More

    ನಾರಿ ಮುನಿದರೆ ಮಾರಿ; ಆ ಕ್ಷಣ…

    ನಾರಿ ಮುನಿದರೆ ಮಾರಿ; ಆ ಕ್ಷಣ...ಮಹಾರಾಷ್ಟ್ರ ರಾಜ್ಯದ ಜಯದೇವ್ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ. 26 ವರ್ಷ ವಯಸ್ಸಿನ ಆತ ಎಂ.ಎ ನಂತರ ಕೆಲವು ತಿಂಗಳುಗಳು ಕಾಲೇಜೊಂದರಲ್ಲಿ ಲೆಕ್ಚರರ್ ಆಗಿದ್ದ. ಪೊಲೀಸ್ ಸಬ್ ಇನ್​ಸ್ಪೆಕ್ಟರ್​ಗಳ ನೇರ ನೇಮಕಾತಿಗೆ ನಡೆಯುವ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯೂ ಆದ. ಆರು ಅಡಿ ಎತ್ತರದ ಆಜಾನುಬಾಹು ಜಯದೇವ್ ಬುದ್ಧಿಶಕ್ತಿಯಲ್ಲದೇ ದೈಹಿಕ ಶಕ್ತಿಯಲ್ಲೂ ಮುಂದಿದ್ದು ನೋಡಲು ಸ್ಪುರದ್ರೂಪಿಯಾಗಿದ್ದ ಕಾರಣ ಅಹಂಭಾವದ ಪ್ರಕೃತಿಯವನಾಗಿದ್ದ. ಒಂದು ವರ್ಷದ ಪ್ರಾಥಮಿಕ ತರಬೇತಿಗೆಂದು ಆತ ನಾಶಿಕ್​ನಲ್ಲಿರುವ ಪೊಲೀಸ್ ತರಬೇತಿ ಶಾಲೆಗೆ ಹೋದಾಗ ಅವನಿಗೆ ತನ್ನ ತಂಡಕ್ಕೇ ಸೇರಿದ್ದ ಮಹಿಳಾ ಪಿ.ಎಸ್.ಐ ಸುಮಾಳ ಪರಿಚಯವಾಯಿತು. ಮುಂಬೈ ನಿವಾಸಿಯಾಗಿದ್ದ 25 ವರ್ಷ ವಯಸ್ಸಿನ ಸುಮಾ ಕಾನೂನು ಪದವೀಧರೆಯಾಗಿದ್ದು, ಆಕರ್ಷಕ ಮೈಕಟ್ಟಿನ ಆಕೆ ಆಟಪಾಠಗಳೆರಡರಲ್ಲೂ ಮುಂದಿದ್ದಳು. ತರಬೇತಿ ಶಾಲೆಯಲ್ಲಿ ಇಬ್ಬರಿಗೂ ಇನ್ನೂರು ಸದಸ್ಯರ ತಮ್ಮ ತಂಡಕ್ಕೆ ತಾವೇ ಮೊದಲಿಗರಾಗಬೇಕು ಎನ್ನುವ ಪೈಪೋಟಿ ಬೆಳೆಯಿತು. ಹೀಗಾಗಿ ಅವರಿಬ್ಬರೂ ಸದಾಕಾಲವೂ ಪರಸ್ಪರರ ಬಗ್ಗೆಯೇ ಯೋಚಿಸತೊಡಗಿದರು, ಪರಸ್ಪರ ಆಕರ್ಷಣೆಗೊಂಡರು. ಇಬ್ಬರೂ ಬಿಡುವಿನ ವೇಳೆಯಲ್ಲಿ ಭೇಟಿಮಾಡಿ ಗಂಟೆಗಟ್ಟಲೆ ತರಬೇತಿಯಲ್ಲದೇ ಇತರ ವಿಷಯಗಳ ಬಗ್ಗೆಯೂ ಹರಟುತ್ತಿದ್ದರು.

    ಕಾಲಕ್ರಮೇಣ ಅವರಿಬ್ಬರ ಮಧ್ಯೆ ಪ್ರೇಮಾಂಕುರವಾಯಿತು. ಸುಮಾ ಜಯದೇವ್​ನ ಜಾತಿಗೆ ಸೇರಿರದಿರುವುದು ಮತ್ತು ಅವರಿಬ್ಬರ ಕುಟುಂಬಗಳ ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ವ್ಯತ್ಯಾಸವಿರುವುದು ಈ ಸಂಬಂಧಕ್ಕೆ ಅಡ್ಡಿಯಾಗಲಿಲ್ಲ. ಲಗ್ನವಾಗಬೇಕೆಂದು ರ್ಚಚಿಸತೊಡಗಿದಾಗ ಜಯದೇವ್, ‘ಒಂದೇ ಇಲಾಖೆಯಲ್ಲಿರುವ ಕಾರಣ ಮುಂದೆ ನಮ್ಮಿಬ್ಬರ ಮಧ್ಯೆ ವೃತ್ತಿ ಮಾತ್ಸರ್ಯ ಬರಬಹುದು, ಹೀಗಾಗಿ ನಮ್ಮಮದುವೆಯಾದ ನಂತರ ನೀನು ಕೆಲಸಕ್ಕೆ ರಾಜೀನಾಮೆ ನೀಡಿ ವಕೀಲೆಯಾಗಿ ಕೆಲಸಮಾಡು’ ಎಂದ. ಇದಕ್ಕೊಪ್ಪದ ಸುಮಾ ಅವನೊಂದಿಗೆ ಜಗಳವಾಡಿ ‘ಶೋಷಿತ ಹೆಣ್ಣುಮಕ್ಕಳ ಧ್ವನಿಯಾಗಿರಬೇಕು ಎನ್ನುವ ಕಾರಣಕ್ಕಾಗಿಯೇ ನಾನು ಪೊಲೀಸ್ ಇಲಾಖೆಗೆ ಸೇರಿರುವುದರಿಂದ ನೌಕರಿಗೆ ರಾಜೀನಾಮೆ ನೀಡುವುದಿಲ್ಲ, ಗಂಡಹೆಂಡಿರಿಬ್ಬರೂ ಒಂದೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ಉದಾಹರಣೆಗಳಿಲ್ಲವೇ? ಬೇಕಾದರೆ ನೀನೇ ನೌಕರಿ ಬಿಟ್ಟು ಯಾವುದಾದರೂ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗು, ನಾನು ನೌಕರಿ ಬಿಡುವುದಿಲ್ಲ’ಎಂದುತ್ತರಿಸಿದಳು. ವಾದವಿವಾದಗಳ ನಂತರ, ಲಗ್ನವಾದ ಬಳಿಕವೂ ಪೊಲೀಸ್ ಇಲಾಖೆಯಲ್ಲಿಯೇ ಮುಂದುವರಿಯಲು ತೀರ್ವನಿಸಿದರು.

    ಪೊಲೀಸ್ ತರಬೇತಿ ಶಾಲೆಯ ಆರಂಭಿಕ ತರಬೇತಿ ಮುಕ್ತಾಯಗೊಂಡ ನಂತರ ವೃತ್ತಿ ತರಬೇತಿಗಾಗಿ ಇಬ್ಬರನ್ನೂ ಬೇರೆ ಬೇರೆ ಜಿಲ್ಲೆಗಳಿಗೆ ನೇಮಿಸಲಾಯಿತು. ಇಬ್ಬರೂ ಪ್ರತಿದಿನ ಫೋನ್ ಮೂಲಕ ಸಂಭಾಷಣೆ ಮಾಡುತ್ತಾ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಏತನ್ಮಧ್ಯೆ ಇಬ್ಬರಿಗೂ ಮೂರು ದಿನಗಳ ರಜೆ ಬಂದಾಗ ಹೆಸರಾಂತ ಗಿರಿಧಾಮವೊಂದಕ್ಕೆ ವಿಹಾರಕ್ಕೆಂದು ಹೋದರು. ಅಲ್ಲಿ ಪತಿ ಪತ್ನಿಯರೆಂದು ಹೇಳಿ ರೂಮ್ ಮಾಡಿದರು. ಆ ಸಮಯದಲ್ಲಿ ಅವರಿಬ್ಬರ ಮಧ್ಯೆ ದೈಹಿಕ ಸಂಪರ್ಕ ಏರ್ಪಟ್ಟಿತು. ಗಿರಿಧಾಮದಿಂದ ವಾಪಸಾದ ಕೆಲವಾರಗಳ ನಂತರ ಸುಮಾಗೆ ತಾನು ಗರ್ಭಿಣಿಯಾಗಿರುವುದು ತಿಳಿದುಬಂದಿತು. ಈ ವಿಷಯವನ್ನು ಆಕೆ ಜಯದೇವ್​ಗೆ ತಿಳಿಸಿ ಆದಷ್ಟು ಶೀಘ್ರದಲ್ಲಿ ಲಗ್ನವಾಗಬೇಕೆಂದು ಕೋರಿದಳು. ಆತ ಅವಳ ಮಾತಿಗೆ ಒಪ್ಪದೇ ‘ನಮ್ಮ ತರಬೇತಿಯೇ ಇನ್ನೂ ಮುಗಿದಿಲ್ಲ, ಲಗ್ನಕ್ಕಾಗಿ ರಜೆ ಬೇಡಿದರೆ ಮೇಲಧಿಕಾರಿಗಳು ಕೋಪಗೊಳ್ಳುತ್ತಾರೆ, ತರಬೇತಿ ಪೂರೈಸುವ ಮುನ್ನವೇ ನಿನಗೆ ಮಗುವಾದರೆ ಆರೇಳು ತಿಂಗಳ ಕಾಲ ರಜೆಯಲ್ಲಿರಬೇಕಾಗುತ್ತದೆ, ಹಾಗಾದಲ್ಲಿ ನಿನ್ನ ತರಬೇತಿಯ ಅವಧಿಯನ್ನು ವಿಸ್ತರಿಸುವ ಕಾರಣ ನಿನ್ನ ಕೆಲಸವೂ ಕಾಯಂ ಆಗುವುದಿಲ್ಲ, ನೀನು ಗರ್ಭಪಾತ ಮಾಡಿಸಿಕೊಳ್ಳುವುದೇ ಲೇಸು’ ಎಂದ. ಸುಮಾ ಇದಕ್ಕೊಪ್ಪದೆ ‘ಭ್ರೂಣ ಹತ್ಯೆ ಮಾಡಲು ನನಗಿಷ್ಟವಿಲ್ಲ, ನಾವು ಈಗಿಂದೀಗಲೇ ಲಗ್ನವಾಗೋಣ, ಮಗು ಜನಿಸಿದ ಬಳಿಕ ಮುಂದೇನಾಗುವುದೋ ನೋಡೋಣ’ ಎಂದಳು. ಆದರೆ ಜಯದೇವ್ ಅವಳ ಮಾತುಗಳಿಗೊಪ್ಪದೇ ‘ಮನೆಯಲ್ಲಿ ಮಾತಾಪಿತರಿಗೆ ನಮ್ಮ ಸಂಬಂಧದ ಬಗ್ಗೆ ತಿಳಿಸಿಲ್ಲ, ನೀನು ಬೇರೆ ಜಾತಿಯವಳಾದ್ದರಿಂದ ಅವರನ್ನು ಒಪ್ಪಿಸಲು ನನಗೆ ಕಾಲಾವಕಾಶ ಬೇಕು. ಅವರ ಆಶೀರ್ವಾದವಿಲ್ಲದೇ ನಾನು ಮದುವೆಯಾಗುವುದಿಲ್ಲ, ಹಾಗಾಗಿ ನೀನು ಗರ್ಭಪಾತ ಮಾಡಿಸಿಕೊಳ್ಳುವುದೇ ಸೂಕ್ತ’ ಎಂದು ಹೇಳಿ ಅವಳ ಮನವೊಲಿಸಿದ. ಆನಂತರ ಜಯದೇವ್ ಸುಮಾಳನ್ನು ತನಗೆ ಪರಿಚಯವಿದ್ದ ನರ್ಸಿಂಗ್ ಹೋಂ ಒಂದಕ್ಕೆ ಕರೆದೊಯ್ದ. ಸುಮಾಳನ್ನು ತನ್ನ ಹೆಂಡತಿಯೆಂದೇ ದಾಖಲಿಸಿದ. ಗರ್ಭಪಾತಕ್ಕೆ ಸಹಮತಿಯಿದೆ ಎಂದು ಇಬ್ಬರೂ ಒಪ್ಪಿಗೆಪತ್ರಕ್ಕೆ ಸಹಿ ಮಾಡಿದರು. ಗರ್ಭಪಾತದ ನಂತರ ಸುಮಾ ಎರಡು ದಿನ ಆಸ್ಪತ್ರೆಯಲ್ಲಿದ್ದು ನೌಕರಿಗೆ ವಾಪಸಾದಳು. ಇದಾದ ಕೆಲವಾರಗಳ ನಂತರ ಇಬ್ಬರ ಜಿಲ್ಲಾ ತರಬೇತಿಯೂ ಮುಗಿದು ಇಬ್ಬರನ್ನೂ ಠಾಣಾ ಕರ್ತವ್ಯಕ್ಕೆ ನೇಮಿಸಲಾಯಿತು. ಕಾಕತಾಳೀಯವೆಂಬಂತೆ ಇಬ್ಬರೂ ಒಂದೇ ಜಿಲ್ಲೆಯ ಬೇರೆ ಬೇರೆ ಠಾಣೆಗಳಿಗೆ ನೇಮಕಗೊಂಡರು. ಕೆಲ ಕಾಲಾನಂತರ ಸುಮಾ ವಿವಾಹವು ಬೇಗನೇ ನಡೆಯಬೇಕೆಂದು ಜಯದೇವ್​ನ ಮೇಲೆ ಒತ್ತಡಹಾಕತೊಡಗಿದಳು. ಆದರೆ ಆತ ಒಂದಲ್ಲ ಒಂದು ಸಬೂಬು ಹೇಳುತ್ತಾ ತೀರ್ವನವನ್ನು ಮುಂದೂಡುತ್ತಲೇ ಬಂದ. ನಂತರ ಆಕೆಯ ಫೋನ್ ಕರೆಗಳನ್ನು ಸ್ವೀಕರಿಸುವುದನ್ನೂ ನಿಲ್ಲಿಸಿದ. ಒಂದು ದಿನ ಸುಮಾಳ ಠಾಣೆಯ ಕಾನ್​ಸ್ಟೆಬಲ್ ಬಂದು, ‘ಮೇಡಂ ಜಯದೇವ್ ಸಾಹೇಬರು ಮುಂದಿನ ವಾರ ಮದುವೆಯಾಗುತ್ತಿದ್ದಾರೆ’ ಎಂದು ಹೇಳಿದಾಗ ಆಕೆಗೆ ಆಘಾತವಾಯಿತು. ‘ನಿನಗೆ ಹೇಗೆ ಗೊತ್ತು’ ಎಂದು ಅವನನ್ನು ಕೇಳಿದಾಗ ಆತ ‘ಸಾಹೇಬರು ನಮ್ಮ ಜಿಲ್ಲೆಯವರೇ ಆಗಿದ್ದು ನನಗೆ ದೂರದಿಂದ ಸಂಬಂಧಿಕರಾಗಬೇಕು, ಅವರು ಶ್ರೀಮಂತ ಮನೆತನದ ಯುವತಿಯನ್ನು ಲಗ್ನವಾಗುತ್ತಿದ್ದಾರೆ’ ಎಂದು ಹೇಳಿ ಮದುವೆಯ ಆಹ್ವಾನ ಪತ್ರಿಕೆಯನ್ನು ತೋರಿಸಿದ.

    ಸುಮಾಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಕೂಡಲೇ ಜಯದೇವ್​ನನ್ನು ಸಂರ್ಪಸಲು ಪ್ರಯತ್ನಿಸಿದಳು. ಆದರೆ ಅವನು ಅಷ್ಟರಲ್ಲಾಗಲೇ ಲಗ್ನಕ್ಕೆಂದು ರಜೆಯ ಮೇಲೆ ಹೋಗಿದ್ದ. ಅವನ ಮೊಬೈಲ್ ಫೋನ್​ಗೆ ಎಷ್ಟೇ ಕರೆ ಮಾಡಿದರೂ ಉತ್ತರಿಸಲಿಲ್ಲ. ಏನುಮಾಡಲೂ ತೋಚದ ಸುಮಾ ಮಹಿಳಾ ಸಂಘಟನೆಯೊಂದನ್ನು ಸಂರ್ಪಸಿ ಅದರ ಸದಸ್ಯರ ಜತೆಗೆ ಜಯದೇವ್​ನ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ತಗಾದೆ ಮಾಡಿದಳು. ಜಯದೇವ್​ನನ್ನು ಭೇಟಿ ಮಾಡಿ ಗಲಾಟೆ ಮಾಡಿದಾಗ, ‘ನೀನು ಬೇರೆ ಯಾರಿಂದಲೋ ಗರ್ಭಿಣಿಯಾಗಿರಬಹುದು, ನನ್ನ ಮೇಲೆ ಸುಳ್ಳು ಆರೋಪ ಹೊರಿಸುತ್ತಿರುವೆ’ ಎಂದ. ‘ಜಯದೇವ್ ನನ್ನನ್ನು ಲಗ್ನವಾಗುತ್ತೇನೆ ಎಂದು ನಂಬಿಸಿ ನಂಬಿಕೆದ್ರೋಹ ಮಾಡಿದ್ದಾನೆ, ನಿಮ್ಮ ಮಗಳನ್ನು ಅವನಿಗೆ ಧಾರೆಯೆರೆಯಬೇಡಿ’ ಎಂದು ಸುಮಾ ವಧುವಿನ ಮಾತಾಪಿತರಿಗೆ ತಾಕೀತು ಮಾಡಿದಳು. ಆದರೆ ಯಾರೂ ಅವಳ ಮಾತುಗಳಿಗೆ ಸೊಪ್ಪು ಹಾಕದೇ ಅವಳನ್ನು ಅಲ್ಲಿಂದ ಹೊರಗೆ ಹಾಕಿದರು.

    ಎಲ್ಲರೆದುರು ಅವಮಾನಗೊಂಡ ಸುಮಾಗೆ ಜಯದೇವ್ ತನಗೆ ಮಾಡಿದ ಮೋಸಕ್ಕಾಗಿ ತಕ್ಕ ಶಾಸ್ತಿ ಮಾಡಬೇಕೆಂಬ ಛಲ ಮೂಡಿತು. ಆಕೆಯ ಗೆಳತಿಯರೂ, ಬಂಧುವರ್ಗದವರೂ, ಹಿರಿಯ ಅಧಿಕಾರಿಗಳೂ ಸುಮ್ಮನಿರಲು ಸೂಚಿಸಿದರು. ತಾನು ಕಾನೂನು ಪದವೀಧರೆಯೂ, ಪೊಲೀಸ್ ಅಧಿಕಾರಿಯೂ ಆಗಿರುವ ಕಾರಣ ಸುಮ್ಮನಿರಬಾರದು ಎಂದು ನಿರ್ಧರಿಸಿದ ಸುಮಾ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗಿ ಜಯದೇವ್ ತನಗೆ ಮೋಸಮಾಡಿ ಅತ್ಯಾಚಾರ ಮಾಡಿದ್ದಾನೆಂದು ದೂರು ನೀಡಿದಳು. ದೂರನ್ನು ದಾಖಲಿಸಲು ಠಾಣಾಧಿಕಾರಿ ಮೀನಮೇಷ ಮಾಡಿದಾಗ ಆಕೆ ಆ ಜಿಲ್ಲೆಯ ಎಸ್​ಪಿಯನ್ನೇ ಭೇಟಿಯಾಗಿ ದೂರನ್ನಿತ್ತಳು. ಜಯದೇವ್ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಯಿತು. ಜಯದೇವ್​ನ ಜತೆಗೆ ತೆಗೆಸಿಕೊಂಡಿದ್ದ ಫೋಟೋಗಳು, ವಾಟ್ಸಪ್ ಸಂವಹನಗಳು, ಗಿರಿಧಾಮದ ಹೋಟೆಲ್ ದಾಖಲೆಗಳು ಮತ್ತು ಗರ್ಭಪಾತ ಮಾಡಿದ ನರ್ಸಿಂಗ್ ಹೋಂನಿಂದ ಪಡೆದಿದ್ದ ದಾಖಲೆಗಳನ್ನು ಪೂರಕ ಸಾಕ್ಷ್ಯವಾಗಿ ಸುಮಾ ನೀಡಿದಳು. ಜಯದೇವ್ ತಲೆಮರೆಸಿಕೊಂಡ. ಆನಂತರ ಅವನ ಪರವಾಗಿ ಸುಮಾಳನ್ನು ಭೇಟಿ ಮಾಡಿದ ಕೆಲವರು ‘ಪರಸ್ಪರ ಸಮ್ಮತಿಯಿಂದಾದ ಕೃತ್ಯ ಅತ್ಯಾಚಾರವಾಗಲು ಹೇಗೆ ಸಾಧ್ಯ? ನ್ಯಾಯಾಲಯದಲ್ಲಿ ನಿನ್ನ ಕೇಸು ನಿಲ್ಲುವುದಿಲ್ಲ, ದೂರನ್ನು ಹಿಂಪಡೆಯುವುದೇ ಸೂಕ್ತ’ ಎಂದರು. ಇನ್ನೂ ಕೆಲವರು ದೂರು ಹಿಂಪಡೆದರೆ ಲಕ್ಷಾನುಗಟ್ಟಲೇ ಹಣ ನೀಡುವುದಾಗಿ ಅವಳಿಗೆ ಆಮಿಷವೊಡ್ಡಿದರು. ಆಕೆ ಒಪ್ಪದಿದ್ದಾಗ ‘ನಿನ್ನ ಮಾನಕಳೆಯುತ್ತೇವೆ’ ಎಂದು ಬೆದರಿಸಿದರು. ಆಕೆಗೆ ಕರೆಮಾಡಿದ ಜಯದೇವ್ ಜೀವಬೆದರಿಕೆಯನ್ನೂ ಹಾಕಿದ. ಅವನ ಕರೆಯನ್ನು ರೆಕಾರ್ಡ್ ಮಾಡಿಕೊಂಡ ಸುಮಾ ಪೊಲೀಸ್ ಠಾಣೆಯಲ್ಲಿ ಅವನ ವಿರುದ್ಧ ಇನ್ನೊಂದು ದೂರನ್ನು ನೀಡಿದಳು. ಇದೂ ದಾಖಲಾಯಿತು. ಪರಾರಿಯಾಗಿದ್ದ ಜಯದೇವ್ ಎಷ್ಟು ಹುಡುಕಿದರೂ ಸಿಗಲಿಲ್ಲ. ಕಡೆಗೆ ಆತನ ತರಬೇತಿಯ ಅವಧಿ ಪೂರ್ಣಗೊಂಡಿತೆಂದು ಘೊಷಿಸಿರದಿದ್ದ ಕಾರಣ ಆತನನ್ನು ಸೇವಾ ನಿಯಮಗಳನ್ವಯ ನೌಕರಿಯಿಂದ ವಜಾ ಮಾಡಲಾಯಿತು. ಇದಾದ ಕೆಲವು ತಿಂಗಳ ನಂತರ ಆತ ನ್ಯಾಯಾಲಯಕ್ಕೆ ಶರಣಾದ. ಅವನ ಮೇಲೆ ದಾಖಲಾಗಿದ್ದ ಎರಡೂ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ‘ಪ್ರೀತಿಯಿಂದ ದ್ವೇಷಕ್ಕೆ ತಿರುಗಿದ ಹೆಣ್ಣಿನ ರೋಷವು ನರಕಕ್ಕಿಂತ ಕಡೆ’ ಎಂದ ಇಂಗ್ಲಿಷ್ ನಾಟಕಕಾರ ವಿಲಿಯಂ ಕಾಂಗ್ರೀವ್​ನ ಮಾತುಗಳನ್ನು ಜಯದೇವ್ ನೆನಪಿನಲ್ಲಿಟ್ಟುಕೊಂಡಿದ್ದರೆ ಅವನಿಗೆ ಹೀಗಾಗುತ್ತಿರಲಿಲ್ಲವೇನೋ…

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts