More

    ಹೊರರಾಜ್ಯಗಳಿಂದ 133 ಮಂದಿ ಕರಾವಳಿಗೆ

    ಮಂಗಳೂರು: ಮಂಗಳಾ, ನೇತ್ರಾವತಿ, ರಾಜಧಾನಿ ಎಕ್ಸ್‌ಪ್ರೆಸ್ ಸಹಿತ ಮೂರು ರೈಲುಗಳಲ್ಲಿ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಗೆ 19 ಹಾಗೂ ಉಡುಪಿಗೆ 114 ಮಂದಿ ಆಗಮಿಸಿದ್ದು, ಇವರಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ವಿಧಿಸಲಾಗಿದೆ.
    ಮಹಾರಾಷ್ಟ್ರದಿಂದ ಬಂದವರನ್ನು ಇನ್ನು ಮುಂದೆ 14 ದಿನ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದರೂ, ಸರ್ಕಾರಿ ಆದೇಶ ಬಾರದ ಹಿನ್ನೆಲೆಯಲ್ಲಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮುಂದುವರಿಸಲಾಗಿದೆ.
    ‘ಸಚಿವರು ಸೂಚನೆ ನೀಡಿರುವುದು ನಿಜ, ಆದರೆ ಈ ಬಗ್ಗೆ ಹೊಸ ಮಾರ್ಗಸೂಚಿ ಬರುವವರೆಗೂ ಮಹಾರಾಷ್ಟ್ರದವರಿಗೆ 7 ದಿನ ಸಾಂಸ್ಥಿಕ ನಿಗಾವಣೆಯನ್ನೇ ಮುಂದುವರಿಸಲಾಗುವುದು’ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸ್ಪಷ್ಟಪಡಿಸಿದ್ದಾರೆ.

    ಮತ್ತೆ 114 ಮಂದಿ ಆಗಮನ: ಉಡುಪಿ ಜಿಲ್ಲೆಗೆ ಆಗಮಿಸಿರುವ 114 ಮಂದಿಯಲ್ಲಿ ಕುಂದಾಪುರ ತಾಲೂಕಿಗೆ ಮುಂಬೈಯಿಂದ 27, ಗೋವಾದಿಂದ ಐವರು ಹಾಗೂ ಬೈಂದೂರಿಗೆ ಮುಂಬೈಯಿಂದ 18 ಮಂದಿ ಬಂದವರು ಸೇರಿದ್ದಾರೆ.
    ಮುಂಬೈಯಿಂದ ಬಂದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 14 ದಿನ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯಗಳಿಂದ ಆಗಮಿಸಿದವರನ್ನು ನೇರವಾಗಿ 14 ದಿನಗಳ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ. ಆಯಾ ಪಂಚಾಯಿತಿಗಳಿಗೆ ಕ್ವಾರಂಟೈನ್ ಜವಾಬ್ದಾರಿ ವಹಿಸಲಾಗಿದೆ. ಹೊರ ರಾಜ್ಯದಿಂದ ಆಗಮಿಸಿದವರು 6 ತಾಲೂಕು ಕೇಂದ್ರಗಳಲ್ಲಿ ನಿಗದಿಪಡಿಸಿರುವ ನೋಂದಣಿ ಕೇಂದ್ರಕ್ಕೆ ತೆರಳಿ ಮಾಹಿತಿ ನೀಡಬೇಕಿದೆ.

    ಅಧಿಕಾರಿಗಳಿಗೆ ಗೊಂದಲ: ದೆಹಲಿ-ಮುಂಬೈ-ಕೇರಳ ಸಂಪರ್ಕದ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳೂರಿಗೆ ಬಂದ 19 ಮಂದಿ ಮಹಾರಾಷ್ಟ್ರ ನಿವಾಸಿಗಳನ್ನು ಸುರತ್ಕಲ್ ಎನ್‌ಐಟಿಕೆ ಸರ್ಕಾರಿ ನಿಗಾವಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. ದೆಹಲಿ- ಮುಂಬೈ- ಕೇರಳ ಸಂಪರ್ಕದ ಮಂಗಳಾ ಎಕ್ಸ್‌ಪ್ರೆಸ್ 6 ಗಂಟೆ ತಡವಾಗಿ ಮುಂಜಾನೆ 3.30 ಗಂಟೆಗೆ ಆಗಮಿಸಿದ್ದು, ಪ್ರಾರಂಭದಲ್ಲಿ ಮಾಹಿತಿ ಇರದ ಪೊಲೀಸರು ಅವರನ್ನು ಮನೆಯಲ್ಲೇ ಕ್ವಾರಂಟೈನ್ ಆಗಲು ಸೂಚಿಸಿದ್ದರು. ಇದರ ನಡುವೆ ಕೆಲವು ಪ್ರಯಾಣಿಕರು ನೇರವಾಗಿ ತಾವೇ ಸುರತ್ಕಲ್ ನಾಡ ಕಚೇರಿಗೆ ತೆರಳಿ ಮುಂಬೈನಿಂದ ಬಂದಿದ್ದಾಗಿ ತಿಳಿಸಿದ್ದರು. ಒಂದಷ್ಟು ಮಂದಿ ಮನೆಗೆ ತೆರಳಿದರೂ ಬಳಿಕ ಅಧಿಕಾರಿಗಳು ಅವರನ್ನು ಪತ್ತೆ ಮಾಡಿ ನಿಗಾವಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ.

    ಇಂದು ಎರಡು ರೈಲು: ಜೂ.5ರಂದು ನೇತ್ರಾವತಿ ಮತ್ತು ಮಂಗಳಾ ಎಕ್ಸ್‌ಪ್ರೆಸ್ ರೈಲುಗಳು ಬರಲಿವೆ. ಬರುವ ಪ್ರಯಾಣಿಕರನ್ನು ಪ್ರಾಥಮಿಕ ಪರೀಕ್ಷೆಗೊಳಪಡಿಸಿ, ಮಹಾರಾಷ್ಟ್ರದಿಂದ ಬಂದಿದ್ದವರಿಗೆ ಮಾತ್ರವೇ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ.

    ಹೊರರಾಜ್ಯಗಳಿಂದ ಆಗಮನ ಶುರು: ರಾಜ್ಯಕ್ಕೆ ಮಹಾರಾಷ್ಟ್ರ ಸಹಿತ ಹೊರರಾಜ್ಯಗಳಿಂದ ಆಗಮಿಸುವವರು ಸೇವಾಸಿಂಧು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹಿಂದಿನಂತೆ ಪಾಸ್ ಅಗತ್ಯವಿಲ್ಲ. ಈಗಾಗಲೇ ನೋಂದಣಿ ಮಾಡಿಕೊಂಡವರು ಹೊರರಾಜ್ಯಗಳಿಂದ ಹೊರಟಿದ್ದು, ಶುಕ್ರವಾರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಪ್ರವೇಶಿಸುವ ಸಾಧ್ಯತೆಗಳಿವೆ. ಮಹಾರಾಷ್ಟ್ರದಿಂದ ಬಂದವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮತ್ತು ಇತರರಿಗೆ ಹೋಂ ಕ್ವಾರಂಟೈನ್ ವಿಧಿಸಲಾಗುವುದು ಎಂದು ಉಭಯ ಜಿಲ್ಲಾಡಳಿತಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts