More

    ಪರಿಹಾರ ನೀಡಿಕೆಯಲ್ಲಿ ಕೊಡಗು ದ್ವಿತೀಯ

    ಮಡಿಕೇರಿ:

    ವನ್ಯಜೀವಿಗಳಿಂದ ಮನುಷ್ಯನಿಗೆ ವಿವಿಧ ರೀತಿಯ ಹಾನಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ೨೦೨೧-೨೨ನೇ ಸಾಲಿನಲ್ಲಿ ಒಟ್ಟು ೩೬,೯೮೬ ಪ್ರಕರಣಗಳು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಅಥವಾ ಅವರ ಕುಟುಂಬ ವರ್ಗಕ್ಕೆ ಸುಮಾರು ೨೭ ಕೋಟಿ ರೂ. ಪರಿಹಾರ ನೀಡಲಾಗಿದೆ. ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಮಾಹಿತಿ ಪ್ರಕಾರ ಈ ಪಟ್ಟಿಯಲ್ಲಿ ಬೆಂಗಳೂರು ಅರಣ್ಯ ವೃತ್ತ ಮೊದಲ ಸ್ಥಾನದಲ್ಲಿದ್ದರೆ, ಕೊಡಗು ಅರಣ್ಯ ವೃತ್ತ ೨ನೇ ಸ್ಥಾನದಲ್ಲಿದೆ.

    ಪರಿಸರದ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚಾಗುತ್ತಿದ್ದಂತೆಯೇ ಮಾನವ, ವನ್ಯಜೀವಿ ಸಂಘರ್ಷದ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಏರುಮುಖದಲ್ಲಿ ಸಾಗುತ್ತಿದೆ. ಹೆಚ್ಚು ಅರಣ್ಯ ಪ್ರದೇಶ ಇರುವ ಮಲೆನಾಡು ಮಾತ್ರವಲ್ಲದೆ ರಾಜ್ಯದ ಎಲ್ಲಾ ಕಡೆಗಳಲ್ಲೂ ಇತ್ತೀಚೆಗೆ ಈ ವಿದ್ಯಮಾನ ಸಾಮಾನ್ಯ ಎಂಬಂತಾಗಿದೆ. ಅರಣ್ಯ ಇಲಾಖೆಯ ವಾರ್ಷಿಕ ವರದಿಯಲ್ಲಿ ಇದಕ್ಕೆ ಪುಷ್ಠಿ ನೀಡುವ ಅನೇಕ ಅಂಶಗಳು ಕಂಡುಬರುತ್ತದೆ.

    ಮಲೆನಾಡಿನ ಮಡಿಲಲ್ಲಿ ಇರುವ ಕೊಡಗಿನಂತಹ ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳು ಮಾನವ ವಸತಿ ಪ್ರದೇಶಗಳಿಗೆ ನುಗ್ಗುವುದು, ಬೆಳೆ, ಸಾಕುಪ್ರಾಣಿ, ಮನುಷ್ಯನಿಗೆ ಹಾನಿ ಮಾಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಕಾಡಾನೆಗಳ ದಾಳಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಹುಲಿ ಹಾವಳಿಯೂ ಶುರುವಾಗಿದ್ದು ಜನ-ಜಾನುವಾರುಗಳಿಗೆ ಕಂಟಕವಾಗಿದೆ. ಇದರ ಜೊತೆಗೆ ಚಿರತೆ, ಕಾಡುಕೋಣ, ಕಾಡೆಮ್ಮೆ, ಕಾಡುಹಂದಿ, ಕೋತಿ, ನವಿಲುಗಳ ಉಪಟಳವೂ ಜನರನ್ನು ಕಂಗೆಡಿಸಿದೆ.

    ಅರಣ್ಯದಂಚಿನಲ್ಲಿ ಕಂದಕ ತೋಡಿ, ಸೋಲಾರ್ ಬೇಲಿ, ರೈಲ್ವೆ ಕಂಬಿಗಳ ಬೇಲಿ, ಹೊಸ ಮಾದರಿಯ ನೇತಾಡುವ ಸೋಲಾರ್ ಬೇಲಿ ಅಳವಡಿಕೆ ಆಗಿದ್ದರೂ ಆನೆ ಸೇರಿ ಕಾಡುಪ್ರಾಣಿಗಳ ದಾಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವೇ ಆಗುತ್ತಿಲ್ಲ. ಜನವಸತಿ ಪ್ರದೇಶ, ತೋಟ, ಭತ್ತದ ಗದ್ದೆಗಳಿಗೆ ದಾಳಿ ಇಡುತ್ತಿವೆ. ಮಾನವ ಪ್ರಾಣ ಹಾನಿ ಮಾತ್ರವಲ್ಲದೆ ಜಾನುವಾರು, ಬೆಳೆ ನಷ್ಟದಿಂದಾಗಿ ಅರಣ್ಯ ವ್ಯಾಪ್ತಿಯ ಜನ ಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಿದೆ.

    ವನ್ಯಜೀವಿ ಹಾವಳಿಯಿಂದ ಬೆಳೆ, ಆಸ್ತಿ, ಮಾನವ, ಸಾಕು ಪ್ರಾಣಿಗಳ ಪ್ರಾಣ ಹಾನಿ, ಗಾಯಗೊಂಡವರಿಗೆ, ಶಾಶ್ವತ ಅಂಗವೈಕಲ್ಯಕ್ಕೆ ಅರಣ್ಯ ಇಲಾಖೆ ದಯಾತ್ಮಕ ಪರಿಹಾರ ಧನ ಕೊಡುತ್ತಿದೆ. ಮೊದಲೆಲ್ಲಾ ಈ ಪರಿಹಾರ ಧನ ಪಡೆಯಲು ಸಾಕಷ್ಟು ಅಲೆದಾಡಬೇಕಿತ್ತು. ಈಗ ಎಲ್ಲವೂ ಆನ್‌ಲೈನ್ ಆಗಿರುವದರಿಂದ ಸಂತ್ರಸ್ತರಿಗೆ ಹೆಚ್ಚು ಶ್ರಮ ಆಗದ ರೀತಿಯಲ್ಲಿ ಇಲಾಖೆ ಪರಿಹಾರ ಧನ ಮಂಜೂರು ಮಾಡುತ್ತಿದ್ದು, ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ.
    ಅರಣ್ಯ ಇಲಾಖೆ ಕೊಡುತ್ತಿರುವ ಪರಿಹಾರ ಮೊತ್ತವನ್ನು ಸರ್ಕಾರ ೨೦೨೨ರ ಡಿಸೆಂಬರ್ ೧೫ಕ್ಕೆ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಅಲ್ಲದೆ ಈ ಪರಿಷ್ಕರಿತ ಪರಿಹಾರ ಮೊತ್ತವನ್ನು ಸಂತ್ರಸ್ತರಿಗೆ ವಿತರಿಸಲು ಕ್ಷೇತ್ರಾಧಿಕಾರಿಗಳಿಗೆ ಆರ್ಥಿಕ ಅಧಿಕಾರದ ಪ್ರತ್ಯಾಯೋಜನೆಯನ್ನು ಮಾಡಿ ಕಳೆದ ಗುರುವಾರ (ಮೇ ೨೫) ಮತ್ತೊಂದು ಆದೇಶವನ್ನು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಗೆ ಸಂಬಂಧಿಸಿದ ಸರ್ಕಾರದ ಅಧೀನ ಕಾರ್ಯದರ್ಶಿ ಜಿ. ಮಂಜುಳಾ ಮಾಡಿದ್ದಾರೆ. ಇದರಿಂದಾಗಿ ಸಂತ್ರಸ್ತರಿಗೆ ಪರಿಷ್ಕೃತ ಪರಿಹಾರ ಸಿಗುವಲ್ಲಿ ಮತ್ತಷ್ಟು ಸಹಕಾರಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

    ಬೆಂಗಳೂರು ಅರಣ್ಯ ವೃತ್ತದಲ್ಲಿ ೨೦೨೧-೨೨ನೇ ಸಾಲಿನಲ್ಲಿ ಒಟ್ಟು ೭,೮೭೪ ಪ್ರಕರಣಗಳು ದಾಖಲಾಗಿದ್ದು, ೫.೨೨ ಕೋಟಿ ರೂ ಪರಿಹಾರ ಸಂತ್ರಸ್ತರು ಅಥವಾ ಅವರ ಕುಟುಂಬಕ್ಕೆ ವಿತರಿಸಲಾಗಿದೆ. ಕೊಡಗಿನಲ್ಲಿ ಒಟ್ಟು ೫,೮೯೫ ಪ್ರಕರಣಗಳು ದಾಖಲಾಗಿದ್ದು, ೪.೭೪ ಕೊಟಿ ರೂ. ಪರಿಹಾರ ವಿತರಿಸಲಾಗಿದೆ. ನಂತರದ ಸ್ಥಾನದಲ್ಲಿ ಮೈಸೂರು ಹುಲಿ ಯೋಜನಾ ವೃತ್ತ ಬರುತ್ತದೆ. ಇಲ್ಲಿ ಒಟ್ಟು ೫,೦೩೮ ಪ್ರಕರಣಗಳು ದಾಖಲಾಗಿದ್ದು ೩.೧೫ ಕೋಟಿ ರೂ. ಪರಿಹಾರ ಕೊಡಲಾಗಿದೆ.

    ಸರ್ಕಾರ ೨೦೨೨ರ ಡಿಸೆಂಬರ್ ೧೫ಕ್ಕೆ ಹೊರಡಿಸಿರುವ ಪರಿಷ್ಕೃತ ಆದೇಶ ಪ್ರಕಾರ ಅರಣ್ಯ ಇಲಾಖೆಯ ದಯಾತ್ಮಕ ಪರಿಹಾರ ಮೊದಲಿಗಿಂತ ದ್ವಿಗುಣ ಆಗಿದೆ. ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ ಮೊದಲು ೭.೫ ಲಕ್ಷ ಇದ್ದಿದ್ದು, ಈಗ ೧೫ ಲಕ್ಷ ರೂ. ಆಗಿದೆ. ಶಾಶ್ವತ ಅಂಗವೈಕಲ್ಯಕ್ಕೆ ೧೦ ಲಕ್ಷ ರೂ., ಭಾಗಶಃ ಶಾಶ್ವತ ಅಂಗವೈಕಲ್ಯಕ್ಕೆ ೫ ಲಕ್ಷರೂ., ಗಾಯಗಳಿಗೆ ಗರಿಷ್ಟ ೬೦ ಸಾವಿ ರೂ., ಕಾಡಾನೆ ದಾಳಿಯಿಂದ ಆಸ್ತಿ ನಷ್ಟಕ್ಕೆ ೨೦ ಸಾವಿರ ರೂ., ಮಾನವ ಪ್ರಾಣ ಹಾನಿ ಸಂದರ್ಭದಲ್ಲಿ ಅವರ ಅವಲಂಬಿತರಿಗೆ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರಿಗೆ ೫ ವರ್ಷಗಳ ತನಕ ಮಾಸಾಶನ ೪ ಸಾವಿರ ರೂ., ನಿಗದಿಪಡಿಸಲಾಗಿದೆ.

    ಅರಣ್ಯ ಇಲಾಖೆಯ ದಯಾತ್ಮಕ ಪರಿಹಾರ ಧನ ಪಡೆಯಬೇಕಾದರೆ ಕೆಲವೊಂದು ಷರತ್ತುಗಳೂ ಇದೆ. ಒತ್ತುವರಿಗೊಂಡ ಅರಣ್ಯ ಭೂಮಿಯಲ್ಲಿರುವ ಆಸ್ತಿಯು ವನ್ಯಪ್ರಾಣಿಯಿಂದ ನಷ್ಟವಾದಲ್ಲಿ ಅಂಥ ಆಸ್ತಿಯ ನಷ್ಟಕ್ಕೆ ಪರಿಹಾರ ಧನ ಸಿಗುವುದಿಲ್ಲ. ಕಾಡುಪ್ರಾಣಿಗಳ ಹಾವಳಿ ಅಥವಾ ದಾಳಿಗೆ ಸಿಲುಕಿ ಮಾನವ ಪ್ರಾಣ ಹಾನಿಯಾದಲ್ಲಿ ಮೃತವ್ಯಕ್ತಿ ಅರಣ್ಯ ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರಬಾರದು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮೃತ ವ್ಯಕ್ತಿಯು ವನ್ಯಮೃಗ ಅಥವಾ ವನ್ಯಪ್ರಾಣಿಗಳ ದಾಳಿಯಿಂದ ಮೃತನಾಗಿದ್ದಾನೆ ಎಂದು ಖಚಿತವಾಗಿ ದೃಢಪಟ್ಟಲ್ಲಿ ಮಾತ್ರ ಮೃತ ವ್ಯಕ್ತಿಯ ಕಾನೂನುಬದ್ಧ ವಾರಸುದಾರರಿಗೆ ಪರಿಹಾರ ಧನ ಸಿಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts