More

    ಗಾಡಿ ಚಲಾಯಿಸುವಾಗ ಜಾಗ್ರತೆ; ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು…

    ನಾನು ‘ಬೈಕ್ ತಗೊತೀನಿ’ ಅಂದಾಗ ‘ಬೈಕ್ ಬೇಡಾ, ಬೇಕಾದ್ರೆ ಕಾರ್ ತಗೊ’ ಅಂದಿದ್ರು ನಮ್ಮ ಅಪ್ಪ. ಅವರ ಹತ್ರ ಮ್ಯಾಚ್​ಲೆಸ್ ಅಂತ ಏಳು ಹಾರ್ಸ್ ಪವರಿನ ಬೈಕ್ ಇತ್ತಂತೆ. ಅದರಿಂದಾದ ಕಹಿ ಅನುಭವಗಳನ್ನು ವಿವರಿಸಿ ಬೈಕ್​ರೈಡಿಂಗ್​ನಲ್ಲಿ ಇರುವ ರಿಸ್ಕ್ ಏನು? ಇದಕ್ಕೆ ಸವಾರರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು? ಎನ್ನುವುದನ್ನು ತಿಳಿಸಿದ್ದರು.

    ಬೈಕ್ ಸವಾರ ರಸ್ತೆಯ ಬದಿಯಿಂದಲೇ ಹೋಗುತ್ತಿದ್ದು, ಅಕಸ್ಮಾತ್ ಅವನನ್ನು ಓವರ್​ಟೇಕ್ ಮಾಡುತ್ತಿರುವ ಭಾರಿ ವಾಹನದ ಎದುರಿನಿಂದ ಇನ್ನೊಂದು ವಾಹನ ಬಂದು ಡಿಕ್ಕಿ ಹೊಡೆವ ಸಾಧ್ಯತೆ ಕಾಣಿಸಿದರೆ, ವಾಹನ ಚಾಲಕ, ಎಡಬದಿಯಲ್ಲಿ ಹೋಗುತ್ತಿರುವ ಬೈಕ್ ಚಾಲಕನ ಕಡೆಗೆ ತನ್ನ ವಾಹನವನ್ನು ತಿರುಗಿಸುತ್ತಾನೆ! ಇದರಿಂದ ಅಪಘಾತ ಉಂಟಾಗಿ ಬೈಕ್ ಸವಾರನ ಪ್ರಾಣಕ್ಕೆ ಅಪಾಯ.

    ಯಾವುದಾದರೂ ದೊಡ್ಡ ವಾಹನ ಪಕ್ಕದಿಂದ ಬಂದು ಸ್ವಲ್ಪವೇ ತಾಗಿದರೂ ಗೊತ್ತುಗುರಿಯಿಲ್ಲದೆ ಎಲ್ಲೋ ಹೋಗಿ ಬೀಳುತ್ತೇವೆ. ದೊಡ್ಡ ವಾಹನಗಳ ಲೈಟ್​ಗಳು ನಮ್ಮ ಕಣ್ಣಿನ ಲೆವೆಲ್​ಗೆ ಇರುತ್ತವೆ. ಆಗ ರಸ್ತೆನೇ ಕಾಣೊಲ್ಲ, ಆದ್ದರಿಂದ ರಾತ್ರಿ ಡ್ರೖೆವಿಂಗ್ ಅವಾಯ್್ಡ ಮಾಡೋದು ಉತ್ತಮ. ಮುಂಜಾನೆ ಬೇಗ ರಸ್ತೆ ಖಾಲಿ ಇರುತ್ತಲ್ಲ ಆಗ ಡ್ರೖೆವಿಂಗ್ ಉತ್ತಮ. ಆದರೂ ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು. ಅಪಘಾತಗಳು ಬೆಳಗಿನ ಜಾವ ನಾಲ್ಕು-ಐದು ಗಂಟೆ ಸುಮಾರಿಗೆ ನಡೆಯುವುದೇ ಹೆಚ್ಚು, ಯಾಕೆಂದರೆ ಲಾರಿ ಚಾಲಕರು ರಾತ್ರಿಯೆಲ್ಲ ನಿದ್ರೆ ಇಲ್ಲದೇ ಓಡಿಸಿ ಸುಸ್ತಾಗಿರುತ್ತಾರೆ. ನಿದ್ರೆ ಆವರಿಸಿ ತನ್ನಿಂದ ತಾನೆ ಕಣ್ಣು ಮುಚ್ಚಿಕೊಳ್ಳುತ್ತದೆ. ಇನ್ನು ಕೆಲವರು ರಾತ್ರಿ ಯಾವುದೋ ಕಾಯಿಲೆಗೆ ತಗೊಂಡ ಟಾಬ್ಲೆಟ್​ನಿಂದಾಗಿ ಅದರ ಮಂಪರು ಇಳಿಯುವ ಮೊದಲೇ ಎದ್ದು ಚಾಲನೆಗೆ ತೊಡಗಿರುತ್ತಾರೆ. ಇನ್ನು ಮದ್ಯ ಸೇವಿಸುವ ಅಭ್ಯಾಸವಿದ್ದವರಿಗೆ ಬೇಗನೆ ಎಚ್ಚರವಾಗುತ್ತೆ, ನಶೆಯಿನ್ನೂ ಇಳಿದಿರೋದಿಲ್ಲ. ಆದರೂ ಬೇಗ ಎದ್ದು ಡ್ರೖೆವಿಂಗ್ ಮಾಡ್ತಾರೆ. ಆಗ ಜಡ್ಜ್ ಮೆಂಟ್ ಮಾಡೋದಕ್ಕೆ ಸಾಧ್ಯವಾಗೋದಿಲ್ಲ ಮತ್ತು ಬ್ರೇಕ್, ಸ್ಟೀರಿಂಗ್ ಮೇಲೆ ಹಿಡಿತ ತಪ್ಪುತ್ತೆ. ಅದೂ ಅಲ್ಲದೆ ಅಮಲು ಪದಾರ್ಥ ದೇಹದಲ್ಲಿದ್ದಾಗ ಕಣ್ಣಿನ ಪಾಪೆ (ಐರಿಸ್) ಚಿಕ್ಕದಾಗಲು ತಡವಾಗುವುದರಿಂದ ಕಣ್ಣು ಮಸುಕು ಮಸುಕಾಗುತ್ತದೆ.

    ಲಾರಿ ಚಾಲಕರಿಗೆ ಬ್ಲೈಂಡ್ ಸ್ಪಾಟ್ ಹೆಚ್ಚು. ಬ್ಲೈಂಡ್ ಸ್ಪಾಟ್ ಅಂದರೆ ಚಾಲಕರಿಗೆ ಹಿಂದಿನಿಂದ ಬರುವ ವಾಹನಗಳು ಕಾಣಿಸುತ್ತವೆ. ಆದರೆ ಅವು ಹತ್ತಿರ ಬಂದಾಗ ಯಾವುದೋ ಒಂದು ಸ್ಪಾಟ್​ನಲ್ಲಿ ಯಾವುದೇ ಮಿರರ್​ನಲ್ಲಿ ಆ ವಾಹನಗಳು ಕಾಣಿಸುವುದಿಲ್ಲ. ಆಗ ಎಲ್ಲಾದರೂ ಎಡ ಅಥವಾ ಬಲಕ್ಕೆ ತಿರುಗಿಸಿದರೆ ಅಪಘಾತ! ಆದ್ದರಿಂದ ಟ್ರಕ್​ಗಳನ್ನು ಹತ್ತಿರದಿಂದ ಹೆಚ್ಚು ಹೊತ್ತು ಫಾಲೋ ಮಾಡಲೇಬೇಡಿ.

    ಬೈಕ್ ಮೈಂಟೆನೆನ್ಸಲ್ಲಿ ಕಾಂಪ್ರಮೈಸೇ ಮಾಡಬಾರದು. ವಾಹನ ತಯಾರಕರ ಪ್ರಕಾರ ಎರಡು ತ್ರೆಡ್ ಇದ್ದಾಗಲೇ ಟಯರ್ ಬದಲಾಯಿಸಬೇಕು. ಇನ್ನೂ ಸಾವಿರ ಕಿಲೋಮೀಟರ್ ಓಡುತ್ತದೆ ಎಂದು ಓಡಿಸಬಾರದು. ಬ್ರೇಕ್ ಪ್ಯಾಡ್​ಗಳನ್ನು ಆಗಾಗ್ಗೆ ಚೆಕ್ ಮಾಡ್ತಾನೇ ಇರಬೇಕು. ಎಷ್ಟೋ ಜನ ಅಪಘಾತವಾಗುವ ಸಂದರ್ಭದಲ್ಲಿ ‘ಅಯ್ಯೋ, ಲಕ್ಷಗಟ್ಟಲೆ ಕೊಟ್ಟು ತಗೊಂಡ ಬೈಕ್ ಚಿಂದಿಚಿತ್ರಾನ್ನ ಆಗುತ್ತಲ್ಲ’ ಅಂತ ಬೈಕನ್ನು ಬಿಡುವುದೇ ಇಲ್ಲ. ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಆಗ ಬೈಕ್ ಜತೆ ಅವರೂ ಅಪಾಯಕ್ಕೆ ಸಿಲುಕುತ್ತಾರೆ. ಇಂಥ ಹೊತ್ತಲ್ಲಿ ಬೈಕನ್ನು ಬಿಟ್ಟು ಸೇಫ್​ಜೋನ್ ಕಡೆ ಹಾರಬೇಕು. ರೈಡಿಂಗ್ ಮಾಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ. ಅದರ ಬೆಲ್ಟನ್ನು ಸರಿಯಾಗಿ ಕಟ್ಟದಿದ್ದಲ್ಲಿ ಹೆಲ್ಮೆಟ್ ಧರಿಸಿಯೂ ಉಪಯೋಗವಿಲ್ಲ, ಎಲ್ಲಾದರೂ ಬಿದ್ದಲ್ಲಿ ಹೆಲ್ಮೆಟ್ ಹಾರಿ ತಲೆಗೆ ಬಲವಾದ ಏಟಾಗಬಹುದು. ಹಾಗೆಯೇ ಜಾಕೆಟ್, ಗ್ಲೌಸ್ ತೊಡುವುದು, ಸರಿಯಾದ ಶೂ ಹಾಕಿಕೊಳ್ಳುವುದರಿಂದ ತರಚು ಗಾಯಗಳಾಗುವುದು ತಪ್ಪುತ್ತದೆ.

    ಅಪರಿಚಿತ ರಸ್ತೆಗಳಲ್ಲಿ ಬೈಕ್ ಚಾಲನೆ ಮಾಡುವಾಗ ವೇಗಕ್ಕೆ ಕಡಿವಾಣವಿರಲಿ. ರಸ್ತೆಫಲಕಗಳ ಮೇಲೆ ನಿಗಾ ಇರಲಿ. ಯಾಕೆಂದರೆ ಎಲ್ಲಿ, ಯಾವ ವಿಧದ ತಿರುವು, ಉಬ್ಬು (hump) ಇದೆಯೆಂದು ತಿಳಿಯದೆ ಅಪಾಯ ಉಂಟಾಗಬಹುದು. ತಿರುವುಗಳಲ್ಲಿ ಓವರ್​ಟೇಕ್ ಮಾಡಬೇಡಿ. ಎದುರುಗಡೆಯಿಂದ ವಾಹನ ಬರುತ್ತಿದ್ದರೆ ಮತ್ತು ನಿಮ್ಮ ಎಡಭಾಗದಲ್ಲಿ ವಾಹನಗಳ ಸರಣಿಯೇ ಇದ್ದಲ್ಲಿ ತಪ್ಪಿಸಿಕೊಳ್ಳುವುದು ಅಸಾಧ್ಯ. ತಿರುವಿನಲ್ಲಿ ವಾಲುತ್ತ ಹೋಗುತ್ತಿರುವಾಗ ಬ್ರೇಕ್ ಹಾಕಿದಲ್ಲಿ Centrifugal forceನ ಕಾರಣದಿಂದ ಕೆಳಕ್ಕೆ ಮಗುಚಿ ಬೀಳುತ್ತೀರಿ. Centrifugal force ಏನಂದ್ರೆ ವೇಗವಾಗಿ ತನ್ನ ಕಕ್ಷೆಯಲ್ಲಿ ಚಲಿಸುತ್ತಿರುವ ವಸ್ತು ಭೂಮಿಯ ಗುರುತ್ವಾಕರ್ಷಣ ಶಕ್ತಿಯಿಂದ ವಿಮುಖವಾಗುತ್ತದೆ. ಉದಾಹರಣೆಗೆ, ಜಾತ್ರೆಯಲ್ಲಿ ಬಾವಿಯೊಳಗೆ ಬೈಕ್ ಬೀಳದಂತೆ ಓಡಿಸುವುದನ್ನು ನೋಡಿರಬಹುದು. ಒಂದು ವೇಳೆ ಸಡನ್ನಾಗಿ ಬ್ರೇಕ್ ಹಾಕಿದಲ್ಲಿ ಸವಾರರು ಕೆಳಗೆ ಬೀಳುತ್ತಾರೆ. ಇದೇ ಕಾರಣಕ್ಕೆ ತಿರುವುಗಳಲ್ಲಿ ಬೈಕ್ ಓರೆ ಮಾಡಿ ಓಡಿಸುತ್ತಿರುವಾಗ ಸಡನ್ನಾಗಿ ಬ್ರೇಕ್ ಹಾಕಿದಲ್ಲಿ ಕೆಳಗೆ ಬೀಳುವುದು ಗ್ಯಾರಂಟಿ. ಆದ್ದರಿಂದ ತಿರುವುಗಳಲ್ಲಿ ನಿಧಾನಕ್ಕೆ ಹೋಗುವುದು ಸೂಕ್ತ.

    ನನ್ನ ಆತ್ಮೀಯ ರಾಮಪ್ರಸಾದ್ ಪ್ರಕಾರ (ಅವರು ಇಪ್ಪತ್ತು ಲಕ್ಷ ಬೆಲೆಯ ಬೈಕ್ ಮಾಲೀಕರು) ಬೈಕನ್ನು ಯಾವನೋ ಓವರ್​ಸ್ಪೀಡಾಗಿ ಓಡಿಸ್ತಾನಂತ ನೀವು ಅವನ ಬೆನ್ನ ಹಿಂದೆ ಹೋಗಬೇಡಿ. ರೈಡಿಂಗಿನ ಮೊದಲ ರೂಲ್ ಆಫ್ ಥಂಬ್ ಏನೆಂದರೆ ನಿಮ್ಮ ಬೈಕಿನ ಸಾಮರ್ಥ್ಯದ ಬಗ್ಗೆ ನಿಮಗೆ ಸಂಪೂರ್ಣ ಅರಿವಿರಬೇಕು. ದಿನಾ ಗಾಡಿ ಹತ್ತೋದಕ್ಕೆ ಮುಂಚೆ ಬ್ರೇಕ್, ಲೈಟ್ ಮತ್ತು ಹಾರ್ನ್ ಚೆಕ್ ಮಾಡಲೇಬೇಕು, ಯಾವ ವೇಗಕ್ಕೆ ಎಷ್ಟು ಬ್ರೇಕ್ ಹೊಡೀಬೇಕು ಅನ್ನೋದು ನಿಮಗೆ ಗೊತ್ತಿರಬೇಕು. ಎಲ್ಲದರಿಂದ ತಪ್ಪಿಸಿಕೊಂಡರೂ ಮಳೆ, ಬಿಸಿಲು, ಚಳಿ, ಗಾಳಿಯ ಹೊಡೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಂತಹ ನಿಪುಣ, ಅನುಭವಸ್ಥ ಸವಾರ ಕೂಡ ಅಪಘಾತಕ್ಕೆ ಸಿಲುಕುತ್ತಾನೆ ಎನ್ನುವುದಕ್ಕೆ ಇತ್ತೀಚೆಗೆ ಬೆಂಗಳೂರಿನ ನಿಷ್ಣಾತ ಬೈಕ್​ರೈಡರ್ ಕಿಂಗ್ ರಿಚರ್ಡ್ ಶ್ರೀನಿವಾಸನ್ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಒಂಟೆಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವುದೇ ಸಾಕ್ಷಿ. ಈ ಅಪಘಾತಕ್ಕೆ ಕಾರಣ ರಾತ್ರಿ ಸಮಯ, ಮರಳುಗಾಡು, ಅನಿರೀಕ್ಷಿತವಾಗಿ ಅಡ್ಡ ಬಂದ ಒಂಟೆ ಆಗಿತ್ತಾದರೂ ಇಂತಹ ಸಂದಿಗ್ಧ ಸಂದರ್ಭವನ್ನು ಆ ಸವಾರ ನಿರೀಕ್ಷಿಸಿರಬೇಕಿತ್ತು. ಕೆಲವರು ಮುಂದಿನಿಂದ ವಾಹನ ಬರುತ್ತಿದ್ದರೂ ಸನ್ನೆಗಳ ಮೂಲಕ ನಿಮ್ಮನ್ನು ಮುಂದೆ ಕಳುಹಿಸಿ ಮಜಾ ನೋಡುತ್ತಾರೆ. ಇತರ ಸವಾರರಿಗೂ ಸೂಕ್ತ ಸನ್ನೆಗಳನ್ನು ಕೊಡುತ್ತ ಅವರೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ವಾಹನ ಚಲಾಯಿಸುವಾಗ ಯಾರಿಗೆ ಏನಾದರೂ ಆಗಲಿ ನಾವು ಮಾತ್ರ ಸುರಕ್ಷಿತವಾಗಿದ್ದರೆ ಸಾಕು ಎಂಬ ಮನಸ್ಥಿತಿ ಬೇಡ. ಮನುಷ್ಯತ್ವ ಸದಾ ಜಾಗೃತವಾಗಿರಲಿ.

    ಜೋಕು: ಕಾರನ್ನು ತಡೆದ ಪೊಲೀಸ್​ಗೆ ಗುಂಡ ದಬಾಯಿಸಿದ. ‘ನಾನು ಬೆಲ್ಟ್ ಹಾಕದೇ, ಲೈಸೆನ್ಸ್ ಇಲ್ಲದೇ, ಓವರ್​ಸ್ಪೀಡಾಗಿ ಓಡಿಸ್ತಾ ಇದ್ದೀನಿ. ನಾನು ಅಬಕಾರಿ ಮಂತ್ರಿ ಗೊತ್ತೇನಯ್ಯಾ’ ಎಂದಾಗ, ಹೆದರಿದ ಪೊಲೀಸು ಬಿಡಲು ತಯಾರಾದ. ಆಗ ಪಕ್ಕದಲ್ಲಿಯೇ ಕೂತಿದ್ದ ಗುಂಡನ ಹೆಂಡತಿ ಹೇಳಿದಳು, ‘ಅವು› ಕುಡಿದಾಗ ಏನೇನೋ ಮಾತಾಡ್ತಾರೆ. ಬಿಟ್ಟು ಬಿಡಿ ಸರ್’.

    ಪೊಲೀಸು, ‘ಹಾಂ’ ಎನ್ನುತ್ತ ಎಲ್ಲಕ್ಕೂ ಸೇರಿ ರಶೀದಿ ಹರಿದ.

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts