More

    ಸಚಿವ ಅಶ್ವತ್ಥನಾರಾಯಣ ವಿರುದ್ಧ ಬೀದಿಗಿಳಿದ ಕಾಂಗ್ರೆಸ್

    ಮಂಡ್ಯ: ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
    ಜಯಚಾಮರಾಜೇಂದ್ರ ವೃತ್ತದಲ್ಲಿ ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು, ಮಾನವ ಸರಪಳಿ ರಚಿಸಿ, ಮೈಸೂರು-ಬೆಂಗಳೂರು ಹೆದ್ದಾರಿ ರಸ್ತೆ ತಡೆ ನಡೆಸಿದರು. ಇದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಸಂಚಾರದಲ್ಲಿ ಕೆಲ ಸಮಯ ವ್ಯತ್ಯಯ ಉಂಟಾಯಿತು. ಬಳಿಕ ಮೈಸೂರು-ಬೆಂಗಳೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ನಡುವೆ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸಚಿವ ಅಶ್ವತ್ಥ ನಾರಾಯಣ ಅವರ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದು ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
    ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಅವರು ತಮ್ಮ ೫ ವರ್ಷದ ಆಡಳಿತಾವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಜನಪರ ಆಡಳಿತ ನಡೆಸಿದ್ದಾರೆ. ಇಂತಹ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಾಮಾಣಿಕ, ದಕ್ಷ ಅಧಿಕಾರಿಗಳಾಗಿದ್ದರೆ ಸಚಿವ ಡಾ.ಅಶ್ವತ್ಥ ನಾರಾಯಣ ವಿರುದ್ಧ ಸುಮೋಟ ಕೇಸ್ ದಾಖಲಿಸಬೇಕು. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
    ಸಚಿವ ಅಶ್ವತ್ಥ ನಾರಾಯಣ ಅವರಿಗೆ ಈಗಲೂ ಒಂದು ಅವಕಾಶವಿದೆ. ಬಹಿರಂಗವಾಗಿ ಕ್ಷಮೆಯಾಚಿಸಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆದರೆ ಒಳ್ಳೆಯದು. ಇಲ್ಲದಿದ್ದರೆ, ರಾಜ್ಯವ್ಯಾಪಿ ಕಾಂಗ್ರೆಸ್ ಕಾರ್ಯಕರ್ತರು ಅಶ್ವತ್ಥ ನಾರಾಯಣ ಹೋದ ಕಡೆಯಲ್ಲೆಲ್ಲ ಘೇರಾವ್ ಮಾಡುವುದಾಗಿ ಎಚ್ಚರಿಸಿದ ಅವರು, ಜನಮಾನಸದಲ್ಲಿರುವ ಸಿದ್ದರಾಮಯ್ಯ ಅವರನ್ನು ನೀವೆಷ್ಟೇ ತೆಗಳಿದರೂ ಎತ್ತರದ ಸ್ಥಾನಕ್ಕೆ ಏರಲಿದ್ದಾರೆ. ಮುಂದೆ ಇದೇ ಧೋರಣೆ ಅನುಸರಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಎಚ್.ಬಿ.ರಾಮು, ಎಂ.ಎಸ್.ಆತ್ಮಾನಂದ, ಸಿ.ಡಿ.ಗಂಗಾಧರ್, ಅಂಜನಾ ಶ್ರೀಕಾಂತ್, ಡಾ.ಎಚ್.ಕೃಷ್ಣ, ಕೀಲಾರ ರಾಧಾಕೃಷ್ಣ, ಪಿ. ರವಿಕುಮಾರ್ ಗಣಿಗ, ಎಂ.ಎಸ್.ಚಿದಂಬರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts