More

    ಬೈಡೆನ್ ಬಾಟಲಿಯಲ್ಲಿ ಟ್ರಂಪ್ ಮದ್ಯ; ಪ್ರೇಮಶೇಖರರ ಅಂಕಣ

    ಬೈಡೆನ್ ಬಾಟಲಿಯಲ್ಲಿ ಟ್ರಂಪ್ ಮದ್ಯ; ಪ್ರೇಮಶೇಖರರ ಅಂಕಣಅಮೆರಿಕದಲ್ಲಿ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ನಿಗದಿಯಾದ ದಿನದಲ್ಲೇ, ನಿಗದಿಯಾದ ವಿಧಾನದಲ್ಲೇ ಜರುಗಬೇಕು. ಭಾರತ ಸೇರಿ ಜಗತ್ತಿನ ಇತರೆಲ್ಲ ದೇಶಗಳಲ್ಲೂ ಆಗುವಂತೆ ಅಧಿಕಾರದಲ್ಲಿ ಇರುವವರಾಗಲೀ, ಚುನಾವಣೆಯಲ್ಲಿ ಹೊಸದಾಗಿ ಬಹುಮತ ಪಡೆದ ಪಕ್ಷ ಅಥವಾ ವ್ಯಕ್ತಿಯಾಗಲೀ, ಅಥವಾ ಇನ್ನಾರೇ ಆಗಲಿ ಯಾವುದಾದರೂ ಕಾರಣ ಒಡ್ಡಿ ಅಧಿಕಾರ ಹಸ್ತಾಂತರದ ಪ್ರಕ್ರಿಯೆಯ ದಿನಗಳನ್ನು ಬದಲಾಯಿಸಲಾಗುವುದಿಲ್ಲ. ಅದರಂತೆ ಈ ಬಾರಿ ನವೆಂಬರ್ 3ರಂದು ಅಮೆರಿಕನ್ನರು ತಂತಮ್ಮ ರಾಜ್ಯಗಳಲ್ಲಿ ಎಲೆಕ್ಟೊರಲ್ ಕಾಲೇಜ್​ನ ಸದಸ್ಯರನ್ನು ಆಯ್ಕೆ ಮಾಡಿದರು. ಆ ಸದಸ್ಯರು ಡಿಸೆಂಬರ್ 14ರಂದು ಅಧ್ಯಕ್ಷರನ್ನು ಆಯ್ಕೆ ಮಾಡಿದರು. ಜನವರಿ 6ರಂದು ಗೊಂದಲ-ಅರಾಜಕತೆ ನಡುವೆಯೂ ಕಾಂಗ್ರೆಸ್​ನ ಜಂಟಿ ಅಧಿವೇಶನ ಹೊಸ ಅಧ್ಯಕ್ಷರ ಆಯ್ಕೆಯನ್ನು ಅಧಿಕೃತವಾಗಿ ದೃಢೀಕರಿಸಿ, 1845ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿರುವಂತೆ ಇಂದು ಅಂದರೆ ಜನವರಿ 20ರಂದು ಅಮೆರಿಕದ ನಲವತ್ತಾರನೇ ಅಧ್ಯಕ್ಷ್ಷರಾಗಿ ಜೋ ಬೈಡೆನ್ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಜಾಗತಿಕ ಇತಿಹಾಸದ ಗತಿಯನ್ನು ಬಹುಪಾಲು ನಿರ್ದೇಶಿಸುತ್ತಿರುವ ಅಮೆರಿಕದ ಚುಕ್ಕಾಣಿ ಇನ್ನು ನಾಲ್ಕು ವರ್ಷಗಳವರೆಗೆ ಡೆಮೋಕ್ರಾಟಿಗರ ಕೈಯಲ್ಲಿ. ಇದು ವಾಸ್ತವ. ಹೀಗಾಗಿ ಹೊಸ ಅಧ್ಯಕ್ಷರು ಅಮೆರಿಕದ ವಿದೇಶನೀತಿಯನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಬಹುದೆಂಬ ನಿರೀಕ್ಷೆ, ಭರವಸೆ, ಆತಂಕ ಜಗತ್ತಿನೆಲ್ಲೆಡೆ ಮನೆಮಾಡಿದೆ. ನಾವೂ ಪ್ರತಿಷ್ಠಿತ ‘ಫಾರಿನ್ ಅಫೇರ್ಸ್’ ನಿಯತಕಾಲಿಕದ ಮಾರ್ಚ್-ಏಪ್ರಿಲ್, 2020 ಸಂಚಿಕೆಯಲ್ಲಿ ಬೈಡೆನ್ ಬರೆದ ‘America Must Lead Again: Rescuing US Foreign Policy After Trump‘ ಎಂಬ ದೀರ್ಘ ಲೇಖನದಲ್ಲಿ ಅವರು ಹೇಳಿರುವ ಮಾತುಗಳಿಂದಲೇ ನಮ್ಮ ಅವಲೋಕನವನ್ನೂ ಆರಂಭಿಸೋಣ.

    ಅಧ್ಯಕ್ಷರಾಗಿ ಬರಾಕ್ ಒಬಾಮ ಮತ್ತು ಉಪಾಧ್ಯಕ್ಷರಾಗಿ ತಾವು ನಾಲ್ಕು ವರ್ಷಗಳ ಹಿಂದೆ ಅಧಿಕಾರ ತ್ಯಜಿಸಿದಂದಿನಿಂದೀಚೆಗೆ ಜಾಗತಿಕ ರಂಗದಲ್ಲಿ ಅಮೆರಿಕದ ವಿಶ್ವಾಸಾರ್ಹತೆ ಮತ್ತು ಪ್ರಭಾವ ಕುಗ್ಗಿಹೋಗಿದೆಯೆನ್ನುವುದು ಬೈಡೆನ್ ಲೇಖನದಲ್ಲಿ ತೋಡಿಕೊಂಡಿರುವ ಅಳಲು. ಆರು ತಿಂಗಳ ನಂತರ ಜರುಗಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಆಯ್ಕೆಯಾಗುವುದು ನಿಶ್ಚಿತ ಎಂದು ಆಗಲೇ ಸೂಚನೆ ನೀಡುತ್ತ ಬೈಡೆನ್, ‘ಜನವರಿ 2021ರಲ್ಲಿ ನಾನು ಅಧ್ಯಕ್ಷನಾಗಿ ನೀಡಲಿರುವ ಭಾಷಣದಲ್ಲಿ, ಮುರಿದುಹೋಗಿರುವ ಅಮೆರಿಕದ ವಿದೇಶಾಂಗ ನೀತಿಯ ಚೂರುಗಳನ್ನು ಆಯ್ದುಕೊಳ್ಳುವುದು ಅತ್ಯಂತ ಪ್ರಯಾಸದ ಕೆಲಸವಾಗಿರುತ್ತದೆ’ ಎಂದು ಬರೆದಿದ್ದಾರೆ. ಅದರರ್ಥ ಟ್ರಂಪ್ ಹಾಳುಮಾಡಿರುವ ಅಮೆರಿಕದ ವಿದೇಶನೀತಿಯನ್ನು ಮತ್ತೆ ಸರಿಪಡಿಸುವುದು ತಮಗೆಷ್ಟು ದುಸ್ತರ ಎಂದು ಅಲವತ್ತುಕೊಂಡಿದ್ದಾರೆ. ಇದು ನನಗೆ ನೆನಪಿಸುವುದು ನಲವತ್ತು ವರ್ಷಗಳ ಹಿಂದೆ, ನಾಲ್ಕು ವರ್ಷಗಳ ಡೆಮೋಕ್ರಾಟಿಕ್ ಪಕ್ಷದ ಜಿಮ್ಮಿ ಕಾರ್ಟರ್ ಆಡಳಿತದ ನಂತರ, ಇದೇ ದಿನ ಅಧಿಕಾರ ವಹಿಸಿಕೊಂಡ ರಿಪಬ್ಲಿಕನ್ ಅಭ್ಯರ್ಥಿ ರೊನಾಲ್ಡ್ ರೀಗನ್ ತಾವು ‘ಅಮೆರಿಕದ ಗೌರವವನ್ನು ಗಟಾರದಿಂದ ಮೇಲೆತ್ತಬೇಕಾಗಿದೆ’ ಎಂದು ಹೇಳಿದ್ದನ್ನು. ಬೈಡೆನ್ ಅಂತಹದೇ ‘ಮಹತ್ತರ ಜವಾಬ್ದಾರಿ’ಯನ್ನು ತಮ್ಮ ಮೇಲೆ ಹೇರಿಕೊಂಡಿರುವ ಸೂಚನೆ ನೀಡಿ ಆ ಮೂಲಕ ರೀಗನ್​ರ ಮಾತಿಗೆ ಪ್ರತಿಕ್ರಿಯೆ ನೀಡುತ್ತಿರುವಂತೆ ಕಾಣುತ್ತಾರೆ. ಅದರಂತೆ ಅಮೆರಿಕವನ್ನು ಮತ್ತೆ ಪ್ರಭಾವಶಾಲಿಯಾಗಿಸಲು ತಾವೇನು ಮಾಡಬಲ್ಲೆವೆಂದು ಬೈಡೆನ್ ಹೇಳುತ್ತಾರೆ. ಮೊದಲಿಗೆ ಡೊನಾಲ್ಡ್ ಟ್ರಂಪ್ ಮೇಲೆ ಬೈಡೆನ್ ಹೊರಿಸುವ ಪ್ರಮುಖ ಆಪಾದನೆಗಳನ್ನು ನೋಡೋಣ.

    • ತಮ್ಮ ನೀತಿಗಳಿಂದ ಟ್ರಂಪ್ ಅಮೆರಿಕದ ವೈರಿಗಳನ್ನು ಬಲಶಾಲಿಗೊಳಿಸಿದ್ದಾರೆ.
    • ಉತ್ತರ ಕೊರಿಯಾದಿಂದ ಇರಾನ್​ವರೆಗೆ, ಸಿರಿಯಾದಿಂದ ಅಫ್ಘಾನಿಸ್ತಾನ, ವೆನೆಜ್ಯುಯೇಲಾವರೆಗೆ ಎಲ್ಲ ದೇಶಗಳ ವಿಷಯದಲ್ಲಿ ತೋರಿಸಲು ಟ್ರಂಪ್ ಬಳಿ ಏನೇನೂ ಸಾಧನೆ ಇಲ್ಲ.
    • ಜಾಗತಿಕ ರಂಗದಲ್ಲಿ ಭ್ರಷ್ಟಾಚಾರಿ ಕುನಾಯಕರ ಜತೆಗೂಡಿ ಟ್ರಂಪ್ ಪ್ರಜಾಪ್ರಭುತ್ವವನ್ನು ನಿರ್ಲಕ್ಷಿಸಿದ್ದಾರೆ.

    ಇದೇ ಉಸಿರಿನಲ್ಲಿ ಅವರು, ಪ್ರಜಾಪ್ರಭುತ್ವವಾದಿಗಳ ಜತೆಗೂಡಿ ಅಮೆರಿಕ ಶೀತಲಸಮರದಲ್ಲಿ ವಿಜಯಿಯಾಯಿತು ಎಂದು ಹೇಳಿ, ಅಮೆರಿಕ ಅಷ್ಟೇ ಅಲ್ಲ ಇತ್ತೀಚಿನ ಜಾಗತಿಕ ಇತಿಹಾಸದ ಬಗ್ಗೇ ತಮಗಿರುವ ಸೀಮಿತ ಅರಿವಿನ ಪರಿಚಯ ಮಾಡಿಕೊಡುತ್ತಾರೆ. ಸೋವಿಯತ್ ಯೂನಿಯನ್ ಜತೆಗಿನ ಶೀತಲ ಸಮರದಲ್ಲಿ ಅಮೆರಿಕ ಪಶ್ಚಿಮದ ತುದಿಯಲ್ಲಿನ ಚಿಲಿಯ ಅಗಸ್ಟೋ ಪಿನೋಷೆಯಿಂದ ಹಿಡಿದು ಪೂರ್ವದಂಚಿನ ಪಿಲಿಫೀನ್ಸ್​ನ ಫರ್ಡಿನೆಂಡ್ ಮಾಕೋಸ್​ವರೆಗೆ ಜಗತ್ತಿನಾದ್ಯಂತ ಅನೇಕ ಸರ್ವಾಧಿಕಾರಿಗಳನ್ನು ಸಾಕಿ ಕೊಬ್ಬಿಸಿದ್ದನ್ನು ಬೈಡೆನ್ ಮರೆಯುತ್ತಾರೆ. ಪಾಕಿಸ್ತಾನದಲ್ಲೇ ಸರ್ವಾಧಿಕಾರಿಗಳ ಬೆನ್ನಿಗೆ ಅಮೆರಿಕ ನಿಂತದ್ದನ್ನು, ಅವರಿಗೆ ಹೇರಳ ಶಸ್ತ್ರಾಸ್ತ್ರ ಒದಗಿಸಿದ್ದನ್ನು, ಅವರೆಲ್ಲರ ಜನವಿರೋಧಿ ಕುಕೃತ್ಯಗಳ ಬಗ್ಗೆ ಒಂದು ಮಾತೂ ಆಡದಿದ್ದುದನ್ನು ಮರೆಯಲು ಸಾಧ್ಯವೇ? ಜತೆಗೆ, ಟ್ರಂಪ್ ಜಾಗತಿಕವಾಗಿ ಭ್ರಷ್ಟಾಚಾರಿಗಳ ಜತೆಗೂಡಿ ಪ್ರಜಾಪ್ರಭುತ್ವವನ್ನು ಅವನತಿಗೀಡುಮಾಡಿದ್ದಾರೆ ಎಂದೂ ಬೈಡೆನ್​ರ ಆರೋಪ.

    ಸರಿ, ವಿಶ್ವದಾದ್ಯಂತ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಬೈಡೆನ್ ಹಾಕಿಕೊಂಡಿರುವ ಕಾರ್ಯಯೋಜನೆಗಳೇನೆಂದು ನೋಡೋಣ. ಅಧಿಕಾರ ವಹಿಸಿಕೊಂಡ ಒಂದು ವರ್ಷದಲ್ಲಿ ಜಾಗತಿಕ ಪ್ರಜಾಪ್ರಭುತ್ವವಾದಿಗಳ ಸಮ್ಮೇಳನವೊಂದನ್ನು ಅಮೆರಿಕದಲ್ಲಿ ಆಯೋಜಿಸುವುದು ಬೈಡೆನ್​ರ ಉದ್ದೇಶ. ಅಲ್ಲಿಗೆ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಆಹ್ವಾನಿತರಾಗುತ್ತಾರೆಯೋ ಇಲ್ಲವೋ ಕಾದುನೋಡಬೇಕು. 370ನೇ ವಿಧಿಯ ರದ್ದತಿ, ಸಿಎಎ ವಿರುದ್ಧ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ವಿದೇಶಾಂಗ ಕಾರ್ಯದರ್ಶಿಯಾಗಲಿರುವ ಆಂಟನಿ ಬ್ಲಿಂಕನ್ ಮಾತಾಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಭಾರತ ಸರ್ಕಾರವನ್ನು ಪ್ರಜಾಪ್ರಭುತ್ವವಾದಿಯಲ್ಲ ಎಂದು ಬೈಡೆನ್ ಆಡಳಿತ ಭಾವಿಸಿದರೆ ನಾವದಕ್ಕೆ ಅಚ್ಚರಿ ಪಡಬೇಕಾಗಿಲ್ಲ.

    ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ಯೋಜನೆಯಡಿಯಲ್ಲಿ ಚೀನಾವನ್ನು ಎದುರಿಸುವ ಮಾತನ್ನೂ ಬೈಡೆನ್ ಆಡಿದ್ದಾರೆ. ಚೀನಾ ದುಷ್ಟಶಕ್ತಿಯಾಗಿ ಬೆಳೆದಿರುವುದನ್ನು ಗುರುತಿಸುವ ಬೈಡೆನ್ ಅದರ ವಿರುದ್ಧ ಟ್ರಂಪ್ ಆಡಳಿತ ತೆಗೆದುಕೊಂಡ ಕ್ರಮಗಳನ್ನೂ, ಆ ಮೂಲಕ ಆ ದುಷ್ಟಶಕ್ತಿಯ ರೆಕ್ಕೆಪುಕ್ಕಗಳನ್ನು ಸಾಕಷ್ಟು ಕತ್ತರಿಸಿರುವುದನ್ನೂ ಮಾನ್ಯಮಾಡುವುದರಲ್ಲಿ ವಿಫಲರಾಗುತ್ತಾರೆ. ಚೀನಾದ ಜತೆ ಅಗತ್ಯ ವಿಭಾಗಗಳಲ್ಲಿ ಹೊಂದಾಣಿಕೆ ಮತ್ತು ಸಹಕಾರದ ನೀತಿ ಅನುಸರಿಸುತ್ತ, ಕಂಟಕಕಾರಿ ವಿಭಾಗಗಳಲ್ಲಿ ಎದುರಿಸುವ ಬೈಡೆನ್​ರ ಲೆಕ್ಕಾಚಾರ ಆಸಕ್ತಿಕರವಾಗಿದೆ. ಇಂದು ವಿಶ್ವದ ನಿವ್ವಳ ರಾಷ್ಟ್ರೀಯ ಉತ್ಪಾದನೆ(ಜಿಡಿಪಿ)ಯಲ್ಲಿ ಅಮೆರಿಕದ ಪಾಲು ಶೇ.25 ಹಾಗೂ ಇತರ ಪ್ರಜಾಪ್ರಭುತ್ವವಾದಿ ದೇಶಗಳ ಒಟ್ಟು ಜಿಡಿಪಿ ಶೇ.25. ಎರಡನ್ನೂ ಒಟ್ಟುಗೂಡಿಸಿದರೆ ಶೇ.50 ಆಗಿ ಜಾಗತಿಕ ಜಿಡಿಪಿಯ ಅರ್ಧದಷ್ಟಾಗುತ್ತದೆ. ಪ್ರಜಾಪ್ರಭುತ್ವವಾದಿ ದೇಶಗಳೆಲ್ಲವೂ ಒಟ್ಟುಗೂಡಿ ಚೀನಾದ ಪ್ರಾಬಲ್ಯ ಕುಗ್ಗಿಸಲು ಸಾಧ್ಯವಿದೆ ಎಂದು ಬೈಡೆನ್​ರ ನಿರೀಕ್ಷೆ. ಮುಂದುವರಿದು ಬೈಡೆನ್ ದಕ್ಷಿಣ ಕೊರಿಯಾ, ಜಪಾನ್ ಮತ್ತು ಆಸ್ಟ್ರೇಲಿಯಾಗಳೊಂದಿಗೆ ಅಮೆರಿಕದ ಒಪ್ಪಂದಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಜತೆಗೇ ಭಾರತ ಮತ್ತು ಇಂಡೋನೇಷ್ಯಾಗಳ ಜತೆಗೂ ಘನಿಷ್ಟ ಸಂಬಂಧ ಸ್ಥಾಪಿಸಲು ಮಹತ್ವ ನೀಡುವುದಾಗಿ ಬರೆದಿದ್ದಾರೆ. ಒಟ್ಟಾರೆಯಾಗಿ ಟ್ರಂಪ್ ಏನೂ ಒಳ್ಳೆಯದು ಮಾಡಿಲ್ಲ, ಅವರು ಹಾಳುಗೆಡವಿದ್ದನ್ನೆಲ್ಲ ಸರಿಪಡಿಸುವುದು ತಮ್ಮ ಜವಾಬ್ದಾರಿಯಾಗಿರುತ್ತದೆ ಎನ್ನುವುದು ಬೈಡೆನ್​ರ ಮಾತುಗಳ ಒಟ್ಟಂಶ.

    ಬೈಡೆನ್ ಆ ಲೇಖನ ಬರೆದದ್ದು ಕೋವಿಡ್ ಮಹಾಮಾರಿಯ ಆರಂಭದ ದಿನಗಳಲ್ಲಿ. ಈ ಒಂಬತ್ತು ತಿಂಗಳುಗಳಲ್ಲಿ ಜಗತ್ತು ಸಾಕಷ್ಟು ಅಪಾಯಕಾರಿ ಬೆಳವಣಿಗೆಗಳನ್ನು ಕಂಡಿದೆ. ಚೀನಾದ ಕಂಟಕಕಾರಿ ನೀತಿ ಕರೊನಾವೈರಸ್ ಸೃಷ್ಟಿ ಮತ್ತು ಹರಡುವಿಕೆಗಷ್ಟೇ ಸೀಮಿತವಾಗಿಲ್ಲ ಎಂದು ಜಗತ್ತು ಗುರುತಿಸಿದೆ. ಮಹಾಮಾರಿ ಸಂದರ್ಭದಲ್ಲೂ ಭಾರತದೊಂದಿಗೆ ಗಡಿಘರ್ಷಣೆ; ಜಪಾನ್ ಮತ್ತು ತೈವಾನ್​ಗೆ ಬೆದರಿಕೆ ಮತ್ತು ಆಸ್ಟ್ರೇಲಿಯಾ ವಿರುದ್ಧ ಆರ್ಥಿಕ ಸಮರ ಸಾರುವ ಮೂಲಕ ಅದು ಮತ್ತಷ್ಟು ಜಗತ್​ಕಂಟಕವಾಗಿ ಬೆಳೆಯುವ ಸೂಚನೆಯನ್ನೂ ನೀಡಿದೆ. ಅದನ್ನು ಹದ್ದುಬಸ್ತಿನಲ್ಲಿಡಲು ಟ್ರಂಪ್ ತೀವ್ರತರದ ಕ್ರಮಗಳನ್ನು ಕೈಗೊಂಡದ್ದು ಸರ್ವವಿದಿತ. ನಿಜ ಹೇಳಬೇಕೆಂದರೆ ಟ್ರಂಪ್ ಅದೆಲ್ಲವನ್ನೂ ಆರಂಭಿಸಿದ್ದು ಕೋವಿಡ್ ಕಾಲಿಡುವುದಕ್ಕೆ ಎರಡು ವರ್ಷಗಳಿಗೂ ಮೊದಲೇ. ಚೀನಾದ ಅಗಾಧ ಆರ್ಥಿಕ ಶಕ್ತಿಯೇ ಅದು ಜಾಗತಿಕ ಕಂಟಕವಾಗಿ ಬೆಳೆಯಲು ಕಾರಣ ಎಂದು ಸರಿಯಾಗಿಯೇ ಗುರುತಿಸಿದ ಟ್ರಂಪ್ ಚೀನೀ ವಸ್ತುಗಳ ಮೇಲಿನ ಆಮದು ಶುಲ್ಕಗಳನ್ನು ಹಂತಹಂತವಾಗಿ ಏರಿಸುತ್ತ, ಅವು ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸದಂತೆ, ಅಷ್ಟರ ಮಟ್ಟಿಗೆ ಚೀನೀ ಆದಾಯ ಕುಗ್ಗುವಂತೆ ಮಾಡಿದ್ದಾರೆ. ಅವರ ಯೋಜನೆಗಳಿಗೆ ಬೈಡೆನ್ ಬಹುವಾಗಿ ಪ್ರಶಂಸಿಸುವ ಯುರೋಪಿಯನ್ ನ್ಯಾಟೋ ಸದಸ್ಯ ದೇಶಗಳು ಸಹಕಾರ ನೀಡಲಿಲ್ಲ. ಅವೆಲ್ಲವೂ ಪಾಠ ಕಲಿತು ಟ್ರಂಪ್​ರ ಜತೆ ಕೈಗೂಡಿಸಲು ಕೋವಿಡ್ ಮಹಾಮಾರಿಯೇ ಬರಬೇಕಾಯಿತು. ಅಂದರೆ ಯಾವ ಯುರೋಪಿಯನ್ ಪ್ರಜಾಪ್ರಭುತ್ವವಾದಿ ದೇಶಗಳ ಜತೆ ಅಮೆರಿಕ ಸೇರಬೇಕೆಂದು ಬೈಡೆನ್ ಹೇಳುತ್ತಾರೋ ಆ ದೇಶಗಳು ಚೀನಾ ಪರವಾಗಿ, ಅಮೆರಿಕದ ವಿರುದ್ಧವಾಗಿ ನಿಂತಿದ್ದವು ಮತ್ತು ಅವುಗಳ ಸಹಕಾರವಿಲ್ಲದೇ ಟ್ರಂಪ್ ಚೀನಾವನ್ನು ಮಂಡಿಯೂರಿಸಿದ್ದರು! ಟ್ರಂಪ್ ಹಾಗೆ ಮಾಡದೇ ಹೋಗಿದ್ದರೆ ಕೋವಿಡ್ ಸಂಕ್ರಮಣದ ದಿನಗಳಲ್ಲಿ ಚೀನಾದ ಘಾತಕ ಪ್ರವೃತ್ತಿ ಮತ್ತಷ್ಟು ಉಲ್ಬಣಗೊಂಡು ಸುತ್ತಲಿನ ದೇಶಗಳ ಹಾಗೂ ಅಮೆರಿಕದ ಹಿತಾಸಕ್ತಿಗಳು ತೀವ್ರತರ ಹೊಡೆತಕ್ಕೆ ಸಿಕ್ಕಿಬೀಳುತ್ತಿದ್ದುದು ನಿಶ್ಚಿತ.

    ಚೀನಾವನ್ನು ಕಟ್ಟಿಹಾಕುವ ಕ್ರಮಗಳನ್ನು ಇನ್ನಷ್ಟು ಉಗ್ರಗೊಳಿಸುವ ಜತೆಗೆ ಹಾಂಕಾಂಗ್, ಟಿಬೆಟ್ ಮತ್ತು ಉಯ್ಘರ್ ಷಿನ್​ಜಿಯಾಂಗ್ ಪ್ರಾಂತ್ಯದಲ್ಲಿ ಚೀನೀ ಕಮ್ಯೂನಿಸ್ಟ್ ಆಡಳಿತದ ದಮನಕಾರಿ ನೀತಿಗಳ ವಿರುದ್ಧವೂ ಟ್ರಂಪ್ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಈ ಬಗ್ಗೆ ಒಬಾಮ-ಬೈಡೆನ್ ರೆಕಾರ್ಡ್ ಹೇಗಿದೆ ಎನ್ನುವುದಕ್ಕೆ ಒಂದೇ ಉದಾಹರಣೆ ಸಾಕು. 2015ರಲ್ಲಿ ಚೀನೀ ಆಳ್ವಿಕೆಯಲ್ಲಿ ಟಿಬೆಟನ್ನರ ಸಂಕಷ್ಟಗಳನ್ನು ತೋಡಿಕೊಂಡು, ‘ನಮಗೆ ಸಹಾಯ ಮಾಡಿ’ ಎಂದು ದಲಾಯಿ ಲಾಮ ಅಧ್ಯಕ್ಷ ಒಬಾಮ ಮುಂದೆ ಗೋಳುಗರೆದಾಗ ಆ ಡೆಮೋಕ್ರಾಟಿಕ್ ಅಧ್ಯಕ್ಷ ಹೇಳಿದ್ದು ‘ನೀವು ಚೀನೀ ಸರ್ಕಾರದ ಜತೆ ಮಾತಾಡಿ’ ಎಂದು! ದಲಾಯಿ ಲಾಮಾ ಬೇಡಿಕೊಳ್ಳದಿದ್ದರೂ ಟ್ರಂಪ್ ಟಿಬೆಟನ್ನರ ಸಹಾಯಕ್ಕೆ ನಿಂತಿದ್ದಾರೆ.

    ಅಧ್ಯಕ್ಷೀಯ ಚುನಾವಣಾ ಪ್ರಚಾರ ಮತ್ತು ಡಿಬೇಟ್​ಗಳಲ್ಲಿ ಬೈಡೆನ್ ಚೀನಾ ಕುರಿತಾಗಿ ಮಾತಾಡಿದರೇನೋ ನಿಜ. ಆದರೆ ಅದರಲ್ಲಿ ಹೊಸತೇನೂ ಇರಲಿಲ್ಲ. ಚೀನಾ ವಿರುದ್ಧ ತಾವು ಟ್ರಂಪ್ ತೆಗೆದುಕೊಂಡದ್ದಕ್ಕಿಂತಲೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳುತ್ತಲೇ, ಆ ಕಮ್ಯೂನಿಸ್ಟ್ ದೇಶದೊಂದಿಗೆ ಸಹಕಾರವನ್ನೂ ಬಯಸುವುದಾಗಿ ಹೇಳಿ ವಿರೋಧಾಭಾಸದ ಚಿತ್ರಣ ನೀಡಿದರು.

    ಇದೆಲ್ಲದರಿಂದ ಸ್ಪಷ್ಟವಾಗುವುದು ಮೂರು ಸಂಗತಿಗಳು- 1. ಬೈಡೆನ್ ತಾವು ಏನೇನು ಮಾಡಹೊರಡುವುದಾಗಿ ಹೇಳುತ್ತಿದ್ದಾರೋ ಅದೆಲ್ಲವನ್ನೂ ಟ್ರಂಪ್ ಈಗಾಗಲೇ ಸಮರ್ಪಕವಾಗಿ ಜಾರಿಗೆ ತಂದಿದ್ದಾರೆ. 2. ಚೀನಾವನ್ನು ಕಟ್ಟಿಹಾಕುವ ಹಾಗೂ ಜಾಗತಿಕವಾಗಿ ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಟ್ರಂಪ್ ಅನುಸರಿಸಿರುವ ಕ್ರಮಗಳನ್ನು ಸಾರ್ವಜನಿಕವಾಗಿ ಗುರುತಿಸಲು ನಿರಾಕರಿಸುವ ಚಾಲಾಕಿತನವನ್ನು ಬೈಡೆನ್ ಪ್ರದರ್ಶಿಸಿ, ಅಷ್ಟರಮಟ್ಟಿಗೆ ಜಗತ್ತಿನ ಕಣ್ಣಿಗೆ ಮಣ್ಣೆರಚಲು ನೋಡಿದ್ದಾರೆ. 3. ಈಗ ಬೈಡೆನ್ ತಮ್ಮ ಮಾತಿನ ಪ್ರಕಾರವೇ ನಡೆಯಬೇಕಾದರೆ ಟ್ರಂಪ್ ಆರಂಭಿಸಿರುವುದನ್ನು ಮುಂದುವರಿಸಿಕೊಂಡುಹೋಬೇಕಷ್ಟೇ. ಅಂಥ ಸ್ಥಿತಿಯನ್ನು ಟ್ರಂಪ್ ಸಾರ್ವಜನಿಕವಾಗಿಯೇ ತಂದಿಟ್ಟೂಬಿಟ್ಟಿದ್ದಾರೆ.

    ಚೀನಾ ಕುರಿತಂತೆ ತಾವು 2017ರಲ್ಲೇ ರೂಪಿಸಿದ ರಹಸ್ಯ ದಾಖಲೆಯೊಂದನ್ನು ಟ್ರಂಪ್ ತಾವು ಅಧಿಕಾರ ತ್ಯಜಿಸುವ ವಾರಕ್ಕೆ ಮೊದಲು ಬಹಿರಂಗಗೊಳಿಸಿದ್ದಾರೆ. “The United States Strategic Framework for the Indo-Pacific” ಎಂಬ ಶೀರ್ಷಿಕೆಯ ಆ ನೀತಿಸಂಹಿತೆ ಇಂಡೋ-ಪೆಸಿಫಿಕ್ ವಲಯದಲ್ಲಿ ಕಂಟಕಕಾರಿಯಾಗಿ ಬೆಳೆಯುತ್ತಿರುವ ಚೀನಾವನ್ನು ಕಟ್ಟಿಹಾಕಲು ಏನೇನು ಕ್ರಮ ಕೈಗೊಳ್ಳಬೇಕೆಂದು ಸ್ಷಷ್ಟವಾಗಿ ಹೇಳುತ್ತದೆ. ಇದುವರೆಗೆ ಚೀನಾ ವಿರುದ್ಧ ಟ್ರಂಪ್ ಸರ್ಕಾರ ಕೈಗೊಂಡ ಎಲ್ಲ ಕ್ರಮಗಳೂ ಆ ನೀತಿಸಂಹಿತೆಗನುಗುಣವಾಗಿಯೇ ಇವೆ. ಸರ್ಕಾರಿ ನೀತಿಯಾದ ಇದು ಈಗ ಸಾರ್ವಜನಿಕವಾಗಿರುವುದರಿಂದ ಇದಕ್ಕೆ ವಿರುದ್ಧವಾದ ನೀತಿಗಳನ್ನು ಕಾರಣವಿಲ್ಲದೇ ಏಕಾಏಕಿ ರೂಪಿಸುವ ಸ್ವಾತಂತ್ರ್ಯ ಬೈಡೆನ್ ಆಡಳಿತಕ್ಕೆ ಇಲ್ಲದಂತಾಗಿದೆ. ಇದು ಹೊರಬರುತ್ತಿದ್ದಂತೇ ಚೀನಿ ವಿದೇಶಮಂತ್ರಿ ವಾಂಗ್ ಯಿ ಮತ್ತು ವಕ್ತಾರ ಜಾವೋ ಲಿಜಿಯಾಂಗ್ ಇಬ್ಬರೂ ಪ್ರತಿಕ್ರಿಯಿಸಿದ್ದಾರೆ. ಬೈಡೆನ್ ತಮಗೆ ಅನುಕೂಲಕರವಾಗಿ ವರ್ತಿಸಬಹುದೆಂದು ನಿರೀಕ್ಷಿಸಿದ್ದ ಚೀನೀಯರು ಈಗ ಅದೇ ಟ್ರಂಪ್ ನೀತಿಯನ್ನೇ ಅನುಸರಿಸಬೇಕಾದ ಒತ್ತಡಕ್ಕೆ ಬೈಡೆನ್ ಸಿಲುಕಿಹೋಗಬಹುದಾದ ಸಾಧ್ಯತೆ ಕಂಡು ಹತಾಶರಾಗಿ ಬೈಡೆನ್​ಗೆ ಬುದ್ಧಿಮಾತನ್ನೂ ಹೇಳಿದ್ದಾರೆ.

    ಇಲ್ಲಿ ತಮ್ಮ ವಿದೇಶಾಂಗ ಕಾರ್ಯದರ್ಶಿಯಾಗಿ ಆಂಟನಿ ಬ್ಲಿಂಕನ್​ರನ್ನು ಬೈಡೆನ್ ಆರಿಸಿಕೊಂಡಿರುವುದು ಕುತೂಹಲಕಾರಿ. ಬರಾಕ್ ಒಬಾಮ ಕಾಲದಲ್ಲಿ ಉಪವಿದೇಶಾಂಗ ಕಾರ್ಯದರ್ಶಿಯಾಗಿದ್ದ ಬ್ಲಿಂಕನ್​ರು ಒಬಾಮ-ಬೈಡೆನ್​ರ ಹಲವಾರು ನೀತಿಗಳ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದರು. ಚೀನಾ ಬಗ್ಗೆ ಅವರ ನಿಲುವುಗಳು ಟ್ರಂಪ್-ಪಾಂಪಿಯೋ ನೀತಿಗಳಿಗೆ ಹೆಚ್ಚು ಹತ್ತಿರವಾಗಿವೆ. ಇದೆಲ್ಲದರ ಅರ್ಥ ಟ್ರಂಪ್​ರ ನೀತಿಗಳನ್ನೇ ತನ್ನವೇ ಹೊಸ ನೀತಿಗಳೆಂದು ಹೇಳಿಕೊಂಡು ಬೈಡೆನ್ ಮುಂದುವರಿಸಬಹುದು.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts