More

    ಶಿವಮೊಗ್ಗದಲ್ಲಿ ರಂಗುರಂಗಿನ ಹೋಳಿ

    ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಸೀನಪ್ಪ ಶೆಟ್ಟಿ ವೃತ್ತ ಮಂಗಳವಾರ ಹೋಳಿಯ ಬಣ್ಣದಿಂದ ಕಳೆಗಟ್ಟಿತ್ತು. ಕೇಸರಿ ಅಲಂಕಾರ ಸಮಿತಿಯಿಂದ ಏರ್ಪಡಿಸಿದ್ದ ಹೋಳಿ ಸಂಭ್ರಮಾಚರಣೆಯಲ್ಲಿ ಕಾರಂಜಿ ನೃತ್ಯದ ಜತೆಗೆ ಡಿಜೆ ಅಬ್ಬರಕ್ಕೆ ಯುವಜನರು ಕುಣಿದು ಕುಪ್ಪಳಿಸಿದರು.ಮೂರು ತಾಸಿಗೂ ಹೆಚ್ಚು ಕಾಲ ನಡೆದ ಓಕುಳಿಯಲ್ಲಿ ನಗರದ ವಿವಿಧ ಭಾಗಗಳ ಯುವಕ, ಯುವತಿಯರು ಪಾಲ್ಗೊಂಡರು.

    ಚಿಕ್ಕ ಮಕ್ಕಳೂ ಬಣ್ಣ್ಣ ಎರಚಿ ಖುಷಿಪಟ್ಟರು. ನೂರಾರು ಸಂಖ್ಯೆಯಲ್ಲಿದ್ದ ನಾಗರಿಕರು ಬಣ್ಣದಲ್ಲಿ ಮಿಂದೆದ್ದರು. ನೆರೆದಿದ್ದವರು ಬಣ್ಣದ ನೀರನ್ನು ಪರಸ್ಪರ ಎರಚಿ ಸಂಭ್ರಮಿಸಿದರು.
    ಹೋಳಿ ಹಬ್ಬವೆಲ್ಲವೂ ಸೀನಪ್ಪ ಶೆಟ್ಟಿ ವೃತ್ತದಲ್ಲಿಯೇ ಕೇಂದ್ರಿಕೃತವಾಗಿತ್ತು. ಹೋಳಿ ಹಬ್ಬದ ಪ್ರಯುಕ್ತ ಡಿಜೆ ನೃತ್ಯ ಮತ್ತು ದೊಡ್ಡ ಟ್ಯಾಂಕರ್‌ಗಳ ಮೂಲಕ ಕಾರಂಜಿ ನೃತ್ಯವನ್ನು ಕೂಡ ಆಯೋಜಿಸಲಾಗಿತ್ತು. ನೀರಿನ ಕೊರತೆ ಹಿನ್ನೆಲೆಯಲ್ಲಿ ಕಾರಂಜಿ ನೃತ್ಯವನ್ನು ಕಡಿಮೆಗೊಳಿಸಿ ಡಿಜೆಗೆ ಯುವಕ ಯುವತಿಯರು ಹೆಜ್ಜೆ ಹಾಕಿದರು.
    ವೃತ್ತದ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಪೊಲೀಸರು ರಕ್ಷಣಾ ವ್ಯವಸ್ಥೆ ಬಿಗಿಗೊಳಿಸಿದ್ದರು. ಬಾಲರಾಜ ಅರಸ್ ರಸ್ತೆ, ದುರ್ಗಿಗುಡಿ, ಬಿ.ಎಚ್.ರಸ್ತೆಗಳ ಮೂಲಕ ಸೀನಪ್ಪ ಶೆಟ್ಟಿ ವೃತ್ತಕ್ಕೆ ವಾಹನ ಸಂಪರ್ಕವನ್ನು ಮಧ್ಯಾಹ್ನದವರೆಗೂ ನಿರ್ಬಂಧಿಸಲಾಗಿತ್ತು. ಎಂ.ಜೆ ಪ್ಯಾಲೇಸ್ ಕಟ್ಟಡ, ಶ್ರೀನಿಧಿ ಟೆಕ್ಸ್‌ಟೈಲ್ ಮುಂತಾದ ಕಟ್ಟಡಗಳಲ್ಲಿ ಜನರು ನಿಂತು ಹೋಳಿ ಸಂಭ್ರಮವನ್ನು ಕಣ್ತುಂಬಿಕೊಂಡರು.
    ಅಲ್ಲಿಗೆ ಬಂದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕೂಡ ಹೋಳಿ ಸಂಭ್ರಮದಲ್ಲಿ ಭಾಗಿಯಾದರು. ಅನೇಕರು ಸಂಸದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅವರಿಗೆ ಬಣ್ಣ ಎರಚಿ ಸಂಭ್ರಮಿಸಿದರು.
    ಇನ್ನೊಂದೆಡೆ ಬಸ್ ನಿಲ್ದಾಣ, ಗಾಂಧಿ ಬಜಾರ್, ಕೋಟೆ ರಸ್ತೆ, ವಿನೋಬನಗರ ಪೊಲೀಸ್ ಚೌಕಿ, ವಿದ್ಯಾನಗರ, ಕಲ್ಲಳ್ಳಿ, ಡಿವಿಎಸ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಸಾಗರ ರಸ್ತೆ, ಗೋಪಾಳ ಬಡಾವಣೆಗಳಲ್ಲಿ ಹೋಳಿ ಸಂಭ್ರಮ ಕಳೆಗಟ್ಟಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts