More

    ಕಾಂಗ್ರೆಸ್ ಪಕ್ಷವೇ ಅಂಬೇಡ್ಕರ್ ವಿರೋಧಿ

    ಚಿಕ್ಕಮಗಳೂರು: ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು, ಅವರು ಮೃತಪಟ್ಟಾಗ ಅಂತ್ಯಕ್ರಿಯೆಗೆ ಜಾಗವನ್ನೂ ನೀಡದಿದ್ದುದ್ದು ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ವಿರೋಧಿಸುತ್ತಿದ್ದುದು ಯಾರು ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಬಿಜೆಪಿಯಿಂದ ಆಯೋಜಿಸಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಬದುಕಿದ್ದಾಗಲೂ ಅವಮಾನಿಸಿದ್ದು, ಮೃತಪಟ್ಟ ಮೇಲೂ ಅಪಮಾನಿಸಿದ್ದು ಕಾಂಗ್ರೆಸ್ ಎಂದು ಕಿಡಿಕಾರಿದರು.
    ಬಿಜೆಪಿಯವರು ಸಂವಿಧಾನ ಬದಲಿಸುತ್ತಾರೆ ಎಂದು ಆರೋಪ ಮಾಡುತ್ತಾರೆ. ಇದು ಆರೋಪಕ್ಕಷ್ಟೇ ಸೀಮಿತ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಸಂಸತ್‌ಗೆ ಬಂದವರೇ ಸಂಸತ್ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದರು. ಬಳಿಕ ಸಂಸತ್ ಒಳ ಪ್ರವೇಶಿಸಿದವರೇ ಸಂವಿಧಾನಕ್ಕೆ ನಮಸ್ಕರಿಸಿದ್ದರು. ಹೀಗಿರುವಾಗ ಸಂವಿಧಾನ ಬದಲಿಸುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ ಎಂದು ಪ್ರಶ್ನಿಸಿದರು.
    ನರೇಂದ್ರ ಮೋದಿ ಅವರು ಪ್ರಧಾನಿ ಆಗುವವರೆಗೆ ನ.26 ಅನ್ನು ಕಾನೂನು ದಿನ ಎಂದು ಆಚರಿಸಲಾಗುತ್ತಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅದನ್ನು ಸಂವಿಧಾನ ಗೌರವ ದಿನಾಚರಣೆ ಎಂದು ಬದಲಿಸಿದರು. ಹೀಗಿರುವಾಗ ಬಿಜೆಪಿ ಸಂವಿಧಾನಕ್ಕೆ ಎಷ್ಟು ಗೌರವ ನೀಡುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಬಿಜೆಪಿ ದಲಿತರ ಮೀಸಲಾತಿ ಕಿತ್ತುಹಾಕುತ್ತದೆ ಎನ್ನುತ್ತಾರೆ. ಆದರೆ ವಾಸ್ತವವಾಗಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹೆಚ್ಚಿಸಿದ್ದು ಬಿಜೆಪಿ ಎಂದರು.
    ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಅಸ್ಪಶ್ಯತೆ ರೂಪಾಂತರಿಯಾಗಿ ತಾಂಡವವಾಡುತ್ತಿದೆ. ವೈಟ್ ಕಾಲರ್ ಅನ್‌ಟಚಬಿಲಿಟಿ ಈಗ ಜಾಸ್ತಿಯಾಗುತ್ತಿದೆ. ದೇಶದಲ್ಲಿ ಅಸ್ಪಶ್ಯತೆ ಹಾಗೆಯೇ ಉಳಿಯಲು ಕಾಂಗ್ರೆಸ್ ಪಕ್ಷವೇ ಕಾರಣ. ಅಂದು ಖಾದಿ ಹಾಕಿದವರಿಗೆ ಕಾಂಗ್ರೆಸ್ ಸದಸ್ಯತ್ವ ನೀಡುತ್ತೇವೆ ಎನ್ನುತ್ತಿದ್ದರು. ಇದರ ಬದಲಿಗೆ ಅಸ್ಪಶ್ಯತೆ ವಿರೋಧಿಸುವವರಿಗೆ ಕಾಂಗ್ರೆಸ್ ಸದಸ್ಯತ್ವ ನೀಡುವುದಾಗಿ ಹೇಳಿದ್ದರೆ ಇಂದು ದೇಶದಲ್ಲಿ ಅಸ್ಪಶ್ಯತೆಯೇ ಇರುತ್ತಿರಲಿಲ್ಲ ಎಂದು ಹೇಳಿದರು.
    ಪರಿಶಿಷ್ಟ ಜಾತಿಯವರು ಕರ್ನಾಟಕದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಆದರೆ ಪರಿಸ್ಥಿತಿಯಲ್ಲಿ ಯಾವ ಸ್ಥಾನದಲ್ಲಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಕಾಂಗ್ರೆಸ್ ಸರ್ಕಾರ ಕಾಂತರಾಜು ವರದಿ ಸಿದ್ಧಪಡಿಸಿತ್ತು. ಆದರೆ ಅದನ್ನು ಬಿಡುಗಡೆ ಮಾಡಲು ಮಾತ್ರ ಇದುವರೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಅಂಬೇಡ್ಕರ್ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಪಕ್ಷದಿಂದ ಸಾಕಷ್ಟು ಹಿಂಸೆ ಅನುಭವಿಸಿದ್ದರು. ಇದರಿಂದ ನೊಂದ ಅಂಬೇಡ್ಕರ್ ಅವರೇ ಕಾಂಗ್ರೆಸ್ ದಲಿತರನ್ನು ಸುಡುವ ಮನೆ ಎಂದು ಹೇಳಿದ್ದರು. ನಮ್ಮ ಜನರಿಗೆ ರಾಜಕೀಯ ಬೇಕು. ಆದರೆ ರಾಜಕೀಯವೇ ಜೀವನವಾಗಬಾರದು ಎಂದು ಸಲಹೆ ನೀಡಿದರು.
    ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಉದ್ಘಾಟಿಸಿದರು. ಶಾಸಕ ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಬಿಜೆಪಿ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್, ಪ್ರಮುಖರಾದ ಜೆ.ಡಿ.ಲೋಕೇಶ್, ವಾದಿರಾಜ್, ನರೇಂದ್ರ, ನರಸಿಂಹ, ಗೌಡನಹಳ್ಳಿ ಮಂಜುನಾಥ್, ಹಿರೇಮಗಳೂರು ಪುಟ್ಟಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts