More

    ಕಾಂಗ್ರೆಸ್ ಕುಟುಂಬ ರಾಜಕಾರಣ ಬದಲಾಗಲಿ- ಸಂಸದ ಸಿದ್ನಾಳ

    ಬೆಳಗಾವಿ: ನೂರು ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಕೋಟ್ಯಂತರ ಕಾರ್ಯಕರ್ತರ ಪಡೆ ಹೊಂದಿರುವ ಕಾಂಗ್ರೆಸ್ ಪಕ್ಷ ಕುಸಿಯುತ್ತಿರುವುದು ನೋವು ಉಂಟು ಮಾಡಿದೆ. ಪಕ್ಷ ಸಂಘಟನೆ ಹಿತದೃಷ್ಟಿಯಿಂದ ಕಾಂಗ್ರೆಸ್‌ನಲ್ಲಿರುವ ಕುಟುಂಬ ರಾಜಕಾರಣ ಬದಲಾವಣೆ ಅವಶ್ಯಕವಾಗಿದೆ ಎಂದು ಕಾಂಗ್ರೆಸ್ ಮಾಜಿ ಸಂಸದ ಎಸ್.ಪಿ.ಸಿದ್ನಾಳ ಆಗ್ರಹಿಸಿದ್ದಾರೆ.

    ನಗರದಲ್ಲಿ ಬುಧವಾರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬಿಜೆಪಿ ಎದುರಿಸಲು ಮತ್ತು ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಪಕ್ಷದ 23 ಹಿರಿಯ ನಾಯಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವುದು ಸರಿಯಾಗಿದೆ. ಈ ಕ್ರಮವನ್ನು ವಿರೋಧಿಸುವುದು ಸರಿಯಲ್ಲ. ದೇಶದಲ್ಲಿ ಯುವ ಸಮುದಾಯ ಅಧಿಕ ಪ್ರಮಾಣದಲ್ಲಿರುವ ಕಾರಣದಿಂದ ಪಕ್ಷ ಸಂಘಟಿಸಲು ಯುವಕರಿಗೆ ಮೊದಲ ಆದ್ಯತೆ ನೀಡಬೇಕು ಎಂದರು.

    ಶಕ್ತಿ ಕಳೆದುಕೊಂಡ ಕೈ ಪಡೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷವನ್ನು ಎಚ್ಚರಿಸಲು ಬಲಿಷ್ಠ ವಿರೋಧ ಪಕ್ಷಗಳಿ ರಬೇಕು. ಆದರೆ, ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಇದೀಗ ತನ್ನ ಶಕ್ತಿ ಕಳೆದುಕೊಂಡು ಒಂದು ಕುಟುಂಬಕ್ಕೆ ಸೀಮಿತಗೊಂಡಿದೆ. ಪರಿಣಾಮ ವರ್ಷದಿಂದ ವರ್ಷಕ್ಕೆ ಪಕ್ಷ ಸಂಘಟನೆ ಕೆಳಮಟ್ಟಕ್ಕೆ ಕುಸಿಯುತ್ತಿದ್ದು, ಅಧಿಕಾರವನ್ನೂ ಕಳೆದುಕೊಳ್ಳುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷದಲ್ಲಿ ಬದಲಾವಣೆ ಆಗದಿದ್ದರೆ ಮುಂಬರುವ ದಿನಗಳಲ್ಲಿ ಪಕ್ಷ ಸಂಪೂರ್ಣ ನಾಶವಾಗಲಿದೆ. ಈಗಾಗಲೇ ಕರ್ನಾಟಕ, ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದು ಕೊಂಡಿದ್ದು, ಭವಿಷ್ಯದಲ್ಲಿ ಇತರೆ ರಾಜ್ಯಗಳಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
    ಯುವಕರನ್ನು ಬೆಳೆಸದ ರಾಹುಲ್: ಪಕ್ಷದ ಮುಖಂಡರು, ನಾಯಕರುಗಳು ಸಂಘಟನೆ ಪ್ರವಾಸ ಕೈಬಿಟ್ಟಿದ್ದಾರೆ. ಅರ್ಹ ಕಾರ್ಯಕರ್ತರ ಸಂಪರ್ಕ ಇಲ್ಲದಂತಾಗಿದೆ.

    ಪಕ್ಷದಲ್ಲಿನ ಅಧ್ಯಕ್ಷ, ಉಪಾಧ್ಯಕ್ಷ ಇನ್ನಿತರ ಸ್ಥಾನಗಳನ್ನು ಹೊಸ ಮುಖಗಳಿಗೆ ನೀಡಬೇಕು. ರಾಹುಲ್ ಗಾಂಧಿ ಯುವ ನಾಯಕರಿದ್ದಾರೆ. ಆದರೆ, ಅವರು ಯುವಕರನ್ನು ಬೆಳೆಸುತ್ತಿಲ್ಲ. ಇದೇ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ ಎಂದು ಸಿದ್ನಾಳ ಆಕ್ರೋಶ ವ್ಯಕ್ತಪಡಿಸಿದರು.

    ಅವನತಿಯತ್ತ ಕಾಂಗ್ರೆಸ್: ಸದ್ಯ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಸಲಹೆ ಆಲಿಸಲು, ಜನರಿಗಿರುವ ಸಮಸ್ಯೆ ಪರಿಹರಿಸುವ ಸಹನೆ, ಸೌಜನ್ಯತೆಗಳು ಪಕ್ಷ ನಡೆಸುವ ಅಧ್ಯಕ್ಷ, ನಾಯಕರ ಬಳಿಯಿಲ್ಲ. ಪಕ್ಷದಲ್ಲಿ ಕಾರ್ಯಕರ್ತರಿಗೆ ಸಿಗಬೇಕಾದ ಸ್ಥಾನಮಾನ ಕುಟುಂಬ ರಾಜಕಾರಣದ ಕುಡಿಗಳಿಗೆ ಸಿಗುತ್ತಿದೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿರುವ ನಾಯಕರಿಗೆ ಸ್ಪಂದಿಸುವ ಸಹನೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನಾಯಕರಗಳ ಬಳಿಯಿಲ್ಲ. ಹಾಗಾಗಿ ಪಕ್ಷ ಅವನತಿ ಹೊಂದುತ್ತಿದೆ ಎಂದರು. ಮಲ್ಲಿಕಾರ್ಜುನ ಹೊರಪೇಟೆ, ಬಿ.ಎನ್.ಗೌಡರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts