More

    ಬಿಜೆಪಿ ಜತೆ ಜೆಡಿಎಸ್ ವಿಲೀನ ಮಾತೇ ಇಲ್ಲ

    ಶಿವಮೊಗ್ಗ: ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷಗಳು ಬಿಜೆಪಿಗೆ ಬೆಂಬಲ ನೀಡಲು ಮುಂದೆ ಬಂದರೆ ಅಥವಾ ವಿಲೀನ ಆಗಲು ಬಯಸಿದರೆ ಸ್ವಾಗತ ಇದೆ. ಆದರೆ ಪ್ರಸ್ತುತ ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಆಗುವ ಮಾತೇ ಇಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

    ಜ.2 ಮತ್ತು 3ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆ ಮತ್ತು ವಿಶೇಷ ಸಭೆಯ ಕಾರ್ಯಾಲಯವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಂದಿಲ್ಲ. ಹಾಗಾಗಿ ಪೂರ್ಣ ಪ್ರಮಾಣದ ಬಹುಮತ ಪಡೆಯವುದೇ ಈ ಸಭೆಯ ಮುಖ್ಯ ಅಜೆಂಡಾ ಎಂದು ಹೇಳಿದರು.

    ಸಂಘಟನೆ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿರುವ ಈ ಸಭೆಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸುವರು. ರಾಜ್ಯದ ಪ್ರಭಾರಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸಹ ಪ್ರಭಾರಿ ಅರುಣಾ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಡಿ.ವಿ.ಸದಾನಂದಗೌಡ ಪಾಲ್ಗೊಳ್ಳುವರು.

    ಮೊದಲ ದಿನ ರಾಜ್ಯ ಕೋರ್ ಕಮಿಟಿ ಹಾಗೂ ಎರಡನೇ ದಿನ ರಾಜ್ಯ ವಿಶೇಷ ಸಭೆ ಆಯೋಜಿಸಲಾಗಿದೆ. ಎರಡು ದಿನವೂ ಸಿಎಂ ಪಾಲ್ಗೊಳ್ಳುವರು.ರಾಜ್ಯದ ಆಯ್ದ 200 ಪ್ರಮುಖರು ಮಾತ್ರ ಪಾಲ್ಗೊಳ್ಳುವರು ಎಂದರು. ಈ ಸಭೆ ಬಳಿಕ ರಾಜ್ಯ ರಾಜಕಾರಣ ವಿಶೇಷ ತಿರುವು ಪಡೆದುಕೊಳ್ಳಲಿದೆ ಎಂದು ಹೇಳಿದರು.

    ಗ್ರಾಪಂ ಚುನಾವಣೆಯಲ್ಲಿ ಶೇ.80ರಷ್ಟು ಬಿಜೆಪಿ ಬೆಂಬಲಿಗರನ್ನು ಗೆಲ್ಲಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಬರಲಿರುವ ಜಿಪಂ ಮತ್ತು ತಾಪಂ ಚುನಾವಣೆ ದೃಷ್ಟಿಯಿಂದಲೂ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

    ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯ ಕಾರ್ಯದರ್ಶಿ ತುಳಸಿ ಮುನಿರಾಜುಗೌಡ, ಎಂಎಲ್​ಸಿಗಳಾದ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮುಖಂಡರಾದ ಡಿ.ಎಸ್.ಅರುಣ್, ಎಸ್.ದತ್ತಾತ್ರಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts