More

    ಫ್ಲೆಕ್ಸ್‌ಗಳ ಹಾವಳಿಗೆ ಕಡಿವಾ

    ಹಾಸನ: ಜಿಲ್ಲೆಯಲ್ಲಿ ಫ್ಲೆಕ್ಸ್ ಹಾಕುವ ಸಂಬಂಧ ಉಂಟಾಗುತ್ತಿರುವ ವಿವಾದ, ರಾಜಕೀಯ ತಿಕ್ಕಾಟಗಳನ್ನು ನಿವಾರಿಸಲು ಇನ್ನು ಮುಂದೆ ಯಾವುದೇ ವಿಧದ ಫ್ಲೆಕ್ಸ್ ಅಳವಡಿಕೆ ಸ್ಥಳದಲ್ಲಿ ಸಿಸಿ ಟಿವಿ ಕ್ಯಾಮರಾ ಅವಳಡಿಸಬೇಕು ಎನ್ನುವುದೂ ಸೇರಿದಂತೆ ವಿವಿಧ ನಿಯಮ ಪಾಲಿಸುವ ಭರವಸೆ ನೀಡಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ.

    ಈಚೆಗೆ ಜಿಲ್ಲೆಯ ವಿವಿಧೆಡೆ ಫ್ಲೆಕ್ಸ್, ಬ್ಯಾನರ್ ಹರಿದು ಹಾಕಿದ ಘಟನೆಗಳು ಪ್ರತಿಭಟನೆ, ವೈಷಮ್ಯಗಳಿಗೆ ದಾರಿ ಮಾಡಿಕೊಟ್ಟಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ, ಫ್ಲೆಕ್ಸ್ ಅಳವಡಿಕೆಗೆ ನಿಯಮ ರೂಪಿಸಿದ್ದು, ಕಡ್ಡಾಯವಾಗಿ ಅವುಗಳನ್ನು ಪಾಲಿಸುವಂತೆ ಎಚ್ಚರಿಕೆಯನ್ನೂ ನೀಡಿದೆ.
    ಜಿಲ್ಲೆಯ ಹಲವು ಕಡೆ ವಿವಿಧ ಕಾರಣಗಳಿಂದ ಮುಂಜಾಗ್ರತಾ ಕ್ರಮಗಳಿಲ್ಲದೆ ಬ್ಯಾನರ್ ಅಳವಡಿಸುತ್ತಿದ್ದು, ಈ ವಿಚಾರದಲ್ಲಿ ತಕರಾರು ಉಂಟಾಗುತ್ತಿದೆ. ಈ ಸನ್ನಿವೇಶವನ್ನು ಸಮಾಜಘಾತುಕ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗಿ ಸಾರ್ವಜನಿಕ ಶಾಂತಿಗೆ ಭಂಗ ತರುವ ಸಾಧ್ಯತೆ ಇರುವುದರಿಂದ ಬ್ಯಾನರ್, ಫ್ಲೆಕ್ಸ್ ಅಳವಡಿಕೆಗೆ ಅನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.

    ಕೆಲವರು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಜನ್ಮದಿನ, ಹಬ್ಬದ ಶುಭಾಶಯಗಳು ಹಾಗೂ ಇತ್ಯಾದಿ ಸಂಬಂಧಿಸಿದ ಬ್ಯಾನರ್‌ಗಳನ್ನು ರಸ್ತೆ ಮಧ್ಯದಲ್ಲಿ ಮತ್ತು ಬದಿಯಲ್ಲಿ ಅಳವಡಿಸಿ ತೆರವುಗೊಳಿಸದೇ ಇರುವುದು ಕಂಡು ಬಂದಿದೆ. ಇದರಿಂದ ಕಿರಿಕಿರಿಯೇ ಹೆಚ್ಚು.

    ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಯಾವುದೇ ತರಹದ ಬ್ಯಾನರ್ ಅಥವಾ ಫ್ಲೆಕ್ಸ್ ಅಳವಡಿಲು ಅನುಮತಿ ನೀಡಲು ಪ್ರಾಧಿಕಾರಗಳು ನಿರ್ದೇಶನಗಳನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ.

    ಅನುಮತಿ ನೀಡಲು ನಿಯಮಗಳು: ಫ್ಲೆಕ್ಸ್ ಅಳವಡಿಕೆಗೆ ಕಾರ್ಯಕ್ರಮ ಆಯೋಜಕರು ಅಥವಾ ಸಾರ್ವಜನಿಕರು ಅನುಮತಿ ಪ್ರಾಧಿಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯಲೇಬೇಕು. ಫ್ಲೆಕ್ಸ್, ಬ್ಯಾನರ್ ಅಳವಡಿಸಲು ಅನುಮತಿ ನೀಡುವ ಸಂದರ್ಭದಲ್ಲಿ ಕನಿಷ್ಠ ಸಮಯದ ಮಟ್ಟಿಗೆ ಅನುಮತಿ ನೀಡಬೇಕು ಹಾಗೂ ಫ್ಲೆಕ್ಸ್ ಹಾಕುವ ಮತ್ತು ತೆರವುಗೊಳಿಸುವ ದಿನಾಂಕ ಮತ್ತು ಸಮಯವನ್ನು ಅನುಮತಿ ಪತ್ರದಲ್ಲಿಯೇ ನಮೂದಿಸಲಾಗುವುದು.

    ಅನುಮತಿ ಕೋರಿರುವವರೇ ತೆರವು ಕಾರ್ಯವನ್ನು ಸಮರ್ಪಕವಾಗಿ ಮಾಡಿಸುವುದು ಹಾಗೂ ತೆರವು ಮಾಡಿದ ಬ್ಯಾನರ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಫ್ಲೆಕ್ಸ್ ಅಳವಡಿಸುವ ಸ್ಥಳದಲ್ಲಿ ಯಾವುದೇ ವಿವಾದಗಳಿದ್ದಲ್ಲಿ ಅನುಮತಿ ನೀಡಬಾರದು. ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ತೊಂದರೆ ಆಗುವಂತಿರಬಾರದು. ಬ್ಯಾನರ್‌ಗಳಲ್ಲಿ ಯಾವುದೇ ವಿವಾದಾತ್ಮಕ ಅಂಶಗಳು ಅಥವಾ ಬೇರೆ ಧರ್ಮ, ಸಂಘಟನೆ, ಪಕ್ಷ, ಇತ್ಯಾದಿ ಭಾವನೆಗಳಿಗೆ ಧಕ್ಕೆ ಬರುವಂತಿರಬಾರದು.

    ಅಳವಡಿಸಲಾದ ಫ್ಲೆಕ್ಸ್‌ಗಳ ರಕ್ಷಣೆಯ ಹೊಣೆ ಸಂಪೂರ್ಣವಾಗಿ ಕಾರ್ಯಕ್ರಮ ಆಯೋಜಕರು ಅಥವಾ ಮನವಿ ಮಾಡಿದವರದ್ದೇ ಆಗಿದ್ದು, ಬ್ಯಾನರ್ ಅಳವಡಿಸುವ ಸ್ಥಳದಲ್ಲಿ ಎಲ್ಲ ಆಗುಹೋಗುಗಳು ದಾಖಲಾಗುವಂತೆ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು. ಪ್ಲಾಸ್ಟಿಕ್ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ಅಳವಡಿಕೆ ನಿಷೇಧಿಸಲಾಗಿದೆ.

    ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಅನುಮತಿ ಪ್ರಾಧಿಕಾರ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.


    ಒತ್ತಡದಿಂದ ನಿಯಮ ಸಡಿಲ: 2017-18ರಲ್ಲಿ ನಗರಸಭೆ ಅಧ್ಯಕ್ಷರಾಗಿದ್ದ ಡಾ.ಎಚ್.ಎಲ್.ಅನಿಲ್‌ಕುಮಾರ್, ಫ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದಲ್ಲದೆ ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದ್ದರು. ಇದರಿಂದ ಆವರೆಗೂ ನಗರದ ಹೃದಯಭಾಗವಾದ ಹೇಮಾವತಿ ಪ್ರತಿಮೆಯನ್ನೇ ಮರೆಮಾಚುವಂತೆ ರಾರಾಜಿಸುತ್ತಿದ್ದ ಫೆಕ್ಸ್‌ಗಳು ಇಲ್ಲದಂತಾಗಿ ನಗರದ ಸೌಂದರ್ಯವನ್ನೂ ಕಾಪಾಡಿದಂತಾಗಿತ್ತು. ಯಾರಾದರೂ ಪ್ರಮುಖರು ಮೃತಪಟ್ಟಾಗ ಅವರಿಗೆ ಸಂತಾಪ ಸೂಚಿಸುವ ಫ್ಲೆಕ್ಸ್‌ಗಳನ್ನು ಸೀಮಿತ ಅವಧಿಗೆ ಅಳವಡಿಸಲು ಅವಕಾಶ ನೀಡಲಾಗಿತ್ತು. ಎಂತಹ ದೊಡ್ಡ ರಾಜಕೀಯ ಕಾರ್ಯಕ್ರಮ ನಡೆದರೂ ನಾಯಕರಿಗೆ ಸ್ವಾಗತ ಕೋರಲು ಫ್ಲೆಕ್ಸ್ ಹಾಕಲು ಅನುಮತಿ ದೊರೆಯದಂತೆ ನೋಡಿಕೊಂಡಿದ್ದರು. ಒಂದೆರಡು ಬಾರಿ ಇದು ರಾಜಕಾರಣಿಗಳ ನಡುವಿನ ತಿಕ್ಕಾಟಕ್ಕೂ ಕಾರಣವಾಗಿತ್ತು.
    ನಗರಸಭೆ ಅಧಿಕಾರ ಅವಧಿ ಮುಕ್ತಾಯಗೊಂಡ ನಂತರವೂ ಈ ನಿಯಮ ಬಿಗಿ ಕಳೆದುಕೊಂಡಿರಲಿಲ್ಲ. ಆದರೆ ಈಚೆಗೆ ರಾಜಕೀಯ ಸಮಾರಂಭಗಳಿಗೆ ಶುಭಕೋರುವ, ರಾಜಕಾರಣಿಗಳ ಹುಟ್ಟುಹಬ್ಬಕ್ಕೆ ಶುಭಹಾರೈಸುವ ಫ್ಲೆಕ್ಸ್‌ಗಳು ಎಲ್ಲೆಡೆ ಕಾಣಿಸಿಕೊಳ್ಳಲು ಆರಂಭಿಸಿದ್ದವು. ನಗರಸಭೆ ಸ್ವಚ್ಛತಾ ಸಿಬ್ಬಂದಿಗೆ ಅವುಗಳನ್ನು ತೆರವುಗೊಳಿಸುವುದೇ ಪ್ರತ್ಯೇಕ ಕೆಲಸವಾಗುತ್ತಿತ್ತು.

    ಧಾರಾವಾಹಿ ಫ್ಲೆಕ್ಸ್ ಕಾರಣ?: ಜಿಲ್ಲಾಡಳಿತ ರಾಜಕಾರಣಿಗಳ ಶುಭ ಹಾರೈಕೆ, ಗ್ರಾಪಂ ಚುನಾವಣೆ ವಿಷಯವನ್ನು ಮುಂದಿಟ್ಟು ಫ್ಲೆಕ್ಸ್ ಅಳವಡಿಕೆಗೆ ಅನುಮತಿ ಕಡ್ಡಾಯಗೊಳಿಸಿದೆಯಾದರೂ ಈಚೆಗೆ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗೆ ಶುಭಕೋರುವ ಫ್ಲೆಕ್ಸ್ ಅಳವಡಿಕೆ ಹೆಚ್ಚುತ್ತಿದೆ. ಅದನ್ನು ವಿರೋಧಿಸಿ ಫ್ಲೆಕ್ಸ್ ಹರಿಯುವ, ಅಳವಡಿಕೆಗೆ ಅಡ್ಡಿಪಡಿಸುವ ಹಲವು ಘಟನೆಗಳು ಜರುಗಿದ್ದವು. ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ಸಂಘರ್ಷ ಉಂಟಾಗುವ ಸಾಧ್ಯತೆಗಳು ಹೆಚ್ಚಿದ್ದವು. ಹೀಗಾಗಿ ಅದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿ ಹೊಸ ಆದೇಶ ಹೊರಡಿಸಿದ್ದಾರೆ ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts