More

    ಸೆಕೆಯ ನಡುವೆ ಚಳಿ ಕಚಗುಳಿ: ರಾತ್ರಿಯಿಂದ ಮುಂಜಾನೆವರೆಗೂ ತಂಪಿನ ಅನುಭವ

    ಭರತ್ ಶೆಟ್ಟಿಗಾರ್ ಮಂಗಳೂರು
    ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ಚಳಿಯ ಕಚಗುಳಿ ತೀವ್ರವಾಗಬೇಕಿತ್ತು. ಆದರೆ ಈ ಬಾರಿ ವಾರದ ಹಿಂದಿನವರೆಗೂ ಮಳೆಯ ಅಬ್ಬರವಿದ್ದುದರಿಂದ ಚಳಿಯ ತುಸು ವಿಳಂಬವಾಗಿ ಆಗಮನವಾಗಿದ್ದು, ನಿಧಾನವಾಗಿ ಚಳಿ ಹೆಚ್ಚಾಗುತ್ತಿದೆ.

    ಇದಕ್ಕೂ ಮೊದಲು ನವೆಂಬರ್ ಕೊನೆಯಲ್ಲಿ ಎರಡು ಮೂರು ದಿನ ಮೈಕೊರೆಯುವ ಚಳಿ ಇತ್ತು. ಆದರೆ ಬಳಿಕ ಸುರಿದ ಮಳೆಯಿಂದಾಗಿ ಚಳಿಯ ವಾತಾವರಣ ದೂರವಾಗಿದೆ. ಸದ್ಯ ಮುಂಜಾನೆ ಚಳಿಯಿದ್ದರೆ, ಹಗಲು ವೇಳೆ ಉರಿ ಸೆಕೆ ಜನರನ್ನುಹೈರಾಣಾಗಿಸುತ್ತಿದೆ. ಬೆಳಗ್ಗೆ 9ಕ್ಕೆ ಆರಂಭವಾಗುವ ಉರಿಸೆಕೆ, ಸೂರ್ಯಾಸ್ತದವರೆಗೂ ಇರುತ್ತದೆ. ಆ ಬಳಿಕ ತಾಪಮಾನ ಇಳಿಕೆಯಾಗುತ್ತ ಸಾಗುತ್ತದೆ. ಮುಂಜಾನೆ ವೇಳೆ ಕಚಗುಳಿ ಜೋರಾಗುತ್ತದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ಹವಾಮಾನ ತಜ್ಞರು.

    ಸದ್ಯ ಮಂಗಳೂರಿನಲ್ಲಿ ಮುಂಜಾನೆ ವೇಳೆ 20 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಮಟ್ಟಕ್ಕೆ ತಾಪಮಾನ ಹೋಗುತ್ತಿದೆ. ಗ್ರಾಮೀಣ ಭಾಗದಲ್ಲಿ ಇದು ಇನ್ನಷ್ಟು ಕನಿಷ್ಠ ಮಟ್ಟಕ್ಕೆ ಅಂದರೆ 18 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಯುತ್ತದೆ. ಹಗಲಿನ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿದೆ. ಕಳೆದ ವರ್ಷ ಹಾಗೂ ಅದರ ಹಿಂದಿನ ವರ್ಷಗಳಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ದೇಶದಲ್ಲೇ ಗರಿಷ್ಠ ತಾಪಮಾನ ದಾಖಲಾಗಿತ್ತು. 36-38 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ಏರಿಕೆಯಾಗಿತ್ತು. ಆದರೆ ಈ ಬಾರಿ ಅಷ್ಟಾಗಿ ಏರಿಕೆಯಾಗಿಲ್ಲ ಎನ್ನುವುದು ಸದ್ಯದ ಸಮಾಧಾನಕರ ಸಂಗತಿ.

    ಹಿಂಗಾರಿನಲ್ಲಿ ಉತ್ತಮ ಮಳೆ: ಉಭಯ ಜಿಲ್ಲೆಗಳಲ್ಲಿ ಈ ಬಾರಿ ಹಿಂಗಾರು ಮಳೆ ಉತ್ತಮವಾಗಿಯೇ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3.73 ಸೆಂ.ಮೀ. ವಾಡಿಕೆ ಮಳೆ ಸುರಿಯಬೇಕಾದಲ್ಲಿ 8.18 ಸೆಂ.ಮೀ. ಸುರಿದಿದೆ. ಶೇ.120ರಷ್ಟು ಹೆಚ್ಚುವರಿ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 3.10 ಸೆಂ.ಮೀ. ವಾಡಿಕೆ ಮಳೆ ಸುರಿಯಬೇಕಾದಲ್ಲಿ 7.3 ಸೆಂ.ಮೀ. ಆಗಿದೆ. ಶೇ.138ರಷ್ಟು ಹೆಚ್ಚುವರಿ ಮಳೆಯಾಗಿದೆ. ಡಿಸೆಂಬರ್ ಮೊದಲ ವಾರದವರೆಗೂ ಸುರಿದ ಮಳೆ, ಬಳಿಕ ಕಡಿಮೆಯಾಗಿದೆ.

    ಹೂ ಬಿಡುವಲ್ಲಿ ವಿಳಂಬ: ಗೇರು-ಮಾವಿನ ಮರಗಳು ಹೂ ಬಿಡುವ ವೇಳೆಯಲ್ಲೇ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಈ ಬಾರಿ ಫಸಲಿನ ಮೇಲೆಯೂ ಪರಿಣಾಮ ಬೀಳಲಿದೆ. ಚಳಿ ಇನ್ನಷ್ಟು ಹೆಚ್ಚಾದರೆ, ಗೇರು-ಮಾವಿನ ಮರಗಳಲ್ಲಿ ಮತ್ತೆ ಹೂ ಕಾಣಿಸುವ ಸಾಧ್ಯತೆಯಿದೆ. ಆದರೆ ಈ ವೇಳೆಗಾಗಲೇ ಹೂ ಬಿಟ್ಟು, ಮಿಡಿಗಳು ಕಾಣಿಸಿಕೊಳ್ಳಬೇಕಿತ್ತು. ಇನ್ನೊಂದೆಡೆ ಬಹುತೇಕ ಕಡೆಗಳಲ್ಲಿ ಸುಗ್ಗಿ ಭತ್ತದ ಬಿತ್ತನೆಯೂ ಆರಂಭವಾಗಿದ್ದು, ನೇಜಿ ಉತ್ತಮವಾಗಿಯೇ ಬಂದಿದೆ. ಚಳಿ ಉತ್ತಮವಾಗಿದ್ದರೆ, ಭತ್ತದ ಬೆಳೆಯೂ ಚೆನ್ನಾಗಿ ಬರಲಿದೆ ಎನ್ನುವುದು ಕೃಷಿಕರ ಮಾತು.

    ಮಂಗಳೂರು ತಾಪಮಾನ (ಡಿಗ್ರಿ ಸೆಲ್ಶಿಯಸ್):
    ದಿನಾಂಕ ಕನಿಷ್ಠ ಗರಿಷ್ಠ
    ಡಿ. 7 20.9 30.9
    ಡಿ.8 22 32.6
    ಡಿ.9 20.5 33
    ಡಿ.19 21.9 32.6
    ಡಿ.20 20.4 32.2

    ಉತ್ತರ ಭಾರತದಲ್ಲಿ ಚಳಿಯ ಕಚಗುಳಿ ಆರಂಭವಾಗಿದ್ದು, ಮೈನಸ್ ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ತಲುಪುತ್ತಿದೆ. ಕರಾವಳಿಯಲ್ಲೂ ಮುಂದಿನ ದಿನಗಳಲ್ಲಿ ಚಳಿ ಇನ್ನಷ್ಟ ತೀವ್ರಗೊಳ್ಳುವ ಸಾಧ್ಯತೆಯಿದೆ. ಇದೇ ವೇಳೆ ಹಗಲಿನಲ್ಲಿ ತಾಪಮಾನವೂ ಹೆಚ್ಚಾಗಲಿದೆ.
    ಸುನೀಲ್ ಗಾವಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts