More

    ಕಾಫಿ, ಚಹಾ ಮತ್ತು ಹಲ್ಲುಗಳ ಆರೋಗ್ಯ

    ಕಾಫಿ, ಚಹಾ ಮತ್ತು ಹಲ್ಲುಗಳ ಆರೋಗ್ಯಕಾಫಿ ಮತ್ತು ಚಹಾ ವಿಶ್ವದ ಜನಪ್ರಿಯ ಪೇಯಗಳು. ಇವುಗಳಿಲ್ಲದೆ ಬಹುತೇಕರ ದಿನಚರಿ ಪ್ರಾರಂಭವಾಗುವುದು ಕಷ್ಟ. ಆರೋಗ್ಯದ ದೃಷ್ಟಿಯಿಂದ ಹಲವು ಬಗೆಯ ಆಹಾರದಿಂದ ದೂರವಿರುವ ನಾವು ಕಾಫಿ ಅಥವಾ ಚಹಾ ನಮ್ಮ ಬಾಯಿಯ ಆರೋಗ್ಯದ ಮೇಲೆ ಯಾವ ಪರಿಣಾಮವನ್ನು ಬೀರಬಹುದು ಎಂದು ನೋಡೋಣ.

    ಮಿತ ಪ್ರಮಾಣದಲ್ಲಿ ಸೇವಿಸಿದರೆ ಕಾಫಿ ಅಥವಾ ಚಹಾದಿಂದ ಯಾವುದೇ ತೊಂದರೆಯಾಗುವುದಿಲ್ಲ ಆದರೆ ಅಧಿಕ ಪ್ರಮಾಣದ ಕಾಫಿ ಅಥವಾ ಚಹಾ ಬಾಯಿಯ ಆರೋಗ್ಯದ ಮೇಲೆ ಗಮನಾರ್ಹ ಬದಲಾವಣೆಯನ್ನು ತರಬಲ್ಲದು ಅಲ್ಲದೆ ಹಲ್ಲುಗಳ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸಬಲ್ಲದು. ಕಾಫಿ ಅಥವಾ ಚಹಾ ಸೇವಿಸುವ ಬಹಳಷ್ಟು ಮಂದಿಯ ಸಾಮಾನ್ಯ ಸಮಸ್ಯೆಯೆಂದರೆ ಹಲ್ಲುಗಳು ಸಹಜ ಬಣ್ಣ ಕಳೆದುಕೊಂಡು ಹಳದಿಯಾಗುತ್ತದೆ ಮತ್ತು ಹಲ್ಲುಗಳ ಸೂಕ್ಷ್ಮತೆ. ಹೌದು ಕಾಫಿ ಮತ್ತು ಚಹಾದಲ್ಲಿ ಟ್ಯಾನಿನ್ ಎಂಬ ರಾಸಾಯನಿಕ ಪದಾರ್ಥವಿದ್ದು ಇದು ಹಲ್ಲುಗಳು ಹಳದಿ ಬಣ್ಣವಾಗುವಂತೆ ಮಾಡುತ್ತದೆ ಮತ್ತು ಇದರಿಂದ ಉಂಟಾದ ಹಳದಿ ಕಲೆಗಳನ್ನು ಚಿಕಿತ್ಸೆ ಪಡೆಯದೆ ಹಾಗೇ ಬಿಟ್ಟರೆ ಅವು ಶಾಶ್ವತವಾಗಿ ಉಳಿದು ಹೋಗುತ್ತವೆ. ಅಷ್ಟೇ ಅಲ್ಲದೆ ಕಾಫಿಯಲ್ಲಿ ಕೆಫಿನ್ ಅಂಶವಿದ್ದು ಇದು ಆಮ್ಲೀಯ ಗುಣವನ್ನು ಹೊಂದಿದೆ.

    ಇನ್ನು ಕಾಫಿ ಅಥವಾ ಚಹಾ ಜತೆಯಲ್ಲಿ ಇರಲೇಬೇಕಾದ ಪದಾರ್ಥ ಎಂದರೆ ಸಕ್ಕರೆ. ಇದು ಬಾಯಿಯಲ್ಲಿನ ಸೂಕ್ಷ್ಮಜೀವಿಗಳೊಂದಿಗೆ ಸೇರಿ ಪಿಹೆಚ್ ಲೆವೆಲ್ ಅನ್ನು ಕಡಿಮೆಗೊಳಿಸಿ ಆಮ್ಲೀಯ ವಾತಾವರಣವನ್ನು ಉಂಟು ಮಾಡುತ್ತದೆ, ಇದರಿಂದ ಹಲ್ಲಿನ ಮೇಲ್ಮೈ ಯಾಗಿರುವ ಎನಾಮೆಲ್ ಸವತಕ್ಕೊಳಗಾಗಿ ಸೂಕ್ಷ್ಮತೆ ಉಂಟಾಗುತ್ತದೆ ಅಲ್ಲದೆ ಹಲ್ಲು ಹುಳುಕಾಗಲೂ ಸಹಾಯಕವಾಗುತ್ತದೆ. ಕಾಫಿ ಅಥವಾ ಟೀ ಅನ್ನು ಪದೇಪದೇ ಸೇವಿಸುವುದರಿಂದ ಬಾಯಿಯ ದುರ್ವಾಸನೆ ಕೂಡ ಉಂಟಾಗಬಹುದು. ಇದನ್ನು ತಪ್ಪಿಸಲು ಕಾಫಿ ಅಥವಾ ಟೀ ಜೊತೆಯಲ್ಲಿ ಲಘು ಉಪಹಾರ ತೆಗೆದುಕೊಳ್ಳಬಹುದು. ಕಾಫಿ ಅಥವಾ ಟೀ ಇಂದಾಗಿ ಹಲ್ಲುಗಳ ಬಣ್ಣ ಬದಲಾಗುತ್ತದೆ ಎಂದು ಅದನ್ನು ತ್ಯಜಿಸುವುದು ಕಷ್ಟ, ಆದರೆ ಕೆಲವು ಸುಲಭ ಉಪಾಯಗಳನ್ನು ಅನುಸರಿಸುವ ಮೂಲಕ ತಡೆಯಬಹುದು. ದಿನವಿಡೀ ಪದೇಪದೇ ಕಾಫಿ ಅಥವಾ ಟೀ ಸೇವಿಸುವುದು ಬೇಡ ದಿನದಲ್ಲಿ ಒಂದು ಅಥವಾ ಎರಡು ಬಾರಿ ತೆಗೆದುಕೊಳ್ಳಬಹುದು ಮತ್ತು ಕಾಫಿ ಅಥವಾ ಟೀ ಸೇವಿಸಿದ ನಂತರ ಒಂದು ಗ್ಲಾಸ್ ನೀರನ್ನು ಕುಡಿಯುವುದರಿಂದ ಅಥವಾ ಬ್ರಷ್ ನಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವುದರ ಮೂಲಕ ಹಲ್ಲುಗಳು ಹಳದಿ ಆಗುವುದನ್ನು ತಪ್ಪಿಸಬಹುದು.

    ಹಲ್ಲುಗಳು ಸಹಜ ಬಣ್ಣವನ್ನು ಕಳೆದುಕೊಂಡಲ್ಲಿ ಅಥವಾ ಹಲ್ಲುಗಳ ಬಣ್ಣವನ್ನು ಹಿಂತಿರುಗಿಸಲಾಗದೆ ಇದ್ದಲ್ಲಿ ದಂತವೈದ್ಯರನ್ನು ಭೇಟಿ ಮಾಡಿ ಲಭ್ಯವಿರುವ ಚಿಕಿತ್ಸಾ ಕ್ರಮಗಳ ಬಗ್ಗೆ ತಿಳಿದು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.

    ಪ್ರಶ್ನೋತ್ತರ:

    * ಹಲ್ಲು ತೂತಾಗಿದೆ ಎಂದು ಆರೇಳು ವರ್ಷಗಳ ಹಿಂದೆ ತುಂಬಿಸಿದ್ದೆ. ಆದರೆ ಇತ್ತೀಚೆಗೆ ಆ ಹಲ್ಲು ನೋಯತೊಡಗಿದೆ. ಅಲ್ಲದೆ ಹಲ್ಲಿನ ಮೇಲ್ಭಾಗದಲ್ಲಿ ಊದಿಕೊಂಡಿದೆ. ಈಗ ಮತ್ತೆ ಸಿಮೆಂಟ್ ತುಂಬಿಸಬೇಕೇ? ಅಥವಾ ಔಷಧದಿಂದ ಪರಿಹಾರ ಸಿಗಬಹುದೇ?

    | ಸೌಮ್ಯ ಚಿಕ್ಕಮಗಳೂರು

    ಹಲ್ಲು ಹುಳುಕು ಆಳವಾಗಿದ್ದಲ್ಲಿ ಅಥವಾ ಕೆಲವೊಮ್ಮೆ ಹಲ್ಲು ತುಂಬಿಸಿದ ನಂತರವೂ ಹುಳುಕು ಪ್ರಗತಿ ಹೊಂದುವ ಸಾಧ್ಯತೆ ಇದ್ದು ಹುಳುಕು ಕ್ಠ್ಝ ಅನ್ನು ತಲುಪಿದಲ್ಲಿ ಈ ರೀತಿ ನೋವು ಬರುವ ಸಾಧ್ಯತೆ ಇರುತ್ತದೆ. ಹಲ್ಲಿನ ಎಕ್ಸ್​ರೇ ತೆಗೆಸಿ ಅದರ ಪ್ರಕಾರ ಚಿಕಿತ್ಸೆಯನ್ನು ಸೂಚಿಸಬಹುದು. ಉಗುರು ಬೆಚ್ಚನೆಯ ನೀರಿಗೆ ಉಪ್ಪು ಹಾಕಿ ದಿನಕ್ಕೆ 3ರಿಂದ 4 ಬಾರಿ ಬಾಯಿ ಮುಕ್ಕಳಿಸುವುದರಿಂದ ತಾತ್ಕಾಲಿಕ ಪರಿಹಾರ ಸಿಗಬಹುದು

    ನೀವೂ ಪ್ರಶ್ನೆ ಕೇಳಿ: 

    ಮನುಷ್ಯನ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಕಾರಣವಾಗುವ ಶರೀರದ ಬಹು ಮುಖ್ಯ ಭಾಗಗಳಲ್ಲಿ ಹಲ್ಲು ಕೂಡ ಒಂದು. ಓದುಗರು ಹಲ್ಲುಗಳ ಕುರಿತ ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆಯ ಮೇರೆಗೆ ದಂತವೈದ್ಯರು ಸಲಹೆ, ಸೂಚನೆ ನೀಡಲಿದ್ದಾರೆ.

    ವಿಳಾಸ: ಸಂಪಾದಕರು, ಡೆಂಟಲ್ ಕೇರ್ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್,

    ಮೊದಲನೇ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ,

    ಬೆಂಗಳೂರು – 560 018

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts