More

    ಐಟಿ ದಾಳಿಯಲ್ಲಿ ತಮ್ಮ ಪಕ್ಷದ ಸಂಸದನ ಬಳಿ 300 ಕೋಟಿ ರೂ. ಸಿಕ್ಕಿರುವ ಬಗ್ಗೆ ಕಾಂಗ್ರೆಸ್​ ಹೇಳಿದ್ದಿಷ್ಟು..

    ನವದೆಹಲಿ: ತಮ್ಮ ಪಕ್ಷದ ಸಂಸದರೊಬ್ಬರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ನಡೆದ ಐಟಿ ದಾಳಿಯಲ್ಲಿ 300 ಕೋಟಿ ರೂಪಾಯಿಗೂ ಅಧಿಕ ದಾಖಲೆಗಳಿಲ್ಲದ ಹಣ ಪತ್ತೆಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ಮೂಲಕ ವಿವಾದದಿಂದ ದೂರ ಉಳಿಯುವ ಪ್ರಯತ್ನವನ್ನು ಮಾಡಿದೆ.

    ಒಡಿಶಾ ಮತ್ತು ಜಾರ್ಖಂಡ್​ನ ರಾಂಚಿಯಲ್ಲಿರುವ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹು ಒಡೆತನದ ಸ್ಥಳಗಳು ಮತ್ತು ಡಿಸ್ಟಿಲರಿಗಳು, ಸಂಬಂಧಿತ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಇಲ್ಲಿಯವರೆಗೆ 300 ಕೋಟಿ ರೂ.ಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ. ನಾಲ್ಕನೇ ದಿನವಾದ ಶನಿವಾರವೂ ದಾಳಿ ಮುಂದುವರಿದಿದ್ದು, ಇನ್ನಷ್ಟು ನಗದು ವಶಪಡಿಸಿಕೊಳ್ಳುವ ನಿರೀಕ್ಷೆಯಿದೆ. ನೋಟು ಎಣಿಸುವ ಕಾರ್ಯ ಇನ್ನೆರಡು ದಿನ ನಡೆಯಲಿದೆ. ಚಿನ್ನಾಭರಣವೂ ಸೇರಿ ಈ ಮೊತ್ತ 500 ಕೋಟಿ ರೂ.ಗೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಐಟಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

    ಪಕ್ಷ ಯಾವುದೇ ರೀತಿ ಸಂಪರ್ಕ ಹೊಂದಿಲ್ಲ
    ತಮ್ಮ ಪಕ್ಷದ ಸಂಸದನ ಮನೆಯಲ್ಲಿ ಇಷ್ಟೊಂದು ಪ್ರಮಾಣದ ಹಣ ಸಿಕ್ಕಿರುವುದಕ್ಕೆ ಕಾಂಗ್ರೆಸ್​ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಕೊನೆಗೂ ಕಾಂಗ್ರೆಸ್​ ಮೌನ ಮುರಿದ್ದು, ಸಂಸದ ಧೀರಜ್ ಸಾಹು ಅವರ ವ್ಯವಹಾರಗಳೊಂದಿಗೆ ಕಾಂಗ್ರೆಸ್​ ಪಕ್ಷ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ. ಆದಾಯ ತೆರಿಗೆ ಅಧಿಕಾರಿಗಳು ತನ್ನ ಆಸ್ತಿಯಿಂದ ಹೇಗೆ ಇಷ್ಟೊಂದು ಮೊತ್ತದ ನಗದನ್ನು ಪತ್ತೆ ಮಾಡಿದರು ಎಂಬುದನ್ನು ಸಾಹು ಮಾತ್ರ ವಿವರಿಸಬಹುದು ಮತ್ತು ವಿವರಿಸಲೇಬೇಕು ಎಂದು ಕಾಂಗ್ರೆಸ್​ ಹಿರಿಯ ನಾಯಕ ಜೈರಾಮ್​ ರಮೇಶ್​ ತಿಳಿಸಿದ್ದಾರೆ.

    ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್​ನಲ್ಲಿ ತೆರಿಗೆ ವಂಚನೆ ನಡೆದಿದೆ ಎಂಬ ಶಂಕೆಯ ಮೇರೆಗೆ ಆರಂಭವಾದ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಬಹುದೊಡ್ಡ ಹಗರಣವೇ ಬಯಲಾಗಿದೆ. ಬಲಂಗೀರ್ ಜಿಲ್ಲೆಯ ವಿವಿಧೆಡೆ 100ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ‘50 ಮಂದಿ ಹಣ ಎಣಿಕೆ ಮಾಡುತ್ತಿದ್ದಾರೆ. ವಶಪಡಿಸಿಕೊಂಡ 176 ಚೀಲಗಳ ಪೈಕಿ ಕೇವಲ 40 ಚೀಲಗಳ ಎಣಿಕೆಯಷ್ಟೇ ಮುಗಿಸಿದ್ದು, ಉಳಿದವುಗಳನ್ನು ಎಣಿಕೆ ಮಾಡಲಾಗುತ್ತಿದೆ. ವಶಪಡಿಸಿಕೊಂಡ ಹಣವನ್ನು ರಾಜ್ಯ ಸರ್ಕಾರಿ ಬ್ಯಾಂಕ್​ಗಳಿಗೆ ಸಾಗಿಸಲು ಹೆಚ್ಚಿನ ವಾಹನಗಳನ್ನು ಇಲಾಖೆಯು ಕೇಳಿದೆ ಎಂದು ಬಲಂಗೀರ್ ಎಸ್​ಬಿಐನ ಪ್ರಾದೇಶಿಕ ವ್ಯವಸ್ಥಾಪಕ ಭಗತ್ ಬೆಹೆರಾ ತಿಳಿಸಿದ್ದಾರೆ.

    ಇತಿಹಾಸದಲ್ಲೇ ಅತಿ ಹೆಚ್ಚು
    ದೇಶದಲ್ಲೇ ಒಂದೇ ಕಾರ್ಯಾಚರಣೆಯಲ್ಲಿ ಇಷ್ಟೊಂದು ಅಕ್ರಮ ನಗದು ಮೊದಲ ಬಾರಿ ವಶಪಡಿಸಿಕೊಳ್ಳಲಾಗಿದೆ. ನಗದು ಮಾತ್ರವಲ್ಲದೇ ದಾಳಿಯಲ್ಲಿ 3 ಸೂಟ್​ಕೇಸ್​ನಷ್ಟು ಚಿನ್ನಾಭರಣ ಪತ್ತೆಯಾಗಿದೆ. ಬಲಂಗೀರ್ ಜಿಲ್ಲೆಯ ಕಂಪನಿಯಲ್ಲಿ ಇರಿಸಲಾಗಿದ್ದ 8-10 ಕಪಾಟುಗಳಿಂದ ಸುಮಾರು 230 ಕೋಟಿ ರೂಪಾಯಿ ನಗದನ್ನು ವಶಪಡಿಸಿ ಕೊಳ್ಳಲಾಗಿದ್ದು, ಉಳಿದವುಗಳನ್ನು ತಿತ್ಲಗಢ್, ಸಂಬಲ್ಪುರ್ ಮತ್ತು ರಾಂಚಿಯ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

    ಬಿಜೆಪಿ ವಾಗ್ದಾಳಿ
    ಭ್ರಷ್ಟಾಚಾರದ ವಿಷಯವಾಗಿ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ದೇಶವಾಸಿಗಳು ಕನಿಷ್ಠ ಈ ನೋಟುಗಳ ರಾಶಿಯನ್ನು ನೋಡಬೇಕು. ನಂತರ ತಮ್ಮ ನಾಯಕರ ಪ್ರಾಮಾಣಿಕತೆ ಬಗ್ಗೆ ಕೇಳಬೇಕು. ಸಾರ್ವಜನಿಕರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ವಸೂಲಿ ಮಾಡಲಾಗುವುದು. ಇದು ಮೋದಿಯವರ ಗ್ಯಾರಂಟಿ ಎಂದು ತಿಳಿಸಿದ್ದಾರೆ. ಅಲ್ಲದೆ, ಆಡಳಿತಾರೂಢ ಬಿಜೆಡಿ ಕೂಡ ಐಟಿ ದಾಳಿಯನ್ನು ಸ್ವಾಗತಿಸಿದೆ.

    ಕಳೆದ ಮೂರು ದಿನಗಳಿಂದ ದಾಳಿ ನಡೆಯುತ್ತಿದೆ. ಧೀರಜ್ ಸಾಹು ಅವರು ಕಾಂಗ್ರೆಸ್​ನ ಹಿರಿಯ ಸಂಸದರಾಗಿದ್ದು, ನನಗೆ ದೊರೆತ ಮಾಹಿತಿಯಂತೆ 290 ಕೋಟಿ ರೂ.ನಗದು ಎಣಿಕೆ ಮಾಡಲಾಗಿದೆ, 8 ಲಾಕರ್​ಗಳು ಮತ್ತು 10 ಕೊಠಡಿಗಳನ್ನು ತೆರೆಯಬೇಕಿದೆ. ಈ ಸಂಖ್ಯೆ 500 ಕೋಟಿಗೆ ಏರಿದರೆ ನನಗೆ ಆಶ್ಚರ್ಯವಿಲ್ಲ, 500 ಕೋಟಿ ರೂಪಾಯಿ ನಗದು ಮಾತ್ರ, ಆಗ ಆಸ್ತಿ 1,000 ಕೋಟಿ ರೂಪಾಯಿ ಆಗಬಹುದು, ಕಾಂಗ್ರೆಸ್ ಈ ದೇಶದ ಆರ್ಥಿಕತೆಯನ್ನು ಟೊಳ್ಳು ಮಾಡಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಆರೋಪ ಮಾಡಿದ್ದಾರೆ. ವಸೂಲಿ ಮಾಡಿದ ಹಣ ಒಬ್ಬರಿಗೆ ಮಾತ್ರ ಸೇರಿದ್ದಲ್ಲ, ಭಾರತ್ ಜೋಡೋ ಯಾತ್ರೆಯಲ್ಲಿ ಧೀರಜ್ ಸಾಹು ಹೇಗೆ ಭಾಗವಹಿಸಿದ್ದರು ಎಂಬುದನ್ನು ನೀವು ನೋಡಿರಬಹುದು. ರಾಹುಲ್ ಗಾಂಧಿ ಜೊತೆಗಿನ ಹಲವಾರು ಫೋಟೋಗಳು ವೈರಲ್ ಆಗಿವೆ. ಈ ಹಣ ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಅಥವಾ ಜಾರ್ಖಂಡ್ ಸರ್ಕಾರಕ್ಕೆ ಸೇರಿರಬಹುದು. ಆದರೆ, ಪ್ರಧಾನಿ ಮೋದಿ ಅವರು ಭಾನುವಾರ ಹೇಳಿದಂತೆ ಪ್ರತಿ ಪೈಸೆಯೂ ಎಣಿಕೆಯಾಗುತ್ತದೆ ಮತ್ತು ಕಾಂಗ್ರೆಸ್‌ನ ಎಲ್ಲಾ ಭ್ರಷ್ಟ ನಾಯಕರು ಕಂಬಿ ಹಿಂದೆ ಹೋಗುತ್ತಾರೆ ಎಂದರು.

    ಧೀರಜ್ ಸಾಹು ಯಾರು?
    ಜಾರ್ಖಂಡ್​ನ ಲೋಹರ್ಡಗಾ ನಿವಾಸಿಯಾಗಿರುವ ಧೀರಜ್ ಸಾಹು ಕಾಂಗ್ರೆಸ್​ನ ಹಿರಿಯ ನಾಯಕ. 1977ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಆರಂಭಿಸಿದ ಧೀರಜ್ ಮೂರನೇ ಬಾರಿ ರಾಜ್ಯಸಭಾ ಸಂಸದರಾಗಿದ್ದಾರೆ. ಇದಕ್ಕೂ ಮುನ್ನ ಅವರು 2010-2016ರ ಅವಧಿಯಲ್ಲಿ ಕಾಂಗ್ರೆಸ್​ನ ರಾಜ್ಯಸಭಾ ಸಂಸದರಾಗಿದ್ದರು. 2018ರಲ್ಲಿ ಅವರು ಜಾರ್ಖಂಡ್​ನಲ್ಲಿ ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಗೆದ್ದರು. ಸಾಹು ಅವರು 2003-05ರಲ್ಲಿ ರಾಜ್ಯ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆಗಿದ್ದರು. (ಏಜೆನ್ಸೀಸ್​)

    300 ಕೋಟಿ ರೂಪಾಯಿ ವಶ: 3 ದಿನವಾದರೂ ಮುಗಿಯದ ನೋಟು ಎಣಿಕೆ

    ರೋಮ್ ಹೊತ್ತಿ ಉರಿಯುವಾಗ ದೊರೆ ಪಿಟೀಲು ಬಾರಿಸುತ್ತಿದ್ದನಂತೆ ಅಂಗಾಯ್ತು ಸಚಿವೆ ರೋಜಾ ಕತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts