More

    ಕಾಂಗ್ರೆಸ್​ ನಾಯಕರ ಮಧ್ಯೆಯೇ ಜಗಳ ತಂದಿಟ್ಟ ಅರವಿಂದ್ ಕೇಜ್ರಿವಾಲ್​ ಸರ್ಕಾರ…! ಕೈನಲ್ಲಿ ಟ್ವೀಟ್​ ಸಮರ..

    ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಅರವಿಂದ್ ಕೇಜ್ರಿವಾಲ್​ ವಿಚಾರದಲ್ಲಿ ಕಾಂಗ್ರೆಸ್​ ನಾಯಕರ ಮಧ್ಯೆಯೇ ಒಳಜಗಳ ಶುರುವಾಗಿದೆ.

    ಅರವಿಂದ್​ ಕೇಜ್ರಿವಾಲ್ ಅವರನ್ನು ಹೊಗಳಿದ್ದ ಮುಂಬೈ ಕಾಂಗ್ರೆಸ್ ಮುಖಂಡ ಮಿಲಿಂದ್ ದಿಯೋರಾ ಅವರ ವಿರುದ್ಧ ಇನ್ನೋರ್ವ ನಾಯಕ ದೆಹಲಿಯ ಅಜಯ್​ ಮಾಕೆನ್​ ಅವರು ವಾಗ್ದಾಳಿ ನಡೆಸಿದ್ದಾರೆ.

    ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ಆದಾಯವನ್ನು ದ್ವಿಗುಣಗೊಳಿಸಿ, 60,000 ಕೋಟಿ ರೂಪಾಯಿಗೆ ತಲುಪಿಸಿದೆ ಮತ್ತು ಕಳೆದ ಐದು ವರ್ಷಗಳಲ್ಲಿ ಈ ಹೆಚ್ಚುವರಿ ಆದಾಯದ ಸಮತೋಲನವನ್ನು ಕಾಯ್ದುಕೊಂಡಿದೆ. ಇದು ತುಂಬ ಕಡಿಮೆ ಜನರಿಗೆ ಗೊತ್ತಿರುವ ಮತ್ತು ಸ್ವಾಗತಾರ್ಹ ಬೆಳವಣಿಗೆ. ದೆಹಲಿ ಭಾರತದಲ್ಲಿಯೇ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ದೂರದೃಷ್ಟಿ ಮತ್ತು ಸಬಲವಾಗಿರುವ ಸರ್ಕಾರ ಎಂದು ಮಿಲಿಂದ್​ ದಿಯೋರ್​ ಹೊಗಳಿದ್ದಾರೆ.

    ಆದರೆ ಇದು ಮಾಕೆನ್ ಅವರ ಕೋಪಕ್ಕೆ ಕಾರಣವಾಗಿದೆ. ಮಿಲಿಂದ್​ ದಿಯೋರ್ ವಿರುದ್ಧ ಟ್ವೀಟ್​ ಮಾಡಿದ ಅಜಯ್​ ಮಾಕೆನ್​, ಸಹೋದರನೇ ನಿಮಗೇನಾದರೂ ಕಾಂಗ್ರೆಸ್​ ಬಿಡಬೇಕು ಎಂದು ಅನ್ನಿಸುತ್ತಿದ್ದರೆ ದಯವಿಟ್ಟು ಬಿಟ್ಟು ಹೋಗಿ. ನಂತರ ಅರ್ಧಂಬರ್ಧ ಸತ್ಯವನ್ನು ಪ್ರಚಾರ ಮಾಡಿಕೊಂಡಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    1997-98-ರಲ್ಲಿ ಆದಾಯ 4,073 ಕೋಟಿ ರೂ., 2013-14 -37,459 ಕೋಟಿ ರೂ. ಇತ್ತು. ಅಂದರೆ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ(ಸಿಎಜಿಆರ್​) ಶೇ.14. 87 ಇತ್ತು.
    2105-16ರಲ್ಲಿ ಆದಾಯ 41,129 ಕೋಟಿ ರೂ., 2019-20ರಲ್ಲಿ 60,000 ಕೋಟಿ ರೂ. ಆಗಿದೆ. ಅಂದರೆ ಆಪ್​ ಸರ್ಕಾರದ ಅವಧಿಯಲ್ಲಿ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ(ಸಿಎಜಿಆರ್​) ಶೇ.9.90ರಷ್ಟಿದೆ ಎಂದು ಮಾಕೆನ್​ ತಮ್ಮ ಟ್ವೀಟ್​ನಲ್ಲಿ ಲೆಕ್ಕಾಚಾರ ಕೊಟ್ಟಿದ್ದಾರೆ. ಈ ಮೂಲಕ ಆಪ್​ ಅವಧಿಯಲ್ಲಿ ಆದಾಯ ದ್ವಿಗುಣಗೊಂಡಿಲ್ಲ ಎಂಬುದನ್ನು ಹೇಳಿದ್ದಾರೆ.

    ಹಾಗೇ ದೆಹಲಿ ಕಾಂಗ್ರೆಸ್ ನಾಯಕಿ ರಾಧಿಕಾ ಖೇರಾ ಕೂಡ ಮಿಲಿಂದ್​ ದಿಯೋರ್​ ಟ್ವೀಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ತುಂಬ ಚಿಕ್ಕವಳು. ಆದರೆ ನಮ್ಮ ಪಕ್ಷದ ಹಿರಿಯರಿಂದ ಇಂತಹ ಮಾತುಗಳನ್ನು ಕೇಳಿ ನನಗೆ ನಿರಾಸೆಯಾಗಿದೆ. ನಮ್ಮ ಪಕ್ಷವನ್ನು ಪ್ರೋತ್ಸಾಹಿಸುವ ಬದಲು ಆಪ್​ಗೆ ಬೆಂಬಲ ನೀಡುತ್ತಿದ್ದಾರೆ. ದೆಹಲಿ ಆರ್ಥಿಕತೆ ಶೀಲಾ ಜೀ ಅವರ ಆಡಳಿತದಲ್ಲಿಯೇ ಉತ್ತುಂಗಕ್ಕೆ ಏರಿದೆ ಎಂದು ಹೇಳಿದ್ದಾರೆ.

    ವಿಧಾನಸಭಾ ಚುನಾವಣೆಗೂ ಮೊದಲು ಅರವಿಂದ ಕೇಜ್ರಿವಾಲ್​ ಅವರು ತಮ್ಮ ಸರ್ಕಾರದ ಸಾಧನೆಗಳ ವರದಿಯನ್ನು ನೀಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts