ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮೂರು ದಿನದ ಯುವಜನೋತ್ಸವ ಗುರುವಾರ ತೆರೆ ಕಂಡಿದೆ. ವಿವಿಧ ಚಟುವಟಿಕೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಗುಲ್ಬರ್ಗ ವಿವಿ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ರೇಷ್ಮಿ ಶಿಕ್ಷಣ ಸಂಸ್ಥೆ ರನ್ನರ್ ಅಪ್‌ಗೆ ತೃಪ್ತಿ ಪಟ್ಟುಕೊಂಡಿದೆ.
ಮ್ಯೂಸಿಕ್ ಈವೆಂಟ್‌ನಲ್ಲಿ ರೇಷ್ಮಿ ಶಿಕ್ಷಣ ಸಂಸ್ಥೆ ವಿನ್ನರ್, ಗುಲ್ಬರ್ಗ ವಿವಿ ರನ್ನರ್. ಡಾನ್ಸ್ನಲ್ಲಿ ಗುಲ್ಬರ್ಗ ವಿವಿ ವಿನ್ನರ್, ವಿಶ್ವನಾಥರೆಡ್ಡಿ ಮುದ್ನಾಳ್ ಪದವಿ ಕಾಲೇಜು ರನ್ನರ್. ಲಿಟರರಿ ಈವೆಂಟ್‌ನಲ್ಲಿ ರೇಷ್ಮಿ ಶಿಕ್ಷಣ ಸಂಸ್ಥೆ ಮತ್ತು ಶರಣಬಸವೇಶ್ವರ ವಿಜ್ಞಾನ ಕಾಲೇಜು ವಿನ್ನರ್, ಕಲಬುರಗಿಯ ಆರ್ಯನ್ ಬಿಇಡಿ ಕಾಲೇಜು ರನ್ನರ್. ಥೇಟರ್ ಈವೆಂಟ್‌ನಲ್ಲಿ ಗುಲ್ಬರ್ಗ ವಿವಿ ವಿನ್ನರ್, ಶರಣಬಸವೇಶ್ವರ ವಿಜ್ಞಾನ ಕಾಲೇಜು ರನ್ನರ್. ಫೈನ್ ಆರ್ಟ್ನಲ್ಲಿ ಗುಲ್ಬರ್ಗ ವಿವಿ ವಿನ್ನರ್, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ರನ್ನರ್ ಅಪ್ ಪ್ರಶಸ್ತಿ ಬಾಚಿಕೊಂಡಿವೆ.
ಹಡಪದ ಹಾಡಿಗೆ ಫಿದಾ: ಖ್ಯಾತ ಗಾಯಕ ರಾಮಚಂದ್ರ ಹಡಪದ ಅವರು ಮಹಾ ಕತ್ರಿಯ ಚಿತ್ರದ ಈ ಭೂಮಿ ಬಣ್ಣದ ಬುಗುರಿ.. ಆ ಶಿವನೇ ಚಾಟಿ ಕಣೋ.. ಎಂಬ ಗೀತೆ ಹಾಗೂ ಸಿ ಅಶ್ವಥ್ ಅವರ ಕಾಣದ ಕಡಲಿಗೆ ಹಂಬಲಿಸಿದೆ ಮನ… ಹಾಡುಗಳನ್ನು ಹಾಡಿ ಯುವಕ, ಯುವತಿಯರು ಹಾಗೂ ಪ್ರೇಕ್ಷಕರನ್ನು ರಂಜಿಸಿದರು. ಸಭಾಂಗಣದಲ್ಲಿ ಜನತೆ ನಮ್ಮ ಭಾಗದ ಕಲಾವಿದ ಬಂದಿರುವುದನ್ನು ನೋಡಲು ಸೇರಿದ್ದರು. ಸುಶ್ರಾವ್ಯ ಕಂಠದಿಂದ ಹಾಡಿದ ಗಾನಸುಧೆಗೆ ಮನಸೋತು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಅವರ ಸ್ವರ ಮಾಧುರ್ಯ ಮೆಚ್ಚಿದ ಪ್ರೇಕ್ಷಕರು ತಮ್ಮ ತಮ್ಮ ಮೊಬೈಲ್‌ನಿಂದ ವೇದಿಕೆಯನ್ನು ಬೆಳಗಿಸಿದರು. ಈ ನೆಲದ ಕಲಾವಿದನ ಸುಶ್ರಾವ್ಯ ದನಿಗೆ ಚಪ್ಪಾಳೆ ಶಿಳ್ಳೆಯೊಂದಿಗೆ ಮನ ತುಂಬಿಕೊಂಡರು.