More

    ಚಿ.ನಾ.ಹಳ್ಳಿಯಲ್ಲಿ ಕೈ ಆಪರೇಷನ್;

    ತುಮಕೂರು: ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಬಿಜೆಪಿಗೆ ಗುಡ್‌ಬೈ ಹೇಳಲು ಮುಂದಾಗಿದ್ದು, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಕಣಕ್ಕಿಳಿಯುವುದು ನಿಶ್ಚಿತವಾಗುತ್ತಿದೆ.

    ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಕೆ.ಎಸ್.ಕಿರಣ್‌ಕುಮಾರ್ 2004ರಲ್ಲಿ ಕಳ್ಳಂಬೆಳ್ಳ ಕ್ಷೇತ್ರದಿಂದ ಶಾಸಕರಾಗಿದ್ದರು. ಪ್ರಸ್ತುತ ಜೈವಿಕ ಇಂಧನ ಮಂಡಳಿ ಅಧ್ಯಕ್ಷರಾಗಿರುವ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಪಟ್ಟುಹಿಡಿದಿದ್ದರು.

    ಸಚಿವ ಜೆ.ಸಿ.ಮಾಧುಸ್ವಾಮಿ ಕಾರಣಕ್ಕೆ ಕ್ಷೇತ್ರದಲ್ಲಿ ಟಿಕೆಟ್ ಪಡೆಯುವುದು ಕಷ್ಟಸಾಧ್ಯ ಎಂಬುದು ಮನವರಿಕೆಯಾದ ಕೂಡಲೇ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಕಿರಣ್‌ಕುಮಾರ್ ಶೀಘ್ರದಲ್ಲಿಯೇ ಮಹತ್ವದ ನಿರ್ಧಾರ ಪ್ರಕಟಿಸಲಿದ್ದು, ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಫಿಕ್ಸ್ ಆಗಲಿದೆ.
    ಪಕ್ಷನಿಷ್ಠ ಕಿರಣ್‌ಕುಮಾರ್: ಆರೆಸ್ಸೆಸ್ ಮೂಲಕ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಕೆ.ಎಸ್.ಕಿರಣ್‌ಕುಮಾರ್ ಪಕ್ಷ ನಿಷ್ಠೆಗೆ ಹೆಸರಾದವರು, 2013ರಲ್ಲಿ ಕೆಜೆಪಿಗೆ ಹೋಗದೆ ಬಿಜೆಪಿಗೆ ಬಲ ತುಂಬಿದವರು. ಕಳ್ಳಂಬೆಳ್ಳದಲ್ಲಿಯೂ ಸತತ ಮೂರು ಬಾರಿ ಸ್ಪರ್ಧಿಸಿ, ತಳಮಟ್ಟದಿಂದಲೂ ಪಕ್ಷ ಸಂಘಟಿಸಿ ಶಾಸಕರಾದವರು. ಆದರೆ, ಜೆ.ಸಿ.ಮಾಧುಸ್ವಾಮಿ ಬಿಜೆಪಿಗೆ ಬಂದ ನಂತರ ಪಕ್ಷದಲ್ಲಿ ನೆಲೆ ಕಳೆದುಕೊಂಡಿದ್ದ ಕಿರಣ್ ಟಿಕೆಟ್‌ಗೆ ಪಟ್ಟುಹಾಕಿದ್ದರು.

    ಡಾ.ರಂಗನಾಥ್ ಮೂಲಕ ಡಿಕೆಶಿ ಸಂಪರ್ಕ? ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮೂವರು ಜಿಪಂ ಮಾಜಿ ಸದಸ್ಯರ ಜತೆ ಇತ್ತೀಚೆಗಷ್ಟೇ ಡಿಕೆಶಿ ಅವರನ್ನು ಭೇಟಿಯಾಗಿರುವ ಕೆ.ಎಸ್.ಕಿರಣ್‌ಕುಮಾರ್ ಟಿಕೆಟ್ ಖಚಿತಪಡಿಸಿದರೆ ಕಾಂಗ್ರೆಸ್‌ಗೆ ಬರುವುದಾಗಿ ಮನವಿ ಮಾಡಿದ್ದಾರೆ. ಕುಣಿಗಲ್ ಶಾಸಕ ಡಾ.ಎಚ್. ಡಿ.ರಂಗನಾಥ್ ಹಾಗೂ ರಾಮನಗರದ ಕೆಲವು ಮುಖಂಡರ ಜತೆ ಡಿಕೆಶಿ ಅವರನ್ನು ಸಂಪರ್ಕಿಸಿರುವ ಕೆಎಸ್‌ಕೆಗೆ ಕಾಂಗ್ರೆಸ್ ಪಾಳಯದಿಂದಲೂ ಭರವಸೆ ಸಿಕ್ಕಿದೆಯಾದರೂ, ಮಾತುಕತೆ ವೇಳೆ ಒಂದು ತಿಂಗಳು ಮೊದಲೇ ಆಗಮಿಸಿದ್ದರೆ ಅನುಕೂಲವಾಗುತ್ತಿತ್ತು ಎಂದು ಡಿಕೆಶಿ ರಾಗ ಎಳೆದಿರುವುದು ಪಕ್ಷ ಸೇರ್ಪಡೆಯನ್ನು ತಡಮಾಡಿದೆ. ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕಿರಣ್‌ಕುಮಾರ್ ಅಧಿಕೃತವಾಗಿ ಘೋಷಿಸುತ್ತಾರೆ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ.

    21ರಂದು ಕಾಂಗ್ರೆಸ್ ಸೇರ್ಪಡೆ? ಕೆ.ಎಸ್.ಕಿರಣ್‌ಕುಮಾರ್ ಕಾಂಗ್ರೆಸ್ ಸೇರ್ಪಡೆ ಖಚಿತವಾಗಿದ್ದು, ಎಲ್ಲವೂ ನಿರೀಕ್ಷೆಯಂತೆಯೇ ನಡೆದರೆ ಫೆ.21ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಫೆ.17ರಂದು ಹುಳಿಯಾರಿನಲ್ಲಿ ಬೆಂಬಲಿಗರ ಸಭೆ ಕಡೆಯಲಾಗಿದ್ದು, ಬಿಜೆಪಿಗೆ ಗುಡ್‌ಬೈ ಹೇಳಲು ಸಜ್ಜಾಗಿದ್ದಾರೆ. ಕಿರಣ್ ಅವರೊಂದಿಗೆ ಕ್ಷೇತ್ರದ ಪ್ರಮುಖ ಬಿಜೆಪಿ ಮುಖಂಡರು ಕೈಹಿಡಿಯುವ ಸಾಧ್ಯತೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts