More

    ಕಮಾಂಡ್- ಇಂಟಿಗ್ರೇಟೆಡ್ ಕಂಟ್ರೋಲ್ ಸೆಂಟರ್‌ಗೆ ಚಾಲನೆ;ವಿಶೇಷ ಏನು..?

    ಬೆಂಗಳೂರು: ಮಹಿಳೆ, ಮಕ್ಕಳ ಸುರಕ್ಷತೆ ಮತ್ತು ಕಾನೂನುಬಾಹಿರ ಚಟುವಟಿಕಗಳಿಗೆ ಕಡಿವಾಣ ಹಾಕಲು ಕಮಾಂಡ್ ಮತ್ತು ಇಂಟಿಗ್ರೇಟೆಡ್ ಕಂಟ್ರೋಲ್ ಸೆಂಟರ್ ಅನ್ನು ದೇಶದಲ್ಲಿಯೇ ಮೊದಲ ಬಾರಿಗೆ ಆರಂಭಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಸೇಫ್ ಸಿಟಿ ಯೋಜನೆಯಡಿ ( ನಿರ್ಭಯ ನಿಧಿ) ಅಲಿ ಅಸ್ಕರ್ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಕಮಾಂಡ್ ಮತ್ತು ಇಂಟಿಗ್ರೇಟೆಡ್ ಕಂಟ್ರೋಲ್ ಸೆಂಟರ್ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

    661.5 ಕೋಟಿ ರೂ. ವೆಚ್ಚದಲ್ಲಿ ಸಿಸಿ ಕ್ಯಾಮರಾ ಸೇರಿ ವಿವಿಧ ಅತ್ಯಾಧುನಿಕ ಉಪಕರಣಗಳನ್ನು ಖರೀದಿ ಮಾಡಲಾಗಿದೆ. ದೇಶದಲ್ಲಿ 6 ಮಹಾನಗರದಲ್ಲಿ ಸೇಫ್ ಸಿಟಿ ಯೋಜನೆ ಜಾರಿಯಲ್ಲಿದ್ದು, ಬೆಂಗಳೂರಿನ ಕಮಾಂಡ್ ಸೆಂಟರ್ ಮೊದಲನೇಯದ್ದು. ನಗರದ 3 ಸಾವಿರ ಸ್ಥಳಗಳಲ್ಲಿ 7,500 ಸಿಸಿ ಕ್ಯಾಮರಾ ಅಳವಡಿಸಿದ್ದು, ಕಮಾಂಡ್ ಸೆಂಟರ್‌ನಲ್ಲಿ ಕುಳಿತು ಸಮಾಜಘಾತುಕ ಶಕ್ತಿಗಳ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುರಕ್ಷಿತ ಮಹಾನಗರವನ್ನಾಗಿ ನಿರ್ಮಿಸುವುದು ನಮ್ಮ ಸರ್ಕಾರದ ಗುರಿ. ಈ ನಿಟ್ಟಿನಲ್ಲಿ 2017ರಲ್ಲಿ ಸೇಫ್ ಸಿಟಿ ಪರಿಕಲ್ಪನೆ ನಮ್ಮದಾಗಿತ್ತು. ಮಹಿಳೆಯರಿಗೆ ಪೊಲೀಸ್ ನೆರವು ನೀಡಲು 60 ಕಡೆ ಕಂಟೇನರ್ ಅಳವಡಿಸಲಾಗಿದೆ. ಮೊಬೈಲ್ ಕಮಾಂಡ್ ಸೆಂಟರ್, ಮೊಬೈಲ್ ಫೋರೆನ್ಸಿಕ್ ಲ್ಯಾಬ್ ಸೇರಿ ಹಲವು ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

    ಸೆಂಟರ್‌ನಲ್ಲಿ ಯಾವ ರೀತಿಯ ಕೆಲಸ ನಡೆಯಲಿದೆ ಎಂಬ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ವಿವರಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಡಿಜಿ- ಐಜಿಪಿ ಡಾ. ಅಲೋಕ್ ಮೋಹನ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಎಂ.ಎನ್. ಅನುಚೇತ್, ರಮಣ ಗುಪ್ತ ಮತ್ತಿತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts