More

    ಸಿಎಂ ವಿರುದ್ಧ ಗೆಲ್ಲುವ ಕುದುರೆಗಾಗಿ ಕೈ ಹುಡುಕಾಟ; ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆ

    ಕೇಶವಮೂರ್ತಿ ವಿ.ಬಿ. ಹಾವೇರಿ
    ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಅಧಿಕಾರದ ಗದ್ದುಗೆ ಏರಬೇಕು ಎಂದು ಹಲವು ಗ್ಯಾರಂಟಿಗಳನ್ನು ಘೋಷಿಸುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಗೆಲ್ಲುವ ಕುದುರೆಗಾಗಿ ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಸೇರಿದಂತೆ ಪಕ್ಷದ ಮುಖಂಡರು ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಸಿದ್ದಾರೆ.
    ಬಿ.ಎಸ್.ಯಡಿಯೂರಪ್ಪ ನಂತರ ರಾಜ್ಯದ ಸಿಎಂ ಆಗಿ ಸರ್ಕಾರ ಮುನ್ನಡೆಸುತ್ತಿರುವ ಮತ್ತು ಬಿಜೆಪಿ ಪಕ್ಷವನ್ನೂ ಗಟ್ಟಿಗೊಳಿಸುವಲ್ಲಿ ದೃಢವಾದ ಹೆಜ್ಜೆಗಳನ್ನು ಇಡುತ್ತಿರುವ ಬೊಮ್ಮಾಯಿ ಅವರನ್ನು ಈ ಸಲ ಸೋಲಿಸಬೇಕು ಎಂಬ ಲೆಕ್ಕಾಚಾರವನ್ನು ಕೈಮುಖಂಡರು ಮಾಡುತ್ತಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಯಾಟ್ರಿಕ್ ಭಾರಿಸಿರುವ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದಾರೆ. ಹಾಗಾಗಿ, ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂಬುದು ಕೈಪಡೆಗೆ ಗೊತ್ತಿದೆ. ಹಾಗಾಗಿ, ಗೆಲ್ಲುವ ಕುದುರೆ ಯಾವುದು ಎಂಬ ಲೆಕ್ಕಾಚಾರದಲ್ಲಿದೆ ಕೈಪಕ್ಷ.
    ಕಾಂಗ್ರೆಸ್‌ನಿಂದ ಶಶಿಧರ ಯಲಿಗಾರ, ಅಜ್ಜಂಪೀರ ಖಾದ್ರಿ, ರಾಜೇಶ್ವರಿ ಪಾಟೀಲ, ಸೋಮಣ್ಣ ಬೇವಿನಮರದ, ಷಣ್ಮುಖ ಶಿವಳ್ಳಿ, ಫಕ್ಕೀರಗೌಡ ಪಾಟೀಲ, ಸಂಜೀವ ನೀರಲಗಿ, ಎಸ್.ವಿ.ಪಾಟೀಲ, ಯಾಸೀರ್‌ಖಾನ್ ಪಠಾಣ, ಶಾಕೀರ ಸನದಿ, ನೂರಮ್ಮದ ಮಾಳಗಿ, ಸೇರಿದಂತೆ ಒಟ್ಟು 15 ಮುಖಂಡರು ಶಿಗ್ಗಾಂವಿಯ ಟಿಕೆಟ್‌ಗಾಗಿ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಜಿ ಸಲ್ಲಿಸದಿದ್ದರೂ ವಿನಯ ಕುಲಕರ್ಣಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
    ಟಿಕೆಟ್ ಲೆಕ್ಕಾಚಾರದ ಬಗ್ಗೆ ಪರಿಶೀಲನೆ ನಡೆಸಿರುವ ಕಾಂಗ್ರೆಸ್ ಪಕ್ಷ ಕೊನೆ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಅಚ್ಚರಿಪಡಬೇಕಿಲ್ಲ. ಒಂದೆರೆಡು ದಿನಗಳಲ್ಲಿ ಬಿಡುಗಡೆಯಾಗಲಿರುವ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗುವುದು ಅನುಮಾನವಿದೆ. ಎರಡನೇ ಪಟ್ಟಿಯಲ್ಲಿ ಘೋಷಣೆ ಸಾಧ್ಯತೆ ಇದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.
    ಪಂಚಮಸಾಲಿ- ಮುಸ್ಲಿಂ ಪೈಪೋಟಿ
    ಕ್ಷೇತ್ರದಲ್ಲಿ ಪಂಚಮಸಾಲಿ ಮತ್ತು ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ಹಾಗಾಗಿ, ಎರಡೂ ಸಮುದಾಯಗಳ ಮುಖಂಡರ ನಡುವೆ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಾಗಿದೆ. ಈಗಾಗಲೇ ನಾಲ್ಕು ಬಾರಿ ಚುನಾವಣೆಯಲ್ಲಿ ಹಸ್ತ ಗುರುತುನಿಂದ ಸ್ಪರ್ಧಿಸಿ ಸೋಲುಂಡಿರುವ ಅಜ್ಜಂಪೀರ ಖಾದ್ರಿ ಈ ಬಾರಿ ಮತ್ತೆ ಟಿಕೆಟ್ ಪಡೆಯಲು ಓಡಾಡುತ್ತಿದ್ದಾರೆ. ಪಂಚಮಸಾಲಿ ಸಮುದಾಯದಿಂದ ಪ್ರಮುಖವಾಗಿ ಶಶಿಧರ ಯಲಿಗಾರ, ರಾಜೇಶ್ವರಿ ಪಾಟೀಲ, ಸೋಮಣ್ಣ ಬೇವಿನಮರದ, ಸೇರಿದಂತೆ ಇತರರ ಹೆಸರು ಕೂಡ ಕೇಳಿ ಬರುತ್ತಿದೆ.
    ವಿನಯ ಕುಲಕರ್ಣಿ ಮೇಲೆ ಒತ್ತಡ
    ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಕಳೆದ ಬಾರಿ ಸೋಲು ಕಂಡಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಹೆಸರು ಶಿಗ್ಗಾಂವಿ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಪಂಚಮಸಾಲಿ ಸಮಾಜದ ಮುಖಂಡ ವಿನಯ ಕುಲಕರ್ಣಿ ಸಿಎಂ ವಿರುದ್ಧ ಸ್ಪರ್ಧಿಸಿದರೆ ಕಠಿಣ ಸ್ಪರ್ಧೆ ಎದುರಿಸಬಹುದು ಎಂಬುದು ಕೆಲ ಕೈಮುಖಂಡರ ತಂತ್ರವಾಗಿದೆ. ಆದರೆ, ಈ ಬಗ್ಗೆ ವಿನಯ ಕುಲಕರ್ಣಿ ಒಲವು ತೋರುತ್ತಿಲ್ಲ. ‘ಶಿಗ್ಗಾಂವಿಯಿಂದ ಸ್ಪರ್ಧಿಸಲ್ಲ, ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸುವೆ’ ಎಂದು ಈ ಹಿಂದೆ ವಿನಯ ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಹೈಕಮಾಂಡ್ ಒತ್ತಡ ಹೇರಿದರೆ ಸ್ಪರ್ಧಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.


    ಕೋಟ್:
    ಶಿಗ್ಗಾಂವಿ ಸಿಎಂ ಕ್ಷೇತ್ರ ಆದ್ದರಿಂದ ಪ್ರಬಲ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಹೈಕಮಾಂಡ್ ಚಿಂತನೆ ನಡೆಸುತ್ತಿದೆ. ಈ ಬಾರಿ ಆಕಾಂಕ್ಷಿಗಳ ಪ್ರಮುಖ ಮೂವರ ಪಟ್ಟಿಯಲ್ಲಿ ನನ್ನ ಹೆಸರೂ ಇದೆ. ಹೈಕಮಾಂಡ್ ಸೂಚನೆಯಂತೆ ಕೆಲಸ ಮಾಡುವೆ.
    ರಾಜೇಶ್ವರಿ ಪಾಟೀಲ, ಕಾರ್ಯದರ್ಶಿ, ಕೆಪಿಸಿಸಿ

    ಕೋಟ್
    ವಿನಯ ಕುಲಕರ್ಣಿ ಅಥವಾ ಸಲೀಂ ಅಹ್ಮದ್ ಅವರಿಗೆ ಶಿಗ್ಗಾಂವಿ ಟಿಕೆಟ್ ಕೊಟ್ಟರೆ ನಾನು ಬೆಂಬಲಿಸುವೆ. ಇವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ನನ್ನ ಹಿತೈಷಿಗಳ ಮಾರ್ಗದರ್ಶನದಂತೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.
    ಅಜ್ಜಂಪೀರ ಖಾದ್ರಿ, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts