More

    ಅನ್ಯ ಮಾರ್ಗದಿಂದ ಚುನಾವಣೆ ಎದುರಿಸಲು ಮುಂದಾದ ಕಾಂಗ್ರೆಸ್

    ಮೈಸೂರು: ಕಾಂಗ್ರೆಸ್ ಪಕ್ಷ ಅನ್ಯಮಾರ್ಗದಲ್ಲಿ ಚುನಾವಣೆ ಎದುರಿಸಲು ಮುಂದಾಗಿದ್ದು, ಅದನ್ನು ಬಿಟ್ಟು ರಾಜ ಮಾರ್ಗದಲ್ಲಿ ಬಂದು ಚುನಾವಣೆ ಎದುರಿಸಬೇಕು ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಹೇಳಿದರು.

    ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತ ಓಲೈಕೆ ರಾಜಕಾರಣ ಮಾಡುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಆಡಳಿತ ಮಾಡಲಾಗುತ್ತದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದರೂ ಅಭಿವೃದ್ಧಿ ಮಾಡಲಿಲ್ಲ ಎಂದೇ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಜನ ಸೋಲಿಸಿದ್ದರು. ಆ ನೋವನ್ನು ಈಗಲೂ ಅವರು ಅನುಭವಿಸುತ್ತಿದ್ದಾರೆ. ಆದ್ದರಿಂದ ಯಾವುದೇ ರೀತಿಯ ಸುಳ್ಳು ಆಶ್ವಾಸನೆಗಳನ್ನು ನೀಡದೆ ಈ ಬಾರಿಯ ಚುನಾವಣೆಯಲ್ಲಿ ನೇರವಾದ ರಾಜಕಾರಣ ಮಾಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

    ಮಹಿಳಾ ಸಬಲೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆದ್ಯತೆ ನೀಡಿದ್ದು, ಅನೇಕ ಯೋಜನೆಗಳನ್ನು ಸ್ತ್ರೀ ಸಂಕುಲಕ್ಕಾಗಿ ಪರಿಚಯಿಸಿದೆ. ಮಹಿಳೆಯರನ್ನು ಆರ್ಥಿಕ ಸಾಕ್ಷರರನ್ನಾಗಿ ಮಾಡಿದರೆ ಆ ಕುಟುಂಬ ಕೂಡ ಆರ್ಥಿಕವಾಗಿ ಸದೃಢವಾಗಲಿ ಎಂಬ ಸದುದ್ದೇಶ ಇದರಲ್ಲಿ ಸೇರಿದೆ. ಆ ಹಿನ್ನೆಲೆಯಲ್ಲಿ ಹಲವು ಮಹಿಳಾ ಪರ ಕಾರ್ಯಕ್ರಮ ರೂಪಿಸಿದೆ ಎಂದರು.

    ಈ ಹಿಂದೆ ಮಹಿಳೆಯರಾದಿಯಾಗಿ ಎಲ್ಲರೂ ಬ್ಯಾಂಕುಗಳ ಮುಂದೆ ಹೋಗಿ ಕುಳಿತು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ಯೋಜನೆ ಜಾರಿಗೆ ತಂದಿತು. ಇದು ಸಾಕಷ್ಟು ರೀತಿಯಲ್ಲಿ ಜನರಿಗೆ ಅನುಕೂಲವಾಯಿತು ಎಂದರು.

    ಮಹಿಳಾ ಮೋರ್ಚಾ ಮೈಸೂರು ಗ್ರಾಮಾಂತರ ಘಟಕದ ಅಧ್ಯಕ್ಷೆ ನಳಿನಿ, ನಗರ ಘಟಕದ ಅಧ್ಯಕ್ಷೆ ರೇಣುಕಾ ರಾಜು, ಮಾಜಿ ಉಪ ಮೇಯರ್ ರೂಪಾ, ಮಾಧ್ಯಮ ವಕ್ತಾರ ಮಹೇಶ್ ರಾಜೇ ಅರಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts