More

    ಹಣ ಬಲ, ಅಧಿಕಾರಿಗಳ ಅಸಹಕಾರದ ಮಧ್ಯೆಯೂ ‘ಕೈ’ ಗೆಲುವು

    ತೀರ್ಥಹಳ್ಳಿ: ಬಿಜೆಪಿಯ ಹಣ ಬಲ ಮತ್ತು ಸರ್ಕಾರಿ ಅಧಿಕಾರಿಗಳ ಅಸಹಕಾರದ ನಡುವೆಯೂ ಗೆಲುವು ಸಾಧಿಸಿರುವ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಅಭ್ಯರ್ಥಿಗಳಿಂದ ಪಕ್ಷದ ವರ್ಚಸ್ಸು ಇಮ್ಮಡಿಗೊಂಡಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

    ಪಟ್ಟಣದಲ್ಲಿ ಸೋಮವಾರ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಮತ್ತು ಸಮಾನ ಮನಸ್ಕ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಈ ಚುನಾವಣೆಯಲ್ಲಿ ಪರಾಜಿತರಾದವರು ಎದೆಗುಂದುವ ಅಗತ್ಯವಿಲ್ಲ. ಈ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಸಂಘಟಿಸುವ ನಿಟ್ಟಿನಲ್ಲಿ ಕೈಜೋಡಿಸಿ ಭವಿಷ್ಯದಲ್ಲಿ ಯಶಸ್ಸು ಕಾಣಬಹುದಾಗಿದೆ. ಗೆದ್ದವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನೀವು ಪ್ರತಿನಿಧಿಸುವ ಗ್ರಾಪಂಯನ್ನು ಮಾದರಿಯಾಗಿಸಬೇಕು ಎಂದು ಸಲಹೆ ನೀಡಿದರು.

    ಬಿಜೆಪಿ ಆಡಳಿತದಲ್ಲಿ ಗ್ಯಾಸ್, ಪೆಟ್ರೋಲ್, ಡೀಸೆಲ್ ಧಾರಣೆ ಗಗನಕ್ಕೇರಿದೆ. ಆದರೂ ಜನ ಧ್ವನಿ ಎತ್ತುತ್ತಿಲ್ಲ. ಬಿಎಸ್​ಎನ್​ಎಲ್, ರೈಲ್ವೆ ವಿಮಾನ ನಿಲ್ದಾಣ ಸೇರಿ ಸರ್ಕಾರಿ ಉದ್ಯಮಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಕಳೆದ 8 ತಿಂಗಳಿನಿಂದ ಸಂಧ್ಯಾಸುರಕ್ಷಾ, ವಿಧವಾ ವೇತನ, ಶವಸಂಸ್ಕಾರದ ಹಣ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿಲ್ಲ. ಸಿದ್ದರಾಮಯ್ಯ ಸರ್ಕಾರ ರೈತರ 50 ಸಾವಿರ ರೂ. ಸಾಲ ಮನ್ನಾ ಮಾಡಿದ್ದು ಮಾತ್ರವಲ್ಲ ಆತ್ಮಹತ್ಯೆ ಮಾಡಿಕೊಂಡರೆ 5 ಲಕ್ಷ ರೂ. ಪರಿಹಾರ, ಮನೆಗೆ ಉದ್ಯೋಗ, ಮಕ್ಕಳಿಗೆ ಶಿಕ್ಷಣ ನೀಡುತ್ತಿತ್ತು. ನರೇಂದ್ರ ಮೋದಿ ಸರ್ಕಾರ ಎರಡು ಸಾವಿರ ರೂ. ಕೊಡುತ್ತಿದೆ. ಆದರೂ ಜನ, ರೈತರು ಬಿಜೆಪಿಗೆ ಯಾಕೆ ವೋಟು ಕೊಡá-ತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.

    ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ಕಳೆದ ಮೇನಲ್ಲಿ ನಡೆಯಬೇಕಿದ್ದ ಗ್ರಾಪಂ ಚುನಾವಣೆಯನ್ನು ತಮ್ಮ ಪಕ್ಷಕ್ಕೆ ವಾತಾವರಣ ಪೂರಕವಾಗಿಲ್ಲ ಎಂಬ ಕಾರಣದಿಂದ ಬಿಜೆಪಿ ಮುಂದೂಡಿಕೊಂಡು ಬಂದಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಚುನಾವಣೆ ಘೊಷಣೆ ಮಾಡಿದ ಪರಿಣಾಮ ಕಾಂಗ್ರೆಸ್​ಗೆ ಹಿನ್ನಡೆಯಾಗಿತ್ತು. ಆದರೂ ರಾಜ್ಯಮಟ್ಟದಲ್ಲಿ ಪಕ್ಷದ ಸಾಧನೆ ಉತ್ತಮವಾಗಿದೆ. ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಜಾರಿಗೆ ತಂದ ಪಂಚಾಯತ್​ರಾಜ್ ವ್ಯವಸ್ಥೆಯ ಮೂಲಕ ಸಾಮಾಜಿಕ ನ್ಯಾಯವನ್ನು ಗಟ್ಟಿಗೊಳಿಸುವ ಕೆಲಸವನ್ನು ನೀವುಗಳು ಮಾಡಬೇಕಿದೆ ಎಂದು ಹೇಳಿದರು.

    ಕಾಂಗ್ರೆಸ್ ಜಿಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಘಟಕದ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್ ಹಾಗೂ ಮುಡುಬ ರಾಘವೇಂದ್ರ, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸದಸ್ಯರಾದ ಭಾರತಿ ಪ್ರಭಾಕರ್, ಕಲ್ಪನಾ ಪದ್ಮನಾಭ್, ಕಲಗೋಡು ರತ್ನಾಕರ್, ತಾಪಂ ಅಧ್ಯಕ್ಷೆ ನವಮಣಿ, ರಾಜಾರಾಂ ಹೆಗ್ಡೆ, ಕಡ್ತೂರು ದಿನೇಶ್, ಹಾರೋಗುಳಿಗೆ ಪದ್ಮನಾಭ್, ಡಿ.ಲಕ್ಷ್ಮಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts