More

    ಟೆಲಿಫೋನ್ ಕದ್ದಾಲಿಕೆ ತನಿಖೆಯಾಗಲಿ ; ಶಾಸಕ ಡಾ.ಜಿ.ಪರಮೇಶ್ವರ್ ಆಗ್ರಹ

    ತುಮಕೂರು : ಪಕ್ಷ ಸಂಘಟನೆಯ ಉದ್ದೇಶದಿಂದ ಐದು ದಿನ ರಾಜ್ಯದ ಪ್ರವಾಸ ಕೈಗೊಂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲ ಜು.24ರಂದು ತುಮಕೂರಿನಲ್ಲಿ ಐದು ಜಿಲ್ಲೆಗಳ ಮುಖಂಡರ ಜತೆ ಸಮಾಲೋಚನೆ ನಡೆಸುವರು ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ರಾಷ್ಟ್ರೀಯ ನಾಯಕರು ವೇದಿಕೆ ಕಲ್ಪಿಸಿದ್ದು, ಪಕ್ಷ ಮುಂದಿನ ಚುನಾವಣೆ ಗೆಲ್ಲುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

    ಪೆಗಾಸಸ್ ವಿವಾದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ, ಇನ್ನೊಬ್ಬರ ಫೋನ್ ಟ್ಯಾಪ್ ವಾಡಲು ಬರುವುದಿಲ್ಲ, ಒಂದು ಸಂಸ್ಥೆ ಒಬ್ಬರ ಫೋನ್ ಕದ್ದಾಲಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ. ಹಾಗಾಗಿ, ಉದ್ಯಮಿಗಳು, ಪತ್ರಕರ್ತರು, ಕೆಲ ರಾಜಕಾರಣಿಗಳ ಟೆಲಿಫೋನ್ ಕದ್ದಾಲಿಕೆಗೆ ಅನುಮತಿ ನೀಡಿದವರು ಯಾರು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅನೈತಿಕವಾಗಿ ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಟೆಲಿಫೋನ್ ಕದ್ದಾಲಿಕೆ ಮಾಡಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

    ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಶಾಸಕ ಡಾ.ಎಚ್.ಡಿ.ರಂಗನಾಥ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್, ಎಸ್. ಷಪಿ ಅಹಮದ್, ಆರ್. ನಾರಾಯಣ್ ಮತ್ತಿತರರು ಇದ್ದರು.

    ಮುಖಂಡರ ಜತೆ ಸಂವಾದ : ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್‌ಸಿಂಗ್ ಸುರ್ಜೆವಾಲ ಜು. 23 ರಿಂದ 30ರವರೆಗೆ ರಾಜ್ಯದ ಐದು ಕಡೆ ವಿಭಾಗೀಯ ಮಟ್ಟದಲ್ಲಿ ಮುಖಂಡರೊಂದಿಗೆ ಸಭೆ ನಡೆಸಲಿದ್ದು ತುಮಕೂರಿನಲ್ಲಿ ಮುಖಂಡರ ಜತೆ ಸಂವಾದ ನಡೆಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಆಹ್ಮದ್ ಹೇಳಿದರು.

    ಜು.24 ರಂದು ಬೆಳಗ್ಗೆ 9.30 ರಿಂದ ಸಂಜೆ 6ರ ವರೆಗೆ ಖಾಸಗಿ ರೆಸಾರ್ಟ್‌ನಲ್ಲಿ ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಪಕ್ಷದ ಮುಖಂಡರು, ಶಾಸಕರು, ವಾಜಿ ಶಾಸಕರು, ವಾಜಿ ಸಂಸದರು, 150ಕ್ಕೂ ಹೆಚ್ಚು ಮುಖಂಡರ ಜತೆ ಪಕ್ಷ ಸಂಟನೆಯ ಕುರಿತು ಚರ್ಚೆ ನಡೆಸಲಿದ್ದಾರೆ ಎಂದರು. ಸಂವಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲ ಪ್ರಮುಖ ನಾಯಕರು ಹಾಜರಿರುವರು ಎಂದರು.

    ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಷ್ಟು ಕಾಂಗ್ರೆಸ್‌ಗೆ ಒಳ್ಳೆಯದು, ಇವರ ಜನವಿರೋಧಿ ನೀತಿಯಿಂದ ಜನರು ಮತ್ತಷ್ಟು ಬೇಸತ್ತು ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರೆ.
    ಕೆ.ಎನ್.ರಾಜಣ್ಣ ಮಾಜಿ ಶಾಸಕ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts