More

    ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ

    ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

    ಮೆಣಸಿನಕಾಯಿ ವ್ಯಾಪಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಇಲ್ಲಿನ ಎಪಿಎಂಸಿ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಜೂನ್ 16ರಂದು ಆಯ್ಕೆ ನಡೆಯಲಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ತೀವ್ರ ಪ್ರಯತ್ನ ನಡೆಸಿವೆ.

    ಎಪಿಎಂಸಿಗೆ 11 ಸದಸ್ಯರು ಚುನಾಯಿತರಾಗಿ ಆಯ್ಕೆಯಾಗಿದ್ದಾರೆ. ವರ್ತಕರ ಕ್ಷೇತ್ರ, ಸಹಕಾರಿ ಸಂಘ, ಸಂಸ್ಕರಣೆ ಘಟಕದಿಂದ ತಲಾ ಒಬ್ಬರು ಹಾಗೂ ಮೂವರು ನಾಮನಿರ್ದೇಶಿತರು ಸೇರಿ 17 ಸದಸ್ಯ ಬಲದ ಆಡಳಿತ ಮಂಡಳಿ ಇದೆ. ಈ ಪೈಕಿ ಸಂಸ್ಕರಣೆ ಘಟಕದ ಸದಸ್ಯರ ಅವಧಿ ಮುಗಿದಿರುವುದರಿಂದ 16 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಚುನಾವಣೆಯಲ್ಲಿ 11 ಸದಸ್ಯರ ಪೈಕಿ 7 ಸದಸ್ಯರು ಕಾಂಗ್ರೆಸ್ ಬೆಂಬಲಿತರಿದ್ದ ಕಾರಣ ಅಧಿಕಾರ ಆ ಪಕ್ಷದ ಪಾಲಾಗಿತ್ತು. ಬಿಜೆಪಿಯಿಂದ ನಾಲ್ವರು ಸದಸ್ಯರು ಆಯ್ಕೆಯಾಗಿದ್ದರು. ಸದ್ಯ ಮೂವರು ನಾಮನಿರ್ದೇಶಿತರು ಸೇರಿ 7 ಸದಸ್ಯರು ಬಿಜೆಪಿ ಬೆಂಬಲಕ್ಕಿದ್ದಾರೆ.

    ಮೊದಲ 20 ತಿಂಗಳ ಅಧಿಕಾರವಧಿಯಲ್ಲಿ ಕಾಂಗ್ರೆಸ್​ನ ದಾನನಗೌಡ್ರ ತೋಟದ ಅವರು 13 ತಿಂಗಳು, ಚನ್ನಬಸಪ್ಪ ಹುಲ್ಲತ್ತಿ ಅವರು 7 ತಿಂಗಳು ಅಧ್ಯಕ್ಷರಾಗಿ ಆಡಳಿತ ನಡೆಸಿದ್ದಾರೆ. ಎರಡನೇ ಅವಧಿಯ 20 ತಿಂಗಳ ಅಧಿಕಾರವನ್ನು ಕರಬಸಪ್ಪ ನಾಯ್ಕರ ಪೂರ್ಣಗೊಳಿಸಿದ್ದು, ಇನ್ನುಳಿದ ಹಾಗೂ ಕೊನೆಯ 20 ತಿಂಗಳ ಅವಧಿಗೆ ತೀವ್ರ ಪೈಪೋಟಿ ನಡೆದಿದೆ. ತಡಸ ಕ್ಷೇತ್ರದ ಶಂಭನಗೌಡ್ರ ಪಾಟೀಲ, ಸೂಡಂಬಿ ಕ್ಷೇತ್ರದ ಮಾರುತಿ ನಿಂಗಪ್ಪ ಕೆಂಪಗೌಡ್ರ ನಡುವೆ ತೀವ್ರ ಪೈಪೋಟಿ ನಡೆದಿದೆ. ಈ ಮಧ್ಯೆ ಹಾಲಿ ಅಧ್ಯಕ್ಷ ಕರಬಸಪ್ಪ ನಾಯ್ಕರ ಅವರು ಪುನರಾಯ್ಕೆ ಬಯಸಿ ತೆರೆಮರೆಯ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಹಾಲಿ ಅಧ್ಯಕ್ಷರು ಪೈಪೋಟಿಯಿಂದ ಹಿಂದೆ ಸರಿದರೆ, ಇಬ್ಬರು ಆಕಾಂಕ್ಷಿಗಳಿಗೆ ತಲಾ 10 ತಿಂಗಳ ಅಧಿಕಾರ ಹಂಚಿಕೆ ಮಾಡುವ ಸಾಧ್ಯತೆ ಇದೆ. ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಪೈಪೋಟಿ ಕಂಡುಬಂದಿಲ್ಲ.

    ಬಿಜೆಪಿ ಯತ್ನ: ಅಧಿಕಾರ ಹಿಡಿಯಲು ಬಿಜೆಪಿ ಕೂಡ ತೆರೆಮರೆಯ ಯತ್ನ ನಡೆಸಿದೆ. ಚಿಕ್ಕಬಾಸೂರು ಕ್ಷೇತ್ರದ ವೀರಭದ್ರಪ್ಪ ಗೊಡಚಿ ಹಾಗೂ ಮೋಟೆಬೆನ್ನೂರು ಕ್ಷೇತ್ರದ ವನಿತಾ ಗುತ್ತಲ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಸದ್ಯ ಬಿಜೆಪಿಯ 7 ಸದಸ್ಯರಿದ್ದು, ಗೆಲುವಿಗೆ ಇಬ್ಬರು ಸದಸ್ಯರ ಕೊರತೆಯಿದೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಇನ್ನೂ 13 ದಿನ ಬಾಕಿ ಇರುವುದರಿಂದ ಕೊನೆ ಗಳಿಗೆಯ ರಾಜಕೀಯ ಬೆಳವಣಿಗೆ ಕುತೂಹಲ ಮೂಡಿಸಿದೆ.

    ಪ್ರತಿಷ್ಠಿತ ಮಾರುಕಟ್ಟೆ: ಮೆಣಸಿನಕಾಯಿ ವ್ಯಾಪಾರದಲ್ಲಿ ದೇಶದಲ್ಲಿ ಆಂಧ್ರಪ್ರದೇಶದ ಗುಂಟೂರು ಬಿಟ್ಟರೆ ಎರಡನೇ ಸ್ಥಾನದಲ್ಲಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಇದೆ. ಸುಮಾರು 700 ಪರವಾನಗಿದಾರರು, 100ಕ್ಕೂ ಹೆಚ್ಚು ದೊಡ್ಡ ಖರೀದಿದಾರರಿದ್ದು, 74 ಎಕರೆ ಮಾರುಕಟ್ಟೆ ವ್ಯಾಪ್ತಿ ಹೊಂದಿದೆ. ಇಲ್ಲಿನ ಎಪಿಎಂಸಿಯಲ್ಲಿ ಪ್ರತಿವರ್ಷವೂ 15 ಕೋಟಿ ರೂ.ಗಿಂತಲೂ ಹೆಚ್ಚು ಶುಲ್ಕ ಸಂಗ್ರಹವಾಗುತ್ತದೆ. ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಹೀಗಾಗಿಯೇ ಈ ಪ್ರತಿಷ್ಠಿತ ಮಾರುಕಟ್ಟೆಯ ಅಧಿಕಾರ ಹಿಡಿಯಲು ತೀವ್ರ ಪೈಪೋಟಿ ಏರ್ಪಡುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts