More

  ದೂರವಾಗಲಿ ಕ್ಷಯ, ಆರೋಗ್ಯವಾಗಲಿ ಅಕ್ಷಯ; ಸಚಿವ ಡಾ.ಕೆ. ಸುಧಾಕರ್​ ಲೇಖನ

  ದೂರವಾಗಲಿ ಕ್ಷಯ, ಆರೋಗ್ಯವಾಗಲಿ ಅಕ್ಷಯ; ಸಚಿವ ಡಾ.ಕೆ. ಸುಧಾಕರ್​ ಲೇಖನಹೆಚ್ಚು ಸಾವು ಸಂಭವಿಸುವ ಸಾಂಕ್ರಾಮಿಕ ರೋಗಗಳ ಪೈಕಿ ಕ್ಷಯ ರೋಗ ಪ್ರಮುಖವಾದದ್ದು. ನಿರಂತರ ಲಸಿಕಾ ಅಭಿಯಾನ, ಜಾಗೃತಿ, ಔಷಧಗಳ ಸಮರ್ಪಕ ಪೂರೈಕೆಯಿಂದಾಗಿ ಸಿಡುಬು ರೋಗವನ್ನು ಜಗತ್ತಿನಿಂದ ನಿಮೂಲನೆಗೊಳಿಸಲಾಗಿದೆ. ಕೆಲ ವರ್ಷಗಳಿಂದ ಭಾರತ ಪೋಲಿಯೊಮುಕ್ತ ಕೂಡ ಆಗಿದೆ. ಆದರೆ 16-17ನೇ ಶತಮಾನದ ಸಮಯದಲ್ಲಿ ಕಂಡುಬಂದ ಕ್ಷಯ ರೋಗವನ್ನು ಮಾತ್ರ ಸಂಪೂರ್ಣವಾಗಿ ನಿಮೂಲನೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಸವಾಲಾದ ಕೋವಿಡ್-19ನಂಥ ರೋಗಕ್ಕೆ 10 ತಿಂಗಳಲ್ಲಿ ಲಸಿಕೆ ಕಂಡುಹಿಡಿಯುವ ಮಟ್ಟಿಗೆ ಬೆಳೆದಿರುವ ತಂತ್ರಜ್ಞಾನದಲ್ಲಿ ನಾವಿದ್ದರೂ, ಕ್ಷಯ ರೋಗವನ್ನು ನಿಮೂಲನೆ ಮಾಡಲು ಏಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಪ್ರಶ್ನಿಸಿಕೊಳ್ಳಬೇಕಾಗಿದೆ.

  2021ರ ವಿಶ್ವ ಕ್ಷಯ ರೋಗ ನಿವಾರಣೆ ದಿನದ ಘೋಷವಾಕ್ಯ- ‘ಕಾಲ ಘಟಿಸುತ್ತಿದೆ- The Clock is Ticking’. ಇದರಂತೆ ರಾಜ್ಯದಲ್ಲಿ ಕ್ಷಯ ನಿಯಂತ್ರಣ ಹಾಗೂ ನಂತರ ಅದರ ನಿಮೂಲನೆಗೆ ಒತ್ತು ನೀಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಿದೆ. ಹೀಗಾಗಿ, ಈ ಬಾರಿಯ ಬಜೆಟ್​ನಲ್ಲಿ ಹಿಂದಿಗಿಂತ ಶೇಕಡ 137ರಷ್ಟು ಹೆಚ್ಚು ಅನುದಾನವನ್ನು ಆರೋಗ್ಯ ವಲಯಕ್ಕೆ ನೀಡಿದೆ. ಇನ್ನೊಂದು ಆಶಾದಾಯಕ ಸಂಗತಿಯೆಂದರೆ, ‘ಕ್ಷಯ ಮುಕ್ತ ಕರ್ನಾಟಕ’ ಎಂಬ ಕಾರ್ಯತಂತ್ರವನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಆರೋಗ್ಯಯುತ ಕರ್ನಾಟಕ’ ನಿರ್ವಿುಸುವ ಗುರಿಯೊಂದಿಗೆ ಆರೋಗ್ಯ ವಲಯಕ್ಕೆ ನೀಡಿರುವ ಮಹತ್ವದಿಂದ ಇಂಥ ಕಾರ್ಯತಂತ್ರಗಳು ರೂಪುಗೊಳ್ಳಲು ಸಾಧ್ಯವಾಗುತ್ತಿದೆ.

  ಈ ಕಾರ್ಯತಂತ್ರವು ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಕಾರ್ಯತಂತ್ರ ಯೋಜನೆ’ (ಎಸ್.ಎಸ್.ಪಿ.)ಯೊಂದಿಗೆ 2025ರ ವೇಳೆಗೆ ದೇಶದಲ್ಲಿ ಟಿಬಿಯನ್ನು ಮುಕ್ತಗೊಳಿಸುವ ಉದ್ದೇಶ ಹೊಂದಿದೆ. 1882 ಮಾರ್ಚ್ 24ರಂದು ಸರ್ ರಾಬರ್ಟ್ ಕೋಚ್, ಮೈಕ್ರೋಬ್ಯಾಕ್ಟೀರಿಯಂ ಟಿಬಿ ಬ್ಯಾಸಿಲೆ ಕ್ಷಯರೋಗಕ್ಕೆ ಕಾರಣ ಎಂದು ಘೊಷಿಸಿ ಜನಸಮುದಾಯಕ್ಕೆ ಮಹದುಪಕಾರ ಮಾಡಿದರು. ಇನ್ನು ಜನಜಾಗೃತಿ, ವೈದ್ಯಕೀಯ ಉಪಕ್ರಮಗಳ ಮೂಲಕ ಈ ರೋಗವನ್ನು ನಿವಾರಿಸಿ, ಸಂಪೂರ್ಣ ನಿಮೂಲನೆಯಾದ ರೋಗಗಳ ಪಟ್ಟಿಗೆ ಸೇರಿಸುವ ಮಹತ್ವದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.

  See also  VIDEO| ಯೂನಿಫಾರ್ಮ್​ ಧರಿಸಿ, ರಿವಾಲ್ವರ್​ ಹಿಡಿದು ಡೈಲಾಗ್​ ಹೊಡೆದ ಮಹಿಳಾ ಕಾನ್ಸ್​ಟೇಬಲ್​ಗೆ ಸಂಕಷ್ಟ!​​​

  ವಿಶ್ವ ಆರೋಗ್ಯ ಸಂಸ್ಥೆಯ 2020ರ ವರದಿ ಪ್ರಕಾರ, ಜಾಗತಿಕವಾಗಿ ಭಾರತವು ಶೇಕಡ 26ರಷ್ಟು ಕ್ಷಯರೋಗಿಗಳನ್ನು ಹೊಂದಿದೆ. ಅಂದರೆ ಭಾರತ ಅತಿ ಹೆಚ್ಚು ಕ್ಷಯ ಪ್ರಕರಣ ಹೊಂದಿರುವ ದೇಶ. ಜಗತ್ತಿನ ವಾರ್ಷಿಕ 9.96 ದಶಲಕ್ಷ ಹೊಸ ಪ್ರಕರಣಗಳಲ್ಲಿ 2.61 ದಶಲಕ್ಷ ಕ್ಷಯರೋಗಿಗಳು ನಮ್ಮಲ್ಲಿದ್ದು, ಶೇ.40ಕ್ಕಿಂತ ಹೆಚ್ಚು ಜನರು ಸೋಂಕಿಗೊಳಗಾಗಿದ್ದಾರೆ. 2019ರಲ್ಲಿ ಅಂದಾಜು 4.36 ಲಕ್ಷ ಜನರು ಕ್ಷಯದಿಂದ ಸಾವಿಗೀಡಾಗಿದ್ದರು.

  ಕರ್ನಾಟಕದಲ್ಲಿ ಕ್ಷಯ ನಿಯಂತ್ರಣಕ್ಕೆ ನಿರಂತರ ಕ್ರಮ ವಹಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಕ್ಷಯರೋಗ ಪತ್ತೆ ಶೇ.33 ಹಾಗೂ ಪರೀಕ್ಷಾ ಪ್ರಮಾಣ ಶೇ.55ರಷ್ಟು ಹೆಚ್ಚಳವಾಗಿದೆ. ಆದರೆ ಈ ನಡುವೆ ಬಂದ ಕೋವಿಡ್ ಸಾಂಕ್ರಾಮಿಕದಿಂದ ಈ ನಿಯಂತ್ರಣ ಕ್ರಮಗಳಿಗೆ ಸ್ವಲ್ಪ ಹಿನ್ನಡೆ ಉಂಟಾಗಿದೆ. ಈಗ 2025ರೊಳಗೆ ಕ್ಷಯ ಮುಕ್ತಗೊಳಿಸುವ ಗುರಿ ಮತ್ತೆ ಹೊಸ ಚೈತನ್ಯ ನೀಡಲಿದ್ದು, ಈ ಗುರಿ ಸಾಧನೆಗೆ ನಾನಾ ಉಪಕ್ರಮಗಳನ್ನು ರಚಿಸಲಾಗಿದೆ.

  ಕ್ಷಯರೋಗದ ಆರಂಭಿಕ ರೋಗ ನಿರ್ಣಯ ಮಾಡಲು ಸಿಬಿನಾಟ್ ಹಾಗೂ ಟ್ರೂನಾಟ್ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಎರಡು ಹಾಗೂ ಹುಬ್ಬಳ್ಳಿ, ರಾಯಚೂರಿನಲ್ಲಿ ತಲಾ ಒಂದು ಪ್ರಯೋಗಾಲಯಗಳಿದ್ದು, ಇಲ್ಲಿ ರೋಗಪತ್ತೆ ವ್ಯವಸ್ಥೆ ಇದೆ. ವಲಸೆ ಹೋಗುವವರು, ದುರ್ಬಲರು ಹಾಗೂ ಕ್ಷಯಕ್ಕೆ ಬೇಗನೆ ತುತ್ತಾಗುವವರನ್ನು ಪರೀಕ್ಷೆಗೊಳಪಡಿಸಲು ರೋಗಪತ್ತೆ ಕಾರ್ಯಕ್ರಮ ಜಾರಿಯಲ್ಲಿದೆ. 2020ರ ಡಿಸೆಂಬರ್​ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ, 1.5 ಕೋಟಿ ಜನರನ್ನು ಪರೀಕ್ಷೆಗೊಳಪಡಿಸಿ, 2,951 ಮಂದಿಯಲ್ಲಿ ರೋಗ ಪತ್ತೆ ಮಾಡಲಾಗಿತ್ತು. ‘ಶೂನ್ಯ ಕ್ಷಯರೋಗ ಗ್ರಾಮ ಮತ್ತು ಗ್ರಾಮ ಪಂಚಾಯಿತಿ’ಗಳನ್ನು ರೂಪಿಸುವ ಯೋಜನೆಯೂ ಇದೆ.

  ಆದರೆ ಸರ್ಕಾರದ ಈ ಎಲ್ಲ ಕ್ರಮಗಳಲ್ಲಿ ಜನಸಹಭಾಗಿತ್ವ ಇಲ್ಲದಿದ್ದರೆ ಪ್ರಯತ್ನ ಬಹುತೇಕ ವ್ಯರ್ಥವಾಗುತ್ತದೆ. ಕ್ಷಯರೋಗ ನಿರ್ಣಯ ಹಾಗೂ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವಿಲ್ಲದಿರುವುದು, ಅಪೌಷ್ಠಿಕತೆಯಿಂದಾಗಿ ರೋಗ ಬರುವುದು, ವಾಯುಮಾಲಿನ್ಯ, ಧೂಮಪಾನ, ಮಧುಮೇಹ ಮೊದಲಾದ ಅಡ್ಡಿಗಳು, ವಲಸೆ ಹೋಗುವ ಜನರು ಆರೋಗ್ಯ ತಪಾಸಣೆ ಮಾಡಿಸುವಲ್ಲಿ ಹಿಂದುಳಿದಿರುವುದು ಮೊದಲಾದ ಕಾರಣಗಳಿಂದಾಗಿ ಕ್ಷಯರೋಗ ನಿಯಂತ್ರಣ ಸವಾಲಾಗಿದೆ. ಈ ಸವಾಲನ್ನು ಮೆಟ್ಟಿ ನಿಂತು ರಾಜ್ಯ ಸರ್ಕಾರ ಕೈಗೊಂಡಿರುವ ‘ಕ್ಷಯಮುಕ್ತ ಕರ್ನಾಟಕ’ದ ಚಟುವಟಿಕೆಗಳಲ್ಲಿ ಜನಸಮುದಾಯ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ. ಇದು ಸಾಧ್ಯವಾದರೆ ಕ್ಷಯ ದೂರವಾಗಿ ಆರೋಗ್ಯ ಅಕ್ಷಯವಾಗಲಿದೆ.

  See also  ಡೆಡ್ಲಿ ಕರೊನಾ ಭೀತಿಯ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಕನ್ನಡಿಗ ರಾಹುಲ್​ ಹೇಳಿದ್ದು ಹೀಗೆ...

  (ಲೇಖಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts