More

    ತೆರೆದಿದೆ ಕಾಲೇಜು ಓ ಬಾ ವಿದ್ಯಾರ್ಥಿ; ಇಂದೇ ಪದವಿ ತರಗತಿ ಶುರು…

    ಬೆಂಗಳೂರು: ಇವತ್ತಿನಿಂದಲೇ ಕಾಲೇಜುಗಳು ತೆರೆದಿದ್ದು, ಹಲವೆಡೆ ವಿದ್ಯಾರ್ಥಿಗಳೇ ಬರದಿರುವುದರಿಂದ ‘ತೆರೆದಿದೆ ಕಾಲೇಜು ಓ ಬಾ ವಿದ್ಯಾರ್ಥಿ’ ಎಂಬಂತಾಗಿದೆ. ಕರೊನಾ ಹಾವಳಿ ಇನ್ನೂ ಸಂಪೂರ್ಣವಾಗಿ ನಿವಾರಣೆ ಆಗದ್ದರಿಂದ ಸೂಕ್ತ ಮುಂಜಾಗ್ರತೆ ವಹಿಸಿಕೊಂಡೇ ವಿದ್ಯಾರ್ಥಿಗಳು ಆಗಮಿಸಬೇಕಾಗಿದೆ. ಸುಮಾರು 8 ತಿಂಗಳ ಬಳಿಕ ಕಾಲೇಜುಗಳು ಮತ್ತೆ ಆರಂಭವಾಗುತ್ತಿದ್ದು, ರಾಜ್ಯಾದ್ಯಂತ ಕಾಲೇಜು ಮರು ಆರಂಭ, ಅದಕ್ಕೆ ವಿದ್ಯಾರ್ಥಿಗಳ ಪ್ರತಿಕ್ರಿಯೆ ಹೇಗಿದೆ ಎಂಬ ಕುರಿತ ಒಂದಷ್ಟು ಮಾಹಿತಿಗಳು ಇಲ್ಲಿವೆ.

    ಬಾಗಲಕೋಟೆ

    ಜಿಲ್ಲೆಯಲ್ಲಿ ಕಾಲೇಜು ಆರಂಭಕ್ಕೆ ಸಿದ್ಧತೆ ಪೂರ್ಣಗೊಂಡಿದ್ದರೂ ವಿದ್ಯಾರ್ಥಿಗಳು ಆಗಮಿಸಿಲ್ಲ. ಸುರಕ್ಷತೆ ದೃಷ್ಟಿಯಿಂದ ಸ್ಯಾನಿಟೈಸರ್​ ಬಳಕೆ, ದೈಹಿಕ ಅಂತರಕ್ಕೆ ವ್ಯವಸ್ಥೆ ಮಾಡಿರುವ ಸಿಬ್ಬಂದಿ-ಬೋಧಕ ವರ್ಗ ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿದ್ದಾರೆ.

    ಬೆಳಗಾವಿ

    ಜಿಲ್ಲೆಯಲ್ಲಿ ಮತ್ತೆ ತರಗತಿ ಆರಂಭಿಸಲು ಕಾಲೇಜುಗಳನ್ನು ಸಜ್ಜುಗೊಳಿಸಲಾಗಿದ್ದರೂ ವಿದ್ಯಾರ್ಥಿಗಳು ಇನ್ನೂ ಕಾಲೇಜಿನತ್ತ ಸುಳಿದಿಲ್ಲ. ಬೆಳಗಾವಿ ನಗರದ ಬಹುತೇಕ ಕಾಲೇಜುಗಳು ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿವೆ. ರಜೆ ಮೂಡ್​ನಿಂದ ಹೊರ ಬರದ ವಿದ್ಯಾರ್ಥಿಗಳು ತರಗತಿಗೆ ಬರಲು ನಿರಾಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ. ಇಂದು ಕಾಲೇಜ್ ಆರಂಭಗೊಳ್ಳುವ ಬಗ್ಗೆ ಆಡಳಿತ ಮಂಡಳಿ ನಿನ್ನೆಯೇ ಮೆಸೇಜ್ ಕಳುಹಿಸಿದ್ದರೂ ಇಂದು ವಿದ್ಯಾರ್ಥಿಗಳು ಆಗಮಿಸಿಲ್ಲ.

    ಧಾರವಾಡ

    ಕಾಲೇಜುಗಳು ತೆರೆದಿದ್ದರೂ ಮೊದಲ ದಿನವೇ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಗೈರು ಕಂಡುಬಂದಿದೆ. ವಿದ್ಯಾರ್ಥಿಗಳು ಕರೊನಾ ಪರೀಕ್ಷಾ ವರದಿ ಸಮೇತ ಬರಬೇಕಿರುವುದರಿಂದ ಇನ್ನೂ ರಿಪೋರ್ಟ್ ಬರದ್ದರಿಂದ ವಿದ್ಯಾರ್ಥಿಗಳು ಬರಲಾಗಿಲ್ಲ ಎಂಬ ಮಾಹಿತಿಯೂ ಇದೆ.

    ಹುಬ್ಬಳ್ಳಿ

    ಇಲ್ಲಿ ಕಾಲೇಜುಗಳು ಆರಂಭಗೊಂಡಿದ್ದರೂ ವಿದ್ಯಾರ್ಥಿಗಳ ಅನುಪಸ್ಥಿತಿ ಎದ್ದು ಕಾಣುತ್ತಿದೆ. ನಗರದ ಪ್ರಸಿದ್ಧ ಜೆ.ಜಿ. ಕಾಲೇಜು ಭಣಗುಡುತ್ತಿದೆ. ನಗರದ ಇತರ ಕೆಲವು ಕಾಲೇಜುಗಳಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.

    ರಾಮನಗರ

    ಪದವಿ ತರಗತಿ ಪುನರಾರಂಭ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಲೇಜುಗಳನ್ನು ಸ್ಯಾನಿಟೈಸ್​ ಮಾಡಲಾಗುತ್ತಿದೆ. ರಾಮನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಇವತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗಷ್ಟೇ ತರಗತಿ ನಡೆಯಲಿದೆ. ಒಂದು ಡೆಸ್ಕ್​ಗೆ ಇಬ್ಬರು ವಿದ್ಯಾರ್ಥಿಗಳಂತೆ ಕೂರಲು ಅವಕಾಶ ಕಲ್ಪಿಸಲಾಗಿದೆ. ಆದರೆ ಇದುವರೆಗೂ ವಿದ್ಯಾರ್ಥಿಗಳು ಬಂದಿಲ್ಲ.

    ಕೋಲಾರ

    ಜಿಲ್ಲೆಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡು ಕಾಲೇಜುಗಳನ್ನು ತೆರೆದಿದ್ದರೂ ವಿದ್ಯಾರ್ಥಿಗಳು ಕಾಣುತ್ತಿಲ್ಲ.

    ಆನೇಕಲ್

    ಬೆಂಗಳೂರು ಗ್ರಾಮಾಂತರದ ಆನೇಕಲ್​ನಲ್ಲಿ ಕಾಲೇಜು ತೆರೆದಿದ್ದು ಕೆಲವು ವಿದ್ಯಾರ್ಥಿಗಳು ಬಂದಿದ್ದರೂ ಆಡಳಿತ ಮಂಡಳಿಯ ಪತ್ತೆ ಇಲ್ಲ. ವಿದ್ಯಾರ್ಥಿಗಳು ಬಂದಿದ್ದರೂ ಇಲ್ಲಿನ ಎ.ಎಸ್​.ಬಿ. ಪ್ರಥಮ ದರ್ಜೆ ಕಾಲೇಜು ಹತ್ತು ಗಂಟೆಯಾದರೂ ಬಾಗಿಲು ತೆರೆದಿಲ್ಲ. ಸ್ಯಾನಿಟೈಸ್ ಸೇರಿ ಸ್ವಚ್ಛತಾ ಕಾರ್ಯಗಳು ಕೂಡ ನಡೆದಿಲ್ಲ. ಇಬ್ಬರು ಸಿಬ್ಬಂದಿ ಮಾತ್ರ ಕಾಣುತ್ತಿದ್ದು, ಉಪನ್ಯಾಸಕರು ಯಾರೂ ಬಂದಿಲ್ಲ. ಗ್ರಾಮೀಣ ಭಾಗದ ಬಡಮಕ್ಕಳು ಓದುವ ಈ ಸರ್ಕಾರಿ ಕಾಲೇಜಿಗೆ ಮೂವರು ವಿದ್ಯಾರ್ಥಿಗಳು ಬಂದು ಕಾಯುತ್ತಿದ್ದಾರೆ.

    ರಾಯಚೂರು

    ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಪದವಿ ಕಾಲೇಜುಗಳಿದ್ದು, ನಿನ್ನೆಯೇ ಬಹುತೇಕ ಎಲ್ಲ ಕಾಲೇಜುಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಕಾಲೇಜು ಸಿಬ್ಬಂದಿ ಮುಂಜಾನೆಯಿಂದಲೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು, ವಿದ್ಯಾರ್ಥಿಗಳು ಬರಲಾರಂಭಿಸಿದ್ದಾರೆ.

    ಉಡುಪಿ

    ಜಿಲ್ಲೆಯ 31 ಕಾಲೇಜುಗಳ ಆರಂಭದ ಹಿನ್ನೆಲೆಯಲ್ಲಿ ಈಗಾಗಲೇ 23 ಕಾಲೇಜಿನ ವಿದ್ಯಾರ್ಥಿ ಮತ್ತು ಸಿಬ್ಬಂದಿಯ ರ‍್ಯಾಪಿಡ್ ಟೆಸ್ಟ್​ ಮಾಡಲಾಗಿದೆ. ಇಂದು 8 ಕಾಲೇಜುಗಳಲ್ಲಿ ಕರೊನಾ ಟೆಸ್ಟ್​ ನಡೆಯುತ್ತಿದೆ. ಹೊರರಾಜ್ಯ ಮತ್ತು ದೇಶದ ವಿದ್ಯಾರ್ಥಿಗಳಿಗೆ ಏರ್​ಪೋರ್ಟ್​ನಲ್ಲೇ ಕರೊನಾ ಟೆಸ್ಟ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ರಿಪೋರ್ಟ್ ಜತೆಗಿಟ್ಟುಕೊಂಡಿರಬೇಕು. ಕ್ಯಾಂಟೀನು ಗ್ರಂಥಾಲಯ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಅವಕಾಶವಿಲ್ಲ.

    ಮಂಗಳೂರು

    ಕಾಲೇಜುಗಳು ಸಕಲ ಸಿದ್ಧತೆಯೊಂದಿಗೆ ಬಾಗಿಲು ತೆರೆದಿದ್ದು, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಬರಲಾರಂಭಿಸಿದ್ದಾರೆ. ಕರೊನಾ ನೆಗೆಟಿವ್​ ವರದಿ ಇರುವವರಿಗಷ್ಟೇ ಪ್ರವೇಶ ನೀಡಲಾಗುತ್ತಿದೆ.

    ಮೈಸೂರು

    ಜಿಲ್ಲೆಯಲ್ಲಿ ಕಾಲೇಜು ಆರಂಭಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿದ್ದು, ಮೈಸೂರಿನ ಜೆಎಸ್ಎಸ್ ಮಹಿಳಾ ಕಾಲೇಜಿನ 181 ಸಿಬ್ಬಂದಿಗೆ ಕರೊನಾ ಟೆಸ್ಟ್​ ಮಾಡಲಾಗಿದೆ.

    ಹಾವೇರಿ

    ಜಿಲ್ಲೆಯಲ್ಲಿ ಕಾಲೇಜು ಆರಂಭಕ್ಕೆ ಎಲ್ಲ ತಯಾರಿ ನಡೆಸಲಾಗಿದ್ದರೂ ವಿದ್ಯಾರ್ಥಿಗಳು ಇನ್ನಷ್ಟೇ ಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts