More

    ಸಕಾಲಿಕ | ಇಂಧನ ಬೆಲೆಯೂ, ಧರ್ಮಸಂಕಟವೂ…

    ಸಕಾಲಿಕ | ಇಂಧನ ಬೆಲೆಯೂ, ಧರ್ಮಸಂಕಟವೂ...ಅಕ್ಷರಶಃ ಇದೊಂದು ಧರ್ಮಸಂಕಟವೇ. ಎಲ್ಲರೂ ಬೆಲೆ ಇಳಿಯಬೇಕು ಎನ್ನುವವರೇ. ಆದರೆ ಮೊದಲು ಈ ‘ಸಾಹಸ’ ಮಾಡುವವರು ಯಾರು ಎಂಬುದು ಪ್ರಶ್ನೆ. ‘ಇಂಧನ ದರ ಇಳಿಯುವುದು ಯಾವಾಗ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ನಿಜಕ್ಕೂ ಇದೊಂದು ಧರ್ಮಸಂಕಟದ ಪ್ರಶ್ನೆಯಾಗಿದೆ. ಸರ್ಕಾರಗಳಿಗೆ ಪೆಟ್ರೋಲ್ ಬಹುದೊಡ್ಡ ಆದಾಯ ಮೂಲ ಎಂಬುದರಲ್ಲಿ ಅನುಮಾನವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತುಕತೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬೇಕು. ಒಟ್ಟಿನಲ್ಲಿ ಗ್ರಾಹಕರು ಇಂಧನಕ್ಕೆ ಕಡಿಮೆ ದರ ನೀಡುವಂತಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ’- ಇದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇರಮಾತು. ಈ ವಿಚಾರದಲ್ಲಿ ಅವರು ಮುಚ್ಚುಮರೆ ಮಾಡುತ್ತಿಲ್ಲ. ವಾಸ್ತವವನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಿಷಯ ಸರಳ ಮತ್ತು ಸ್ಪಷ್ಟ.

    ಕೇಂದ್ರ ಸರ್ಕಾರವಿರಲಿ ಅಥವಾ ರಾಜ್ಯ ಸರ್ಕಾರಗಳಿರಲಿ, ಎಲ್ಲರಿಗೂ ಇಂಧನದ ಮೇಲಿನ ತೆರಿಗೆ ಬೊಕ್ಕಸದ ದೊಡ್ಡ ಆದಾಯ ಮೂಲಗಳಲ್ಲಿ ಒಂದು. ಇಂಧನದ ಮೇಲಣ ತೆರಿಗೆಯನ್ನು ತಗ್ಗಿಸಿದರೆ ಸಹಜವಾಗಿಯೇ ದರವೂ ಇಳಿಯುತ್ತದೆ. ಆದರೆ ಹೀಗೆ ಮಾಡಿದಲ್ಲಿ ಸರ್ಕಾರಗಳ ಆದಾಯ ಖೋತಾ ಆಗುತ್ತದೆ. ಅದರಲ್ಲೂ ಈ ಕರೊನಾ ಸಂಕಟ ಕಾಲದಲ್ಲಿ ಮೊದಲೇ ಬೊಕ್ಕಸ ಬಸವಳಿದಿರುವಾಗ ಹೀಗೆ ಮಾಡಲು ಯಾರುತಾನೆ ಮುಂದಾಗುತ್ತಾರೆ? ಹಾಗೇನಾದರೂ ವರಮಾನ ತಗ್ಗಿದಲ್ಲಿ ಇತರ ಯೋಜನೆಗಳ ಬಜೆಟ್ ಅನ್ನು ಕಟ್ ಮಾಡಬೇಕಾಗುತ್ತದೆ ಅಥವಾ ಅಂದುಕೊಂಡ ಯೋಜನೆಗಳನ್ನು, ಜನರಿಗೆ ನೀಡಿದ ಭರವಸೆಗಳನ್ನು ಜಾರಿಗೆ ತರಲು ಆಗುವುದಿಲ್ಲ. ಆಗ ಜನರ ಅಸಮಾಧಾನಕ್ಕೆ ತುತ್ತಾಗಬೇಕಾಗುತ್ತದೆ. ಹೀಗಾಗಿ ಒಂದು ಲೆಕ್ಕದಲ್ಕಿ ಇದು ಬೆಕ್ಕಿಗೆ ಗಂಟೆ ಕಟ್ಟಿದಂತೆ. ಸುಮ್ಮನೆ ಒಂದು ಲೆಕ್ಕ ಗಮನಿಸೋಣ. ತೈಲದ ಮೇಲಿನ ವ್ಯಾಟ್, ಅಬಕಾರಿ ಸುಂಕ, ಸೆಸ್ ಸೇರಿ ಪ್ರತಿ ಲೀಟರ್ ಬೆಲೆಯಲ್ಲಿ ಶೇ.61 ಮತ್ತು ಡೀಸೆಲ್ ದರದಲ್ಲಿ ಶೇ.56ರಷ್ಟು ತೆರಿಗೆಯೇ ಆಗುತ್ತದೆ. ಇದಲ್ಲದೆ ಡೀಲರ್ ಕಮಿಷನ್ ಬೇರೆ. ಇವೆಲ್ಲವನ್ನೂ ಬಿಟ್ಟು ನೋಡಿದರೆ, ಪೆಟ್ರೋಲ್ ಮೂಲ ದರ 29-30 ರೂ. ಮತ್ತು ಡೀಸೆಲ್ ಮೂಲ ದರ 38-39 ರೂ. ಆಗುತ್ತದೆ (ಈಗಿನ ದರದ ಲೆಕ್ಕದಲ್ಲಿ). ನಮ್ಮಲ್ಲಿ ಪೆಟ್ರೋಲ್- ಡೀಸೆಲ್ ದರಕ್ಕೂ ಹಾಗೂ ಅಗತ್ಯ ವಸ್ತುಗಳ ದರಕ್ಕೂ ನೇರ ಸಂಬಂಧವಿದೆ. ಅಂದರೆ, ಇಂಧನ ದರ ಹೆಚ್ಚಿಗೆಯಾದಲ್ಲಿ ಅದರ ಪರಿಣಾಮ ಸರಣಿಯಾಗಿ ಕಂಡುಬರುತ್ತದೆ. ಸರಕುಸಾಗಣೆ ದರ ಹೆಚ್ಚಿ ವಸ್ತುಗಳ ಬೆಲೆ ಏರುತ್ತದೆ. ಈಗಂತೂ ಹೆಚ್ಚಿನ ಜನರು ಓಡಾಟಕ್ಕೆ ವಾಹನ ಅವಲಂಬಿಸಿದ್ದಾರೆ. ಒಬ್ಬ ವ್ಯಕ್ತಿ ಕಚೇರಿಗೆ ಹೋಗಲು ದ್ವಿಚಕ್ರ ವಾಹನ ಬಳಸುತ್ತಾನೆ ಎಂದು ಊಹಿಸೋಣ. ಆತ ಕ್ರಮಿಸುವ ಅಂತರ ದಿನಕ್ಕೆ 50 ಕಿಮೀ ಎಂದಿಟ್ಟುಕೊಂಡರೆ, ಸುಮಾರು 100 ರೂಪಾಯಿ ಪೆಟ್ರೋಲಿಗೆ ವ್ಯಯಿಸಬೇಕಾಗುತ್ತದೆ. ಬಡ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಇದು ಭಾರವೇ. ಇಂಧನ ದರದ ಬಗ್ಗೆ ಜನರ ಆಕ್ರೋಶದ ಹಿನ್ನೆಲೆಯಲ್ಲಿ ಕೆಲ ರಾಜ್ಯಗಳು ಅಲ್ಪಸ್ವಲ್ಪ ತೆರಿಗೆ ಕಡಿಮೆ ಮಾಡಿವೆಯಾದರೂ ಇದರಿಂದ ಜನರಿಗೆ ಬಹಳವೇನೂ ಉಳಿಯುತ್ತಿಲ್ಲ.

    ತೈಲ ಬೆಲೆ ಹೆಚ್ಚಳಕ್ಕೆ ಒಪೆಕ್ ನೀತಿ ನಿರ್ಧಾರಗಳೂ ಕಾರಣ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ. ಕರೊನಾ ಸಂಕಟ ಎದುರಾದಾಗ ಒಪೆಕ್ ದೇಶಗಳು ತೈಲ ಉತ್ಪಾದನೆಯನ್ನು ತಗ್ಗಿಸಿದವು. ತೈಲ ಉತ್ಪಾದನೆ ಕಡಿಮೆ ಯಾದಷ್ಟು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಿಗೆಯಾಗುತ್ತದೆ; ತೈಲ ಉತ್ಪಾದನೆ ಹೆಚ್ಚಿದಷ್ಟು ದರ ಕಡಿಮೆಯಾಗುತ್ತದೆ. ಈ ಒಪೆಕ್ ಇದೆಯಲ್ಲ, ಇದೇನು ಕಡಿಮೆ ಅಲ್ಲ. ಜಾಗತಿಕ ಪ್ರಮುಖ ತೈಲ ಉತ್ಪಾದಕ 13 ದೇಶಗಳ ಒಕ್ಕೂಟ. ಜಾಗತಿಕ ತೈಲ ಉತ್ಪಾದನೆಯಲ್ಲಿ ಸರಿಸುಮಾರು ಅರ್ಧದಷ್ಟು ಈ ದೇಶಗಳಲ್ಲೇ ಆಗುತ್ತದೆ. ಅದರಲ್ಲೂ ಅಗಾಧ ತೈಲ ಸಂಪತ್ತಿನ ಮೇಲೆ ಕುಳಿತಿರುವ ಅರಬ್ ದೇಶಗಳು ಈ ಸಂಘಟನೆ ಮೇಲೆ ಹಿಡಿತ ಹೊಂದಿವೆ.

    ಪ್ರಧಾನಮಂತ್ರಿ ನರೇಂದ್ರ ಮೋದಿ ಇನ್ನೂ ಒಂದು ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ಇಂಧನ ಆಮದನ್ನು ಕಡಿಮೆ ಮಾಡಿ, ಸ್ವಾವಲಂಬನೆ ಸಾಧಿಸಿದರೆ ತೈಲ ದರವನ್ನು ನಿಯಂತ್ರಣಕ್ಕೆ ತರಬಹುದು ಎಂಬುದು ಅವರ ಚಿಂತನೆ. ಈ ಕುರಿತಂತೆ ಅವರು ವಿಶಾಲ ನೀಲಿನಕ್ಷೆಯನ್ನೇನೂ ದೇಶದ ಮುಂದೆ ಸಾದರಪಡಿಸಿಲ್ಲವಾದರೂ, ಪರ್ಯಾಯ ಮೂಲ ಹಾಗೂ ಪರಿಸರಸ್ನೇಹಿ ಇಂಧನ ಹೆಚ್ಚಿಸುವ ಬಗ್ಗೆ ಒತ್ತು ನೀಡುವ ಆಲೋಚನೆಯನ್ನು ಹರಿಯಬಿಟ್ಟಿದ್ದಾರೆ. ಹಿಂದಿನ ಸರ್ಕಾರಗಳು ತೈಲ ಸ್ವಾವಲಂಬನೆ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಲಿಲ್ಲ ಎಂದೂ ಅವರು ಖೇದವ್ಯಕ್ತಪಡಿಸಿದ್ದಾರೆ. ಇದು ಗಂಭೀರ ವಾಗಿ ಆಲೋಚಿಸಬೇಕಾದ ವಿಷಯವೇ ಸರಿ. ಏಕೆಂದರೆ, ಕಳೆದ ಆರ್ಥಿಕ ವರ್ಷದಲ್ಲಿ ಭಾರತ ಶೇ.85ರಷ್ಟು ಇಂಧನವನ್ನು ಹಾಗೂ ಶೇ.53ರಷ್ಟು ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಂಡಿದೆ ಎಂದರೆ ಇದರ ಅಗಾಧ ಆರ್ಥಿಕ ಪರಿಣಾಮವನ್ನು ಊಹಿಸಬಹುದು. ವಿದೇಶಗಳಿಗೆ ಹರಿದುಹೋಗುವ ಈ ಅಗಾಧ ಹಣದಲ್ಲಿ ಒಂದಷ್ಟು ಪಾಲಾದರೂ ನಮ್ಮಲ್ಲೇ ಉಳಿಯುವಂತಾದರೆ?

    ಇಂಧನ ಬಳಕೆ ತಗ್ಗಿಸಲು ಸಮೂಹ ಸಾರಿಗೆಗೆ ಒತ್ತು ನೀಡುವುದು, ಇಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ಮುಂತಾದ ಉಪಾಯಗಳಿವೆ. ಈ ನಿಟ್ಟಿನಲ್ಲಿ ಒಂದಷ್ಟು ಬೆಳವಣಿಗೆಗಳು ಸಹ ಆಗಿರುವುದು ಇದ್ದುದರಲ್ಲಿ ಸ್ವಲ್ಪ ಸಮಾಧಾನದ ಸಂಗತಿ. ಈಗ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ (ಜಿಎಸ್​ಟಿ) ಚಾಲ್ತಿಯಲ್ಲಿದೆ. ಪೆಟ್ರೋಲಿಯಂನಂಥ ಬೆರಳೆಣಿಕೆಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಜಿಎಸ್​ಟಿ ವ್ಯಾಪ್ತಿಗೆ ಬಂದಿವೆ. ಇಂಧನವನ್ನೂ ಜಿಎಸ್​ಟಿ ಪರಿಧಿಯಲ್ಲಿ ತಂದರೆ ದರ ನಿಯಂತ್ರಣ ಸಾಧ್ಯ ಎಂಬುದು ಒಂದು ಅಭಿಪ್ರಾಯ. ಜಿಎಸ್​ಟಿ ವ್ಯವಸ್ಥೆಯಲ್ಲಿ ವಸ್ತುಗಳ ತೆರಿಗೆ ನಿಷ್ಕರ್ಷೆಗೆ ಎಲ್ಲ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ಜಿಎಸ್​ಟಿ ಕೌನ್ಸಿಲ್ ಇದೆ. ಅಲ್ಲಿ ಚರ್ಚೆಯಾಗಿ ವಸ್ತುಗಳ ಸ್ಲ್ಯಾಬ್ ನಿರ್ಧಾರವಾಗುತ್ತದೆ. ಅದು ಏಕರೂಪವಾಗಿರುತ್ತದೆ. ಮತ್ತು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಆ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಆಗದು. ಹೀಗಾಗಿ ಇಂಧನವನ್ನು ಜಿಎಸ್​ಟಿ ಪರಿಧಿಯಲ್ಲಿ ತರುವುದು ಸಾಧ್ಯವೇ ಎಂಬ ಜಿಜ್ಞಾಸೆಯೂ ಇದೆ. ಆದರೆ, ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಮತ್ತು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಮುಂತಾದ ಪ್ರಮುಖರೇ ಈ ವಿಷಯವಾಗಿ ಸಹಮತ ಹೊಂದಿರುವುದರಿಂದ ಈ ಸಾಧ್ಯತೆಯನ್ನು ಪೂರ್ಣವಾಗಿ ಅಲ್ಲಗಳೆಯುವ ಹಾಗೂ ಇಲ್ಲ. ಇಂಧನ ದರ ತಗ್ಗಿದರೆ ಓಕೆ, ಇಲ್ಲವಾದರೆ ಸರ್ಕಾರಗಳು ಜನರಿಂದ ಬೈಸಿಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಪೆಟ್ರೋಲಿಯಂ ಖಾತೆಯನ್ನು ಹೆಚ್ಚಿನವರು ಬಯಸುವುದಿಲ್ಲ.

    ಇಂಧನದ ಹಾಗೇ ಸರ್ಕಾರಗಳ ಬೊಕ್ಕಸಕ್ಕೆ ಮತ್ತೊಂದು ಮುಖ್ಯ ಆದಾಯ ಮೂಲವೆಂದರೆ, ಅಬಕಾರಿ ಖಾತೆ. ಈ ಖಾತೆಯನ್ನೂ ಹೆಚ್ಚಿನವರು ಬಯಸುವುದಿಲ್ಲ. ನಮ್ಮಲ್ಲಿ ಮದ್ಯಪಾನಿಗಳ ಸಂಖ್ಯೆ ಕಡಿಮೆ ಏನಿಲ್ಲ. ಆದರೆ ಮದ್ಯ ಒಂದು ವ್ಯಸನವಾಗಿ ಪರಿಗಣಿತವಾಗಿರುವುದರಿಂದಾಗಿ ಅದರ ಬಗ್ಗೆ ನಕಾರಾತ್ಮಕ ಭಾವನೆಯೇ ಇದೆ. ಎಂಥ ಮಹಾಕುಡುಕನಿದ್ದರೂ ಜನರು ತನ್ನನ್ನು ‘ಕುಡುಕ’ ಎಂದು ಕರೆಯುವುದನ್ನು ಇಷ್ಟಪಡುವುದಿಲ್ಲ! ಕರೊನಾ ಕಾರಣಕ್ಕೆ ಕಳೆದ ಮಾರ್ಚ್ ತಿಂಗಳಲ್ಲಿ ಲಾಕ್​ಡೌನ್ ಘೋಷಣೆ ಆಯಿತಲ್ಲ, ಆಗ ಮದ್ಯವ್ಯಸನಿಗಳ ಪಾಡು ಹೇಳತೀರದಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಂತೂ ಈ ಬಗ್ಗೆ ಪುಂಖಾನುಪುಂಖ ಜೋಕುಗಳೂ ಹರಿದಾಡಿದವು. ಅಂತೂ ಕೊನೆಗೆ ಮದ್ಯದಂಗಡಿ ತೆರೆಯುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಾಗ ಕೆಲ ಮಹಿಳೆಯರು ಸಹ ಮದ್ಯ ಖರೀದಿಗೆ ಕ್ಯೂ ನಿಂತಿದ್ದನ್ನು ನೋಡಿ ಎದೆಯೊಡೆದುಕೊಂಡವರೆಷ್ಟೊ!

    ನಮ್ಮ ಕರ್ನಾಟಕವನ್ನೇ ತೆಗೆದುಕೊಂಡರೆ ಸರ್ಕಾರದ ಆದಾಯದಲ್ಲಿ ಅಬಕಾರಿ ಪಾಲು ಗಮನಿಸಿದರೆ ಇದರ ‘ಕಿಕ್’ ಅಂದಾಜಾಗುತ್ತದೆ. 1967-68ರಲ್ಲಿ ಅಬಕಾರಿ ಆದಾಯ 7.1 ಕೋಟಿ ರೂ. ಇತ್ತು. ದಶಕದ ನಂತರ, 1977-78ರಲ್ಲಿ ಇದು 56 ಕೋಟಿ ರೂ.ಗೆ ಏರಿತ್ತು. 1987-88ರಲ್ಲಿ 251 ಕೋಟಿ ರೂ. ಇದ್ದರೆ, 1997-98ರಲ್ಲಿ 865 ಕೋಟಿ ರೂ.ಗೆ ಹೆಚ್ಚಿತ್ತು. 2007-08ರಲ್ಲಿ 4811 ಕೋಟಿ ರೂ. ಅಬಕಾರಿ ಆದಾಯ ಇದ್ದರೆ, 2017-18ಕ್ಕೆ 17,948 ಕೋಟಿ ರೂ.ಗೆ ಜಿಗಿದಿತ್ತು. 2019-20ರಲ್ಲಿ 21,583 ಕೋಟಿ ರೂ. ಆಗಿದ್ದರೆ, 2020-21ರ ಬಜೆಟ್ ಅಂದಾಜು 22,700 ಕೋಟಿ ರೂ ಇದೆ. ಕರೊನಾ ಕಾಲದಲ್ಲಿ ತೆರಿಗೆ ಸಂಗ್ರಹ ಕಡಿಮೆ ಆಗಿದ್ದರಿಂದ ಸರ್ಕಾರದ ಆದಾಯ ಕಡಿಮೆ ಆಯಿತಲ್ಲ, ಆಗ ಅಬಕಾರಿ ಇಲಾಖೆಗೆ ಹೆಚ್ಚುವರಿ ಗುರಿ ನೀಡಲಾಗಿತ್ತು ಎಂದರೆ ಈ ಇಲಾಖೆಯ ಪ್ರಾಮುಖ್ಯ ಗಮನಿಸಿ. ಹಾಗೇ, ಬಜೆಟ್​ನಲ್ಲಿ ಮದ್ಯದ ಮೇಲಿನ ಸುಂಕ ಏರಿಸುವುದು ಆದಾಯ ವೃದ್ಧಿಗೆ ಸರ್ಕಾರಗಳು ಮಾಡುವ ಒಂದು ಸರಳ ಉಪಾಯ. ಮಜಾ ಎಂದರೆ, ಮದ್ಯದ ಮೇಲೆ ತೆರಿಗೆ ಹೆಚ್ಚಿಸಿದರೆ ಒಳಗೊಳಗೆ ಬೈದುಕೊಳ್ಳಬಹುದಾದರೂ ಬಹಿರಂಗವಾಗಿ ಇದನ್ನು ವ್ಯಕ್ತಪಡಿಸುವವರು ವಿರಳ. ಮದ್ಯದಿಂದ ಸರ್ಕಾರಕ್ಕೆ ಎಷ್ಟು ಆದಾಯ ಬರುತ್ತದೆ ಎಂಬ ಲೆಕ್ಕ ಸಿಗುತ್ತದೆ. ಆದರೆ ಈ ವ್ಯಸನದಿಂದಾಗಿ ಎಷ್ಟು ಮನೆಗಳಲ್ಲಿ ಕತ್ತಲು ಆವರಿಸಿದೆ, ಎಷ್ಟು ಕುಟುಂಬಗಳಲ್ಲಿ ನಿತ್ಯ ಜಗಳ-ರಗಳೆಗಳು ನಡೆಯುತ್ತವೆ ಎಂಬ ಲೆಕ್ಕವಿಡುವವರಾರು!?

    ಒಟ್ಟಿನಲ್ಲಿ, ಸರ್ಕಾರ ನಡೆಸಲು ಆದಾಯ ಬೇಕೇ ಬೇಕು. ಆದರೆ ಕೆಲವೊಮ್ಮೆ ಈ ಆದಾಯ ಮೂಲವೇ ಆಳುವವರಿಗೆ ‘ಧರ್ಮಸಂಕಟ’ ತಂದಿಡುತ್ತದೆ ಎಂಬುದು ಮಾತ್ರ ನಿಜ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts