More

    ಮತಬೇಟೆಗೆ ಅಭ್ಯರ್ಥಿಗಳ ಪೈಪೋಟಿ

    ಚಡಚಣ: ಸ್ಥಳೀಯ ಪಪಂನ 16 ವಾರ್ಡ್‌ಗಳ ಚುನಾವಣೆಗೆ ಡಿ. 27ರಂದು ಮತದಾನ ನಡೆಯಲಿದ್ದು, ಪ್ರಚಾರದ ಕಾವು ಭರ್ಜರಿಯಾಗಿದೆ. ಅಭ್ಯರ್ಥಿಗಳು ಮತಬೇಟೆಗಾಗಿ ಬೆಂಬಲಿಗರೊಂದಿಗೆ ಗಲ್ಲಿಗಲ್ಲಿ ಸುತ್ತುತ್ತಿದ್ದು, ಚುನಾವಣಾ ಕಣ ರಂಗೇರಿದೆ.

    ಒಟ್ಟು 16 ಸ್ಥಾನಗಳಿಗೆ 41 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ರಾಜಕೀಯ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ವಿಧಾನಸಭೆ ಚುನಾವಣೆ ಮೀರಿಸುವಂತೆ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

    ಅಟೋಗಳಲ್ಲಿ ಧ್ವನಿವರ್ಧಕ ಅಳವಡಿಸಿ ಅಭ್ಯರ್ಥಿಗಳ ಪರ ಬಡಾವಣೆಗಳಲ್ಲಿ ಭರ್ಜರಿ ಪ್ರಚಾರ ನಡೆಸಲಾಗುತ್ತಿದೆ. ಪಕ್ಷಗಳ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಮನೆಮನೆಗೂ ತೆರಳಿ ಪ್ರಚಾರದ ಕರಪತ್ರ ಹಂಚಿ ಮತಯಾಚಿಸುತ್ತಿದ್ದಾರೆ. ಪ್ರಮುಖ ರಸ್ತೆ, ವೃತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ಅಬ್ಬರ ಜೋರಾಗಿದೆ.

    ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ 5 ಗ್ಯಾರಂಟಿ ಯೋಜನೆಗಳು ಹಾಗೂ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಮತ್ತಿತರ ಯೋಜನೆಗಳ ಕುರಿತು, ಬಿಜೆಪಿ ಅಭ್ಯರ್ಥಿಗಳು ಪ್ರಧಾನಿ ಮೋದಿ ಅವರ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ.

    ಬೆಳಗ್ಗೆ ಸೂರ್ಯ ಹುಟ್ಟುವುದೇ ತಡ ಚಳಿಯನ್ನೂ ಲೆಕ್ಕಿಸದೇ ಬೆಂಬಲಿಗರ ಪಡೆ ಕಟ್ಟಿಕೊಂಡು ರಸ್ತೆಗಿಳಿಯುವ ಅಭ್ಯರ್ಥಿಗಳು ಹಾಗೂ ಮುಖಂಡರು ಪ್ರಚಾರ ಮುಗಿಸಿ ಮತ್ತೆ ಮನೆ ಸೇರುವುದು ರಾತ್ರಿಯಾಗುತ್ತಿದೆ. ಅಭ್ಯರ್ಥಿಗಳ ಜತೆಗೆ ಕುಟುಂಬ ಸದಸ್ಯರು ಪ್ರಚಾರಕ್ಕೆ ಕೈಜೋಡಿಸಿದ್ದು, ಬಡಾವಣೆಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋಗಳು ಸಾಮಾನ್ಯವಾಗಿದೆ. ಈಗ ಎಲ್ಲೆಲ್ಲೂ ಚುನಾವಣೆ ವಿಷಯದ ಗುಸುಗುಸು ಕೇಳಿ ಬರುತ್ತಿದೆ. ಕೆಲ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ವೇದಿಕೆಯಾಗಿಸಿಕೊಂಡು ಮತದಾರರನ್ನು ಸೆಳೆಯುವ ತಂತ್ರಗಾರಿಕೆ ರೂಢಿಸಿದ್ದು, ಎಸ್‌ಎಂಎಸ್ ಮತ್ತು ಮೊಬೈಲ್ ಕರೆಗಳ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ಆರಂಭಿಸಿದ್ದಾರೆ.

    ನಾಗಠಾಣ ಕ್ಷೇತ್ರದ ಕಾಂಗ್ರೆಸ ಶಾಸಕ ವಿಠ್ಠಲ ಕಟಕಧೋಂಡ, ಕಾಂಗ್ರೆಸ್ ಮುಖಂಡರಾದ ಆರ್.ಡಿ. ಹಕ್ಕೆ, ಬಸವರಾಜ ಬಿರಾದಾರ (ಹತ್ತಳ್ಳಿ) ಹಾಗೂ ಬಿಜೆಪಿ ಮುಖಂಡರಾದ ಗೋಪಾಲ ಕಾರಜೋಳ, ಚಿದಾನಂದ ಚಲವಾದಿ, ಸಂಜಯ ಐಹೊಳೆ ಅವರು ಈ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಅಖಾಡಕ್ಕಿಳಿದು ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರ ಕಣದಲ್ಲಿ ಝಣ-ಝಣ ಕಾಂಚಾಣವೂ ಸದ್ದು ಮಾಡುತ್ತಿದ್ದು, ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಉಡುಗೊರೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಒಟ್ಟಾರೆ ಡಿ. 27ರಂದು ಮತದಾನ ನಡೆಯಲಿದ್ದು, ಡಿ. 30ರಂದು ಮತದಾರರ ತೀರ್ಪು ಹೊರಬೀಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts