More

    ಬಿಜೆಪಿ ಭದ್ರಕೋಟೆ ಬೆಂಗಳೂರು ಸೆಂಟ್ರಲ್​ನಲ್ಲಿ ಕಾಂಗ್ರೆಸ್ ಮತಬೇಟೆ

    | ವಿಲಾಸ ಮೇಲಗಿರಿ ಬೆಂಗಳೂರು

    2008ರ ಕ್ಷೇತ್ರ ಮರುವಿಂಗಡಣೆ ಬಳಿಕ ಹುಟ್ಟಿದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ದೊಡ್ಡ ಇತಿಹಾಸವೇನೂ ಇಲ್ಲ. ಘಟಾನುಘಟಿ ನಾಯಕರು ಗೆದ್ದು ಬೀಗಿದ ಕ್ಷೇತ್ರವೂ ಅಲ್ಲ. ಆದರೆ, ಕ್ಷೇತ್ರ ಹುಟ್ಟಿದಂದಿನಿಂದ ಬಿಜೆಪಿ ಹಿಡಿತದಲ್ಲಿದೆ. 2009, 2014 ಮತ್ತು 2019ರ ಚುನಾವಣೆಯಲ್ಲಿ ಪಿ.ಸಿ.ಮೋಹನ್ ಗೆದ್ದಿದ್ದು, ನಾಲ್ಕನೇ ಬಾರಿಯೂ ಸ್ಪರ್ಧಾ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ತಮಿಳರು, ಮುಸ್ಲಿಂ ಮತದಾರರ ಪ್ರಾಬಲ್ಯದ ಜತೆಗೆ ಇತರ ಎಲ್ಲ ಧರ್ಮ, ವರ್ಗದ ಜನರೂ ನೆಲೆಸಿದ್ದಾರೆ. ಟಿಕೆಟ್ ಘೋಷಣೆಗೂ ಮುನ್ನ ಕ್ಷೇತ್ರದಲ್ಲಿ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್, ಜೈಶಂಕರ್ ಮತ್ತಿತರ ದಿಗ್ಗಜರ ಹೆಸರು ಹರಿದಾಡಿದ್ದವು. ಕೊನೆಗೆ ಟಿಕೆಟ್ ಹಾಲಿ ಸಂಸದ ಪಿ.ಸಿ.ಮೋಹನ್ ಪಾಲಾಯಿತು. ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಪುತ್ರ ಹಾಗೂ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಆಲಿಖಾನ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿಗಳ ಫಲಶ್ರುತಿ ತಿಳಿಯಲು ಚುನಾವಣೆಯನ್ನು ಪ್ರಯೋಗಶಾಲೆಯನ್ನಾಗಿಸಿಕೊಂಡಿದೆ. ಅಲ್ಲದೆ, ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರಾದ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್ ಸರ್ಕಾರ ದಲ್ಲಿ ಮಹತ್ವದ ಖಾತೆ ನಿರ್ವಹಿಸುತ್ತಿದ್ದಾರೆ. ಹಾಗಾಗಿ ತಂತಮ್ಮ ಕ್ಷೇತ್ರದಲ್ಲಿ ಶಕ್ತಿ, ಸಾಮರ್ಥ್ಯ ಸಾಬೀತುಪಡಿಸಬೇಕಾದ ಹೊಣೆಗಾರಿಕೆ ಅವರ ಮೇಲಿದೆ.

    ಮೋಹನ್ ಜಾಣ ನಡೆ: ಕ್ಷೇತ್ರದಲ್ಲಿ ಹಿಂದುತ್ವ, ರಾಷ್ಟ್ರೀಯತೆ ಹೆಚ್ಚು ಸದ್ದು ಮಾಡುತ್ತಿಲ್ಲ. ಅಲ್ಲದೆ, ಪಿ.ಸಿ.ಮೋಹನ್ ಎಂದೂ ಅಗ್ರೆಸ್ಸಿವ್ ಆಗಿ ಹಿಂದುತ್ವ, ರಾಷ್ಟ್ರೀಯತೆ ಪ್ರತಿಪಾದಿಸಿಲ್ಲ. ಬಿಜೆಪಿಯ ಇತರ ನಾಯಕರಂತೆ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರಲ್ಲ. ಅವರೆಂದೂ ಧರ್ಮದ ವಿಚಾರಗಳನ್ನು ಟ್ರಂಪ್ ಕಾರ್ಡ್ ಆಗಿ ಬಳಕೆ ಮಾಡಿಕೊಂಡಿಲ್ಲ. ಇದು ಮೋಹನ್ ಜಾಣ ನಡೆ ಎಂದು ರಾಜಕೀಯದಲ್ಲಿ ವ್ಯಾಖ್ಯಾನಿಸಲಾಗುತ್ತದೆ.

    ಕಾಂಗ್ರೆಸ್​ಗೆ ಬಂಡಾಯದ ಬಿಸಿ?: ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಲು ಬರ್ತಲೋಮಿಯೊ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. 30 ವರ್ಷ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತನಾಗಿದ್ದರೂ ತಮ್ಮನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಪರಿಗಣಿಸಿಲ್ಲ. ಆದ್ದರಿಂದ ಬಂಡಾಯವಾಗಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. 28 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲೂ ಕ್ರೖೆಸ್ತ ಸಮುದಾಯದ ಒಬ್ಬರಿಗೂ ಟಿಕೆಟ್ ನೀಡಿಲ್ಲ. ಕ್ರಿಶ್ಚಿಯನ್ ಸಮುದಾಯವನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಬರ್ತಲೋಮಿಯಾ ಆರೋಪಿಸಿದ್ದಾರೆ. ಇದು ಕಾಂಗ್ರೆಸ್​ಗೆ ನುಂಗಲಾರದ ತುತ್ತಾಗಿದೆ.

    ಕೈ ಶಾಸಕರೇ ಹೆಚ್ಚು: ಶಾಂತಿನಗರ, ಸರ್ವಜ್ಞ ನಗರ, ಮಹಾದೇವಪುರ, ಗಾಂಧಿನಗರ, ಚಾಮರಾಜಪೇಟೆ, ರಾಜಾಜಿನಗರ, ಶಿವಾಜಿನಗರ, ಸಿ.ವಿ.ರಾಮನ್​ನಗರ ವಿಧಾನಸಭೆ ಕ್ಷೇತ್ರಗಳನ್ನು ಬೆಂಗಳೂರು ಸೆಂಟ್ರಲ್ ಕ್ಷೇತ್ರ ಹೊಂದಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲಿ 5 ಕಡೆ ಕಾಂಗ್ರೆಸ್, 3ರಲ್ಲಿ ಬಿಜೆಪಿ ಗೆಲುವು ಸಾಧಿಸಿವೆ. ಕ್ಷೇತ್ರದಲ್ಲಿ 12,36,897 ಪುರುಷ, 11,61,548 ಮಹಿಳೆ, 465 ಇತರರು ಸೇರಿ 23,98,910 ಮತದಾರರು ಇದ್ದಾರೆ.

    ಕಾಂಗ್ರೆಸ್ ಸರ್ಕಾರ ಅಗ್ರೆಸಿವ್: 2019ರ ಚುನಾವಣೆಯಲ್ಲಿ ಹಿಸ್ಟಾರಿಕಲ್ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ಈ ಬಾರಿ ಅಗ್ರೆಸ್ಸಿವ್ ಆಗಿ ಮುನ್ನುಗ್ಗುತ್ತಿದೆ. ಗ್ಯಾರಂಟಿ ನೀಡಿರುವ ಸರ್ಕಾರ ಚುನಾವಣಾ ರಾಜಕಾರಣದ ಈಕ್ವೇಷನ್ ಅನ್ನೇ ಬದಲು ಮಾಡಲು ಹೊರಟಿದೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಂಡು ಬರುವ ಜವಾಬ್ದಾರಿ ಸಚಿವರ ಹೆಗಲಿಗೇರಿಸಿದೆ.

    ಮೋದಿ ಯೂಫೋರಿಯಾ: ಸಾಮಾನ್ಯವಾಗಿ ಮಹಾನಗರಗಳಲ್ಲಿ ಕಂಡುಬರುತ್ತಿರುವ ಮೋದಿ ಯೂಫೋರಿಯಾ ಇಲ್ಲೂ ಇದೆ. ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬ ಒಲವು ಜನರಲ್ಲಿ ಪ್ರಬಲವಾಗಿದೆ. ಐದು ಗ್ಯಾರಂಟಿ ಕೊಟ್ಟಿರುವ ರಾಜ್ಯ ಸರ್ಕಾರವೂ ತನ್ನೆಲ್ಲ ಶಕ್ತಿ ವಿನಿಯೋಗ ಮಾಡುತ್ತಿದೆ. ಜತೆಗೆ ಮತದಾರರು ‘ಕೈ’ ಹಿಡಿಯುವ ನಿರೀಕ್ಷೆ ಇಟ್ಟುಕೊಂಡಿದೆ.

    ಪಿ.ಸಿ. ಮೋಹನ್ ಪ್ಲಸ್, ಮೈನಸ್

    1. ಜನಸಾಮಾನ್ಯರ ಕೈಗೆ ಸಿಗುತ್ತಾರೆ.

    2. ಸೌಮ್ಯ ಸ್ವಭಾವ, ಎಲ್ಲರೊಟ್ಟಿಗೆ ಬೆರೆಯುವ ಮನೋಭಾವ.

    3. ರಾಷ್ಟ್ರೀಯತೆ, ಹಿಂದುತ್ವದ ಟ್ರಂಪ್ ಕಾರ್ಡ್ ಹಿಡಿದವರಲ್ಲ.

    4. ಸಾಕಷ್ಟು ಅನುದಾನ ತರಬಹುದಿತ್ತು.

    5. ಸಂಚಾರ ದಟ್ಟಣೆ ನಿವಾರಣೆ, ಬಡವರಿಗೆ ಸೂರು ಕಲ್ಪಿಸು ವಲ್ಲಿ ಸಾಧನೆ ಇಲ್ಲ.

    ಮನ್ಸೂರ್ ಆಲಿಖಾನ್ ಪ್ಲಸ್, ಮೈನಸ್:

    1. ಕ್ರಿಯಾಶೀಲ ಯುವಕ

    2. ಶಿಕ್ಷಣ ಕ್ಷೇತ್ರದಲ್ಲಿ ಹೆಸರು

    3. ರೆಹಮಾನ್ ಖಾನ್ ಅವರ ನಾಮಬಲ

    4. ಕ್ಷೇತ್ರದ ಜನರಿಗೆ ಹೊಸ ಮುಖ.

    5. ಕಾಂಗ್ರೆಸ್ ಮುಖಂಡರ ಸಂಪೂರ್ಣ ಸಹಕಾರವಿಲ್ಲ.

    6. ರಾಷ್ಟ್ರೀಯ ವಿದ್ಯಮಾನ ಗಳಿಂದ ಆಗುತ್ತಿರುವ ಮತ ಸಮೀಕರಣದ ವಿಚಾರಗಳಲ್ಲಿ ಹಿನ್ನಡೆ.

    ಅಶ್ಲೀಲ ವಿಡಿಯೋ ಚಿತ್ರೀಕರಣ ವೇಳೆ ದಾಳಿ: ಕೇಸ್​ ಬೆನ್ನತ್ತಿದ ಪೊಲೀಸರಿಗೆ ಭಾರೀ ಶಾಕ್​, ಸೆ…ಸಿಡಿಗಳು ವಶಕ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts