More

    ಮಂದಿನ ವಾರ ಕರಾವಳಿಗೆ ಎನ್‌ಡಿಆರ್‌ಎಫ್

    ಮಂಗಳೂರು: ಕರಾವಳಿಯಲ್ಲಿ ವರ್ಷದಿಂದ ವರ್ಷಕ್ಕೆ ಮುಂಗಾರು ಅವಧಿಯಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ. ಆ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಡಳಿತ ಈ ಬಾರಿಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್‌ಡಿಆರ್‌ಎಫ್)ದ ಮೊರೆ ಹೋಗಿದ್ದು, ಜೂನ್ ಮೊದಲ ವಾರದಲ್ಲಿ ಒಂದು ತಂಡ ಜಿಲ್ಲೆಗೆ ಆಗಮಿಸಲಿದೆ.
    ಆಂಧ್ರ ಪ್ರದೇಶದ ಗುಂಟೂರಿನ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್‌ನ 25 ಸದಸ್ಯರ ತಂಡ ಮೊದಲ ಹಂತದಲ್ಲಿ ಜಿಲ್ಲೆಗೆ ಆಗಮಿಸಲಿದೆ. ಮುಂಗಾರು ಯಾವ ರೀತಿ ಇರಲಿದೆ ಎನ್ನುವುದನ್ನು ಆಧರಿಸಿ ಈ ತಂಡ ಮುಂದಿನ 2 ತಿಂಗಳು ಜಿಲ್ಲೆಯಲ್ಲಿ ತಂಗಲಿದೆ. ಈ ವೇಳೆ ದ.ಕ ಮಾತ್ರವಲ್ಲದೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲೂ ಪ್ರಾಕೃತಿಕ ವಿಕೋಪ ನಿರ್ವಹಣಾ ಕಾರ್ಯದಲ್ಲಿ ಭಾಗವಹಿಸಲಿದೆ.

    ಜಿಲ್ಲೆಯಲ್ಲಿ ಮಳೆಗಾಲ ಯಾವ ರೀತಿ ಇರುತ್ತದೆ ಎನ್ನುವ ಅರಿವು ಇರುವುದರಿಂದ ಕಳೆದ ಬಾರಿ ಜಿಲ್ಲೆಗೆ ಆಗಮಿಸಿದ ತಂಡವೇ ಮತ್ತೆ ಬರುವ ಸಾಧ್ಯತೆಯಿದೆ. ಪ್ರವಾಹ, ಭೂ ಕುಸಿತ ಮೊದಲಾದ ಪ್ರಾಕೃತಿಕ ವಿಕೋಪಗಳು ಹೆಚ್ಚಾದರೆ ಹೆಚ್ಚುವರಿ ತಂಡಕ್ಕೆ ಜಿಲ್ಲಾಡಳಿತ ಮನವಿ ಸಲ್ಲಿಸಲಿದೆ.

    ರಕ್ಷಣಾ ಸಾಧನಗಳು: ಎನ್‌ಡಿಆರ್‌ಎಫ್ ತಂಡ ಸುಸಜ್ಜಿತವಾಗಿದ್ದು, ಕಟ್ಟಡ ಕುಸಿತ, ಪ್ರವಾಹ, ಗುಡ್ಡ ಕುಸಿತ ಸಂದರ್ಭ ರಕ್ಷಣೆ ಸೇರಿದಂತೆ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದರೆ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಉಪಕರಣಗಳನ್ನು ಹೊಂದಿರುತ್ತದೆ. ಬೋಟ್, ಲೈಫ್‌ಜಾಕೆಟ್, ಲೈಫ್‌ಬಾಯ್, ಜನರೇಟರ್, ಮರ-ಕಾಂಕ್ರೀಟ್ ಕತ್ತರಿಸುವ ಸಾಧನ, ಡ್ರಿಲ್ಲಿಂಗ್ ಮಷಿನ್, ಸೇಫ್ಟಿ ಉಪಕರಣಗಳಾದ ಹಾರೆ, ಗುದ್ದಲಿ, ಮೈಕ್ರೋಫೋನ್, ಹಗ್ಗ ಮೊದಲಾದವುಗಳಿವೆ. ತುರ್ತು ಸಂದರ್ಭ ಪ್ರಥಮ ಚಿಕಿತ್ಸೆಗೆ ಬೇಕಾದ ಮೆಡಿಕಲ್ ಕಿಟ್, ಸ್ಟ್ರೆಚರ್ ಸೇರಿದಂತೆ ವಿವಿಧ ಉಪಕರಣಗಳಿರುತ್ತವೆ.

    ಕಳೆದ ವರ್ಷ ಎರಡು ತಂಡ:
    ಕಳೆದ ವರ್ಷ 50 ಸದಸ್ಯರನ್ನೊಳಗೊಂಡ ಎರಡು ಎನ್‌ಡಿಆರ್‌ಎಫ್ ತಂಡಗಳು ಕರಾವಳಿಗೆ ಆಗಮಿಸಿ ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಜಿಲ್ಲಾಡಳಿತಕ್ಕೆ ನೆರವಾಗಿದ್ದವು. ಆಂಧ್ರದ ಗುಂಟೂರಿನ ತಂಡ ಮಳೆಗಾಲ ಮೊದಲೇ ಬಂದಿತ್ತು. ಬೆಳ್ತಂಗಡಿ ತಾಲೂಕಿನಲ್ಲಿ ಭಾರಿ ಭೂ ಕುಸಿತ, ಪ್ರವಾಹ ಹಿನ್ನೆಲೆಯಲ್ಲಿ ದೆಹಲಿಯಿಂದ 24 ಮಂದಿಯ ಇನ್ನೊಂದು ತಂಡ ಆಗಮಿಸಿತ್ತು.

    ಆಂಧ್ರದ ಗುಂಟೂರಿನ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ಸದಸ್ಯರು ಈ ಬಾರಿಯೂ ಜಿಲ್ಲೆಗೆ ಆಗಮಿಸಲಿದ್ದು, ಮುಂಗಾರು ಅವಧಿಯ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಲಿದ್ದಾರೆ. ಈ ಬಾರಿ ಮುಂಗಾರು ಒಂದು ವಾರ ವಿಳಂಬವಾಗುವ ಕಾರಣ, ತಂಡ ಸ್ವಲ್ಪ ತಡವಾಗಿ ಆಗಮಿಸಲಿದೆ.
    – ವಿಜಯ ಕುಮಾರ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts