More

    ಕೊಳ್ಳೇಗಾಲದ ಹಲವೆಡೆ ಸೀಲ್‌ಡೌನ್

    ಕೊಳ್ಳೇಗಾಲ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗುರುವಾರ ಕರೊನಾ ಸೋಂಕು ಪತ್ತೆಯಾಗಿದ್ದು, ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಸೀಲ್‌ಡೌನ್ ಮಾಡಿದೆ.


    ದೇವಾಂಗಪೇಟೆಯ ಶ್ರೀಸುಬ್ರಹ್ಮಣ್ಯಗುಡಿ ಬೀದಿಯಲ್ಲಿರುವ ತಂದೆ ಮನೆಗೆ 2 ದಿನದ ಹಿಂದೆ 14 ವರ್ಷದ ಸೋಂಕಿತ ಬಂದಿದ್ದ ಹಿನ್ನೆಲೆಯಲ್ಲಿ ಬಡಾವಣೆಯನ್ನು ತಹಸೀಲ್ದಾರ್ ಕೆ.ಕುನಾಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್, ಪಿಎಸ್‌ಐ ರಾಜೇಂದ್ರ ಅವರು ಸೀಲ್‌ಡೌನ್ ಮಾಡಿದ್ದಾರೆ.


    ಅಲ್ಲದೆ ಬಾಲಕ ತನ್ನ ಅಜ್ಜಿ ಮತ್ತು ಇಬ್ಬರು ಚಿಕ್ಕಮ್ಮಂದಿರ ಜತೆ ವಾಸಿಸುತ್ತಿದ್ದ ಪಟ್ಟಣದ ಮಂಜುನಾಥನಗರ ಬಡಾವಣೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಮತ್ತೊಂದೆಡೆ ದೇವಾಂಗಪೇಟೆ ಹೊಸಬೀದಿಯಲ್ಲಿ ಆರೋಗ್ಯ ಇಲಾಖೆಯ ನಿವೃತ್ತ ಅಧೀಕ್ಷಕರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದು ಅವರು ವಾಸಿಸುತ್ತಿದ್ದ ಬೀದಿಯನ್ನು ಸೀಲ್‌ಡೌನ್ ಮಾಡಲಾಗಿದೆ.


    ಸೋಂಕಿತನೊಬ್ಬ ಬೆಂಗಳೂರಿನಿಂದ ಆಗಮಿಸಿ ಭೀಮನಗರದ ಹೊಸಬೀದಿಯ ಸಂಬಂಧಿಕರ ಮನೆಯಲ್ಲಿ 2 ದಿನಗಳಿಂದ ಉಳಿದುಕೊಂಡಿದ್ದರು ಎಂಬ ವಿಚಾರ ತಿಳಿದು ನಿವಾಸಿಗಳು ಗಾಬರಿಗೊಂಡಿದ್ದರು. ಬಳಿಕ ಸ್ಥಳಕ್ಕೆ ನಗರಸಭಾ ಆರೋಗ್ಯ ನಿರೀಕ್ಷಕ ಶ್ರೀಕಾಂತ್ ವಿಭೂತಿ ತೆರಳಿ ಬೀದಿಯನ್ನು ಸೀಲ್ ಡೌನ್ ಮಾಡಿ ದ್ರಾವಣ ಸಿಂಪಡಿಸಿದ್ದಾರೆ.


    ಅಧಿಕಾರಿಗಳು ಸ್ಥಳಕ್ಕೆ ಬರುವುದನ್ನು ಅರಿತು ಸೋಂಕಿತ ಅಲ್ಲಿಂದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಅಧಿಕಾರಿಗಳು ಆತನ ಪತ್ತೆಯಲ್ಲಿ ತೊಡಗಿದ್ದು ಸೋಂಕಿತ ಉಳಿದಿದ್ದ ಮನೆಯವರನ್ನು ಕೋವಿಡ್-19 ತಪಾಸಣೆಗೆ ಒಳಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts