More

    ಕಂಪ್ಯೂಟರ್ ಜ್ಞಾನ ಇಂದಿನ ಜೀವನಕ್ಕೆ ಅತ್ಯವಶ್ಯಕ

    ರಾಯಚೂರು: ಪ್ರಸ್ತುತ ದಿನಮಾನದಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನ ಅರಿತುಕೊಳ್ಳುವ ಮೂಲಕ ಆಧುನಿಕತೆಗೆ ತಕ್ಕಂತೆ ಬದಲಾಗಬೇಕಾಗಿದೆ. ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು ಇಂದಿನ ಜೀವನಕ್ಕೆ ಅತ್ಯವಶ್ಯಕವಾಗಿದೆ ಎಂದು ರಾಯಚೂರು ವಿವಿ ಸಿಂಡಿಕೇಟ್ ಸದಸ್ಯ ಶಿವಬಸಪ್ಪ ಮಾಲಿಪಾಟೀಲ್ ಹೇಳಿದರು.
    ಸ್ಥಳೀಯ ಎಂ.ಪಿ.ಪ್ರಕಾಶ ಪಿಯು ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಉಚಿತ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ತಂತ್ರಜ್ಞಾನ ಬಳಕೆಯಾಗುತ್ತಿರುವುದು ನಮ್ಮ ದೇಶದಲ್ಲಿ ಎನ್ನುವುದು ಹೆಮ್ಮೆಯ ವಿಷಯವಾಗಿದೆ ಎಂದರು.
    ಇಂದಿನ ಸ್ಪರ್ಧಾತ್ಮಕ ದಿನಮಾನದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ನಿಗದಿತ ಗುರಿ ಹೊಂದಿದ್ದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ನಿಮ್ಮಲ್ಲಿ ನಿರ್ದಿಷ್ಟವಾದ ಗುರಿಯನ್ನಿಟ್ಟುಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ ಮಾತನಾಡಿ, ಪದವಿ ಮುಗಿದ ನಂತರದಲ್ಲಿ ಉದ್ಯೋಗಕ್ಕಾಗಿ ಕಂಪ್ಯೂಟರ್ ಜ್ಞಾನ, ಆಂಗ್ಲ ಭಾಷೆಯ ಮೇಲೆ ಹಿಡಿತ ಹೊಂದಿರುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ನೀಡುತ್ತಿದೆ ಎಂದು ತಿಳಿಸಿದರು.
    ಸೇವಾ ಜನ ಶಿಕ್ಷಣ ಸಂಸ್ಥಾನ ನಿರ್ದೇಶಕ ಸದಾನಂದ ಪೂಜಾರಿ ಮಾತನಾಡಿ, ಪಠ್ಯಕ್ರಮಕ್ಕೆ ಆಧಾರಿತವಾಗಿ ನಾಲ್ಕು ಗೋಡೆಗಳ ಮಧ್ಯೆ ಕಲಿಸುವುದರ ಜತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿರುವ ಕೌಶಲ್ಯವನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯ ಎಂ.ಜಿ.ಮಾರುತಿ, ಪ್ರಾಧ್ಯಾಪಕರಾದ ಭೀಮರಾಯ ರಸ್ತಾಪುರ, ಹನುಮಂತ ಹೊಸಪೇಟೆ, ಮಮತಾ, ತಿಮ್ಮಪ್ಪ , ಸಂಪನ್ಮೂಲ ವ್ಯಕ್ತಿ ಜಿ.ಎಸ್.ಹಿರೇಮಠ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts