More

    ದೂರು ಪೆಟ್ಟಿಗೆಗೆ ಉತ್ತಮ ಸ್ಪಂದನೆ, 300ಕ್ಕಿಂತಲೂ ಅಧಿಕ ಸಮಸ್ಯೆಗಳು

    ಹರೀಶ್ ಮೋಟುಕಾನ ಮಂಗಳೂರು
    ಸಮಸ್ಯೆ ಹೇಳಿದಾಗ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜನನ-ಮರಣ ಪ್ರಮಾಣಪತ್ರ ಕೌಂಟರ್‌ನಲ್ಲಿ ಸಿಬ್ಬಂದಿ ಒರಟಾಗಿ ಮಾತನಾಡುತ್ತಾರೆ. ಒಳರಸ್ತೆಗಳಲ್ಲಿ ಬೀದಿ ದೀಪ ಉರಿಯುತ್ತಿಲ್ಲ. ಒಳಚರಂಡಿ ಆಗಾಗ ಬ್ಲಾಕ್ ಆಗಿ ರಸ್ತೆಯಲ್ಲೇ ಹರಿಯುತ್ತಿದೆ. ರಸ್ತೆ ಹದಗೆಟ್ಟಿದೆ. ನೀರು ಬರುತ್ತಿಲ್ಲ. ಅಧಿಕಾರಿಗಳು ಕೆಲಸದ ಅವಧಿಯಲ್ಲಿ ಕಚೇರಿಯಲ್ಲಿ ಇರುವುದಿಲ್ಲ…
    ಇದು ಮಂಗಳೂರು ಮಹಾನಗರ ಪಾಲಿಕೆ ಲಾಲ್‌ಬಾಗ್ ಹಾಗೂ ಸುರತ್ಕಲ್ ಕಚೇರಿಗಳಲ್ಲಿ ದೂರು ಪೆಟ್ಟಿಗೆಗೆ ಸಾರ್ವಜನಿಕರಿಂದ ಬಂದ ದೂರುಗಳು. ಕಳೆದ ನಾಲ್ಕು ತಿಂಗಳಿನಿಂದ ದೂರು ಪೆಟ್ಟಿಗೆಯ ಮೂಲಕ 300ಕ್ಕಿಂತಲೂ ಅಧಿಕ ದೂರುಗಳು ಬಂದಿವೆ. ಬಹುತೇಕ ಅಧಿಕಾರಿ, ಸಿಬ್ಬಂದಿ ವಿರುದ್ಧವೇ ಇವೆ.

    ಸಾರ್ವಜನಿಕರಿಗೆ ನೇರವಾಗಿ ಮೇಯರ್ ಅಥವಾ ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಎರಡು ಕಡೆ ದೂರು ಪೆಟ್ಟಿಗೆಗಳನ್ನು ಇಟ್ಟು ಸಾರ್ವಜನಿಕರ ಸಮಸ್ಯೆಗಳನ್ನು ಓದಿ ಸ್ಪಂದಿಸಲಾಗುತ್ತಿದೆ. ನಗರದ ಕಟ್ಟ ಕಡೆಯ ಜನರ ಸಮಸ್ಯೆಯನ್ನೂ ಪರಿಹರಿಸಲು ಮುತುವರ್ಜಿ ವಹಿಸುವ ಉದ್ದೇಶದಿಂದ ಪಾಲಿಕೆ ಆಡಳಿತ ದೂರು ಪೆಟ್ಟಿಗೆ ಅಳವಡಿಸಿದೆ.

    ಸ್ವತಃ ಮೇಯರ್, ಆಯುಕ್ತರೇ ಓದುತ್ತಾರೆ: ಪಾಲಿಕೆ ಕಚೇರಿಗಳ ಪ್ರವೇಶದಲ್ಲೇ ದೂರು ಪೆಟ್ಟಿಗೆಗಳನ್ನು ಇಡಲಾಗಿದೆ. ಸಾರ್ವಜನಿಕರು ತಮ್ಮ ಪ್ರದೇಶದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ, ಸಮಸ್ಯೆಗೆ ಅಧಿಕಾರಿ, ಮನಪಾ ಸದಸ್ಯರಲ್ಲಿ ತಿಳಿಸಿದ್ದರೂ ಯಾವುದೇ ಪರಿಹಾರ ಸಿಗದಿದ್ದರೆ ಅಂತಹ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತವಾಗಿ ಬರೆದು ವಿಳಾಸ, ಮೊಬೈಲ್ ನಂಬರ್‌ನೊಂದಿಗೆ ದೂರು ಪೆಟ್ಟಿಗೆಗೆ ಹಾಕಬಹುದು. ಈ ಪೆಟ್ಟಿಗೆಯನ್ನು ಸ್ವತಃ ಮೇಯರ್, ಪಾಲಿಕೆ ಆಯುಕ್ತರೇ ತೆರೆದು ದೂರುಗಳನ್ನು ಓದುತ್ತಾರೆ. ದೂರು ಹೇಳಿಕೊಂಡವರ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ.

    ಸಮಸ್ಯೆ ಪರಿಹರಿಸಿ ಕರೆ: ಮೇಯರ್ ಮತ್ತು ಆಯುಕ್ತರು ಆಯಾ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ವ್ಯವಸ್ಥೆಗೆ ಸೂಚಿಸುತ್ತಾರೆ. ಅಲ್ಲದೆ ಸಮಸ್ಯೆ ನಿವಾರಣೆಗೆ ಅಧಿಕಾರಿಗಳಿಂದಲೇ ದಿನಾಂಕ ನಿಗದಿಪಡಿಸಿ ಆ ದಿನಾಂಕದೊಳಗೆ ಕೆಲಸ ನಡೆಸಲು ನಿರ್ದೇಶನ ನೀಡುತ್ತಾರೆ. ಸಮಸ್ಯೆ ನಿವಾರಣೆಯಾದ ತಕ್ಷಣ ಮೇಯರ್ ಅಥವಾ ಆಯುಕ್ತರೇ ನೇರವಾಗಿ ಸಂಬಂಧಪಟ್ಟ ವ್ಯಕ್ತಿಗೆ ಕರೆ ಮಾಡಿ ನಿಮ್ಮ ಊರಿನ ಸಮಸ್ಯೆ ನಿವಾರಣೆಯಾಗಿದೆ ಎಂದು ತಿಳಿಸುತ್ತಾರೆ.

    ಕಚೇರಿ ಸಿಬ್ಬಂದಿ ವಿರುದ್ಧ ಬಂದ ದೂರುಗಳಿಗೆ ಸ್ಪಂದಿಸಿ, ಸಾರ್ವಜನಿಕರೊಂದಿಗೆ ತಾಳ್ಮೆಯಿಂದ ವರ್ತಿಸಲು ಸೂಚಿಸುತ್ತಾರೆ. ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ, ಅವರು ಕಚೇರಿಗೆ ಅಲೆದಾಟ ನಡೆಸದಂತೆ ಶೀಘ್ರ ಅವರ ಕೆಲಸ ಮಾಡಿ ಕೊಡುವಂತೆ ತಿಳಿಸುತ್ತಾರೆ. ಅದೇ ಸಿಬ್ಬಂದಿ ವಿರುದ್ಧ ದೂರುಗಳು ಪುನರಾವರ್ತನೆಯಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

    ಮನಪಾ ಲಾಲ್‌ಬಾಗ್ ಮತ್ತು ಸುರತ್ಕಲ್ ಕಚೇರಿಗಳಲ್ಲಿ ನಾಲ್ಕು ತಿಂಗಳ ಹಿಂದೆ ಅಳವಡಿಸಿದ ದೂರು ಪೆಟ್ಟಿಗೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳನ್ನು ತಂದು ಹಾಕುತ್ತಿದ್ದಾರೆ. 15 ದಿನಗಳಿಗೊಮ್ಮೆ ಈ ಪೆಟ್ಟಿಗೆಯನ್ನು ತೆರೆದು ಬಂದಿರುವ ದೂರುಗಳನ್ನು ಓದಲಾಗುತ್ತದೆ. ತಕ್ಷಣ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
    – ದಿವಾಕರ ಪಾಂಡೇಶ್ವರ, ಮೇಯರ್

    ಫೋಟೋ: ಎಂಎನ್‌ಜಿ 27 ಜನವರಿ ಎಂಸಿಸಿ ಕಂಪ್ಲೇಂಟ್ ಬಾಕ್ಸ್
    ಮಹಾನಗರಪಾಲಿಕೆ ಪ್ರವೇಶ ದ್ವಾರದಲ್ಲಿ ಅಳವಡಿಸಿದ ದೂರು ಪೆಟ್ಟಿಗೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts