More

    ತುಮಕೂರು ಪಾಲಿಕೆಯಲ್ಲಿ ಕೈ-ಜೆಡಿಎಸ್‌ ಮೈತ್ರಿ ಮಂತ್ರ

    ತುಮಕೂರು: ಮಹಾನಗರ ಪಾಲಿಕೆಯಲ್ಲಿ ‘ಮೈತ್ರಿ’ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್‌ನಲ್ಲೀಗ ಕಸರತ್ತು ಆರಂಭಗೊಂಡಿದೆ. 2ನೇ ಅವಧಿಯ ಮೇಯರ್, ಉಪಮೇಯರ್ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಮೂರು ಪಕ್ಷಗಳಲ್ಲೂ ಚಟುವಟಿಕೆಗಳು ಗರಿಗೆದರಿವೆ.

    ಹಾಲಿ ಮೇಯರ್, ಉಪಮೇಯರ್ ಅವಧಿ ಜ.30ಕ್ಕೆ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ 2ನೇ ಅವಧಿ ಚುನಾವಣೆಯನ್ನು ಜ.30ರಂದು ನಿಗದಿಗೊಳಿಸಲಾಗಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಹುದ್ದೆ ಬಿಸಿಎಂ (ಎ) ಮಹಿಳೆಗೆ ಮೀಸಲು ಪ್ರಕಟಿಸಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಪಾಲಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ‘ಮೈತ್ರಿ’ ಮುಂದುವರಿಸಲು ಉಭಯಪಕ್ಷಗಳ ವರಿಷ್ಠರು ಮುಂದಾಗಿದ್ದರೆ, ಒಡಕಿನ ಲಾಭ ಪಡೆಯಲು ಬಿಜೆಪಿ ತೆರೆಮರೆಯಲ್ಲಿ ಚದುರಂಗದಾಟ ನಡೆಸುತ್ತಿದೆ.

    23ರಂದು ಜೆಡಿಎಸ್ ಉಪಹಾರ ಕೂಟ: ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಉಪಹಾರ ಕೂಟಗಳು ಆರಂಭವಾಗಿವೆ. ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ನಿವಾಸದಲ್ಲಿ ಗುರುವಾರ ಜೆಡಿಎಸ್ ಕಾರ್ಪೋರೇಟರ್‌ಗಳು ಒಗ್ಗಟ್ಟು ಪ್ರದರ್ಶಿಸಲಿದ್ದಾರೆ. ಜೆಡಿಎಸ್ ಇಬ್ಭಾಗವಾಗಲಿದೆ ಎಂಬ ರಾಜಕೀಯ ಊಹಾಪೋಹಗಳೆದ್ದಿದ್ದು ಉಪಹಾರ ಕೂಟ ಹೆಚ್ಚು ಮಹತ್ವ ಪಡೆದುಕೊಂಡಿದೆ.

    ಕಾಂಗ್ರೆಸ್ ಕಾರ್ಪೋರೇಟರ್‌ಗಳು ಮಾಜಿ ಶಾಸಕ ಡಾ.ಎಸ್.ರಫೀಕ್ ಅಹ್ಮದ್ ಮನೆಯಲ್ಲಿ ಉಪಹಾರ ಕೂಟದಲ್ಲಿ ಭಾಗಿಯಾಗಿ ಜೆಡಿಎಸ್ ಜತೆಗಿನ ‘ಮೈತ್ರಿ’ ಮುಂದುವರಿಸಲು ಸಹಮತ ವ್ಯಕ್ತಪಡಿಸಿದ್ದಾರೆ. ಮೇಯರ್ ಹುದ್ದೆಯನ್ನು ಕಳೆದ ಬಾರಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದ ಈ ಬಾರಿ ಕಾಂಗ್ರೆಸ್ ಹಕ್ಕು ಪ್ರತಿಪಾದಿಸಲು ನಿರ್ಧರಿಸಿದೆ. ಜೆಡಿಎಸ್‌ನಲ್ಲಿ ಹಾಲಿ ಮೇಯರ್ ಸೇರಿ ಕೇವಲ ಮೂವರು ಮಹಿಳಾ ಕಾರ್ಪೋರೇಟರ್‌ಗಳಿದ್ದಾರೆ. ಹಾಗಾಗಿ, ಈ ಬಾರಿ ಮೇಯರ್ ಹುದ್ದೆ ಬಿಟ್ಟುಕೊಡಬೇಕೆಂಬ ಪ್ರಬಲ ವಾದ ಕಾಂಗ್ರೆಸ್‌ದ್ದಾಗಿದೆ. ಕಾಂಗ್ರೆಸ್‌ನಲ್ಲಿ 5 ಮಹಿಳಾ ಕಾರ್ಪೋರೇಟರ್‌ಗಳಿದ್ದಾರೆ.

    ಕಳೆದ ಅವಧಿ ವೇಳೆ ಮೇಯರ್ ಸ್ಥಾನ ಕಾಂಗ್ರೆಸ್‌ಗೆ, ಉಪಮೇಯರ್ ಸ್ಥಾನ ಜೆಡಿಎಸ್‌ಗೆ ಎಂಬ ಅಲಿಖಿತ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಜೆಡಿಎಸ್‌ನ ಹಾಲಿ ಮೇಯರ್ ಲಲಿತಾ 2 ಬಾರಿ ಮೇಯರ್ ಆಗಿದ್ದು, ಉಳಿದ ಮಹಿಳಾ ಕಾರ್ಪೋರೇಟರ್‌ಗಳು ಮೊದಲ ಬಾರಿ ಗೆದ್ದಿದ್ದಾರೆ. ಇನ್ನು ಹಾಲಿ ಉಪಮೇಯರ್ ಬಿ.ಎಸ್.ರೂಪಶ್ರೀ ಮೇಯರ್ ಕನಸು ಕಾಣುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಮುಸ್ಲಿಂ ಮಹಿಳಾ ಕಾರ್ಪೋರೇಟರ್‌ಗೆ ಮೇಯರ್ ಹುದ್ದೆ ನೀಡುವುದು ಖಚಿತ ಎನಿಸಿದೆ. ಕಾಂಗ್ರೆಸ್‌ನ ಫರಿದಾಬೇಗಂ, ನಾಸಿರಾಬಾನು, ಮುಜೀದಾಖಾನಂ ರೇಸ್‌ನಲ್ಲಿದ್ದಾರೆ. ಮಾಜಿ ಮೇಯರ್ ಸುದೀಶ್ವರ್ ಪತ್ನಿ ಪ್ರಭಾವತಿ ಹೆಸರೂ ಕೂಡ ಕೇಳಿಬರುತ್ತಿದೆ. ಒಪ್ಪಂದದಂತೆ ನಡೆದರೆ ಉಪಮೇಯರ್ ಬಿಸಿಎಂಎ ಮಹಿಳೆ ಆಗಿರುವುದರಿಂದ ಜೆಡಿಎಸ್ ಶಶಿಕಲಾಗೆ ಅದೃಷ್ಟ ಒಲಿದು ಬರಲಿದೆ.

    ವಾಸಣ್ಣ ಮನೆಯಲ್ಲಿ ಸಭೆ : ಶ್ರೀನಿವಾಸ್ ಮನೆಯಲ್ಲಿ ಗುರುವಾರ ಬೆಳಗ್ಗೆ ನಡೆಯುವ ಸಭೆಗೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನೂ ಆಹ್ವಾನಿಸಲಾಗಿದೆ. ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಹಾಗೂ ಮಾಜಿ ಉಪಮೇಯರ್ ಟಿ.ಆರ್.ನಾಗರಾಜು ಸೇರಿ ಪಕ್ಷದ ಮುಖಂಡರು ಭಾಗವಹಿಸಲಿದ್ದು, ಕಾಂಗ್ರೆಸ್ ಜತೆ ಮೈತ್ರಿಗೆ ಧಕ್ಕೆ ಬಾರದಂತೆ ರಾಜಕೀಯ ತೀರ್ಮಾನ ಕೈಗೊಳ್ಳಲಿದ್ದಾರೆ. ‘ವಚನಭ್ರಷ್ಟ’ರಾಗದಿರಲು ಜೆಡಿಎಸ್ ನಿರ್ಧರಿಸಿದಂತೆ ಕಾಣುತ್ತಿದೆ.

    ಬಿಜೆಪಿಯದ್ದು ಕಾದುನೋಡುವ ತಂತ್ರ : ಅತೀ ಹೆಚ್ಚು (12) ಸ್ಥಾನ ಗೆದ್ದಿದ್ದರೂ ಅಧಿಕಾರ ಹಿಡಿಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಸರ್ಕಾರ, ಜತೆಗೆ ಶಾಸಕ, ಸಂಸದರು ಬಿಜೆಪಿಯವರೇ ಆಗಿದ್ದರೂ ಪಾಲಿಕೆಯಲ್ಲಿ ಅಧಿಕಾರ ಕೈಗೆಟುಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ಒಡಕಿನ ಲಾಭ ಪಡೆಯಲು ಬಿಜೆಪಿ ಕಾದುನೋಡುವ ತಂತ್ರ ಅನುಸರಿಸಲು ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts