More

    ದ್ವೇಷದ ರಾಜಕಾರಣ ನನಗೆ ಗೊತ್ತಿಲ್ಲ: ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿಕೆ

    ಮಂಡ್ಯ: ದ್ವೇಷದ ರಾಜಕಾರಣ ಮಾಡುವುದು ನನಗೆ ಗೊತ್ತಿಲ್ಲ. ಅಂತೆಯೇ ಸೋಲು, ಗೆಲುವನ್ನು ಸಹಜವಾಗಿ ಸ್ವೀಕರಿಸುತ್ತೇವೆ ಎಂದು ಕೆಪಿಸಿಸಿ ಉಪಾಧ್ಯಕ್ಷರೂ ಆದ ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಹೇಳಿದರು.
    ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೋತಾಗಲು ಅಥವಾ ಗೆದ್ದಾಗಲು ಒಂದೇ ರೀತಿ ಇದ್ದೇವೆ. ಮತದಾರರಿಗೆ ನೋವು ಮಾಡಲು ಇಷ್ಟಪಡಲ್ಲ. ನಾನು ಯಾವ ಪಕ್ಷವನ್ನು ದ್ವೇಷ ಮಾಡುವುದಿಲ್ಲ. ಆದರೆ ಜೆಡಿಎಸ್ ನಾಯಕರಿಗೆ ತಮ್ಮ ಗೆಲುವಿಗಿಂತ ನನ್ನಂತವರ ಸೋಲಿಸುವುದೇ ತಂತ್ರವಾಗಿದೆ. ಆದರೆ ಇದು ಜನರಿಗೂ ಗೊತ್ತಾಗುತ್ತಿದೆ ಎಂದರು.
    ಅವರು ಪ್ರಯತ್ನ ಮಾಡಲಿ, ಆದರೆ ಜನರಿಗೆ ಅರಿವಿದೆ. ಅದಕ್ಕೆ ಮತದಾರರೇ ಉತ್ತರ ಕೊಡುತ್ತಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕ್ಷೇತ್ರಕ್ಕೆ ಬರುವುದರಿಂದ ನನಗೆ ಆಶೀರ್ವಾದ ಆಗುತ್ತದೆ. ನಾಗಮಂಗಲಕ್ಕೆ ಬಂದು ಒಂದೆರಡು ಮಾತನಾಡಿದರೆ ನನಗೆ ಒಳ್ಳೆಯದಾಗುತ್ತದೆ. ಅದು ಹೇಗೆ ಎನ್ನುವುದು ಚುನಾವಣೆ ನಂತರ ಗೊತ್ತಾಗುತ್ತದೆ. ನನ್ನ ಕ್ಷೇತ್ರದ ಜನ ಈ ಬಾರಿ ಕೈಬಿಡಲ್ಲ. ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಈ ಬಾರಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಹಾಗಾಗಿ ವಿವಿಧ ಪಕ್ಷಗಳ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಕಳೆದ ಬಾರಿ ಸೋಲು ಕಂಡಿದ್ದೆವು. ಅದರ ಬದಲಾವಣೆ ನೋಡಲು ಜನರು ಬಯಸುತ್ತಿದ್ದಾರೆ. ಜಿಲ್ಲೆಯ ಏಳೂ ಕ್ಷೇತ್ರದಲ್ಲಿ ಯಾವುದೇ ಗೊಂದಲ ಇಲ್ಲ. ಇದ್ದ ಸಣ್ಣಪುಟ್ಟ ಅಸಮಾಧಾನ ಸರಿಪಡಿಸಿದ್ದೇವೆ. ಅಂತೆಯೇ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಹಳ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಯುವ ಘಟಕದ ಮಾಜಿ ಅಧ್ಯಕ್ಷ ಎಂ.ಎಸ್.ಚಿದಂಬರ್, ನಾಗಮಂಗಲ ಕ್ಷೇತ್ರದ ಗ್ರಾಮಾಂತರ ಅಧ್ಯಕ್ಷ ದಿವಾಕರ್, ಜೋಗಿಗೌಡ, ಸುರೇಶ್ ಕಂಠಿ, ಎ.ಟಿ.ಕರೀಗೌಡ, ರಾಮಕೃಷ್ಣ, ಡಿ.ಕೃಷ್ಣೇಗೌಡ, ಜವರೇಗೌಡ ಇತರರಿದ್ದರು.
    ಹೊರೆ ಇಳಿಸಿ ಕೈಹಿಡಿದ ಮುಖಂಡರು: ಜೆಡಿಎಸ್ ನಾಯಕರ ವರ್ತನೆಯಿಂದ ಬೇಸತ್ತು ನಾಗಮಂಗಲ ಕ್ಷೇತ್ರದ ಕೊಪ್ಪ ಹೋಬಳಿಯ ಹಲವು ಪ್ರಭಾವಿ ಮುಖಂಡರು ಕಾಂಗ್ರೆಸ್ ಸೇರಿದರು. ಮನ್‌ಮುಲ್ ಮಾಜಿ ಅಧ್ಯಕ್ಷ ಸಿ.ತಮ್ಮಯ್ಯ, ಒಕ್ಕಲಿಗರ ಸಂಘದ ನಿರ್ದೇಶಕ ಮೂಡ್ಯ ಚಂದ್ರು, ತಾಪಂ ಮಾಜಿ ಅಧ್ಯಕ್ಷರಾದ ಜಯಲಕ್ಷ್ಮೀ ಜಯರಾಮು, ರಾಮಚಂದ್ರು, ಮಾಜಿ ಉಪಾಧ್ಯಕ್ಷ ತಮ್ಮಣ್ಣ ನಾಯಕ, ಹುರುಗಲವಾಡಿ ಯೋಗೇಶ್, ಹರೀಶ್, ಯೋಗಾನಂದ್, ಹಳೇಹಳ್ಳಿ ರಾಮಕೃಷ್ಣ, ನಂಬಿನಾಯಕನಹಳ್ಳಿ ಸುರೇಶ್, ಹೊಸಗಾವಿ ಶಿವರಾಮು, ಚಿಕ್ಕಹೊಸಗಾವಿಯ ಎಪಿಎಂಸಿ ಮಾಜಿ ಸದಸ್ಯ, ಸುರೇಶ್, ಬಂಡಹಳ್ಳಿ ಕುಮಾರ್, ತರಮನಕಟ್ಟೆ ಟಿ.ರಮೇಶ್, ಕೊಪ್ಪ ಶ್ರೀಕಾಂತ್, ನಂಜೇಶ್, ಹರಳಕೆರೆ ಜ್ಯೋತಿ ಶಂಕರ್ ಅವರನ್ನು ಎನ್.ಚಲುವರಾಯಸ್ವಾಮಿ ಪಕ್ಷಕ್ಕೆ ಬರಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts