More

    ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣ

    ಚನ್ನರಾಯಪಟ್ಟಣ: ಲೋಕಸಭಾ ಚುನಾವಣೆ ಸ್ಪರ್ಧಿಯಾಗುವ ಆಸೆಯಿಲ್ಲದಿದ್ದರೂ, ಪಕ್ಷದ ಸೂಚನೆ ಮೇರೆಗೆ ಸ್ಪರ್ಧಿಸಿದ್ದೇನೆ. ನೀವೆಲ್ಲ ಸೇರಿ ನನ್ನ ಕೈ ಹಿಡಿದು ಗೆಲುವಿಗೆ ಶ್ರಮಿಸಬೇಕು ಎಂದು ಹಾಸನ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

    ಪಟ್ಟಣದ ಎಸ್‌ಬಿಜಿ ಕನ್ವೆನ್ಷನಲ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದರು. ಜಿಲ್ಲಾದ್ಯಂತ ನಾನು ಸಂಚರಿಸಿದ್ದು, ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣವಿದೆ. ಇದು ಬರೀ ಪಕ್ಷ ಮತ್ತು ನನ್ನ ಚುನಾವಣೆಯಲ್ಲ. ನಮ್ಮೆಲ್ಲರ ಚುನಾವಣೆ ಆಗಿದೆ. ನಾವು ಗೆದ್ದರಷ್ಟೇ ರಾಜ್ಯ ನಾಯಕರ ವಿಶ್ವಾಸ ಪಡೆಯಲು ಸಾಧ್ಯ. ಆದ್ದರಿಂದ ಗೆಲುವಿಗಾಗಿ ಎಲ್ಲರೂ ಶ್ರಮಿಸೋಣ ಎಂದು ಹುರಿದುಂಬಿಸಿದರು.

    ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಶ್ರೇಯಸ್ ಮಾತ್ರ ಅಭ್ಯರ್ಥಿ ಅಲ್ಲ. ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಸಹ ಅಭ್ಯರ್ಥಿ ಎಂದು ಭಾವಿಸಬೇಕು. ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದರಷ್ಟೇ ನಾವೆಲ್ಲ ಉಳಿಯಲು ಸಾಧ್ಯ. ಇಲ್ಲದಿದ್ದಲ್ಲಿ ನಾವು ರಾಜ್ಯದ ನಾಯಕರ ಮುಂದೆ ನಿಲ್ಲಲಾಗದು ಎಂದರು.

    ಜೆಡಿಎಸ್‌ನವರು ಈ ಮೊದಲು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಲಾಭ ಪಡೆದು ನಮ್ಮನ್ನೇ ದೂರುತ್ತಿದ್ದಾರೆ. ಇದೀಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಅವರಿಬ್ಬರ ನಡುವೆ ಒಡಕು ಕಾಣಿಸಿಕೊಂಡಿದೆ. ತಮ್ಮ ಅವಶ್ಯಕತೆಗಾಗಿ ಎಲ್ಲರ ಮನೆ ಬಾಗಿಲು ತಟ್ಟುವ ಜೆಡಿಎಸ್ ಅನ್ನು ನಂಬದಂತೆ ಜನರಿಗೆ ತಿಳಿಸುವ ಕೆಲಸವನ್ನು ಬೂತ್‌ಮಟ್ಟದ ಕಾರ್ಯಕರ್ತರು ಮಾಡಬೇಕು ಎಂದರು.

    ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ, ಮುಖಂಡರಾದ ವಿ.ಜಿ.ಲಲಿತಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷಣ್, ಎಂ.ಶಂಕರ್, ಜಾವಗಲ್ ಮಂಜುನಾಥ್, ಅಬ್ದುಲ್ ಆದಿ, ಎಚ್.ಕೆ.ಮಹೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್.ಮೂರ್ತಿ, ಮುಖಂಡರಾದ ಸಿ.ಎಸ್.ಯುವರಾಜ್, ವಿನೋದ್ ಮಕಾನ್, ಎ.ಎನ್.ರೋಹಿತ್, ಜಯರಾಂ, ಬಾಬಣ್ಣಿ, ಮಂಜಣ್ಣ, ಎಚ್.ಸಿ.ದೀಪು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts