More

    ಬಿಜೆಪಿ ಭ್ರಷ್ಟ ಆಡಳಿತಕ್ಕೆ ಜೆಡಿಎಸ್ ಬೆಂಬಲ: ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ವಾಗ್ದಾಳಿ

    ಮಂಡ್ಯ: ಬಿಜೆಪಿ ಸರ್ಕಾರ ರಾಜ್ಯವನ್ನೂ ಲೂಟಿ ಮಾಡಿದೆ. ಇದು ಶೇ.40ರಷ್ಟು ಕಮಿಷನ್ ಮಾತ್ರವಲ್ಲ. ಕೆಲವು ಇಲಾಖೆಯಲ್ಲಿ ಶೇ.100ರಷ್ಟು ಭ್ರಷ್ಟಾಚಾರ ಆಗಿದೆ. ಬಿಜೆಪಿಯಂತಹ ಭ್ರಷ್ಟ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡುತ್ತದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
    ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಆಯೋಜಿಸಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಗಣಿಗ ಪರ ಮತಯಾಚನೆಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಇಲ್ಲ ಎಂಬ ಚರ್ಚೆ ಆರಂಭವಾಗಿತ್ತು. ಕಳೆದ ಚುನಾವಣೆಯ ಫಲಿತಾಂಶ ನೋಡಿ ಚೇತರಿಸಿಕೊಳ್ಳಲು ಸಾಧ್ಯವೇ ಎಂಬ ನಂಬಿಕೆ ನಮ್ಮಲ್ಲೂ ಇರಲಿಲ್ಲ. ಆದರೆ ಮಂಡ್ಯದಿಂದ ಆಯ್ಕೆಯಾಗಿದ್ದ ಜೆಡಿಎಸ್ ಶಾಸಕರು ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದ್ದಾರೆ ಎಂದರು.
    ನಿಮಗೆ ಮಂಡ್ಯ ಅಭಿವೃದ್ಧಿ ಬೇಕಾ?. ಕಣ್ಣೀರು ಹಾಕುವವರು ಬೇಕಾ ಯೋಚನೆ ಮಾಡಿ. ಮೈಷುಗರ್ ಕಾರ್ಖಾನೆಯನ್ನು ಡಿಕೆಶಿ ನೇತೃತ್ವದಲ್ಲಿ ಪುನಶ್ಚೇತನ ಮಾಡುತ್ತೇವೆ. ನಮ್ಮ ಪಕ್ಷದ ಪ್ರಣಾಳಿಕೆಗಳನ್ನು ಜಾರಿ ಮಾಡುತ್ತೇವೆ. ಆ ರೀತಿ ಯೋಜನೆಗಳನ್ನ ಬೇರೆ ಯಾರಾದರೂ ಮಾಡುವುದಕ್ಕೆ ಸಾಧ್ಯವಿಲ್ಲ. ಎಲ್ಲ ಜನರ ರಕ್ಷಣೆ ಮಾಡುವುದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತ್ರಿಮೂರ್ತಿಗಳಂತೆ ಕೆಲಸ ಮಾಡುತ್ತಿದ್ದಾರೆ. ರವಿಕುಮಾರ್ ಕಳೆದ ಭಾರಿ ಸೋತರೂ ಜನರ ನಡುವೆ ಇದ್ದರು. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಟಿಕೆಟ್ ಆಕಾಂಕ್ಷಿಗಳು ರವಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಶಕ್ತಿಯೆ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ. ಕಳೆದ ಚುನಾವಣೆಯಲ್ಲಿ ರವಿಕುಮಾರ್ ಕಡಿಮೆ ಅಂತರದಲ್ಲಿ ಸೋತಿದ್ದರು. ಆದರೂ ಎಲ್ಲ ಸಂದರ್ಭದಲ್ಲಿ ಶಕ್ತಿ ಮೀರಿ ಪ್ರಾಮಾಣಿಕ ಸೇವೆ ಮಾಡಿದ್ದಾರೆ. ವಯಸ್ಸು ಚಿಕ್ಕದು, ದಪ್ಪದಾಗಿ ಕಾಣಬಹದು. ಮಂಡ್ಯದಲ್ಲಿ 16 ಜನರು ಟಿಕೆಟ್‌ಗೆ ಅರ್ಜಿ ಹಾಕಿದ್ದರು. ಆದರೆ ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವುದು ನನ್ನ, ಅಭ್ಯರ್ಥಿ, ಚಲುವರಾಯಸ್ವಾಮಿ ಮೇಲೆ ನಿಂತಿದೆ. ಮಂಡ್ಯದಲ್ಲಿ ಎಂಥೆತವರನ್ನೋ ಪಲ್ಟಿ ಮಾಡಿಸಿದ ಇತಿಹಾಸ ಇದೆ. ಆದರೆ ನೀವೆಲ್ಲರೂ ನನಗೆ ಶಕ್ತಿ ಕೊಡುತ್ತೀರಾ ಎಂಬ ಭರವಸೆ ಇದೆ ಎಂದರು.
    ಕಳೆದ ಚುನಾವಣೆಯಲ್ಲಿ ಜೆಡಿಎಸ್ 7 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆದರೆ ಗೆದ್ದವರು ಮಾಡಿದ್ದೇನು. ಬೆಂಗಳೂರು-ಮೈಸೂರು ಹೆದ್ದಾರಿಯಿಂದ ವ್ಯಾಪಾರ ವಹಿವಾಟಿಗೆ ಪೆಟ್ಟು ಬಿದ್ದಿದೆ. ಯಾರು ಧ್ವನಿ ಎತ್ತಲಿಲ್ಲ, ನಿಮ್ಮ ಸ್ವರ ಯಾರು ಹಿಡ್ಕೊಂಡಿದ್ದಾರಾ. ರಸ್ತೆ ವಿಚಾರದಲ್ಲಿ ಸದನದಲ್ಲಿ ಮಾತನಾಡಲಿಲ್ಲ. ಅಮಿತ್ ಷಾ ಮಂಡ್ಯದಲ್ಲಿ ಅಮುಲ್ ಜತೆಗೆ ನಂದಿನಿ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದರು. ನಂದಿನಿ ನಮ್ಮವಳಪ್ಪ, ಹೇಗೆ ಕರ್ಕೊಂಡು ಹೋಗುತ್ತೀರಿ ಎನ್ನಬಹುದಿತ್ತು. ಬಿಜೆಪಿ-ಜೆಡಿಎಸ್‌ನ ಹೊಂದಾಣಿಕೆ ಏನೇ ಇರಲಿ. ಮತ ಕೊಟ್ಟ ಮತದಾರರ ಋಣ ತೀರಿಸಬೇಕಲ್ವ ಎಂದು ಛೇಡಿಸಿದರು.
    ಈ ರಾಜ್ಯದಲ್ಲಿ ಬಿಜೆಪಿ ಆಡಳಿತ ಹೋಗಬೇಕು. ಕುಮಾರಣ್ಣ ಸಿಎಂ ಆಗುವುದಕ್ಕೆ ಸಾಧ್ಯನಾ, ಅಷ್ಟೊಂದು ನಂಬರ್ ಬರುತ್ತಾ. ಕೆ.ಟಿ.ಶ್ರೀಕಂಠೇಗೌಡ ಏಕೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿಲ್ಲ. ಅಪ್ಪಾಜಿಗೌಡ ಏಕೆ ಎಂಎಲ್‌ಸಿ ಚುನಾವಣೆಯಲ್ಲಿ ಸೋತರು. ಜಗದೀಶ್ ಶೆಟ್ಟರ್, ಸವದಿ ಕಾಂಗ್ರೆಸ್‌ಗೆ ಬಂದಿದ್ದಾರೆ. ಇನ್ನು ಕೆಲವರು ಬರುತ್ತಾರೆ, ಆದರೆ ನಾವೇ ಬೇಡ ಅಂತಿದ್ದೀವಿ. ಬಿಜೆಪಿಯವರು ಐಟಿ, ಇಡಿ ಮೂಲಕ ನನ್ನ ಒಳಗೆ ಹಾಕಿಸುವುದಕ್ಕೆ ಪ್ರಯತ್ನ ಪಟ್ಟಿದ್ದರು. ರಾಹುಲ್ ಗಾಂಧಿಯನ್ನೆ ಬಿಡಲಿಲ್ಲ, ಇನ್ನ ನನ್ನ ಬಿಡ್ತಾರಾ. ಬಿಜೆಪಿಯವರು ಏನೇ ಮಾಡಿದರೂ ನಾನು ಸರೆಂಡರ್ ಆಗಲ್ಲ ಎಂದರು.
    ಅಭ್ಯರ್ಥಿ ರವಿಕುಮಾರ್ ಗಣಿಗ, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಅಮರಾವತಿ ಚಂದ್ರಶೇಖರ್, ಕೀಲಾರ ರಾಧಾಕೃಷ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts