಳ ಪ್ರಧಾನಿ ಮೋದಿಗೆ ಕನಿಷ್ಠ ವಿರೋಧ ಪಕ್ಷದ ನಾಯಕನ್ನು ಆಯ್ಕೆ ಮಾಡಲಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಭರಾಟೆಯಲ್ಲಿ ಹತಾಶೆಯಾಗಿರುವ ಬಿಜೆಪಿಗರು ವರ್ಗಾವಣೆ ವಿಚಾರವಿಟ್ಟುಕೊಂಡು ಸದನವನ್ನು ಹಾಳು ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಅವಧಿಯಲ್ಲಿ ವರ್ಗಾವಣೆಯೇ ನಡೆದಿಲ್ಲವಾ? ಎಂದ ಗಣಿಹಾರ ಆಡಳಿತ ದೃಷ್ಠಿಯಿಂದ ಮಾರ್ಪಾಟು ಸಹಜ ಎಂದರು.
    ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ವಿಚಾರವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸದನದಲ್ಲಿ ಪ್ರಶ್ನಿಸಿದ್ದಾರೆ. ಮಾತೆತ್ತಿದರೆ ಕ್ಲರ್ಕ್ ಇದ್ದವನನ್ನು ಆಯುಕ್ತರನ್ನಾಗಿಸಲಾಗಿದೆ ಎಂದು ಲೇವಡಿ ಮಾಡುವ ಯತ್ನಾಳರಂಥ ಲಾರಿ ಚಾಲಕನನ್ನು ಜನ ಕೇಂದ್ರದ ಮಂತ್ರಿ ಮಾಡಿಲ್ಲವೇ? ಚಹಾ ಮಾರುವ ಮೋದಿಯನ್ನು ಪ್ರಧಾನಿ ಮಾಡಿಲ್ಲವೇ? ಎಂದು ಲೇವಡಿ ಮಾಡಿದರು.

    ದಲಿತ ವಿರೋಧಿ ನೀತಿ

    ಜೈನ್ ಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪಟ್ಟು ಹಿಡಿದಿರುವ ಬಿಜೆಪಿಗರು ಈ ಹಿಂದೆ ಅಲ್ಪಸಂಖ್ಯಾತರಾದ ಮುಸ್ಲಿಂರ ಹತ್ಯೆ ಪ್ರಕರಣಗಳಲ್ಲಿ ಎಷ್ಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದಾರೆ? ಟಿ.ನರಿಸಿಪುರದಲ್ಲಿ ಕೊಲೆಯಾದ ದಲಿತ ಯುವಕನ ಪ್ರಕರಣ ಸಿಬಿಐಗೆ ಕೊಡಲು ಏಕೆ ಒತ್ತಾಯಿಸುವುದಿಲ್ಲ? ಬೆಂಗಳೂರಿನ ಐಟಿ- ಬಿಟಿ ಕ್ಷೇತ್ರದಲ್ಲಿ ಎರಡು ಕೊಲೆಗಳಾದವು, ಮಂಗಳೂರಿನಲ್ಲಿ ಮುಸ್ಲಿಂ ಯುವಕರ ಹತ್ಯೆಯಾದಾಗ ಏಕೆ ಸಿಬಿಐಗೆ ಕೊಡಲಿಲ್ಲ? ಎಂದು ಪ್ರಶ್ನಿಸಿದ ಗಣಿಹಾರ, ಮುಸ್ಲಿಂರನ್ನು ವಿರೋಧಿಸುವುದು ನಿಮ್ಮ ಚಾಳಿಯಾಗಿದೆ. ಬಜೆಟ್‌ನಲ್ಲಿ ಮುಸ್ಲಿಂರಿಗೆ 20 ಸಾವಿರ ಕೋಟಿ ರೂಪಾಯಿ ಮೀಸಲಾಗಿಟ್ಟಿದ್ದನ್ನು ಸಹಿಸದ ಬಿಜೆಪಿಗರು ಅಮರ್, ಅಕ್ಬರ್, ಆಂಥೋನಿ ಬಜೆಟ್ ಎಂದು ಟೀಕಿಸುತ್ತಿದ್ದಾರೆ. ಏಕೆ ಮುಸ್ಲಿಂರು ಈ ದೇಶಕ್ಕೆ ತೆರಿಗೆ ಕಟ್ಟುವುದಿಲ್ಲವಾ? ಮುಸ್ಲಿಂರನ್ನು ಹಾಗೆ ವಿರೋಧಿಸಿಯೇ ಇಂದು ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದ್ದೀರಿ ಎಂದರು.
    ಮುಖಂಡರಾದ ಅಕ್ರಂ ಮಾಶ್ಯಾಳಕರ, ನಾಗರಾಜ ಲಂಬು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts