More

    ಪ್ರಯತ್ನವನ್ನು ನಂಬಿ, ಅದೃಷ್ಟವನ್ನಲ್ಲ…

    ಪ್ರಯತ್ನವನ್ನು ನಂಬಿ, ಅದೃಷ್ಟವನ್ನಲ್ಲ...ಯಾವುದೋ ಕೆಲಸವನ್ನು ಮುತುವರ್ಜಿಯಿಂದ ಪ್ರಾರಂಭಿಸಿ ಅದರಲ್ಲಿ ಸೋತಿರೆಂದಿಟ್ಟುಕೊಳ್ಳೋಣ. ಇದಕ್ಕಾಗಿ ನಿರಾಶರಾಗಬೇಕಿಲ್ಲ. ಆ ಸೋಲಿಗೆ ನಾನಾ ಕಾರಣಗಳು ಇರಬಹುದು. ನಿಮ್ಮ ಪ್ರಯತ್ನ ಸಾಕಾಗದೆ ಇರಬಹುದು. ಸಿದ್ಧತೆಯಲ್ಲಿ ಶ್ರಮ ಕಡಿಮೆಯಾಗಿರಬಹುದು, ಅನುಭವದ ಕೊರತೆ ಇರಬಹುದು. ಗಮ್ಯಸ್ಥಾನದ ಬಗ್ಗೆ ಸ್ಪಷ್ಟವಾದ ಕಲ್ಪನೆ, ಸರಿಯಾದ ಪ್ರಯತ್ನವಿದ್ದಲ್ಲಿ ಮಾತ್ರ ಗೆಲ್ಲೋದಕ್ಕೆ ಸಾಧ್ಯ. ಪ್ರಯತ್ನ, ಬುದ್ಧಿಮತ್ತೆಯೇ ಸಾಧನೆಗೆ ಅಡಿಗಲ್ಲಾಗಲಿ.

    ಕೈಯಲ್ಲಿ ಬಿಡಿಕಾಸಿಲ್ಲದೆ ಬೆಂಗಳೂರು ಸೇರಿದ ರವಿ ಬೆಳಗೆರೆ ತಮ್ಮದೇ ಆದ ಸಾಮ್ರಾಜ್ಯವನ್ನು ಕಟ್ಟಿದರು. ಅವರೇ ಹೇಳುತ್ತಿದ್ದಂತೆ ಇದಕ್ಕೆ ಅವರ ಕತೃತ್ವ ಶಕ್ತಿಯೇ ಕಾರಣ. ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ ಹೊರಟರೆ ಯಾವುದನ್ನೂ ಸರಿಯಾಗಿ ಮಾಡೋಲ್ಲ. ಬೇರೆ ಬೇರೆ ರಂಗಗಳಲ್ಲಿ ಗೆದ್ದ ವ್ಯಕ್ತಿಗಳ ಸಲಹೆ, ಸೂಚನೆ ತಗೊಂಡು ಮುನ್ನಡೆಯಿರಿ. ಏನೋ ದೇವರ ದಯೆಯಿಂದ ಗೆದ್ದೆ ಎಂದು ಹೇಳುವವರಿರ್ತಾರೆ. ಇದನ್ನು ನಂಬಬೇಡಿ. ಗೆಲ್ಲಲು ಅವರು ಏನು ಮಾಡಿದ್ರು ಎಂಬುದನ್ನು ತಿಳ್ಕೊಳ್ಳಿ.

    ಹೈದರಾಬಾದಿನ ರಾಮೋಜಿ ರಾವ್ ಫಿಲ್ಮ್​ಸಿಟಿಯ ನಿರ್ಮಾತೃ ರಾಮೋಜಿ ರಾವ್ ಅವರ ಯಶಸ್ವಿ ಜೀವನಗಾಥೆಯೇ ರೋಮಾಂಚಕ ಮತ್ತು ಪ್ರೇರಕ. ಮೂಲತಃ ರಾಮೋಜಿ ರಾವ್ ಚಿಕ್ಕ ದಿನಸಿ ವ್ಯಾಪಾರಿಯಾಗಿದ್ದವರು. ಅಲ್ಲಿ ಬಂದ ಲಾಭವನ್ನು, ಉಳಿದವರು ಮಾಡುವಂತೆ, ಬ್ಯಾಂಕಿನಲ್ಲಿಡಲು ಅಥವಾ ಮನೆಕಟ್ಟಿಸಲು ಉಪಯೋಗಿಸಲಿಲ್ಲ. ಬದಲಿಗೆ ಈ ಹಣವನ್ನು ಬಳಸಿಕೊಂಡು ಉಪ್ಪಿನಕಾಯಿ ವ್ಯಾಪಾರಕ್ಕೆ ಮುಂದಾದರು. ವರ್ಷದ ಯಾವುದೇ ದಿನದಲ್ಲಿ ಯಾವುದೇ ವೆರೈಟಿಯ ಉಪ್ಪಿನಕಾಯಿಯನ್ನು ಎಷ್ಟೇ ಪ್ರಮಾಣದಲ್ಲಿ ಒದಗಿಸುವುದು ಅವರ ಆಶಯವಾಗಿತ್ತು. ಅಂದುಕೊಂಡಂತೆಯೇ ಅವರು ಮಾಡಿಯೂ ತೋರಿಸಿದರು. ಅಷ್ಟೇ ಅಲ್ಲ, ಮನೆಯಲ್ಲಿ ಹೆಂಗಸರು ತಯಾರಿಸಿದ ಉಪ್ಪಿನಕಾಯಿಗಿಂತ ಹತ್ತು ಪಟ್ಟು ಚೆನ್ನಾಗಿರುವ ಉಪ್ಪಿನಕಾಯಿಯನ್ನು ತಯಾರಿಸಿ ಲಕ್ಷಾಂತರ ರೂಪಾಯಿ ಲಾಭ ಸಂಪಾದಿಸಿದರು.

    ಲಕ್ಷ ಲಕ್ಷದ ಲೆಕ್ಕದಲ್ಲಿ ದುಡ್ಡು ಹರಿದು ಬಂದಾಗ ರಾಯರು ಮೈಮರೆಯಲಿಲ್ಲ, ತೆಪ್ಪಗೆ ಕೂರಲಿಲ್ಲ. ಬದಲಿಗೆ ‘ಈ ನಾಡು’ ಎಂಬ ತೆಲುಗು ದಿನಪತ್ರಿಕೆಯನ್ನು ಪ್ರಾರಂಭಿಸಿದರು. ಅದು ತೆಲುಗಿನ ನಂ. 1 ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರ ಅವರು ನೋಡಿದ್ದು ಸಿನಿಮಾ ಇಂಡಸ್ಟ್ರಿ ಕಡೆಗೆ. ಒಂದು ಸಿನಿಮಾ ಚಿತ್ರೀಕರಣಕ್ಕೆ ಹೊರಾಂಗಣ ಘಟಕ, ಒಳಾಂಗಣ ಘಟಕ, ಮೈದಾನ, ಈಜುಕೊಳ, ಅರಮನೆ, ಸೆರೆಮನೆ ಇವೆಲ್ಲ ಬೇಕು ತಾನೆ? ಇದೆಲ್ಲ ಒಂದೇ ಕಡೆ ಇರಬೇಕು ಎಂದು ಯೋಚಿಸಿದ ರಾಮೋಜಿ ರಾವ್ ಹೈದರಾಬಾದ್​ನಿಂದ 35 ಕಿ.ಮೀ. ದೂರದಲ್ಲಿ ಚಿತ್ರನಗರಿ ನಿರ್ವಿುಸಿಯೇ ಬಿಟ್ಟರು. ಇವತ್ತು ರಾಮೋಜಿ ಫಿಲ್ಮ್​ಸಿಟಿಯಲ್ಲಿ ಏನಿಲ್ಲ ಎಂಬುದನ್ನು ಭೂತಗಾಜು ಹಾಕಿ ಹುಡುಕಬೇಕು, ಹಾಗಿದೆ ಆ ಜಾಗ. ಈ ಸಾಹಸದ ನಂತರ ಉಷಾಕಿರಣ ಮೂವೀಸ್ ಲಾಂಛನದಲ್ಲಿ ಹತ್ತಾರು ಸಿನಿಮಾ ನಿರ್ವಿುಸಿದ ಅವರು ಈಟೀವಿ ವಾಹಿನಿಯನ್ನೂ ಪ್ರಾರಂಭಿಸಿದರು. ಹೆಸರು, ಹಣ, ಖ್ಯಾತಿ, ಯಶಸ್ಸು ಪಡೆಯುವುದು ಹೇಗೆ ಎಂಬ ಪ್ರಶ್ನೆಗೆ ‘ರಾಮೋಜಿ ರಾಯರ’ ಉದಾಹರಣೆ ಸಾಕಲ್ಲವೇ?

    ಯಶಸ್ವೀ ಹೋಟೆಲಿನ ಮಾಲೀಕ ದೇವರ ಫೋಟೋ ಇಟ್ಟುಕೊಂಡಿರ್ತಾನೆ. ಆದರೆ ಆತ ಎಷ್ಟು ಹೋಟೆಲ್​ಗಳಲ್ಲಿ ಪಾತ್ರೆ ತೊಳೆಯುವವನಾಗಿ, ರುಬ್ಬುವವನಾಗಿ, ಮಾಣಿಯಾಗಿ ಕೆಲಸ ಮಾಡಿದ್ದ ಎಂಬುದನ್ನು ತಿಳ್ಕೊಳ್ಳಿ. ಗೆದ್ದ ಮನುಷ್ಯ ಮೈಕೆಲ್ ಜಾಕ್ಸನ್​ನ ಫೋಟೋ ಇಟ್ಟುಕೊಂಡ್ರೂ ನಡೆಯುತ್ತೆ. ಸೋತ ಮನುಷ್ಯ ಪದೇಪದೆ ಜಪ, ಹೋಮ, ಪೂಜೆ, ಶಾಂತಿ ಅಂತ ಮತ್ತೂ ಸಮಯ ಕಳೀತಿರ್ತಾನೆ. ಸತತ ಪ್ರಯತ್ನದಿಂದ ಗೆಲವು ನಿಮ್ಮದಾದಲ್ಲಿ ಇದು ದೇವರ ಕೃಪೆ ಎಂದು ಹೇಳುತ್ತೀರಾದ್ರೆ ಇದು ನಿಮ್ಮ ಒಳ್ಳೇತನ ತೋರಿಸುತ್ತೆ. ದೇವರ ದಯೆಯಿದ್ದಲ್ಲಿ ಗೆದ್ದೇ ಗೆಲ್ಲುತ್ತೇನೆಂದರೆ ಇದು ದಡ್ಡತನ, ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತೆ.

    ಜೀವನ ಬಹಳ ಚಿಕ್ಕದು. ಸೋಲು ಶಾಶ್ವತವಲ್ಲ. ಯೌವನವನ್ನೆಲ್ಲ ಯಾವುದೇ ಪ್ರಯತ್ನಗಳನ್ನು ಮಾಡದೇ ಕಳೆದು ವೃದ್ಧಾಪ್ಯದಲ್ಲಿ ನಾನು ಹಾಗೆ ಮಾಡಬಹುದಿತ್ತು, ಹೀಗೆ ಮಾಡಬಹುದಿತ್ತು ಎಂದು ಅಂದುಕೊಂಡ್ರೆ ಏನು ಫಲ?

    ಪ್ರಯತ್ನವನ್ನು ನಂಬಿ, ಅದೃಷ್ಟವನ್ನಲ್ಲ...

    ಆಸಕ್ತಿಗೆ ತಣ್ಣೀರೆರೆಚಬೇಡಿ: ನಮ್ಮಲ್ಲಿ ಬಹಳ ಮಂದಿ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನು ಕಡೆಗಣಿಸಿ ತಮಗಿರುವ ಆಸಕ್ತಿಯನ್ನು ಮಕ್ಕಳ ಮೇಲೆ ಹೊರಿಸ್ತಾರೆ. ಇದು ತಪ್ಪು. ಸಂಗೀತದಲ್ಲಿ ಆಸಕ್ತಿ ಇರುವ ಮಕ್ಕಳನ್ನು ಡಾಕ್ಟರ್ ಮಾಡಬೇಕೆಂದು ಬಯಸ್ಬೇಡಿ. ನಿಮ್ಮ ಒತ್ತಡದಿಂದಾಗಿ ಆ ಮಗು ಡಾಕ್ಟರ್ರೂ ಆಗೋಲ್ಲಾ, ಸಂಗೀತಗಾರನೂ ಆಗೋಲ್ಲಾ. ಸಂಗೀತದಲ್ಲಿ ಏನ್ ಮಹಾ ದುಡ್ಡಾಗುತ್ತೆ ಅನ್ನುವವ್ರೂ ಇದ್ದಾರೆ. ಎ.ಆರ್. ರೆಹಮಾನ್ ಮುಂತಾದವರು ದುಡ್ಡು, ಕೀರ್ತಿ ಮಾಡಿಲ್ಲವೇ? ನನ್ನನ್ನು ಕೆಲವರು ‘ಏನು ಮಾಡ್ತೀಯಾ’ ಅಂತ ಕೇಳಿದ್ರೆ ‘ಮ್ಯಾಜಿಕ್ ಮಾಡ್ತೇನೆ’ ಅಂತಿದ್ದೆ. ‘ಅದು ಸರಿ, ಆದರೆ ಹೊಟ್ಟೆಗೆ ಏನು ಮಾಡ್ತೀಯಾ?’ ಅಂತ ಮರುಪ್ರಶ್ನೆ ಕೇಳ್ತಿದ್ರು. ಅಂದರೆ ಮ್ಯಾಜಿಕ್ ಮಾಡಿ ಹಣ ಸಂಪಾದನೆ ಅಸಾಧ್ಯ ಅನ್ನೋದು ಅವರ ಅಭಿಪ್ರಾಯ ಆಗಿತ್ತು. ಆದರೆ, ನಾನು ಮ್ಯಾಜಿಕ್ ಮಾಡ್ತಾನೇ ಕೋಟ್ಯಧಿಪತಿ ಆದೆ.

    ನೀವು ಯಾವುದೇ ಸಂಸ್ಥೆಯನ್ನು ನಡೆಸುವ ವ್ಯಕ್ತಿಯಾಗಿದ್ದಲ್ಲಿ ಸಂಸ್ಥೆಯ ಪ್ರತಿಯೊಂದು ಕೆಲಸಕ್ಕೆ ಸಂಬಂಧಪಟ್ಟ ಸ್ವತಃ ಅನುಭವ ಇರ್ಬೇಕು. ಯಾಕಂದ್ರೆ ಏನಾದರೂ ತೊಂದರೆಗಳಿದ್ದಲ್ಲಿ ನಿಮ್ಮ ಅನುಭವಕ್ಕೆ ಬರುತ್ತೆ. ಪರಿಹಾರ ಸುಲಭವಾಗುತ್ತೆ. ನನಗೆ ಬ್ಯಾಂಕಲ್ಲಿ ಕೆಲಸ ಸಿಗುವ ಅವಕಾಶವಿದ್ದಾಗ ನನ್ನ ಅಕ್ಕ, ಭಾವ, ಅಮ್ಮ, ‘ಸಿಕ್ಕಿದ ಕೆಲಸ ಬಿಡ್ಬೇಡ, ತಿಂಗಳಿಗೆ ಒಂದು ಸಾವಿರ ಬರುತ್ತೆ’ ಎಂಬ ಸಲಹೆ ಇತ್ತರು. ದುಡ್ಡು ಮಾಡೋದೇ ನನ್ನ ಗುರಿಯಾಗಿದ್ದಿದ್ದರೆ ನಾನು ಮ್ಯಾಜಿಕ್ ಮಾಡೋದನ್ನು ಬಿಡ್ತಿರ್ಲಿಲ್ಲ. ಅದರಲ್ಲಿ ನಿರಾಸಕ್ತಿ ಉಂಟಾದಾಗ ನಿಲ್ಲಿಸಲೂ ಗೊತ್ತಿರ್ಬೇಕು. ಬದುಕಲ್ಲಿ ದುಡ್ಡೇ ಮುಖ್ಯ ಅಲ್ಲ. ದುಡ್ಡು, ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯನ್ನು ಕೊಡುತ್ತೆ. ಆದರೆ ನಿಮ್ಮಿಂದ ಸಹಾಯ ಕೇಳೋರಿಗೆ ಅವರು ಯೋಗ್ಯರಾಗಿದ್ದಲ್ಲಿ ಸಹಾಯ ಮಾಡಿ. ಆಗ ಅದು ನಿಮಗೆ ತುಂಬ ಸಂತೋಷ ಕೊಡುತ್ತೆ.

    ಏಳು ಕೊಪ್ಪರಿಗೆಗಳ ಕತೆ ನೀವು ಕೇಳಿದ್ದೀರಾ? ಒಬ್ಬ ಬಡವ ಸುಖವಾಗಿ ಬದುಕುತ್ತಿರುತ್ತಾನೆ. ಅವನಿಗೆ ನೆಲ ಅಗೀತಿದ್ದಾಗ ಏಳು ಚಿನ್ನದ ಕೊಪ್ಪರಿಗೆಗಳು ಸಿಗ್ತವೆ. ಆದರೆ ಏಳನೇ ಕೊಪ್ಪರಿಗೇಲಿ ಒಂದಿಂಚು ಚಿನ್ನ ಕಮ್ಮಿ ಇರುತ್ತೆ. ಇದನ್ನು ತುಂಬಲು ಅವನು ಹಗಲೂ ರಾತ್ರಿ ಹೆಣಗಾಡಿ ಕೊನೆಗೊಂದು ದಿನ ಪ್ರಾಣ ಬಿಟ್ಟ. ಮನುಷ್ಯ ಸಾಕಷ್ಟಿದ್ದರೂ ಇನ್ನೂ ಬೇಕೆಂಬ ಆಸೆಯಿಂದ ಸುಖವಂಚಿತನಾಗ್ತಾನೆ. ಎಷ್ಟಿದೆಯೋ ಅಷ್ಟರಲ್ಲೇ ಬದುಕಲು ಕಲೀಬೇಕು, ಅತಿ ಆಸೆ ಕೆಟ್ಟದ್ದು ಅನ್ನೋದು ನೀತಿ. ಈಗ ನಿಮಗೆ ಮುಖ್ಯವಾಗಿ ಹೇಳಬೇಕಾಗಿರೋ ವಿಚಾರವೇನೆಂದರೆ ನಾನು ಹೇಳುವ ವಿಚಾರ ಮುಖ್ಯ ಅಲ್ಲ ಅನ್ನೋದು. ಈ ಜೀವನದಲ್ಲಿ ಯಾವುದೂ ಮುಖ್ಯ ಅಲ್ಲ ಅಂತ ನನಗನ್ನಿಸುತ್ತೆ ಮತ್ತು ಎಲ್ಲವೂ ಮುಖ್ಯ ಅಂತ ಕೂಡ ಅನ್ನಿಸುತ್ತೆ. ಈ ಮುಖ್ಯ-ಅಮುಖ್ಯಗಳ ನಡುವೆ ಇರೋ ನಮ್ಮ ಜೀವನ ಬಹಳ ಮುಖ್ಯ. ಯಾರನ್ನೂ ನೋಯಿಸದೆ, ಮೋಸ ಮಾಡದೆ, ಇನ್ನೊಬ್ಬರ ಮೇಲೆ ಹೊರೆ ಹಾಕದೆ, ನಾಲ್ಕು ಜನರಿಗೆ ಉಪಕಾರವಾಗುವಂತೆ ಬದುಕುವುದೇ ಮುಖ್ಯವಾದದ್ದು.

    ಜೋಕು: ಗುಂಡ ಪ್ರಾರ್ಥಿಸುತ್ತಿದ್ದ; ‘ದೇವರೇ, ನನ್ನ ಬಳಿ ಒಂದು ದುಡ್ಡಿನ ಚೀಲ ಮತ್ತು ಒಂದು ದೊಡ್ಡ ವಾಹನ ಇರುವಂತೆ ವರ ಕೊಡಪ್ಪಾ’ ದೇವರು ಪ್ರತ್ಯಕ್ಷನಾಗಿ ‘ತಥಾಸ್ತು’ ಎಂದ.

    ಈಗ ಗುಂಡ ಬಸ್ಸೊಂದರ ಕಂಡಕ್ಟರ್!

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts