More

    ನಗರದಲ್ಲಿ ಪ್ರಗತಿಯ ಪರ್ವ ಆರಂಭ – ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ – ಸೆ.9ಕ್ಕೆ ಸಿಎಂ ಬೊಮ್ಮಾಯಿ ಆಗಮನ

    ವಿಜಯಪುರ: ನಗರದಲ್ಲಿ ಪ್ರಗತಿಯ ಪರ್ವ ಆರಂಭಗೊಂಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ, ಉದ್ಘಾಟನೆ ನೆರವೇರಿಸಲು ಸೆ.9ರಂದು ಸಿಎಂ ಬಸವರಾಜ ಬೊಮ್ಮಾಯಿ ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿ, ಅಂದಾಜು 500 ಕೋಟಿ ರೂ.ವೆಚ್ಚದ ಕಾಮಗಾರಿ ಪೈಕಿ ಕೆಲವು ಪ್ರಗತಿಯಲ್ಲಿವೆ. ಕೆಲವು ಮುಕ್ತಾಯಗೊಂಡಿವೆ. ಕ್ಷೇತ್ರದ ಇತಿಹಾಸದಲ್ಲೇ ಇಷ್ಟೊಂದು ಕಾಮಗಾರಿಗಳು ಅನುಷ್ಠಾನಗೊಂಡಿರಲಿಲ್ಲ. ನಾನು ಶಾಸಕನಾದ ಬಳಿಕ ಸಾಕಷ್ಟು ಅಭಿವೃದ್ಧಿಯಾಗಿದ್ದು, ಇದೀಗ ಚಿತ್ರಣವೇ ಬದಲಾಗಿದೆ. ಗಲ್ಲಿಗಲ್ಲಿಗಳಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿವೆ. ಉದ್ಯಾನಗಳಲ್ಲಿ ಓಪನ್ ಜಿಮ್ ನಿರ್ಮಾಣ, ಈಜುಕೊಳಗಳನ್ನು ನಿರ್ಮಿಸಲಾಗಿದೆ. ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನ ಹಂತದಲ್ಲಿದ್ದು ಮುಂದಿನ ಆರು ತಿಂಗಳಲ್ಲಿ ಕ್ಷೇತ್ರ ಸಮಗ್ರ ಅಭಿವೃದ್ಧಿಯಾಗಲಿದೆ ಎಂದರು.

    ಲೋಕೋಪಯೋಗಿ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಹೀಗೆ ಅನೇಕ ಇಲಾಖೆಗಳಲ್ಲಿ ನೂರಾರು ಕೋಟಿ ರೂ.ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಒಟ್ಟು 282.66 ಕೋಟಿ ರೂ. ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಟೆಂಡರ್ ಹಂತದಲ್ಲಿರುವ 172.18 ಕೋಟಿ ರೂ.ಕಾಮಗಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಚಿವರಾದ ಉಮೇಶ ಕತ್ತಿ, ಸಚಿವ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಆನಂದ ಸಿಂಗ್, ವಿ.ಸೋಮಣ್ಣ, ಮುನಿರತ್ನ ಮತ್ತಿತರರು ಪಾಲ್ಗೊಳ್ಳುವರೆಂದು ಅವರು ತಿಳಿಸಿದರು.

    ಕಾಮಗಾರಿ ವಿವರ: ಲೋಕೊಪಯೋಗಿ ಇಲಾಖೆಯಿಂದ 10750ಲಕ್ಷ ರೂ.ವೆಚ್ಚದಲ್ಲಿ ಹಲವು ರಸ್ತೆ ಕಾಮಗಾರಿಗಳು, ಮಹಾನಗರ ಪಾಲಿಕೆಯಿಂದ 3544.1ಲಕ್ಷ ರೂ.ವೆಚ್ಚದಲ್ಲಿ ಅಫ್ಜಲಪುರ ಟಕ್ಕೆಯ ಮಹಾಬಳೇಶ್ವರ ಕಾಲನಿ ಆಂತರಿಕ ರಸ್ತೆ, ಲಕ್ಷ್ಮಿ ನಗರ, ಇಬ್ರಾಹಿಂಪುರ ಭಾಗದ ಆಂತರಿಕ ರಸ್ತೆ ನಿರ್ಮಾಣ, ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಕಾರ್ಮಿಕರ ಮನೆಗಳ ಚಾವಣಿಗಳಿಗೆ ವಾಟರ್ ಫ್ರೂಫಿಂಗ್, ರಾಷ್ಟ್ರೀಯ ಹೆದ್ದಾರಿ ರಸ್ತೆಯಡಿ 3500ಲಕ್ಷ ರೂ. ವೆಚ್ಚದಲ್ಲಿ ಸುಭಾಸಚಂದ್ರ ವೃತ್ತದಿಂದ ಅಕ್ಕಮಹಾದೇವಿ ಮಹಿಳಾ ವಿವಿವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಸಿಎಂ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಯತ್ನಾಳ ತಿಳಿಸಿದರು.

    ತೊರವಿ ಗ್ರಾಮದಲ್ಲಿ 35 ಕೋಟಿ ರೂ.ವೆಚ್ಚದಲ್ಲಿ ಶೀತಲಗೃಹ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 1628ಲಕ್ಷ ರೂ. ವೆಚ್ಚದಲ್ಲಿ ಮಹಾನಗರ ಪಾಲಿಕೆಯ ನೂತನ ಕಚೇರಿ ಕಟ್ಟಡ, ಸರ್ದಾರ್ ವಲ್ಲಭಭಾಯಿ ಪಟೇಲ್ ವಾಣಿಜ್ಯ ಮಳಿಗೆ ಸಂಕೀರ್ಣ, ಡಾ.ಬಾಬು ಜಗಜೀವನ್ ರಾಂ ಭವನ, ಸರ್ಕಾರಿ ವೀಕ್ಷಣಾಲಯ ಹೊಸ ಕಟ್ಟಡ, ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಹಾಗೂ ಮಹಿಳಾ ವಸ್ತು ಸಂಗ್ರಹಾಲಯ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

    ಪಾಲಿಕೆ ಮಾಜಿ ಸದಸ್ಯ ಪರಶುರಾಮಸಿಂಗ್ ರಜಪೂತ, ವಿಜಯಕುಮಾರ ಡೋಣಿ, ಚಂದ್ರು ಚೌಧರಿ, ಲಕ್ಷ್ಮಣ ಜಾಧವ, ರಾಘವ ಅಣ್ಣಿಗೇರಿ ಮತ್ತಿತರರಿದ್ದರು.

    ವಿಮಾನ ನಿಲ್ದಾಣಕ್ಕೆ ಬಸವಣ್ಣನ ಹೆಸರು: ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವೇಶ್ವರರ ಹೆಸರಿಡಲು ಒತ್ತಾಯಿಸಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು. ಸಾರ್ವಜನಿಕ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜ್ ನೀಡಲು ಒತ್ತಾಯಿಸಲಾಗಿದ್ದು, ತಾತ್ವಿಕವಾಗಿ ಒಪ್ಪಿಗೆ ಸಿಕ್ಕಿದೆ. ಸ್ಯಾಟ್‌ಲೈಟ್ ಬಸ್ ನಿಲ್ದಾಣಕ್ಕೆ ಛತ್ರಪತಿ ಶಿವಾಜಿ ಹಾಗೂ ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರು ಇಡುವ ಪ್ರಯತ್ನ ನಡೆದಿದೆ. ಚನ್ನಮ್ಮ ನಾಟ್ಯ ಮಂದಿರಕ್ಕೆ 10ಕೋಟಿ ರೂ.ಬೇಡಿಕೆ ಇರಿಸಲಾಗಿದೆ. ರಿಂಗ್ ರಸ್ತೆಗೆ ಸುಮಾರು 750 ಕೋಟಿ ರೂ.ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಯತ್ನಾಳ ತಿಳಿಸಿದರು. ಗುತ್ತಿಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೋವಿಂದ ಕಾರಜೋಳರ ಪಾತ್ರವೇ ಪ್ರಮುಖ. ಅದರ ಕ್ರೆಡಿಟ್ ಅವರಿಗೇ ಸಿಗಬೇಕು. ಅದರಲ್ಲಿ ನನ್ನದೂ ಪಾತ್ರವಿದೆ ಎಂದ ಯತ್ನಾಳ, ಕೆಲವರು ಸುಖಾ ಸುಮ್ಮನೇ ತಾವು ಮಾಡಿದ್ದೆಂದು ಸಿಹಿ ಹಂಚಿಕೊಳ್ಳುತ್ತಿದ್ದಾರೆ ಎಂದು ಕಿಚಾಯಿಸಿದರು.

    ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ: ಸಿದ್ಧೇಶ್ವರ ಸ್ವಾಮಿಗಳ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಸೆ.9ರಂದು ಉದ್ಘಾಟಿಸುವರು. ನಗರ ಹೊರವಲಯದ ಹೈಪರ್ ಮಾರ್ಟ್ ಪಕ್ಕದಲ್ಲಿ ಮನೆಯ ವಾತಾವರಣದಲ್ಲೇ ಆರೈಕೆ ಮಾಡಬೇಕೆಂಬ ಉದ್ದೇಶದಿಂದ ನಿರ್ಮಿಸಲಾದ ಸಿದ್ಧೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಈ ಭಾಗದ ಬಡ ಜನರಿಗೆ ವರವಾಗಲಿದೆ ಎಂದು ಶಾಸಕ ಯತ್ನಾಳ ತಿಳಿಸಿದರು. 108 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ 30 ಐಸಿಯುಗಳಿದ್ದು, ಅತೀ ದೊಡ್ಡ ಕಂಪಾರ್ಟ್‌ಮೆಂಟ್ ಹೊಂದಿರುವ ಐಸಿಯುಗೆ ಈ ನೂತನ ಆಸ್ಪತ್ರೆ ಪಾತ್ರವಾಗಲಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ನ್ಯೂರೋ ಸರ್ಜರಿ ಆಪರೇಷನ್ ಥಿಯೇಟರ್, ನರ್ಸ್ ಕಾಲ್‌ಬೆಲ್ ಅಲರ್ಟ್ ವ್ಯವಸ್ಥೆ, ಸಿಎಆರ್‌ಎಂ ವೈದ್ಯಕೀಯ ಉಪಕರಣ, ಆಕ್ಸಿಜನ್ ಪ್ಲಾಂಟ್, ರೋಗಿಗಳ ಪರಿಚಾರಕರ ವಿಶ್ರಾಂತಿಗಾಗಿ 60 ವಿಶೇಷ ಬೆಡ್ ವ್ಯವಸ್ಥೆ ಹೀಗೆ ಅನೇಕ ವಿಶೇಷತೆಗಳನ್ನು ಹೊಂದಿದೆ ಎಂದು ಶಾಸಕರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts