More

    ಕರಾವಳಿಯಲ್ಲಿ 21 ಕೋವಿಡ್ ಪ್ರಕರಣ

    ಮಂಗಳೂರು/ಉಡುಪಿ
    ಶುಕ್ರವಾರದ ಹೆಲ್ತ್ ಬುಲೆಟಿನ್‌ಗೆ ಕರಾವಳಿ ಬೆಚ್ಚಿಬಿದ್ದಿದೆ. ಒಂದೇ ದಿನ ಬರೋಬ್ಬರಿ 21 ಕರೊನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುವ ಮೂಲಕ ದ.ಕ.ಹಾಗೂ ಉಡುಪಿಯಲ್ಲಿ ಗರಿಷ್ಟ ಸಂಖ್ಯೆಯ ಕೋವಿಡ್-19 ಪ್ರಕರಣ ದಾಖಲಾಗಿ, ಸಾರ್ವಜನಿಕರ ಆತಂಕ ಮತ್ತಷ್ಟು ಹೆಚ್ಚಿತು.

    ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ದ.ಕ ಜಿಲ್ಲೆಯಲ್ಲಿ ಉತ್ತರ ಕನ್ನಡದ ಓರ್ವ ವ್ಯಕ್ತಿ ಸೇರಿದಂತೆ 16 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 15 ಮಂದಿ ಮೇ 12ರಂದು ದುಬೈನಿಂದ ಬಂದವರು. ಸುರತ್ಕಲ್ ಗ್ರಾಮದ ಮಹಿಳೆಯೊಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಖಾಸಗಿ ಚಿಕಿತ್ಸೆಗೆ ದಾಖಲಾಗಿದ್ದು, ಇವರಿಗೂ ಸೋಂಕು ದೃಢಪಟ್ಟಿದೆ. ದುಬೈಯಿಂದ ಆಗಮಿಸಿದ ಒಂದು ಕುಟುಂಬದ 6 ವರ್ಷದ ಬಾಲಕನಿಗೂ ಸೋಂಕು ತಗಲಿದೆ ಎಂದರು.

    ಮೇ 12ರಂದು ಮಂಗಳೂರಿಗೆ ಆಗಮಿಸಿದ 179 ಮಂದಿ ಪ್ರಯಾಣಿಕರ ಪೈಕಿ 125 ಮಂದಿ ದ.ಕ.ಜಿಲ್ಲೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಉಡುಪಿಯ 49 ಮಂದಿ ಹಾಗೂ ಉತ್ತರ ಕನ್ನಡದ 5 ಮಂದಿ ಆ ಜಿಲ್ಲೆಗೆ ತೆರಳಿ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು.
    ವಿಮಾನದಲ್ಲಿ ಆಗಮಿಸಿದವರನ್ನು ನಗರದ ಹೋಟೆಲ್‌ಗಳು ಸೇರಿದಂತೆ 10 ಕಡೆಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಸೋಂಕು ದೃಢಪಟ್ಟ ಸುರತ್ಕಲ್‌ನ ಮಹಿಳೆ ಸಹಿತ ಎಲ್ಲರನ್ನೂ ಈಗ ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕು ತಗಲಿದ 15 ಮಂದಿಯಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು ದೃಢಪಟ್ಟಿದೆ. 45ರ ಹರೆಯದ ಪತಿ, 33ರ ಹರೆಯದ ಪತ್ನಿ ಹಾಗೂ 6 ವರ್ಷದ ಮಗನಿಗೆ ಸೋಂಕು ತಗಲಿದೆ. ಸೋಂಕಿತರಲ್ಲಿ 5 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ ಎಂದರು.

    ದುಬೈಯಲ್ಲಿ ಟೆಸ್ಟ್ ಮಾಹಿತಿ ಇಲ್ಲ
    ದುಬೈಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಿರುವ ಬಗ್ಗೆ ಮಾಹಿತಿ ಇಲ್ಲ. ದುಬೈ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಹಾಗೂ ರ‌್ಯಾಪಿಡ್ ಟೆಸ್ಟ್‌ಗೆ ಒಳಪಡಿಸಿರಬಹುದು. ಇಲ್ಲಿ ಆಗಮಿಸಿದ ಬಳಿಕ ಎಲ್ಲ ಪ್ರಯಾಣಿಕರ ಗಂಟಲ ದ್ರವ ಪರೀಕ್ಷೆಗೊಳಪಡಿಸಲಾಗಿದೆ. ಪ್ರಥಮ ವಿಮಾನದಲ್ಲಿ ಬಂದವರ ಪೈಕಿ ಬಹುತೇಕ ಮಂದಿ ವೈದ್ಯಕೀಯ ಚಿಕಿತ್ಸೆ ಅಗತ್ಯ ಇದ್ದವರು ಹಾಗೂ ಗರ್ಭಿಣಿಯರು. 15 ಮಂದಿ ಸೋಂಕಿತರಲ್ಲಿ ಗರ್ಭಿಣಿಯರು ಇಲ್ಲ. ರಾಜ್ಯ ಸರ್ಕಾರದ ನಿರ್ದೇಶನದಂತೆ ವಿದೇಶದಿಂದ ಆಗಮಿಸಿದ ಗರ್ಭಿಣಿಯರಲ್ಲಿ ಸೋಂಕು ಇಲ್ಲದಿದ್ದರೆ ಅವರನ್ನು ಹೋಂ ಕ್ವಾರಂಟೈನ್‌ಗೊಳಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಕ್ವಾರಂಟೈನ್ ಕೇಂದ್ರಗಳಲ್ಲಿ ಕಣ್ಗಾವಲು
    ವಿದೇಶದಿಂದ ಬಂದವರು ಕ್ವಾರಂಟೈನ್ ಕೇಂದ್ರಗಳಲ್ಲಿದ್ದು, ಅವರು ಕೇಂದ್ರದಿಂದ ಹೊರಬಾರದೆ ನಿಯಮ ಪಾಲಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಕ್ವಾರಂಟೈನ್ ಕೇಂದ್ರಕ್ಕೆ ಒಬ್ಬ ನೋಡಲ್ ಅಧಿಕಾರಿ ಹಾಗೂ ಕೇಂದ್ರದ ಸಿಬ್ಬಂದಿಗೆ ತರಬೇತಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ. ಸಿಸಿ ಟಿವಿ ಕಣ್ಗಾವಲು ಇದೆ. ಕ್ವಾರಂಟೈನ್ ನಿಯಮ ಉಲ್ಲಂಘಿಸುವ ಸಾಧ್ಯತೆ ಕಡಿಮೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಕೋವಿಡ್ 19 ನೋಡಲ್ ಅಧಿಕಾರಿ ಗಾಯತ್ರಿ ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಉಪಸ್ಥಿತರಿದ್ದರು.

    18ರಂದು ದುಬೈಯಿಂದ 2ನೇ ವಿಮಾನ
    ಮೇ 18ರಂದು ದುಬೈಯಿಂದ ಇನ್ನೊಂದು ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಸುಮಾರು 175 ಮಂದಿ ಆಗಮಿಸುವ ನಿರೀಕ್ಷೆ ಇದೆ. ಅವರೆಲ್ಲ ಯಾವ ಜಿಲ್ಲೆಯವರು, ಎಷ್ಟು ಮಂದಿ ಪ್ರಯಾಣಿಕರಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅವರೆಲ್ಲರೂ ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್‌ಗೆ ಒಳಪಡುವ ಷರತ್ತಿಗೆ ಒಪ್ಪಿಕೊಂಡೇ ಆಗಮಿಸುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಗೊಂದಲವಾಗದಂತೆ ಕ್ರಮ ಕೈಗೊಳ್ಳಲು ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕರ ಜತೆ ಚರ್ಚಿಸಲಾಗಿದೆ. ಏಕಕಾಲದಲ್ಲಿ ಎಲ್ಲರೂ ನಿಲ್ದಾಣದಿಂದ ಹೊರಬರಲು ಸಾಧ್ಯವಿಲ್ಲ. ಕೋವಿಡ್ ಪರೀಕ್ಷೆ ನಡೆಸುವ ಕಾರಣ ಕೊಂಚ ವಿಳಂಬವಾಗುತ್ತದೆ. ಪ್ರಯಾಣಿಕರು ಸಹಕಾರ ನೀಡಬೇಕು ಎಂದರು.

    ಗುಡ್ಡೆಕೊಪ್ಲ ಪ್ರದೇಶ ಸೀಲ್‌ಡೌನ್
    ಸುರತ್ಕಲ್: ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದ ಸುರತ್ಕಲ್ ಗುಡ್ಡೆಕೊಪ್ಲದ 68 ವರ್ಷದ ಮಹಿಳೆಯೊಬ್ಬರಿಗೆ ಶುಕ್ರವಾರ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಮನೆಯ 100 ಮೀ. ವ್ಯಾಪ್ತಿಯ 122 ಮನೆಯಿರುವ ಪ್ರದೇಶವನ್ನು ಜೂ.4ರವರೆಗೆ ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದೆ. ಸೀಲ್‌ಡೌನ್ ಮಾಡಲಾದ ಪ್ರದೇಶದ ಸಮುದ್ರ ಕಿನಾರೆಯಲ್ಲಿ ಮೀನು ಮಾರಾಟ ಸ್ಥಳ, ಭಜನಾ ಮಂದಿರ ಇತ್ಯಾದಿ ಇವೆ. ಸುರತ್ಕಲ್‌ನಿಂದ ಬೀಚ್‌ಗೆ ಬರುವ ರಸ್ತೆ, ಇಡ್ಯಾ ಕಡೆಗೆ ದಕ್ಷಿಣಕ್ಕೆ ಹೋಗುವ ರಸ್ತೆ, ಉತ್ತರಕ್ಕೆ ಸದಾಶಿವನಗರಕ್ಕೆ ಹೋಗುವ ರಸ್ತೆಯಲ್ಲಿ ಸಂಚಾರ ತಡೆಹಿಡಿಯಲಾಗಿದೆ.

    ಪಾವಂಜೆ ನದಿಯಿಂದ ಬೈಕಂಪಾಡಿ ಸೇತುವೆವರೆಗಿನ ಒಟ್ಟು 5 ಕಿ.ಮೀ ಪ್ರದೇಶವನ್ನು ಕಂಟೇನ್‌ಮೆಂಟ್ ವಲಯ ಎಂದು ಗುರುತಿಸಲಾಗಿದೆ. ಇಡ್ಯಾ ಹೊಸಬೆಬೆಟ್ಟುವಿನಿಂದ ಸುರತ್ಕಲ್ ಗ್ರಾಮದ ಪೂರ್ವಕ್ಕೆ, ಬಿಎಎಸ್‌ಎಫ್‌ವರೆಗಿನ ಈ ಪ್ರದೇಶದಲ್ಲಿ 24157 ಮನೆ, 3484 ಅಂಗಡಿ, ಕಚೇರಿಯಿದ್ದು, 34852 ಜನಸಂಖ್ಯೆಯಿದೆ. ಮಹಿಳೆಯ ತಪಾಸಣೆ ನಡೆಸಿದ್ದ ಸುರತ್ಕಲ್ ಖಾಸಗಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಮಹಿಳೆ ದಾಖಲಾಗಿದ್ದ ಮಂಗಳೂರು ಖಾಸಗಿ ಆಸ್ಪತ್ರೆಯ ಒಂದು ಮಹಡಿಯನ್ನು ಸೀಲ್ ಡೌನ್ ಮಾಡಲಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯ ಓರ್ವ, ಸುರತ್ಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿದ್ದರೆನ್ನಲಾಗಿದ್ದ ಓರ್ವ ವೈದ್ಯರು, ಮಂಗಳೂರು ಖಾಸಗಿ ಆಸ್ಪತ್ರೆಯ ಓರ್ವ ವೈದ್ಯರು, ಅಲ್ಲದೆ ಸುರತ್ಕಲ್ ಆಸ್ಪತ್ರೆಯ ಆರು ಮಂದಿ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎನ್ನಲಾಗಿದೆ.

    ಕಾಸರಗೋಡಲ್ಲಿ ಒಂದು ಪ್ರಕರಣ
    ಕಾಸರಗೋಡು: ಶುಕ್ರವಾರ ಒಬ್ಬರಲ್ಲಿ ವೈರಸ್ ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 15ಕ್ಕೇರಿದೆ. ಒಟ್ಟು 1662 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 1451 ಮಂದಿ ಮನೆಗಳಲ್ಲಿ ಹಾಗೂ 211 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಕೇರಳದಲ್ಲಿ ಶುಕ್ರವಾರ 16 ಮಂದಿಯಲ್ಲಿ ಕೋವಿಡ್ ವೈರಸ್ ಕಾಣಿಸಿಕೊಂಡಿದೆ. ವಯನಾಡ್ 5, ಮಲಪ್ಪುರಂ 4, ಆಲಪ್ಪುಳ, ಕೋಯಿಕ್ಕೋಡ್ ತಲಾ 2, ಕಾಸರಗೋಡು, ಪಾಲಕ್ಕಾಡ್ ಹಾಗೂ ಕೊಲ್ಲಂ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ವೈರಸ್ ಕಾಣಿಸಿಕೊಂಡಿದೆ. ಗುರುವಾರ ಕೇರಳದಲ್ಲಿ 26 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು.

    ಹಸಿರು ವಲಯಕ್ಕೆ ಬಿಗ್ ಶಾಕ್
    ಉಡುಪಿ: ಕೊವಿಡ್-19 ಹಸಿರು ವಲಯದಲ್ಲಿದ್ದ ಉಡುಪಿಗೆ ಮತ್ತೆ ಬಿಗ್‌ಶಾಕ್ ನೀಡಿದೆ.
    ಜಿಲ್ಲೆಯಲ್ಲಿ ಶುಕ್ರವಾರ ಒಂದು ವರ್ಷದ ಮಗುವಿನ ಸಹಿತ ಆರು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಮೇ 13ರಂದು ದುಬೈನಿಂದ ಆಗಮಿಸಿದ್ದ ಉಡುಪಿ ಮೂಲದವರನ್ನು ಜಿಲ್ಲೆಯ ಹೋಟೆಲ್ ಕ್ವಾರಂಟೈನ್‌ನಲ್ಲಿ ಇರಿಸಿ, ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಆರು ಮಂದಿಗೆ ಕರೊನಾ ವೈರಸ್ ದೃಢಪಟ್ಟಿದೆ. ಒಂದು ವರ್ಷದ ಮಗು, 52, 31, 37 ವರ್ಷದ ಮೂವರು ಪುರುಷರು, 33, 38 ವರ್ಷದ ಇಬ್ಬರು ಮಹಿಳೆಯರಿಗೆ ಸೋಂಕು ತಗುಲಿದೆ. ಸದ್ಯ ಸೋಂಕಿತರನ್ನು ಹೋಟೆಲ್ ಕ್ವಾರಂಟೈನ್‌ನಿಂದ ಕೋವಿಡ್-19 ಟಿಎಂಎಪೈ ವಿಶೇಷ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಷ್ಟು ದಿನ ಹಸಿರು ವಲಯದಲ್ಲಿದ್ದ ಜಿಲ್ಲೆಯ ಜನತೆಗೆ ಮತ್ತೆ ಆತಂಕ ಎದುರಾಗಿದೆ.
    ದುಬೈಯಿಂದ ಆಗಮಿಸಿದ ದಂಪತಿ ಹಾಗೂ ಅವರ ಒಂದು ವರ್ಷದ ಮಗುವಿನ ವರದಿ ಪಾಸಿಟಿವ್ ಬಂದಿದ್ದು, ಅವರ ಇನ್ನೊಂದು ಮಗುವಿನ ವರದಿ ನೆಗೆಟಿವ್ ಆಗಿದೆ..

    13ರಂದು ದುಬೈನಿಂದ ವಿಮಾನದಲ್ಲಿ ಆಗಮಿಸಿದ್ದ ಜಿಲ್ಲೆಯ 49 ಮಂದಿಯನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಐವರಿಗೆ ಸೋಂಕು ದೃಢಪಟ್ಟಿದೆ. ಇವರನ್ನು ಪ್ರತ್ಯೇಕ ಕೋವಿಡ್- 19 ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರ ಆರೋಗ್ಯ ತಪಾಸಣೆ, ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಡಳಿತ ಮುತುವರ್ಜಿ ವಹಿಸಿದೆ.
    – ಜಿ.ಜಗದೀಶ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts