More

    ಕುವೆಂಪು ಚಿಂತನೆಯಲ್ಲಿ ಆರ್ಥಿಕ ಗ್ರಹಿಕೆಯ ಆಯಾಮಗಳು; ಇಂದು ಜನ್ಮದಿನ

    ಕುವೆಂಪು ಚಿಂತನೆಯಲ್ಲಿ ಆರ್ಥಿಕ ಗ್ರಹಿಕೆಯ ಆಯಾಮಗಳು; ಇಂದು ಜನ್ಮದಿನ

    ಭಾರತದ ಸಮಗ್ರ ಏಳಿಗೆಯ ಕನಸು ಕಂಡ ಕುವೆಂಪು ಅವರು ಇಲ್ಲಿ ಪ್ರಚಲಿತವಿರುವ ತರತಮ ಭಾವದ ನಿಜನೆಲೆಯನ್ನು ಶೋಧಿಸಲು ಪ್ರಯತ್ನಿಸಿದರು. ಜನರ ಒಟ್ಟು ಬದುಕು ಸುಖಕರವಾಗಲೆಂದು ಹಂಬಲಿಸಿದ ಕುವೆಂಪು ಅಂತಿಮವಾಗಿ ಆಧ್ಯಾತ್ಮಿಕತೆಯನ್ನು ತಲುಪಲು ಜನತೆ ತುಡಿಯಬೇಕೆಂದು ಬಯಸುತ್ತಾರೆ. ಆದರೆ ಆಧ್ಯಾತ್ಮಿಕತೆಯೆಂಬುದು ಲೌಕಿಕವಾದ ರಿಕ್ತ ಚಪ್ಪರಕ್ಕೆ ಹಬ್ಬುವ ಬಂದಳಿಕೆಯಲ್ಲ ಎಂಬುದನ್ನು ಅವರು ಚೆನ್ನಾಗಿ ಬಲ್ಲರು. ಹಾಗಾಗಿ, ಆಧ್ಯಾತ್ಮಿಕತೆಯ ರಸಬಳ್ಳಿ ಕುಡಿಯೊಡೆಯಬೇಕಾದರೆ ವ್ಯಕ್ತಿಗಳ ಐಹಿಕ ಬದುಕು ಸಶಕ್ತವಾಗಿರಬೇಕು ಎಂಬುದರಲ್ಲಿ ಅವರಿಗೆ ಅಚಲವಾಗಿ ನಂಬಿಕೆ. ಈ ಕುರಿತಾದ ಸಂಗತಿಗಳು ಅವರ ಸಾಹಿತ್ಯದಲ್ಲಿ ಎಲ್ಲ ಕಡೆಯೂ ವ್ಯಾಪಕವಾಗಿ ಚೆಲ್ಲಿಕೊಂಡಿವೆ.

    ಕುವೆಂಪು ಬದುಕು ಸರಳತೆಯೆಂಬ ಸಿರಿಯಲ್ಲಿ ವಿರಾಜಮಾನವಾದದ್ದು. ಸರಳತೆ ಅವರ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಅವರ ಬದುಕು ವಿವೇಕಾನಂದ- ಪರಮಹಂಸರ ಪರಿಧಿಯಲ್ಲಿ ವಿಕಸಿತವಾಗಿತ್ತಲ್ಲದೆ ಮಹಾತ್ಮ ಗಾಂಧಿಯವರ ಪ್ರಭಾವದಲ್ಲಿ ಬೆಳಗಿತ್ತು. ಆರ್ಥಿಕ ಗ್ರಹಿಕೆಯ ಬಗ್ಗೆ ಕುವೆಂಪು ಪ್ರತ್ಯೇಕವಾಗಿ ಬರೆಯಲಿಲ್ಲವಾದರೂ ಈ ವಿಷಯವಾಗಿ ತಮ್ಮ ನಿಲುವುಗಳೇನು ಎಂಬುದನ್ನು ಅವರು ಪರೋಕ್ಷವಾಗಿ ಸೂಚಿಸಿರುವ ಬೇರೆ ಬೇರೆ ಮೂಲಗಳನ್ನು ನಾವು ಗಮನಿಸ ಬಹುದಾಗಿದೆ. ಉದಾಹರಣೆಗೆ 1971ರಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಹಾಗೂ ಎಂ.ಡಿ. ನಂಜುಂಡಸ್ವಾಮಿ ಅವರು ಅನುವಾದಿಸಿ ಸಂಪಾದಿಸಿದ ‘ಲೋಹಿಯಾ’ ಎಂಬ ಗ್ರಂಥಕ್ಕೆ ಮುನ್ನುಡಿ ಬರೆಯುತ್ತ ಕುವೆಂಪು ಹೀಗೆ ಹೇಳಿದ್ದಾರೆ: ‘…ಲೋಹಿಯಾ ಅವರಾದರೋ ಭೋಗ ಜೀವನಕ್ಕಾಗಲಿ ಅಧಿಕಾರ ಲಾಲಸೆಗಾಗಲಿ ಸಿಲುಕದೆ, ತಾವು ಪಾಶ್ಚಾತ್ಯ ಅರ್ಥಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರಗಳಿಂದ ಕಲಿತ ತತ್ತ್ವಗಳನ್ನು ಗಾಂಧೀಜಿಯ ಸತ್ಯ, ಅಹಿಂಸೆ ಮತ್ತು ಸರ್ವೇದಯ ತತ್ತ್ವಗಳಿಂದ ಶೋಧಿಸಿ, ತಮ್ಮದೇ ಆದ ಒಂದು ವಿಶಿಷ್ಟ ಭಾರತೀಯವಾದ ಸಮಾಜವನ್ನು ರೂಪಿಸಿಕೊಂಡು, ಅದರ ಸ್ಥಾಪನೆಗಾಗಿ ಹೋರಾಟವನ್ನು ಮುಂದುವರಿಸಿ, ಸ್ವಾತಂತ್ರೊ್ಯೕತ್ತರದಲ್ಲಿಯೂ, ಪೂರ್ವದ ಕ್ಲೇಶಕಷ್ಟಗಳನ್ನೇ ಅನುಭವಿಸುತ್ತ ಆಹುತಿಯಾದರು, ತಾನೇ ಹೊತ್ತಿಸಿದ ಯಜ್ಞಾಜ್ಞಿ ಜ್ವಾಲೆಯಲ್ಲಿ.’ ಮಹಾತ್ಮಾಜಿ ಹಾಗೂ ವಿನೋಬಾ ಬಗೆಗೆ ಲೋಹಿಯಾಗಿದ್ದ ಗೌರವ ಭಾವನೆಯ ಬಗ್ಗೆ ಕುವೆಂಪು ತಿಳಿಸಿದ್ದಾರೆ.

    ‘ಗಾಂಧೀಜಿ ಹಾಗೂ ಸಂತ ವಿನೋಬಾಜಿ ಈ ಇಬ್ಬರ ವಿಚಾರದಲ್ಲಿ ಡಾ. ರಾಮಮನೋಹರ ಲೋಹಿಯಾ ಅವರಿಗೆ ಪೂಜ್ಯಭಾವ ಎನ್ನುವಷ್ಟರ ಮಟ್ಟಿಗೆ ಗೌರವ. ಅವರಿಬ್ಬರ ಆಧ್ಯಾತ್ಮಿಕ ಹಿನ್ನೆಲೆಯ ಗೋಜಿಗೆ ಹೋಗದೆ, ಉಳಿದೆಲ್ಲ ವಿಚಾರಗಳಲ್ಲಿಯೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಅವರಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ತಮ್ಮ ಅನುಯಾಯಿಗಳನ್ನು ಕೇಳಿಕೊಂಡಿದ್ದಾರೆ.’

    ಆಲೋಚನೆಯ ಶಕ್ತಿ ಅಗಾಧ, ಅಪಾರ ಎಂಬ ಸಂಗತಿಯನ್ನು ಮನದಟ್ಟು ಮಾಡುತ್ತ ಕುವೆಂಪು ಅವರ ಮನಸ್ಸು ಮಾರ್ಕ್ಸ್ ಮತ್ತು ಪೆರಿಯಾರರ ಕಡೆ ಹರಿದಿದೆ. ಸಾಮಾನ್ಯ ಜನರ ಕ್ರಾಂತಿಯನ್ನು ಪ್ರತಿಪಾದಿಸಿದ ಕಾರ್ಲ್ ಮಾರ್ಕ್ಸ್ ಮುಖ್ಯವಾಗಿ ಆರ್ಥಿಕ ಸಮಾನತೆಯ ಹರಿಕಾರನಾಗಿದ್ದಾನೆ. ಪೆರಿಯಾರ್ ಭಾರತದ ಶ್ರೇಣೀಕೃತ ಸಮಾಜದ ಊನವನ್ನು ಸರಿಪಡಿಸಲು ಚಿಂತಿಸಿದ ಮಹಾನ್ ವ್ಯಕ್ತಿ. ಪ್ರಗತಿಶೀಲರು ತಮ್ಮ ದೃಷ್ಟಿಯಲ್ಲಿಟ್ಟುಕೊಂಡಿದ್ದ ಸರಳವಾದ ಆರ್ಥಿಕ ಸಮಾನತೆಯನ್ನು ಕುರಿತ ಚಿಂತನೆಯನ್ನು ದಾಟಿ ಕುವೆಂಪು ಮುಂದೆ ಹೋಗಿದ್ದರು ಎಂಬುದಕ್ಕೆ ಅವರ ಸಾಹಿತ್ಯದಲ್ಲಿ ಹಲವು ಪುರಾವೆಗಳು ದೊರೆಯುತ್ತವೆ.

    ಕರ್ನಾಟಕ ರಾಜ್ಯ ಒಂದಾದ ಸುಮುಹೂರ್ತದ ಸಂದರ್ಭದಲ್ಲಿ ದಿನಾಂಕ: 01-11-1956ರಂದು ಮೈಸೂರಿನ ಪುರಭವನದಲ್ಲಿ ಕುವೆಂಪು ಮಾಡಿದ ಭಾಷಣವನ್ನು ‘ಕರ್ನಾಟಕದ ಕಲ್ಯಾಣ’ವೆಂಬ ಶೀರ್ಷಿಕೆಯಡಿಯಲ್ಲಿ ದಾಖಲಿಸಲಾಗಿದೆ. ರಾಜಕೀಯ ಐಕ್ಯ ಸ್ಥಾಪನೆ ಮತ್ತು ಆರ್ಥಿಕ ಮತ್ತು ಸಾಂಸ್ಕೃತಿಕ ಸಂಪತ್ಸಾಧನೆಗೂ ಇನ್ನು ಸಕಾಲವೆಂದು ಅವರು ತಿಳಿದಿದ್ದರು. ಅವರು ಹೀಗೆ ನುಡಿದಿದ್ದರು: ‘ರಾಜಕೀಯ ಐಕ್ಯತೆಗೆ, ಆರ್ಥಿಕ ಪ್ರಗತಿಗೆ, ಅನ್ನಮಯದ ಅಭ್ಯುದಯಕ್ಕೆ ನಾವೆಲ್ಲ ಹಗಲಿರುಳು ದುಡಿಯುತ್ತಿದ್ದರೂ, ನಮ್ಮ ದೃಷ್ಟಿ ಸದಾ ಸಂಸ್ಕೃತಿಯ ಕಡೆಗೆ ಬಾಗಿರಬೇಕು. ಮಾತ್ಸರ್ಯ ದ್ವೇಷಗಳನ್ನು ತೊರೆದು ಎಲ್ಲರೂ ಒಟ್ಟಾಗಿ ಒಮ್ಮನಸ್ಸಿನಿಂದ ದುಡಿದು ಕರ್ನಾಟಕದ ಕಲ್ಯಾಣವನ್ನು ಸಾಧಿಸುವ ಮೂಲಕ ಭರತಖಂಡದ ಹಿತವನ್ನು ಸಾಧಿಸೋಣವೆಂದು ಹಾರೈಸಿ, ನಮ್ಮ ಪ್ರಯತ್ನಗಳಿಗೆ ಭಗವತ್ಕೃಪೆ ಹರಿದು ಬರುತ್ತಿರಲೆಂದು ಪ್ರಾರ್ಥಿಸುತ್ತೇನೆ.’

    ಸ್ವತಃ ಕೃಷಿಕ ಮನೆತನದಿಂದ ಬಂದವರಾಗಿ ಕುವೆಂಪು ಅವರು ಬೇಸಾಯದ ಮಹತ್ವವನ್ನು ಕುರಿತು ಮತ್ತೆ ಮತ್ತೆ ಬರೆದಿದ್ದಾರೆ. ಬೇಸಾಯವೇ ಭಾರತಕ್ಕೆ ಶಕ್ತಿ ಮುಕ್ತಿ ಎಂದು ಅವರು ಬರೆದಿದ್ದರು. ದಕ್ಷಿಣ ವಲಯದ ನಾಲ್ಕು ರಾಜ್ಯಗಳ ವಿವಿಧೋದ್ದೇಶ ಶಾಲೆಗಳಿಂದ ಬಂದಿದ್ದ ಕೃಷಿ ಅಧ್ಯಾಪಕರ ಸಂಪರ್ಕ ಶಿಬಿರವನ್ನುದ್ದೇಶಿಸಿ ಅವರು ಆಡಿದ ಮಾತುಗಳಿವು: ‘ಹಸಿ ಮಾಂಸವನ್ನು ತಿನ್ನುತ್ತ, ಮೃಗಗಳೊಡನೆ ಮೃಗವಾಗಿರುತ್ತಿದ್ದ ಗುಹಾಮಾನವ ಬೇಸಾಯ ಕಂಡುಹಿಡಿದಾಗಿನಿಂದ ನಾಗರಿಕತೆಗೆ ನಾಂದಿ ಹಾಡಿದ. ಬೇಸಾಯದಿಂದ ಅವನು ಸ್ವಾವಲಂಬಿಯಾದ. ಅಷ್ಟೇ ಅಲ್ಲ ಅವನ ಸಾಂಘಿಕ ಜೀವನ ಅನಿವಾರ್ಯವಾಯಿತು. ಅತಿಯಾದ ಕೈಗಾರೀಕರಣದಿಂದ ಅವನಿಂದು ಪ್ರಕೃತಿ ಹಾಗೂ ಭೂಮಾತೆಯ ಸಂಬಂಧದಿಂದ ವಂಚಿತನಾಗುತ್ತಿದ್ದಾನೆ. ಮಾನವನ ಪುನರುತ್ಥಾನಕ್ಕೆ ಪ್ರಾಚೀನ ಕೃಷಿಕ ಸಮಾಜವೊಂದೇ ದಿಕ್ಕಾಗಬೇಕೆಂದು ಕವಿಗಳು, ದಾರ್ಶನಿಕರು ಅಂತೆಯೇ ರಾಜಕೀಯ ನಾಯಕರು ಹೇಳುತ್ತಿದ್ದಾರೆ… ಈಗ ನಾವಿರುವ ಸಮಾಜ ಬಹು ಸಂಕೀರ್ಣವಾದದ್ದು; ಅದರೊಡನೆ ಕೃಷಿ ಸಮಾಜವನ್ನು ಬೆಸೆಯುವ ಜಾಣ್ಮೆಯನ್ನು ಸಂಪಾದಿಸಿಕೊಳ್ಳಲಾಗಿದೆ. ಅಮೆರಿಕ ಮತ್ತು ಹಾಲೆಂಡುಗಳಂತೆ ವ್ಯವಸಾಯ ಲಾಭದಾಯಕವೂ ಗೌರವಯುತವೂ ಆದ ವೃತ್ತಿಯಾಗಬೇಕಾಗಿದೆ.’

    ಕೃಷಿಕನ ಬದುಕಾಗಲಿ ಇನ್ನಿತರ ಗೌರವಾನ್ವಿತ ಸಾಮಾಜಿಕರ ಬದುಕಾಗಲಿ ಸುಗಮವಾಗಿ ಸಾಗಬೇಕಾದರೆ ನಮ್ಮ ಚುನಾವಣೆಗಳು ನೆಟ್ಟಗೆ ನಡೆಯಬೇಕೆಂದು ಕಠಿಣವಾದ ಮಾತುಗಳಲ್ಲಿ ಗುಡುಗಿದ್ದಾರೆ. ಅವರ ಮಾತುಗಳನ್ನು ನೇರವಾಗಿ ಕೇಳೋಣ:

    ‘ನಮ್ಮ ರಾಜಕೀಯ ರಂಗ ಈಗ ಹೇಗಾಗಿದೆ ಎಂದರೆ ಪ್ರಾಮಾಣಿಕರೂ ಸಂಭಾವಿತರೂ ಸುಸಂಸ್ಕೃತರೂ ಯಾರೂ ಅದರ ಹತ್ತಿರ ಸುಳಿಯಲೂ ಅಂಜುತ್ತಾರೆ. ಚುನಾವಣೆಯ ರೀತಿಯನ್ನೆ ಬದಲಾಯಿಸದಿದ್ದರೆ ಮಾನ ಮರ್ಯಾದೆಯಿರುವ ಯಾವ ಪ್ರಾಮಾಣಿಕ ಯೋಗ್ಯನೂ ಅದರಲ್ಲಿ ಪಾಲುಗೊಳ್ಳುವ ಸಂಭವವಿಲ್ಲ. ಹಣದ ಹೊಳೆಹರಿಸಿ ಚುನಾವಣೆಯಲ್ಲಿ ಗೆಲ್ಲುವ ಯಾವ ವ್ಯಕ್ತಿಯಾಗಲಿ ಯಾವ ಪಕ್ಷವಾಗಲಿ ಭ್ರಷ್ಟಾಚಾರಕ್ಕೆ ಬಲಿಯಾಗದೆ ಇರಲು ಸಾಧ್ಯವೇ ಇಲ್ಲ. ಆದ್ದರಿಂದ ಭ್ರಷ್ಟಾಚಾರವನ್ನು ನಿಮೂಲ ಮಾಡುವ ಮತ್ತು ನಿಜವಾದ ಪ್ರಜಾಸತ್ತೆಯನ್ನು ರಕ್ಷಿಸುವ ಇಚ್ಛೆ ನಿಮಗಿದ್ದರೆ ಇಂದಿನ ರೀತಿಯ ಧನಾಶ್ರಿತ ಚುನಾವಣೆಯ ಪದ್ಧತಿಯನ್ನೇ ಬದಲಾಯಿಸಿ ಅದನ್ನು ಗುಣಾಶ್ರಿತವನ್ನಾಗಿ ಪರಿವರ್ತಿಸುವ ಕರ್ತವ್ಯ ನಿಮ್ಮ ಹೆಗಲ ಮೇಲೆ ಬೀಳುತ್ತದೆ. ಉಗ್ರಕ್ರಾಂತಿಯಿಂದಲಾದರೂ ನೀವು ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳೂ ಸಮಯಸಾಧಕರೂ ಗೂಂಡಾಗಳೂ ಕಳ್ಳಸಂತೆಖೋರರೂ ಕಳ್ಳಸಾಗಣೆ ಖದೀಮರೂ, ಚಾರಿತ್ರ್ಯಹೀನರೂ ಪ್ರಜಾಸತ್ತೆಯ ಹುಸಿ ಹೆಸರಿನ ಹಿಂದೆ ಪ್ರಚ್ಛನ್ನ ಸರ್ವಾಧಿಕಾರ ನಡೆಸುತ್ತಾರೆ’ (ವಿಚಾರ ಕ್ರಾಂತಿಗೆ ಆಹ್ವಾನ). ಕುವೆಂಪು ‘ಜನತೆಯ ಅಭಿವೃದ್ಧಿ’ ಎಂದರೇನು ಎಂಬ ಪ್ರಶ್ನೆಯನ್ನು ಹಾಕಿಕೊಂಡು ಮೇಲಿಂದ ಮೇಲೆ ಉತ್ತರ ನೀಡಿದ್ದಾರೆ. ಕುವೆಂಪು ಕೇವಲ ಅಮೂರ್ತವಾದ ಸಂಪತ್ತಿಗಾಗಿ ಒತ್ತಾಯಿಸಲಿಲ್ಲ; ಜನ ಜೀವನದಲ್ಲಿ ಕಣ್ಣಿಗೆ ಕಾಣುವಂಥ ಅಭಿವೃದ್ಧಿ ಕಾಣಿಸಬೇಕೆಂದು ತುಡಿದರು. ಮುಖ್ಯವಾಗಿ ಅವರಿಗೆ ಯುವಜನರ ಜೀವನದ ಬಗ್ಗೆ ಗಮನವಿದ್ದಿತು. ಒಂದು ಸಮಾಜದ ಏಳಿಗೆಯನ್ನು ಸೂಚಿಸಲು ಯುವಕರದು ನಿರ್ಣಾಯಕ ಪಾತ್ರ.

    ವಿವಾಹದ ವಿಷಯದಲ್ಲಿ ಅವರು ನೀಡಿರುವ ಎಚ್ಚರಿಕೆ ಇಂದಿಗೂ ಪ್ರಸ್ತುತ: ‘ಯುವಕನು ಸಂಪಾದನೆ ಮಾಡುವ ಸಾಮರ್ಥ್ಯವನ್ನು ಪಡೆಯುವ ಮೊದಲೆ ಮದುವೆ ಮಾಡಿಕೊಂಡಲ್ಲಿ ಒಡನೆಯೇ ಚತುಷ್ಪಾದಿಯಾಗುತ್ತಾನೆ. ಅವನ ಸ್ವತಂತ್ರಬುದ್ಧಿ, ನಿರಂಕುಶಮತಿ ಎಲ್ಲವೂ ಮಣ್ಣುಗೂಡುತ್ತದೆ… ಆತನ ತಾರುಣ್ಯದ ದರ್ಶನಜ್ಯೋತಿ ಸಾಂಸಾರಿಕ ಜೀವನದಾಸ್ಯದಲ್ಲಿ, ಕೋಟಲೆಯಲ್ಲಿ, ಕಷ್ಟದ ಧೂಳಿಧೂಮದಲ್ಲಿ ನಂದಿಹೋಗುತ್ತದೆ… ಆದ್ದರಿಂದ, ಮಿತ್ರರೆ, ನಿಮ್ಮ ಕಾಲಮೇಲೆ ನೀವು ನೆಮ್ಮದಿಯಾಗಿ ನಿಲ್ಲುವ ಶಕ್ತಿ ಬರುವ ಮೊದಲು ಮದುವೆಯಾಗಬೇಡಿ; ಆತ್ಮಕ್ಕೆ ಅಗೌರವವನ್ನೂ ಮನಸ್ಸಿಗೆ ಯಾತನೆಯನ್ನೂ ದೇಶಕ್ಕೆ ಹಾನಿಯನ್ನೂ ತರಬೇಡಿ.’

    ಒಟ್ಟಿನಲ್ಲಿ ಕುವೆಂಪು ಅವರು ಭಾರತದ ಜನರ ಉತ್ತಮದ ಬಾಳಿಗೆ ಅವರ ಆರ್ಥಿಕ ಸ್ಥಿತಿಗತಿ ಸದೃಢವಾಗಬೇಕೆಂದು ತಿಳಿಸಿದ್ದಾರೆ. ಆರ್ಥಿಕ ಸಬಲತೆಯ ಮೂಲಕ ಸಂಸ್ಕೃತಿ ಉದ್ದೀಪನಕ್ಕೆ ನಾಂದಿಯಾಗುವುದೆಂಬುದು ಅವರ ನಂಬಿಕೆ. ವ್ಯಕ್ತಿ ಸುಸಂಸ್ಕೃತನಾಗುವುದರಿಂದ ಅವನು ಬದುಕುವ ಸಮಾಜ ಸ್ವಚ್ಛವಾಗುವುದಲ್ಲದೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಯೂ ಸಾಧಿತವಾಗುವುದು. ಈ ನಾಡು ತಲೆಯೆತ್ತಿ ನಡೆಯಬೇಕಾದರೆ ದೈನ್ಯಾವಸ್ಥೆ ಅದಕ್ಕೆ ಎಂದಿಗೂ ಬರಬಾರದೆಂಬುದು ಕವಿಯ ಕಳಕಳಿಯ ಸಂಕಲ್ಪ. ಒಂದು ಜನಸಮುದಾಯ ದೈನ್ಯಕ್ಕೆ ಈಡಾಯಿತೆಂದರೆ ಕುವೆಂಪು ಪ್ರತಿಪಾದಿಸುವ ‘ಆತ್ಮಶ್ರೀ’ಗೆ ಹಾನಿಯಾಗುವುದು; ‘ಆತ್ಮಶ್ರೀ’ ಕುಂದುವುದೆಂದರೆ ಎಲ್ಲವೂ ಕಳಾಹೀನವಾದಂತೆಯೆ. ಅಂತಹ ಜನಕ್ಕೆ ಎಲ್ಲಿಯೂ ನೆಮ್ಮದಿ ದೊರಕಲಾರದು. ಅಂತಿಮವಾಗಿ ಜನರು ಸಕಲ ಶ್ರೇಯಸ್ಸಿನಿಂದ ಇತರರಿಗೆ ಮಾರ್ಗದರ್ಶಕವಾಗುವಂಥ ಆದರ್ಶದ ಬಾಳು ಬಾಳಬೇಕಾದರೆ ಆರ್ಥಿಕ ಸದೃಢತೆ ಮೂಲ ಮತ್ತು ಪೋಷಕವೆಂಬ ಸಂಗತಿ ಕುವೆಂಪು ಅವರ ಚಿಂತನೆಯ ಭಿತ್ತಿಯಾಗಿದೆ ಎಂದು ತಿಳಿಯಬಹುದಾಗಿದೆ.

    (ಲೇಖಕರು ನಿವೃತ್ತ ಪ್ರಾಧ್ಯಾಪಕರು)

    ಮೋದಿ ಉದ್ಘಾಟಿಸಿದ ಈ ಸುರಂಗ ಮಾರ್ಗದಲ್ಲಿ ಭಾನುವಾರ ಏನಾಯ್ತು ಗೊತ್ತಾ?!

    ಮೆಟ್ರೋನಲ್ಲೇ​ ಕಿಸ್ಸಿಂಗ್​! ನಿರ್ಬಂಧಗಳನ್ನು ವಿರೋಧಿಸಿ ಸಾರ್ವಜನಿಕವಾಗಿ ಕಿಸ್ ಮಾಡಲು ಆರಂಭಿಸಿದ ಜೋಡಿಗಳು

    ‘ಸೆಕ್ಸ್​ಪರ್ಟ್’​ ಇನ್ನಿಲ್ಲ: ಇವರಿದ್ದಾಗ ಸಿಕ್ಕಿತ್ತು ಅದೆಷ್ಟೋ ಮಂದಿಗೆ ಸಾಂತ್ವನ-ಸಮಾಧಾನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts