More

    ಸಿದ್ಧಿಯ ಗದ್ದುಗೆಯನ್ನೇರಿದ ಪರಮ ತಪಸ್ವಿ; ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಪುಣ್ಯಸ್ಮರಣೆ ನಾಳೆ

    ಸಿದ್ಧಿಯ ಗದ್ದುಗೆಯನ್ನೇರಿದ ಪರಮ ತಪಸ್ವಿ; ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಪುಣ್ಯಸ್ಮರಣೆ ನಾಳೆ| ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಬಾಳೆಹೊನ್ನೂರು

    ಭಾರತ ಪುಣ್ಯಭೂಮಿಯಲ್ಲಿ ಹಲವಾರು ಧರ್ಮಗಳು ಬೆಳೆದು ಬಂದಿವೆ. ಸ್ವಧರ್ಮ ನಿಷ್ಠೆ- ಪರಧರ್ಮ ಸಹಿಷ್ಣುತೆ ಈ ನೆಲದ ವೈಶಿಷ್ಟ್ಯ. ವೀರಶೈವ ಧರ್ಮ ಇವುಗಳಲ್ಲಿ ಒಂದಾಗಿದ್ದು, ಇದರ ಇತಿಹಾಸ ಪರಂಪರೆ ಅಪೂರ್ವ. ಪರಶಿವನ ಪಂಚಮುಖಗಳಿಂದ ಪಂಚಾಚಾರ್ಯರು ಅವತರಿಸಿ ಭೂಮಂಡಲದಲ್ಲಿ ವೀರಶೈವ ಧರ್ಮವನ್ನು ನೆಲೆಗೊಳಿಸಿದರು. ವೀರಶೈವ ಧರ್ಮದ ಪಂಚಪೀಠಗಳು ರಾಷ್ಟ್ರೀಯ ಗುರುಪೀಠಗಳಾಗಿವೆ. ಈ ಮೂಲ ಪೀಠಗಳು ನೆಲೆಗೊಂಡ ಸ್ಥಾನಗಳೇ ಸಾಕ್ಷಿಯಾಗಿವೆ. ಈ ಪೀಠಗಳು ಸಾಮರಸ್ಯ ಸೌಹಾರ್ದ ಬೆಳೆಸಿ ಭಾವೈಕ್ಯತೆಗೆ ವಿಶೇಷ ಗಮನ ಹರಿಸಿ ಕಾರ್ಯ ಕೈಗೊಂಡಿದ್ದನ್ನು ಕಾಣುತ್ತೇವೆ.

    ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಸದ್ಧರ್ಮ ಪೀಠ ಪೂರ್ವಕಾಲದಲ್ಲಿ ಮಧ್ಯಪ್ರದೇಶದ ಉಜ್ಜಯಿನಿ ಕ್ಷೇತ್ರದಲ್ಲಿತ್ತು. ಕ್ಷಿಪ್ರಾ ನದಿಯ ನೆರೆಹಾವಳಿಯಿಂದ ಮತ್ತು ಪರಕೀಯರ ತೊಂದರೆಯಿಂದಾಗಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರ ಸತ್ಯ ಸದಾಶಯದಂತೆ ಶ್ರೀ ಜಗದ್ಗುರು ಮರುಳಸಿದ್ಧೇಶ್ವರರು ವಿಜಯನಗರ ಜಿಲ್ಲೆ ಉಜ್ಜಯಿನಿಯಲ್ಲಿ ಸ್ಥಾಪಿತಗೊಂಡದ್ದು ಸರ್ವರಿಗೂ ವೇದ್ಯವಾಗಿದೆ. ಈ ಪೀಠ ಪರಂಪರೆಯಲ್ಲಿ ತಪಸ್ವಿಗಳು ಮತ್ತು ಧರ್ಮ ಸತ್ಕ್ರಾಂತಿಗೈದ ಪರಮಾಚಾರ್ಯರು ಪೀಠಾರೋಹಣ ಮಾಡಿ ಧರ್ಮದ ಬೆಳಕು ತೋರಿದ್ದಾರೆ. ಹಂಪಿ ಹೊರನೋಡು ಉಜ್ಜಯಿನಿ ಒಳ ನೋಡು ಎಂಬ ಗಾದೆಮಾತಿನಂತೆ ಇಲ್ಲಿರುವ ಶಿಲ್ಪಕಲೆ ಅದ್ಭುತವಾಗಿದೆ. ಈ ಪೀಠದ ಪ್ರಾಚೀನ ಇತಿಹಾಸಕ್ಕೆ ಶ್ರೀ ಜಗದ್ಗುರು ಮರುಳಸಿದ್ಧೇಶ್ವರರ ಗದ್ದುಗೆ ದೇವಾಲಯ ಸಾಕ್ಷಿಯಾಗಿ ನಿಂತಿದೆ.

    ಸದ್ಧರ್ಮ ಪೀಠ ಪರಂಪರೆಯಲ್ಲಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಪರಮ ತಪಸ್ವಿಗಳು. ಕಾರಣಿಕ ಯುಗಪುರುಷರು. ಧರ್ಮದ ಭದ್ರ ಬುನಾದಿಯ ಮೇಲೆ ವೀರಶೈವ ಸಂಸ್ಕೃತಿಯನ್ನು ಬೆಳೆಸಿ ಬಲಗೊಳಿಸಿದ ಪರಮಾಚಾರ್ಯರು. ಅಂಗ ಅವಗುಣಗಳನ್ನು ಕಳೆದು ಲಿಂಗ ಗುಣ ಸಂಪನ್ನರಾಗಿ ಕಾರ್ಯನಿರ್ವಹಿಸಿದ್ದನ್ನು ಮರೆಯಲಾಗದು. ಅತ್ಯಂತ ಕಿರಿ ವಯಸ್ಸಿನಲ್ಲಿ ಹಿರಿದಾದ ಧರ್ಮಪೀಠವೇರಿದ ಧರ್ಮ ಸೂರ್ಯರಿವರು. ಇವರ ಜನ್ಮ ಜೀವನ ವೃತ್ತಾಂತ, ಸಾಧನೆ ಅಜರಾಮರ.

    ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲೂಕಿನ ಬಂಗಾರನಾಯಕನಹಳ್ಳಿ ಹಿರೇಮಠದ ಶ್ರೀ ಚನ್ನಬಸವಾರ್ಯ ಮತ್ತು ಗುರುಸಿದ್ಧಮಾಂಬೆಯರ ಗರ್ಭ ಸುಧಾ ಸಾಗರದಲ್ಲಿ ಸಂಜನಿಸಿದವರು. ಅದೇ ಗ್ರಾಮಕ್ಕೆ ಅಂದಿನ ಶ್ರೀ ಜಗದ್ಗುರು ಮರುಳಸಿದ್ಧ ಶಿವಾಚಾರ್ಯ ಭಗವತ್ಪಾದರ ಶುಭಾಗಮನ. ಶಿವತೇಜಸ್ಸಿನಿಂದ ಕೂಡಿದ ಸಿದ್ಧಲಿಂಗರನ್ನು ಕಂಡು ಬೆರಗಾಗಿ ನಿಂತರು. ಮುಖದಲ್ಲಿ ಕಂಡ ಸಾತ್ವಿಕ ತೇಜಸ್ಸು ಹುರುಪು ಹುಮ್ಮಸ್ಸುಳ್ಳ ಬಾಲಕ ಸಿದ್ಧಲಿಂಗರನ್ನು ನೋಡಿ ಮರುಳಸಿದ್ಧೇಶ್ವರರು ಸಂತುಷ್ಟರಾದರು. ಭವಿಷ್ಯತ್ತಿನ ಉಜ್ವಲತೆ ಅರಿತ ಮರುಳಸಿದ್ಧರು ಹೆತ್ತ ತಾಯಿ ತಂದೆ ಕರೆದು ಇಂತೆಂದರು- ನಿಮ್ಮೊಡಲ ಕುಡಿಯಾಗಿರುವ ಸಿದ್ಧಲಿಂಗರನ್ನು ಗುರುಪೀಠಕ್ಕೆ ಅರ್ಪಿಸಿರಿ. ಅವರಿಂದ ಜೀವ ಜಗತ್ತು ಉದ್ಧಾರವಾಗುವುದೆಂದರು.

    ಶ್ರೀ ಜಗದ್ಗುರು ಮರುಳಸಿದ್ಧರ ನುಡಿ ಕೇಳಿ ಆನಂದ ಆಶ್ಚರ್ಯ ಎರಡೂ ಉಂಟಾಯಿತು ಹೆತ್ತೊಡಲಿಗೆ. ಪರಮಗುರುವಿನ ಆಜ್ಞೆ ಮೀರಲಾಗದು ಎಂದು ನಿರ್ಧರಿಸಿ ಪಾದರ್ಕRಸಿ ಆಶೀರ್ವಾದ ಪಡೆದರು. ತಮ್ಮೊಂದಿಗೆ ಕರೆದುಕೊಂಡು ಉಜ್ಜಯಿನಿಗೆ ಬಂದು ಶ್ರೀ ಚನ್ನಬಸವರಿಗೆ ಶ್ರೀ ಪೀಠದ ಸ್ಥಿರಪಟ್ಟ ಮತ್ತು ಬಾಲಕ ಸಿದ್ಧಲಿಂಗರಿಗೆ ಚರಪಟ್ಟ ಕಟ್ಟಿ ಶುಭ ಹಾರೈಸಿದರು. ಕೇವಲ 13ನೆಯ ವಯಸ್ಸಿನಲ್ಲಿ ಸದ್ಧರ್ಮ ಪೀಠ ಏರಿ ತಪಸ್ಸು ಧ್ಯಾನದಲ್ಲಿ ಮಗ್ನರಾಗಿ ಸಿದ್ಧಿಯ ಗದ್ದುಗೆ ಏರಿದರು. ಮಹಾಪೀಠದ ಪರಿಸರದಲ್ಲಿ ವಿದ್ವಾಂಸರನ್ನು ಇಟ್ಟುಕೊಂಡು ಸಿದ್ಧಲಿಂಗ ಭಗವತ್ಪಾದರು ಶಾಸ್ತ್ರ ಸಿದ್ಧಾಂತಗಳನ್ನು ಅರಿತರು. ಭೌತಿಕ ಸಂಪತ್ತಿಗಿಂತ ಆಧ್ಯಾತ್ಮ ಸಂಪತ್ತು ಅತ್ಯಂತ ಶ್ರೇಷ್ಠವೆಂದು ಅರಿತ ಅವರು ಅನೇಕ ಬೆಟ್ಟ ಗುಡ್ಡಗಳಲ್ಲಿ ಮತ್ತು ಹಳ್ಳಕೊಳ್ಳಗಳ ಪರಿಸರದಲ್ಲಿ ಇಷ್ಟಲಿಂಗಾನುಷ್ಠಾನ ಕೈಗೊಂಡು ಭಕ್ತ ಸಂಕುಲದ ಪಾಲಿಗೆ ಕಲ್ಪವೃಕ್ಷವಾಗಿ ಕಂಗೊಳಿಸಿದರು. ಜಿಡ್ಡುಗಟ್ಟಿದ ವೀರಶೈವ ಧರ್ಮಕ್ಕೆ ಹೊಸ ಚಾಲನೆಯಿತ್ತು ಬೆಳೆಸಿ ಬಲಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

    ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ಪಾಂಡಿತ್ಯ ಪ್ರತಿಭೆ, ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ತಪಶ್ಶಕ್ತಿ, ಶ್ರೀ ಕಾಶಿನಾಥ ಶಾಸ್ತ್ರಿಗಳವರ ಕ್ರಿಯಾಶೀಲತೆಯು ಪಂಚಪೀಠಗಳಿಗೆ ಹೊಸ ಶಕ್ತಿ ತುಂಬಿ ವೀರಶೈವ ಧರ್ಮದ ಪ್ರಾಚೀನತೆ ಮತ್ತು ಇತಿಹಾಸಕ್ಕೆ ಕಾಯಕಲ್ಪ ಕಲ್ಪಿಸಿ ಕೊಟ್ಟ ಜಂಗಮ ಯೋಗಿ. ಸಂಸ್ಕೃತ ಪಾಠಶಾಲೆ, ವಿದ್ಯಾಲಯ ಸ್ಥಾಪನೆ, ‘ಪಂಚಾಚಾರ್ಯ ಪ್ರಭಾ’ ವಾರಪತ್ರಿಕೆಗೆ ಜನ್ಮ ಮುಂತಾದವುಗಳಿಗೆ ಕಾರಣವಾಯಿತು. ಸಿದ್ಧಲಿಂಗ ಜಗದ್ಗುರುಗಳು ಜ್ಞಾನ ಗುರು ವಿದ್ಯಾಪೀಠ ಸ್ಥಾಪಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಆಶಾಕಿರಣವಾದರು. ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಹುಟ್ಟುಹಾಕಿ ಸಾಕ್ಷರರ ಸಂಖ್ಯೆ ಹೆಚ್ಚಾಗಲು ಶ್ರಮಿಸಿದರು. ಸಂಘದ ಮೂಲ ನಿಧಿಗೆ ಆ ಕಾಲದಲ್ಲಿ ಐದು ಸಹಸ್ರ ರೂಪಾಯಿಗಳನ್ನಿತ್ತು ಹಾರೈಸಿದರು. ಅವರು ಸ್ಥಾಪಿಸಿದ ವಿದ್ಯಾವರ್ಧಕ ಸಂಘ ನೂರಾರು ವಿದ್ಯಾಲಯಗಳನ್ನು ಹುಟ್ಟು ಹಾಕಿ ಮಕ್ಕಳ ಭವಿಷ್ಯಕ್ಕೆ ಕಾರಣೀಭೂತರಾದರು. ಅಡಿಗಡಿಗೆ ಸಮಸ್ಯೆ ಸವಾಲುಗಳನ್ನು ಎದುರಿಸಿ ಗುರುಪೀಠಗಳಿಗೆ ಗೌರವ ತುಂಬಿ ತಂದರು. ಸಂಕಷ್ಟಕ್ಕೆ ಒಳಗಾದ ಧರ್ಮಪೀಠಗಳ ಸಮಸ್ಯೆಗಳನ್ನು ಬಗೆಹರಿಸಿ ಧರ್ಮ ಸಂಸ್ಕೃತಿಯ ಪುನರುತ್ಥಾನಕ್ಕೆ ಕಾರಣರಾದರು. ಬುಕ್ಕಾಂಬುಧಿ ಬೆಟ್ಟದಲ್ಲಿ 3 ತಿಂಗಳ ಕಾಲ ತಪಸ್ಸು ಮಾಡಿ ಶ್ರೀ ಶಿವಾನಂದ ಜಗದ್ಗುರುಗಳಿಗೆ ಶ್ರೀ ರಂಭಾಪುರಿ ಪೀಠದ ಪರಮಾಚಾರ್ಯರನ್ನಾಗಿ ಹರಸಿ ಹಾರೈಸಿದರು. ವರಕವಿ ವಾಗೀಶರಿಗೆ ಮುಂದೊಂದು ದಿನ ನೀವು ಸೂರ್ಯ ಪೀಠವೇರಿ ಧರ್ಮದ ಬೆಳಕನ್ನು ಬೀರುವವರಾಗುತ್ತೀರಿ ಎಂದು ಭವಿಷ್ಯ ಹೇಳಿ ಬಲ ತಂದುಕೊಟ್ಟ ಮಹಿಮಾನ್ವಿತರು.

    ಲೋಕಸಂಚಾರ ಮಾಡುತ್ತಾ ಜನಕಲ್ಯಾಣ ಮತ್ತು ಭಕ್ತ ಸಮೂಹದ ಉಜ್ವಲತೆಗಾಗಿ ಸದಾ ಶ್ರಮಿಸಿದರು. ಇವರ ಶ್ರೇಯಸ್ಸು ಕಂಡು ವಿರೋಧಿಗಳು ಹಲವಾರು ತಂತ್ರ ಕುತಂತ್ರಗಳನ್ನು ಮಾಡಿದರು. ಅದ್ಯಾವುದಕ್ಕೂ ಅಂಜದೇ ಅಳುಕದೇ ಧರ್ಮದ ಹೆದ್ದಾರಿಯಲ್ಲಿ ನಡೆದು ಪೀಠಗಳಿಗೆ ಮತ್ತು ಸಮಾಜಕ್ಕೆ ಕಣ್ಮಣಙಿಗಳಾಗಿ ಕಂಗೊಳಿಸಿದರು. ತ್ರಿಕಾಲಜ್ಞಾನಿಗಳಾದ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳಿಗೆ ತಮ್ಮ ಅಗಲಿಕೆಯ ಅರಿವು ಇತ್ತು. ಆದರೂ ಭಗವಂತನ ಇಚ್ಛೆ ಇರಬೇಕು. ಇಲ್ಲಿರುವ ಬದಲು ಭಗವಂತನ ಸಾನ್ನಿಧ್ಯದಲ್ಲಿ ಬೆಳೆಯುವುದಾಗಿ ಭವಿಷ್ಯ ನುಡಿದರು. 1936ನೇ ಇಸ್ವಿ ಪುಷ್ಯ ಬಹುಳ ಚವತಿಯಂದು ತಮಗೆ ದಾರಿ ತೋರಿದ ಶ್ರೀ ಜಗದ್ಗುರು ದಾರುಕಾಚಾರ್ಯರ ಪಾದದಲ್ಲಿ ಬೆರೆತು ಹೋದರು. ಭೌತಿಕ ಕಾಯ ಕಣ್ಮರೆಯಾದರೂ ಅವರು ಮಾಡಿದ ಕಾರ್ಯ-ಮಾಡಿದ ತಪಸ್ಸು ಮತ್ತು ಭಕ್ತರೋದ್ಧಾರ ಕಾರ್ಯ ಎಂದೆಂದಿಗೂ ಮರೆಯಲಾಗದು. ನಂಬಿ ನಡೆದವರು ಅವರ ಲೀಲೆ ಪವಾಡಗಳನ್ನು ಇಂದಿಗೂ ಕಾಣಬಹುದು. ಅವರು ತಪಗೈದ ಬುಕ್ಕಾಂಬುಧಿ ಬೆಟ್ಟದಲ್ಲಿ ಹಾಗೂ ಉಜ್ಜಯಿನಿ ಮಹಾಪೀಠದಲ್ಲಿ ಜನವರಿ 11ರಂದು ಅವರ ಪುಣ್ಯಸ್ಮರಣೋತ್ಸವ ವಿಧ್ಯುಕ್ತವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುತ್ತದೆ. ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಶ್ರೀ ಪಾದಕ್ಕೆ ಪ್ರಣಾಮಗಳನ್ನರ್ಪಿಸಿ ಆಶೀರ್ವಾದ ಶ್ರೀರಕ್ಷೆ ಪಡೆಯೋಣ.

    ‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

    ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts