More

    ಎಂ.ಜಿ. ರಸ್ತೆ ವಾಣಿಜ್ಯ ಮಳಿಗೆ ಹರಾಜು ನನೆಗುದಿಗೆ

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ನಗರದ ಎಂ.ಜಿ. ರಸ್ತೆಯಲ್ಲಿ ವಾಣಿಜ್ಯ ಮಳಿಗೆ ನಿರ್ವಣವಾಗಿ ಮೂರು ವರ್ಷ ಕಳೆದರೂ ಹರಾಜು ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ಇದೀಗ ನಗರಸಭೆಯಲ್ಲಿ ನೂತನ ಆಡಳಿತ ಮಂಡಳಿ ರಚನೆಯಾದ ಹಿನ್ನೆಲೆಯಲ್ಲಿ ಈಗಲಾದರೂ ಮಳಿಗೆ ಆರಂಭವಾಗುವುದೇ ಎಂದು ವ್ಯಾಪಾರಸ್ಥರು ಕಾಯುತ್ತಿದ್ದಾರೆ.

    ನಗರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ ಕಳೆದ ಮೂರು ವರ್ಷದಿಂದ ವಾಣಿಜ್ಯ ಮಳಿಗೆ ಹರಾಜಿಗೆ ಸಂಬಂಧಿಸಿದಂತೆ ಹಗ್ಗಜಗ್ಗಾಟ ನಡೆಯುತ್ತಿತ್ತು. ಮಳಿಗೆಗಾಗಿ ಅರ್ಜಿ ಸಲ್ಲಿಸಿದವರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು.

    ನಗರಸಭೆಯ ಎಂ.ಜಿ. ರಸ್ತೆಯಲ್ಲಿನ ಹಳೇ ವಾಣಿಜ್ಯ ಮಳಿಗೆಗಳು ಶಿಥಿಲಾವಸ್ಥೆಗೆ ತಲುಪಿತ್ತು. ಅಲ್ಲದೆ, ಮಳಿಗೆಯೊಂದರ ಮುಂಭಾಗದ ಛಾವಣಿ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಹೀಗಾಗಿ 2016ರಲ್ಲಿಯೇ ಹಳೇ ಕಟ್ಟಡವನ್ನು ತೆರವುಗೊಳಿಸಿ 2017ರಲ್ಲಿ ನೂತನ 72 ಹೊಸ ಮಳಿಗೆಗಳನ್ನು ನಿರ್ವಿುಸಲಾಗಿತ್ತು.

    ಆದರೆ, ಅವುಗಳನ್ನು ಹರಾಜು ಮಾಡಲು ನಗರಸಭೆ ಮುಂದಾದಾಗ, ಹಳೇ ಕಟ್ಟಡದಲ್ಲಿದ್ದ ವ್ಯಾಪಾರಸ್ಥರಿಗೆ ನೆಲಮಹಡಿಯ 36 ಮಳಿಗೆಗಳನ್ನು ವಿತರಣೆ ಮಾಡಬೇಕು. ಉಳಿದ ಮಳಿಗೆಗಳನ್ನು ಮಾತ್ರ ಹರಾಜು ಮಾಡಬೇಕು ಎಂದು ಹಳೇ ಮಳಿಗೆಗಳಲ್ಲಿ ಈ ಹಿಂದೆ ವ್ಯಾಪಾರ ಮಾಡುತ್ತಿದ್ದವರು ಪಟ್ಟು ಹಿಡಿದಿದ್ದರು. ಇದನ್ನು ಪ್ರಶ್ನಿಸಿದ ಅರ್ಜಿದಾರ ಹನುಮಂತಪ್ಪ ಕಬ್ಬಾರ ಸೇರಿ ಕೆಲವರು ‘ಎಲ್ಲ ಮಳಿಗೆಗಳನ್ನು ಸಮನಾಗಿ ಹರಾಜು ಮಾಡಬೇಕು’ ಎಂದು ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಕೂಡ ಎಲ್ಲ ಮಳಿಗೆಗಳನ್ನು ಹರಾಜು ಮಾಡುವಂತೆ ಸೂಚಿಸಿ ಪೌರಾಡಳಿತ ನಿರ್ದೇಶನಾಲಯಕ್ಕೆ ಆದೇಶಿಸಿತ್ತು. ಆದರೆ, ಸ್ಥಳೀಯ ರಾಜಕೀಯದ ಒತ್ತಡದಿಂದಾಗಿ ಇಂದಿಗೂ ಮಳಿಗೆ ಹರಾಜು ಪ್ರಕ್ರಿಯೆ ನಡೆದಿಲ್ಲ.

    ಮಳಿಗೆಗಳ ಹರಾಜು ವಿಳಂಬದಿಂದಾಗಿ ನಗರಸಭೆಗೆ ಬರುವ ಬಾಡಿಗೆ ಹಣ ಕೋಟ್ಯಂತರ ರೂಪಾಯಿ ನಷ್ಟವಾದಂತಾಗಿದೆ. ಇದೀಗ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ, ಉಪಾಧ್ಯಕ್ಷರು ಅತಿಶೀಘ್ರವಾಗಿ ನಗರಸಭೆ ಸಾಮಾನ್ಯ ಸಭೆಯಲ್ಲಿ ರ್ಚಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

    ನಗರಸಭೆ ಮಳಿಗೆ ಹರಾಜಿನ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ, ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು.

    | ರೂಪಾ ಚಿನ್ನಿಕಟ್ಟಿ, ನಗರಸಭೆ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts